ADVERTISEMENT

ಕರುಳು ಹಿಂಜಿ ಕಟ್ಟಿದ ಎನ್ಕೆ ಕವಿತೆ

ಸುಬ್ಬು ಹೊಲೆಯಾರ್
Published 13 ಏಪ್ರಿಲ್ 2012, 19:30 IST
Last Updated 13 ಏಪ್ರಿಲ್ 2012, 19:30 IST

ರೂಪಕಗಳ ಮೂಲಕ ಕಾವ್ಯ ಕಟ್ಟುವ ಕಲೆಗಾರಿಕೆಯನ್ನು ಹುಟ್ಟುತ್ತಲೇ ದಕ್ಕಿಸಿಕೊಂಡು ಬಂದವರಂತೆ ಕವಿತೆ ಬರೆದವರು ಎನ್.ಕೆ. ಹನುಮಂತಯ್ಯ. ಅವರು ಕವಿತೆ ಬರೆಯುವ ಹೊತ್ತಿಗೆ ಚಳವಳಿಯ ಅಬ್ಬರ ತುಸು ಕಡಿಮೆಯಾಗಿತ್ತು. ತಣ್ಣಗೆ ಓಡಾಡಿಕೊಂಡಿದ್ದ ಈ ಕವಿಯ ಮೂಲಕ ಕನ್ನಡ ಕಾವ್ಯಲೋಕಕ್ಕೆ ಹೊಸ ಸಂವೇದನೆಯೊಂದು ದಕ್ಕಿದ್ದು ಈಗ ಇತಿಹಾಸ.

ಎನ್ಕೆ ಅವರ ಇಲ್ಲಿನ ಮೂರು ಕವಿತೆಗಳು ಮತ್ತು ಅವರ ಉಳಿದ ಕವಿತೆಗಳನ್ನು ಗಮನಿಸಿದರೆ, ಅವರು ನಮ್ಮಡನಿಲ್ಲ ಅನಿಸುವುದೇ ಇಲ್ಲ. ಇಲ್ಲೇ ಎಲ್ಲೋ ಹೋಗಿರುವ ಅವರು ಇಂದಲ್ಲಾ ನಾಳೆ ವಾಪಸ್ ಬಂದು ತನ್ನ ಮಹತ್ವಾಕಾಂಕ್ಷೆಯ ಮಹಾಕಾವ್ಯವನ್ನು ಬರೆಯಬಹುದು ಎನ್ನುವಷ್ಟರ ಮಟ್ಟಿಗೆ, `ಸಂಬಂಜ ಅನ್ನೋದು ದೊಡ್ಡದು ಕಣಾ~ ಎನ್ನುವ ಕನಸುಗಳ ನಾಳೆಗಳಲ್ಲಿ ಬದುಕುವ ನಮ್ಮಳಗೆ ತಮ್ಮ ಕವಿತೆಗಳ ಮೂಲಕ ಎನ್ಕೆ ಜೀವಂತವಾಗಿದ್ದಾರೆ.

ತಣ್ಣನೆಯ ತೀವ್ರತೆಯಿಂದ, ಆರ್ದ್ರ ಮುಗ್ಧತೆಯಿಂದ ಇತರರಿಗಿಂತ ಭಿನ್ನವಾಗಿ ಹೂವಾಗಿ ಅರಳಿದ ಕವಿ ಹನುಮಂತಯ್ಯ. ಇಂತಹ ಕವಿಯನ್ನು ಒಂದು ಕೇರಿಗೆ ಒಂದು ಜನಾಂಗಕ್ಕೆ, ಒಂದು ಕಾಲಕ್ಕೆ ಮಿತಿಗೊಳಿಸುವುದು ಕಾವ್ಯಕ್ಕೆ ಕುಂದುಂಟುಮಾಡಿದಂತಾಗುತ್ತದೆ.

ಅನ್ಯಾಯಕ್ಕೆ ಮತ್ತು ಅಪಮಾನಕ್ಕೊಳಗಾದ ಎಲ್ಲರ ದುಃಖ ದುಮ್ಮೋನಗಳನ್ನು ಎದೆಯಲ್ಲಿ ಕಾಪಿಟ್ಟುಕೊಂಡ ಅವರು, ಕಾವ್ಯದ ರಸಸಂವೇದನೆಯ ಕನಸುಗಳನ್ನಷ್ಟೇ ಸಮಾಜಕ್ಕೆ ನೀಡಿದ್ದು ಅಕ್ಷರ ಲೋಕದ ಜೀವಂತಿಕೆಯನ್ನು ದಾಖಲಿಸಿದಂತೆ ತೋರುತ್ತದೆ.

`ಕನ್ನಂಬಾಡಿ ಎಷ್ಟಾದರೂ ನೀರನ್ನು ನಿಲ್ಲಿಸಿಕೊಳ್ಳುತ್ತದೆ. ಆದರೆ ಎನ್ಕೆ ಎದೆಯಲ್ಲಿರುವ ಕವಿತೆಗಳನ್ನು ಯಾರಿಂದಲೂ ತಡೆದು ನಿಲ್ಲಿಸಲು ಸಾಧ್ಯವಿಲ್ಲ~ ಎನ್ನುವ ಸಿಜಿಕೆಯವರ ಮಾತಿನಲ್ಲಿ ಉತ್ಪ್ರೇಕ್ಷೆ ಹೆಚ್ಚೇನಿಲ್ಲ. ಎನ್ಕೆ ಅವರ ಕಾವ್ಯದ ಹಿನ್ನೆಲೆಯಲ್ಲಿನ ಈ ಮಾತು, ಮನುಷ್ಯ ಬಿಡುಗಡೆಯ ಹೋರಾಟದ ಕಿಚ್ಚನ್ನು ಯಾರೂ ನಿಲ್ಲಿಸಲಾರರು ಎಂದು ಹೇಳುವಂತಿದೆ.

ಗಣಿಗಾರಿಕೆಯ ಕುರಿತು ಎನ್ಕೆ ತಮ್ಮ ಕವಿತೆಯಲ್ಲಿ- `ಅನ್ನದ ಅಗುಳಿನ ಹೊಟ್ಟೆಯನ್ನು ಬಗೆದಂತೆ ಕಾಣುವ~ ಎನ್ನುತ್ತಾರೆ. ಇಲ್ಲಿ, ಸುತ್ತಲ ಬದುಕಿನ ಬಗ್ಗೆ ಹೋರಾಟವನ್ನು ರೂಪಿಸುತ್ತಲೇ ಪ್ರೀತಿಯನ್ನು ಹುಟ್ಟುಹಾಕುವ ಪ್ರೇಮದ ಕವಿಯಾಗಿ ಕವಿ ನಮ್ಮನ್ನು ಮುಟ್ಟುತ್ತಾನೆ.

`ಬಾ ಗೆಳತಿ~ ಕವಿತೆ ಓದಿದ ಯಾರಾದರೂ ಅದನ್ನು ಬೊಗಸೆಯಲ್ಲಿಟ್ಟು ಧ್ಯಾನಿಸುವಂತಿದೆ. ಇದು ನಾಗರಿಕ ಸಮಾಜಕ್ಕೆ ಕವಿಯೊಬ್ಬ ಕೊಡಬಹುದಾದ ಕಾಣ್ಕೆ.`ಅವ್ವ ನಿಂತೇಯಿದ್ದಾಳೆ~ ಕವಿತೆಯನ್ನು ಕರುಳು ಹಿಂಜಿ ನೂಲು ಮಾಡಿದ ಹಾಗಿದೆ. ಈ ಕವಿತೆ ಕುರಿತು ಸಾಹಿತ್ಯಾಸಕ್ತರೊಬ್ಬರು `ತನ್ನವ್ವನ ಕುರಿತು ಹೀಗೆ ಬರೆಯಬಹುದಾ?~ ಎಂದಿದ್ದಕ್ಕೆ, `ಅದು ಅವರ ಅವ್ವನ ಬಗ್ಗೆ ಬರೆದುದ್ದಲ್ಲ, ಭಾರತ ಮಾತೆಯ ಬಗ್ಗೆ ಬರೆದದ್ದು~ ಎಂದು ದೇವನೂರು ಹೇಳಿದ್ದರಂತೆ.

`ಇರುವೆ ಗಾತ್ರದಲ್ಲಿ ಚಿಕ್ಕದಿರಬಹುದು, ಆದರೆ ಅದರ ಜೀವ ಕೂಡ ತನ್ನ ಜೀವದಷ್ಟೇ ಅಥವಾ ತನಗಿಂತಲೂ ಅದರ ಜೀವವೇ ಬಹಳ ಮುಖ್ಯ~ ಎನ್ನುವುದನ್ನು ಪ್ರತಿಪಾದಿಸುತ್ತಲೇ ಎನ್ಕೆ ಸಮ ಸಮಾಜದ ಕನಸು ಹಂಚುತ್ತಾರೆ. ಪ್ರಕೃತಿಯಲ್ಲಿ ಮನುಷ್ಯನಿಗಿರುವಷ್ಟೇ ಪಾಲು ಮತ್ತು ಬದುಕುವ ಹಕ್ಕು ಇರುವೆಗೂ ಇದೆ ಎನ್ನುವುದನ್ನು `ಚಿತ್ರದ ಬೆನ್ನು~ ಕವಿತೆ ಧ್ವನಿಪೂರ್ಣವಾಗಿ ಹೇಳುತ್ತದೆ.

ಕಾವ್ಯದ ಮೂಲ ಧಾತು ದುಃಖ ಮತ್ತು ಪ್ರೀತಿ ಎಂದು ಹೇಳಬಹುದಾದರೂ, ಅವುಗಳನ್ನು ಅಳೆದು ಸುರಿದು ತೂಕ ಮಾಡುವ ಮಾಪನವಿದ್ದಿದ್ದರೆ ದುಃಖದ ಅಳತೆಯನ್ನೂ ಪ್ರೀತಿಯ ಗಾತ್ರವನ್ನೂ ತೋರಿಸಿ ಹೇಳಬಹುದಿತ್ತು.
 
ಕಾವ್ಯವನ್ನು ಉತ್ಕಟ ಪ್ರೀತಿಯಿಂದ ದಕ್ಕಿಸಿಕೊಂಡ ಎನ್ಕೆ ಪ್ರೀತಿಯ ಗೋಜಲಿಗೆ ಬಿದ್ದು ಬದುಕನ್ನು ಗೆಲ್ಲಲಾರದೇ ಹೋದರೂ ಸೋಲನ್ನು ಒಪ್ಪಿಕೊಳ್ಳಲಿಲ್ಲ, ಅದನ್ನು ಜಯಿಸಲೂ ಇಲ್ಲ. ಅದೂ ಕೂಡ ಅವನ ಕನಸಾಗಿತ್ತೇ? ಬದುಕಲ್ಲಿ ಕ್ರಮಿಸಿದ್ದಕ್ಕಿಂತಲೂ ಅವರ ಕಾವ್ಯ ಜಲ ಬಹಳ ದೂರ ಹರಿದಿದೆ.
 
ಹೊರಗಿನಿಂದ ಬಲ್ಲವರಿಗೆ ಒಬ್ಬ ಕವಿಯಾಗಿ ಕಾಣುವ, ಒಳಗಿನಿಂದ ಬಲ್ಲವರಿಗೆ ತಾಯಿಯಾಗಿ, ನನ್ನಂತಹವರಿಗೆ ಕಾವ್ಯದ ದೊಡ್ಡಕ್ಕನಾಗಿ ಎನ್ಕೆ ಕಾಣಿಸುತ್ತಾರೆ. ಅಕ್ಕನ ಕೈ ಹಿಡಿದು ಪುಟ್ಟ ತಂಗಿಯಾಗಿ ನಾನು ನಿಂತಿದ್ದೇನೆ. ಆಕೆ ಆಕಾಶದಲ್ಲಿ ಹಾರುತ್ತಿರುವ ಹಕ್ಕಿಗಳನ್ನ ತೋರಿಸುತ್ತಿರುವ ಹಾಗೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.