ಬೆಂಗಳೂರಿನ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಜಟ್ಕಾದೊಳಗೆ ಕೇವಲ ನಾಲ್ಕಾಣೆಯಲ್ಲಿ ಪ್ರಯಾಣ ಮಾಡಬಹುದಾದ
ಕಾಲವೊಂದಿತ್ತು ಎಂದರೆ ಈಗ ಯಾರೂ ನಂಬುವುದಿಲ್ಲ. 80 ವರ್ಷಗಳ ಹಿಂದೆ ನಗರದ ಮುಖ್ಯ ಸಾರಿಗೆ ಸಾಧನಗಳಾಗಿದ್ದ ಕುದುರೆ ಗಾಡಿಗಳು, ಎತ್ತಿನ ಬಂಡಿಗಳು ಅದಾಗಲೇ ಇತಿಹಾಸದ ಪುಟ ಸೇರಿಬಿಟ್ಟಿವೆ.
ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ನಗರಗಳು ಈಗಿನ ಮಟ್ಟಕ್ಕೆ ಬೆಳೆಯುವ ಮುನ್ನ ಬಂಡಿ ಜಾಡುಗಳೇ ಅವುಗಳ ಮುಖ್ಯ ರಸ್ತೆಗಳಾಗಿದ್ದವು. ಆ ಜಾಡುಗಳು ಅಳಿಸಿಹೋಗಿ ಟಾರು ಬಳಿದುಕೊಂಡ ಹೆದ್ದಾರಿಗಳು, ದೈತ್ಯ ಮೇಲ್ಸೇತುವೆಗಳು, ಉದ್ದನೆಯ ಕಾರಿಡಾರ್‌ಗಳು ಮೇಲೆದ್ದು ಎಷ್ಟೋ ವರ್ಷಗಳಾಗಿವೆ. ಜಟ್ಕಾದಿಂದ ಮೊಬೈಲ್ ಆ್ಯಪ್ ಆಧಾರಿತ ಕ್ಯಾಬ್‌ವರೆಗೆ ಅವುಗಳ ಮೇಲೆ ಓಡಾಡುವ ಪ್ರಯಾಣದ ಸಾಧನಗಳೂ ಬದಲಾಗಿಬಿಟ್ಟಿವೆ.
ಮುಂಬೈನ ಯುವ ಉದ್ಯಮಿಗಳಾದ ಬವೀಶ್ ಅಗರವಾಲ್ ಮತ್ತು ಅಂಕಿತ್ ಭಾಟಿ ಅವರಲ್ಲಿ ಈ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಆರಂಭಿಸುವ ಯೋಚನೆ ಅದ್ಹೇಗೆ ಮೊಳಕೆ ಒಡೆಯಿತೋ ಏನೋ, ಓಲಾದಂತಹ ಸಂಸ್ಥೆಗಳ ಆ್ಯಪ್ ಆಧಾರಿತ ಟ್ಯಾಕ್ಸಿಗಳಿಂದ ನಗರಗಳ ಚಹರೆಯೇ ಬದಲಾಗಿಹೋಗಿದೆ. ಕೈಯಲ್ಲಿ ಹಿಡಿದ ಮೊಬೈಲ್ ಮೂಲಕ ಬುಕ್ ಮಾಡಿದ ನಾಲ್ಕಾರು ನಿಮಿಷಗಳಲ್ಲೇ ನಮ್ಮ ಮುಂದೆ ಟ್ಯಾಕ್ಸಿ ಪ್ರತ್ಯಕ್ಷವಾಗುವುದು ಎಂದರೆ ತಮಾಷೆಯೇ ಮತ್ತೆ!
ನಡುರಾತ್ರಿ, ನಸುಕು, ಮಟ ಮಟ ಮಧ್ಯಾಹ್ನ... ನಾವು ಯಾವಾಗ ಕರೆದರೂ ಹೇಳಿದ ಸಮಯ ಮತ್ತು ಜಾಗದಲ್ಲಿ ಸರಿಯಾಗಿ ಬಂದುನಿಲ್ಲುವ ಆ್ಯಪ್ ಆಧಾರಿತ ಟ್ಯಾಕ್ಸಿ ಆರಾಮ, ಅನುಕೂಲ ಹಾಗೂ ಅಗ್ಗದ ದರದ ಪ್ರಯಾಣ ಸೌಲಭ್ಯಕ್ಕೆ ಹೆಸರಾಗಿದೆ. ಕೇವಲ ಮೇಲ್ವರ್ಗದ ಸಾಧನ ಎನಿಸಿದ್ದ ಕಾರನ್ನು ಮಧ್ಯಮ ವರ್ಗದವರೂ ನಿತ್ಯ ಬಳಸುವಂತಹ ಸೌಲಭ್ಯವನ್ನು ಒದಗಿಸಿಕೊಟ್ಟ ಈ ಟ್ಯಾಕ್ಸಿ, ಸಾಮಾಜಿಕ ಸ್ಥಿತ್ಯಂತರಕ್ಕೂ ಕಾರಣವಾಗಿದೆ.
ಯಾವುದೇ ರೈಲು ನಗರದ ನಿಲ್ದಾಣಕ್ಕೆ ಹತ್ತಿರ ಆಗುತ್ತಿದ್ದಂತೆಯೇ ಬಹುತೇಕರ ಜೇಬುಗಳಿಂದ ಮೊಬೈಲ್‌ಗಳು ಹೊರಬರುತ್ತವೆ. ಪಟಪಟ ಅಂತ ಟ್ಯಾಕ್ಸಿಗಳು ಬುಕ್ ಆಗುತ್ತವೆ. ರೈಲು ಇಳಿದು ಹೊರಬರುವಷ್ಟರಲ್ಲಿ ಟ್ಯಾಕ್ಸಿಗಳು ಅವರಿಗಾಗಿ ಕಾಯುತ್ತಿರುತ್ತವೆ. ಮೊಬೈಲ್ ಆ್ಯಪ್ ಒದಗಿಸಿಕೊಟ್ಟ ಈ ಸೌಲಭ್ಯದ ಪರಿಣಾಮ ಸಾವಿರಾರು ಕುಟುಂಬಗಳು ಕಾರುಗಳ ಖರೀದಿ ಯೋಚನೆಯನ್ನೇ ಕೈಬಿಟ್ಟಿವೆ. ಕಾರು ಇದ್ದವರೂ ಪಾರ್ಕಿಂಗ್ ಕಿರಿಕಿರಿಯಿಂದ ಭಯಗೊಂಡು ಟ್ಯಾಕ್ಸಿ ಸೇವೆಗೆ ಮೊರೆ ಹೋಗುತ್ತಿರುವುದು ಹೊಸ ವಿದ್ಯಮಾನವಾಗಿದೆ. ಆಟೊ ದರದಲ್ಲಿ ಟ್ಯಾಕ್ಸಿಯೊಳಗಿನ ಪ್ರಯಾಣವೆಂದರೆ ಯಾರಿಗೆ ಬೇಡ ಹೇಳಿ?
‘ಚೌಕಾಸಿ ಅಗತ್ಯವಿಲ್ಲ, ಸುಲಿಗೆ ಮಾಡುವುದಿಲ್ಲ. ಎಲ್ಲಿಗೆ ಕರೆದರೂ ನಿರಾಕರಿಸದೆ ಬರುತ್ತಾರೆ. ಸಮಯಕ್ಕೆ ಸರಿಯಾಗಿ ಇರುತ್ತಾರೆ. ಅಲ್ಲದೆ, ಟ್ಯಾಕ್ಸಿಗಳು ಸ್ವಚ್ಛವಾಗಿರುತ್ತವೆ. ನಮಗೆ ಇನ್ನೇನು ಬೇಕು’ ಎಂದು ಪ್ರಶ್ನಿಸುತ್ತಾರೆ ವೈಟ್‌ಫೀಲ್ಡ್‌ನ ಐಟಿ ಉದ್ಯೋಗಿ ಅನುಜ್ ದುಬೆ.
‘ಸ್ವಂತ ಕಾರು ಹೊಂದುವುದಕ್ಕಿಂತ ಟ್ಯಾಕ್ಸಿ ಬಾಡಿಗೆ ಪಡೆಯುವುದೇ ಆರ್ಥಿಕವಾಗಿ ಹೆಚ್ಚು ಅನುಕೂಲ ಹಾಗೂ ಆರಾಮ’ ಎನ್ನುವುದು ಅನುಜ್ ಅವರಂತಹ ಟೆಕ್ಕಿಗಳ ಸಾಮಾನ್ಯ ಅಭಿಪ್ರಾಯವಾಗಿದೆ.
ಬೆಂಗಳೂರಿನಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿಗಳ ಸೇವೆ ಜೋರಾಗಿದ್ದರೆ, ಮಂಗಳೂರು, ಮೈಸೂರು, ಹುಬ್ಬಳ್ಳಿ ಮುಂತಾದ ನಗರಗಳಲ್ಲಿ ಈಗಷ್ಟೇ ಚುರುಕು ಪಡೆಯುತ್ತಿದೆ. ಟ್ಯಾಕ್ಸಿ ಕಂಪೆನಿಗಳು ಕೊಡುವ ಮಾಹಿತಿ ಕುತೂಹಲಕಾರಿಯಾಗಿದೆ. ಆ್ಯಪ್ ಆಧಾರಿತ ಟ್ಯಾಕ್ಸಿ ಬಳಸುವವರ ಸಂಖ್ಯೆ ದಕ್ಷಿಣ ಹಾಗೂ ಪೂರ್ವ ಬೆಂಗಳೂರಿನಲ್ಲೇ ಹೆಚ್ಚಿದೆಯಂತೆ. ಅದರಲ್ಲೂ ಶೇ 70ರಷ್ಟು ಗ್ರಾಹಕರು ವೈಟ್‌ಫೀಲ್ಡ್, ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್, ಜಯನಗರ, ಹೊಸೂರು ಮತ್ತು ಬನ್ನೇರುಘಟ್ಟ ರಸ್ತೆ ಸುತ್ತಲಿನ ಪ್ರದೇಶಗಳ ಜನರೇ ಆಗಿದ್ದಾರೆ ಎಂಬುದು ಅವರ ವಿವರಣೆ.
ಆ್ಯಪ್ ಆಧಾರಿತ ಟ್ಯಾಕ್ಸಿಗಳ ಮೇಲೆ ಜನರ ವ್ಯಾಮೋಹ ಹೆಚ್ಚುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರಗಳು ಅವುಗಳಿಗೆ ಅಂಕುಶ ಹಾಕುವ ಮಾತುಗಳನ್ನು ಆಡುತ್ತಿವೆ. ನಾಗರಿಕರ ಸುರಕ್ಷತೆ ಕುರಿತು ಕಳಕಳಿ ವ್ಯಕ್ತಪಡಿಸಿರುವ ಸರ್ಕಾರಗಳು, ಸಮಯಾಧಾರಿತ ವ್ಯತ್ಯಾಸದ ದರಗಳ ಮೂಲಕ ಟ್ಯಾಕ್ಸಿ ಸಂಸ್ಥೆಗಳು ಮೋಸ ಮಾಡುವ ವಿಷಯವಾಗಿಯೂ ಆಕ್ರೋಶ ಹೊರಹಾಕಿವೆ.
ಓಲಾ, ಉಬರ್ ಸೇರಿದಂತೆ ಟ್ಯಾಕ್ಸಿ ಸೇವಾ ಸಂಸ್ಥೆಗಳ ವೆಬ್‌ಸೈಟ್‌ನಲ್ಲಿ ಸಮಯಾಧಾರಿತ ವ್ಯತ್ಯಾಸದ ದರಗಳ ಪ್ರಸ್ತಾಪ ಇದೆ. ಯಾವುದೇ ನಿರ್ದಿಷ್ಟ ಪ್ರದೇಶದಲ್ಲಿ ಟ್ಯಾಕ್ಸಿಗಳು ಕಡಿಮೆಯಿದ್ದು ಬೇಡಿಕೆ ಹೆಚ್ಚಾಗಿದ್ದರೆ (ಕಚೇರಿ ಆರಂಭದ ಹಾಗೂ ಮುಕ್ತಾಯದ ಸಮಯ) ಅಧಿಕ ದರ ನೀಡಲು ಒಪ್ಪಿದವರತ್ತ ಟ್ಯಾಕ್ಸಿಗಳು ಹೊರಟು ಬಿಡುತ್ತವೆ. ಹೌದು, ಲಾಭವೇ ಮುಖ್ಯವಾದಾಗ ಅಲ್ಲಿ ನೈತಿಕ ಹೊಣೆಗಾರಿಕೆಗೆ ಜಾಗವಿಲ್ಲ.
‘ಪ್ರಿಡೇಟರಿ ಪ್ರೈಸಿಂಗ್ (ಬೇರೆ ಸಂಸ್ಥೆಗಳು ಪೈಪೋಟಿ ನೀಡಲಾಗದಷ್ಟು ಕಡಿಮೆ ದರ) ಮೂಲಕ ಸಾಂಪ್ರದಾಯಿಕ ಟ್ಯಾಕ್ಸಿ ಸಂಸ್ಥೆಗಳಿಗೆ, ಸರ್ಜ್ ಪ್ರೈಸಿಂಗ್ (ಬೇಡಿಕೆಗೆ ತಕ್ಕಂತೆ ದರ ಏರಿಕೆ) ಮೂಲಕ ಗ್ರಾಹಕರಿಗೆ ಈ ಸಂಸ್ಥೆಗಳು ಬರೆ ಎಳೆಯುತ್ತಿವೆ. ಈ ಎರಡೂ ಮಾದರಿ ದರ ನಿರ್ವಹಣೆ ಮೂಲಕ ತಮ್ಮ ಲಾಭವನ್ನು ಸರಿದೂಗಿಸುತ್ತವೆ’ ಎನ್ನುವುದು ಸಾರಿಗೆ ಇಲಾಖೆಯ ಅಧಿಕಾರಿಗಳ ವಿವರಣೆ. ಕಾಯುವ ದರದ (ವೇಟಿಂಗ್ ಚಾರ್ಜ್) ಲೆಕ್ಕಾಚಾರದಲ್ಲೂ ಸುಲಿಗೆ ಮಾಡಲಾಗುತ್ತದೆ ಎಂಬ ಆರೋಪವೂ ಇದೆ.
‘ನಮ್ಮ ವ್ಯವಹಾರ ಎಲ್ಲವೂ ಮುಕ್ತವಾಗಿದೆ. ಗ್ರಾಹಕರು ಎಷ್ಟು ದೂರ ಪ್ರಯಾಣ ಮಾಡಿದ್ದಾರೆ, ಎಷ್ಟು ಹೊತ್ತು ಕಾಯಲಾಗಿದೆ, ಎಷ್ಟು ಶುಲ್ಕ ಪಡೆಯಲಾಗಿದೆ ಎಂಬುದರ ಪ್ರತಿಯೊಂದು ವಿವರವನ್ನು ಬಿಲ್ ಮೂಲಕ ನೀಡಲಾಗುತ್ತಿದೆ’ ಎಂದು ಓಲಾ ಸಂಸ್ಥೆಯ ವಕ್ತಾರ ಆನಂದ್ ಸುಬ್ರಮಣಿಯನ್ ಹೇಳುತ್ತಾರೆ.
ಒಂದೊಂದು ರಾಜ್ಯ ಸರ್ಕಾರ ಒಂದೊಂದು ರೀತಿಯಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿಗಳ ಮೇಲೆ ನಿಯಂತ್ರಣ ವಿಧಿಸಲು ಮುಂದಾಗಿದೆ. ದೆಹಲಿಯಲ್ಲಿ ಈ ಟ್ಯಾಕ್ಸಿಗಳ ಮೇಲೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಅಲ್ಲದೆ, ಸಿಎನ್‌ಜಿ ಇಂಧನ ಬಳಸುವ ವಾಹನಗಳಿಗಷ್ಟೇ ಅಲ್ಲಿ ಕಾರ್ಯಾಚರಣೆಗೆ ಅವಕಾಶ ಮಾಡಿಕೊಡುವ ಪ್ರಸ್ತಾವ ಇದೆ. ನಿರ್ಬಂಧ ತೆರವುಗೊಳಿಸದಂತೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಲಾಗಿದೆ. ಜನಸಾಮಾನ್ಯರಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಅಲ್ಲಿನ ಸರ್ಕಾರ ‘ಪೂಚೊ’ ಎಂಬ ಆ್ಯಪ್ ಆರಂಭಿಸಿದೆ. ಆದರೆ, ಈ ಆ್ಯಪ್‌ನಿಂದ ಟ್ಯಾಕ್ಸಿ ಬುಕ್ ಮಾಡಲು ಸಾಧ್ಯವಿಲ್ಲ. ಅದು ಕೇವಲ ಚಾಲಕನ ಮೊಬೈಲ್ ಸಂಖ್ಯೆ ಒದಗಿಸುತ್ತದೆ.
ಪಶ್ಚಿಮ ಬಂಗಾಳ ಸರ್ಕಾರ ಟ್ಯಾಕ್ಸಿಯಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಹಾಗೂ ಅಲಾರಾಂ ಅಳವಡಿಕೆಯನ್ನು ಕಡ್ಡಾಯಗೊಳಿಸಿದೆ. ಕನಿಷ್ಠ ಬಾಡಿಗೆ ದರ ನಿಗದಿ ಮಾಡುವುದೂ ಸೇರಿದಂತೆ ಕರ್ನಾಟಕ ಸರ್ಕಾರ ಸಹ ಹಲವು ನಿಯಮಗಳನ್ನು ಜಾರಿಗೊಳಿಸಲು ತೀರ್ಮಾನಿಸಿದೆ.
ಬಹುತೇಕ ಟ್ಯಾಕ್ಸಿ ಸಂಸ್ಥೆಗಳು ಆ್ಯಪ್ ಮೂಲಕ ಗ್ರಾಹಕರು ಮತ್ತು ಟ್ಯಾಕ್ಸಿ ಚಾಲಕರ ನಡುವೆ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತವೆ. ಚಾಲಕನಿಗೆ ಒದಗಿಸಿಕೊಡುವ ವಹಿವಾಟಿನಲ್ಲಿ ತಮ್ಮ ಪಾಲನ್ನು (ಕಮಿಷನ್) ಪಡೆಯುತ್ತವೆ. ಆ ಪ್ರಮಾಣ ಶೇ 13ರಿಂದ ಶೇ 20ರಷ್ಟಿದೆ.
ಉದ್ಯೋಗ ಕಳೆದುಕೊಂಡು ಅತಂತ್ರರಾಗಿದ್ದ ಸಾವಿರಾರು ಮಂದಿಗೆ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಹೊಸ ಜೀವನ ನೀಡಿದೆ. ಓಲಾ ಹಾಗೂ ಉಬರ್ ಸೇವೆಗೆ ನೋಂದಣಿ ಮಾಡಿಕೊಳ್ಳಲು ಅವುಗಳ ಕಚೇರಿ ಮುಂದೆ ನಿತ್ಯವೂ ಚಾಲಕರ ದೊಡ್ಡ ಸರದಿಯೇ ನೆರೆದಿರುತ್ತದೆ.
ಪದವೀಧರರಿಂದ ಎಸ್‌ಎಸ್‌ಎಲ್‌ಸಿ ಪಾಸಾದವರವರೆಗೆ ಎಲ್ಲರಿಗೂ ಅಲ್ಲಿ ಉದ್ಯೋಗ ಇದೆ. ಈವರೆಗೆ 60 ಸಾವಿರಕ್ಕೂ ಅಧಿಕ ಚಾಲಕರು ಟ್ಯಾಕ್ಸಿ ಸೇವಾ ಸಂಸ್ಥೆಗಳ ಜತೆ ನೋಂದಣಿ ಮಾಡಿಕೊಂಡಿದ್ದಾರೆ. ತಿಂಗಳಿಗೆ ₹ 70 ಸಾವಿರದವರೆಗೆ ಆದಾಯ ಗಳಿಸುತ್ತಿರುವ ಹಲವರು ಕಾರಿನ ಸಾಲವನ್ನು ವರ್ಷದೊಳಗೇ ತೀರಿಸಿದ್ದಾರೆ. ಆದರೆ, ಗಳಿಕೆಯ ಧಾವಂತದಲ್ಲಿ ನಿತ್ಯ 16 ಗಂಟೆಯಷ್ಟು ಸಮಯ ಅವರು ರಸ್ತೆಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಆ ಆಯಾಸದ ಜತೆಗೆ ಸಂಚಾರ ದಟ್ಟಣೆಯೂ ಅವರ ಮೇಲೆ ವಿಪರೀತ ಒತ್ತಡ ಹಾಕುತ್ತಿದೆ. ಅದನ್ನೆಲ್ಲ ಮರೆಯಲು ಕೆಲವರು ಮಾದಕ ವ್ಯಸನ ಇಲ್ಲವೆ ಕುಡಿತದ ಚಟಕ್ಕೆ ತುತ್ತಾಗುತ್ತಿದ್ದಾರೆ ಎನ್ನುತ್ತಾರೆ ನಿಮ್ಹಾನ್ಸ್ ತಜ್ಞರು.
ದೆಹಲಿ ಯುವತಿಯ ಮೇಲೆ ಉಬರ್ ಚಾಲಕ ನಡೆಸಿದ ಅತ್ಯಾಚಾರದ ಘಟನೆ ಬಳಿಕ ಸುರಕ್ಷತೆ ವಿಷಯ ಮತ್ತೆ ಮತ್ತೆ ಚರ್ಚೆ ಆಗುತ್ತಲೇ ಇದೆ. ಚಾಲಕರ ಹಿನ್ನೆಲೆಯನ್ನು ತಿಳಿದುಕೊಳ್ಳದೆ ಅವರನ್ನು ಈ ಸಂಸ್ಥೆಗಳು ತಮ್ಮ ಸೇವಾ ಜಾಲದೊಳಗೆ ಸೇರ್ಪಡೆ ಮಾಡಿಕೊಳ್ಳುವುದೇ ಇಂತಹ ಘಟನೆಗಳಿಗೆ ಕಾರಣ ಎಂಬ ದೂರುಗಳೂ ಕೇಳಿಬಂದಿವೆ. ಈ ಆತಂಕವನ್ನು ಹೋಗಲಾಡಿಸುವ ಯತ್ನವಾಗಿ ಓಲಾ ಸಂಸ್ಥೆ ಕಳೆದ ವರ್ಷ ಸುರಕ್ಷತಾ ಕ್ರಮಗಳಿಗಾಗಿ ₹ 120 ಕೋಟಿ ವ್ಯಯಿಸಿದೆಯಂತೆ. ಉಬರ್ ಸಂಸ್ಥೆ ಕೂಡ ಭದ್ರತೆಗೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿರುವುದಾಗಿ ಹೇಳುತ್ತದೆ.
ಬುಕ್ ಮಾಡಿದ ಟ್ಯಾಕ್ಸಿಗಳು ನಸುಕಿನಲ್ಲಿ ಬಾರದೆ ವಿಮಾನ ತಪ್ಪಿಸಿಕೊಂಡವರ ಕಥೆಗಳು ಬೇಕಾದಷ್ಟು ಸಿಗುತ್ತವೆ. ಆಯಾಸಗೊಂಡ ಚಾಲಕರು ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ಮಲಗಿಬಿಡುವುದೇ ಇದಕ್ಕೆ ಕಾರಣ. ಅಂತಹ ಚಾಲಕರಿಗೆ ಎಚ್ಚರಿಕೆ ಕೊಡುವ, ಪರ್ಯಾಯ ಟ್ಯಾಕ್ಸಿ ವ್ಯವಸ್ಥೆ ಮಾಡುವ ಹೊಣೆಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎನ್ನುವುದು ಟ್ಯಾಕ್ಸಿ ಸಂಸ್ಥೆಗಳ ಮೇಲಿರುವ ಮತ್ತೊಂದು ಆರೋಪ. ನಿತ್ಯ 12 ಟ್ರಿಪ್ ಮಾಡಿದವರಿಗೆ ಪ್ರೋತ್ಸಾಹಧನ ಘೋಷಿಸುವ ಮೂಲಕ ಚಾಲಕರನ್ನು ಹಿಡಿದಿಡುವ ಯತ್ನವನ್ನು ಸಂಸ್ಥೆಗಳು ಮಾಡುತ್ತಿವೆ.
ಅನುಕೂಲಕರ ಸಾರಿಗೆ ವ್ಯವಸ್ಥೆಯನ್ನು ಸಾರ್ವಜನಿಕರು ಪ್ರೀತಿಸುತ್ತಾರೆ ಎನ್ನುವುದಕ್ಕೆ ಈ ಟ್ಯಾಕ್ಸಿ ಕ್ರಾಂತಿಯೇ ಉದಾಹರಣೆ. ಸಮೂಹ ಸಾರಿಗೆ ವ್ಯವಸ್ಥೆ ಬೆಳೆಸುವ ಹೊಣೆಯನ್ನು ಮರೆತ ಸರ್ಕಾರ, ಟ್ಯಾಕ್ಸಿ ಸೇವೆ ಸುಲಲಿತವಾಗಿ ನಡೆಯುವಂತೆ ನೋಡಿಕೊಳ್ಳುವಲ್ಲೂ ವಿಫಲವಾಗಿದೆ. ಸಾರಿಗೆ ವ್ಯವಸ್ಥೆಯಲ್ಲಿ ಆಗುವ ಏರುಪೇರು ಜನಸಾಮಾನ್ಯರ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡೇ ವ್ಯವಸ್ಥೆ ಸುಧಾರಣೆಗೆ ಕೈಹಾಕಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.