ರಾಜಕೀಯಕ್ಕೆ ಮಹಿಳೆಯರು ಪ್ರವೇಶ ಗಿಟ್ಟಿಸುವು ದರಲ್ಲಿ ಮೂರು ವಿಧಗಳಿವೆ. ಸಮಾಜ ಸೇವಾ ಕೆಲಸಗಳಲ್ಲಿ ತೊಡಗಿಸಿಕೊಂಡು, ಜನರ ಒಡನಾಟದಲ್ಲಿರುವ ಮಹಿಳೆಯರನ್ನು ರಾಜಕೀಯ ಪಕ್ಷಗಳು ಅಗತ್ಯ ಕಂಡು ಬಂದಾಗ ಗುರುತಿಸಿ ತಾವೇ ಆಹ್ವಾನ ನೀಡುತ್ತವೆ. ಜನ ಈ ಮಹಿಳೆಯ ನಾಯಕತ್ವವನ್ನು ಒಪ್ಪಿಕೊಂಡಾರು ಎಂಬ ನಂಬಿಕೆಯಿಂದ ಪಕ್ಷಗಳು ಹೀಗೆ ಆಹ್ವಾನ ನೀಡುತ್ತವೆ.
ಎರಡನೆಯದು: ಮನೆಯ ಕೆಲಸ ಮಾತ್ರ ಮಾಡಿ ಕೊಂಡಿದ್ದ ಮಹಿಳೆಯನ್ನು, ಮೀಸಲಾತಿಯ ಕಾರಣಕ್ಕೂ ರಾಜಕೀಯಕ್ಕೆ ಆಹ್ವಾನಿಸಬಹುದು. ಮೂರನೆಯದು: ಆ ಮಹಿಳೆಯ ಬಂಧುಗಳು ರಾಜ ಕೀಯದಲ್ಲಿ ತೊಡಗಿಸಿಕೊಂಡಿ ದ್ದರೆ, ಅವಕಾಶ ದೊರೆತಾಗ ಮಹಿಳೆಯೂ ರಾಜಕೀಯ ಪ್ರವೇಶ ಮಾಡಬಹುದು.
ಆದರೆ ರಾಜಕೀಯ ಕ್ಷೇತ್ರ ದಲ್ಲಿ ತಾನಾಗಿಯೇ ಮುಂದೆ ಸಾಗುವ ಮಹಿಳೆಯನ್ನು ಸಮಾಜದ ಸಾವಿರ ಕಣ್ಣುಗಳು ನೋಡುತ್ತಿರುತ್ತವೆ. ಸಲ್ಲದ ಆಪಾದನೆಯೂ ಆಕೆಯ ವಿರುದ್ಧ ಕೇಳಿ ಬರಬಹುದು. ರಾಜಕೀಯದಲ್ಲಿ ಮಹಿಳೆಗೆ ನೂರಾರು ಸಮಸ್ಯೆಗಳಿವೆ, ಅದನ್ನೆಲ್ಲ ಮೀರಿ ಆಕೆ ಮುಂದೆ ಬರಬೇಕು.
ಮನೆಯೊಳಗಿಂದ ನೇರವಾಗಿ ರಾಜಕೀಯಕ್ಕೆ ಬರುವ ಮಹಿಳೆಯರು, ಚುನಾವಣೆಯಲ್ಲಿ ಸೋತ ತಕ್ಷಣ ಮನೆಗೆ ಮರಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಆದರೆ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡ ಹೆಣ್ಣು ಮಕ್ಕಳು ಮಾತ್ರ ಸೋತರೂ ರಾಜಕೀಯದಲ್ಲಿ ಉಳಿಯುತ್ತಾರೆ.
ಮನೆಮಂದಿಯ ಸಂತೋಷಕ್ಕೆ ಧಕ್ಕೆ ತಾರದೆ, ಸಮಾಜ ದಲ್ಲೂ ಒಳ್ಳೆಯ ಕೆಲಸ ಮಾಡಿಕೊಂಡು ಹೋಗಬೇಕಾದ ಜವಾಬ್ದಾರಿ ಮಹಿಳಾ ರಾಜಕಾರಣಿಗಳಿಗೆ ಮಾತ್ರ ಇರುತ್ತದೆ. ಇಂಥ ಸಮಸ್ಯೆ ಪುರುಷರಿಗೆ ಸಾಮಾನ್ಯವಾಗಿ ಎದುರಾಗುವುದಿಲ್ಲ. ಮನೆ ಮಂದಿಗೆ ಸಂತೋಷ ನೀಡಲಾಗದಿದ್ದರೆ, ರಾಜಕಾರಣದಲ್ಲಿ ಯಶಸ್ಸು ಕಂಡರೂ ಹೆಣ್ಣಿನ ಮನಸ್ಸಿಗೆ ನೆಮ್ಮದಿ ದೊರೆಯುವುದಿಲ್ಲ.
ರಾಜಕೀಯಕ್ಕೆ ಪ್ರವೇಶ ಪಡೆದ ಮಹಿಳೆ ಅಲ್ಲಿ ನೆಮ್ಮದಿಯಿಂದ ಮುಂದುವರಿಯಬಹುದು ಎಂಬ ವಾತಾವರಣವೇನೂ ಇಲ್ಲ. ಗೆದ್ದರೆ ಅಧಿಕಾರ. ಸೋತರೆ ಆಕೆಯನ್ನು ಕೇಳುವವರೇ ಇರುವುದಿಲ್ಲ. ಸ್ವಂತಿಕೆ, ಸಾಮರ್ಥ್ಯ ಇದ್ದರೆ ರಾಜಕೀಯದಲ್ಲಿ ಉಳಿಯಬ ಹುದು. ನಾನು ಒಮ್ಮೆ ಜಿಲ್ಲಾ ಪರಿಷತ್ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದೆ, ಆದರೆ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೆ.
ಪುರುಷ ಪ್ರಧಾನ ರಾಜಕೀಯ ವ್ಯವಸ್ಥೆ ಮಹಿಳೆಯರಿಗೆ ಮುಂದೆ ಬರಲು ಬಿಡುವುದಿಲ್ಲ. ಇಂಥ ವ್ಯವಸ್ಥೆಯಲ್ಲೂ ಮಹಿಳಾ ರಾಜಕಾರಣಿಗಳು ಹೆಣ್ಣಿನ ಸಮಸ್ಯೆ, ನೋವಿನ ಕುರಿತು ಮಾತನಾಡುವುದನ್ನು ಕಲಿತುಕೊಳ್ಳಬೇಕು. ತನ್ನದೇ ಪಕ್ಷದ ಪುರುಷ ಮುಖಂಡ ಇನ್ನೊಬ್ಬ ಹೆಣ್ಣಿನ ಮೇಲೆ ದೌರ್ಜನ್ಯ ಎಸಗುವುದನ್ನು ನೋಡಿ ಕುಳಿತುಕೊಳ್ಳುವುದು ತರವಲ್ಲ. ಹಾಗೆ ಮಾಡಿದರೆ, ಆ ಮಹಿಳಾ ರಾಜಕಾರಣಿಯೇ ದುರ್ಬಲಳಾಗುತ್ತಾಳೆ. ಸಮಾಜ ನಡೆಸುವ ದೌರ್ಜನ್ಯವನ್ನು ಎದುರಿಸುವ, ಅದರ ವಿರುದ್ಧ ಧ್ವನಿಯೆತ್ತುವ ಧೈರ್ಯ ಮೈಗೂಡಿಸಿಕೊಂಡರೆ ಮಾತ್ರ ಮಹಿಳೆಯರು ರಾಜಕಾರಣದಲ್ಲಿ ಉಳಿದುಕೊಳ್ಳಬಹುದು.
ಚುನಾವಣೆಗಳಲ್ಲಿ ಹಣ ಖರ್ಚು ಮಾಡುವುದು ಕೂಡ ಹೆಣ್ಣಿಗೆ ಸುಲಭದ ಕೆಲಸವಲ್ಲ. ಆಕೆ ಹಣಕ್ಕೆ ಗಂಡ ಅಥವಾ ಪಕ್ಷದ ಬಳಿ ಕೈಯೊಡ್ಡಬೇಕಾದ ಸ್ಥಿತಿ ಇರುತ್ತದೆ. ಒಂದು ವೇಳೆ ಹೆಣ್ಣಿನ ಬಳಿ ಹಣ ಇದ್ದರೂ, ಅದನ್ನು ಚುನಾವಣೆಗಳಲ್ಲಿ ನೀರಿನಂತೆ ಚೆಲ್ಲುವ ತಾಕತ್ತು ಆಕೆಗಿರುವುದಿಲ್ಲ. ನಿಜ ಹೇಳುತ್ತೇನೆ, ಚುನಾವಣೆಗಳಲ್ಲಿ ಮದ್ಯ ಸರಬರಾಜು ಮಾಡಲು ಹಣ ನೀಡಲು ಮಹಿಳೆಗೆ ಖಂಡಿತ ಮನಸ್ಸು ಬರುವುದಿಲ್ಲ. ಆದರೆ ಒಬ್ಬ ಪುರುಷ ರಾಜಕಾರಣಿ (ಎಲ್ಲರೂ ಅಲ್ಲ) ಇದನ್ನು ಮಾಡಬಲ್ಲ.
ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರವೂ ಸವಾಲುಗಳು ತಪ್ಪಿದ್ದಲ್ಲ. ಸಮಾಜ ಮತ್ತು ಮನೆಯನ್ನು ನಿಭಾಯಿಸಿಕೊಂಡು ಹೋಗುವ ಸವಾಲು ಮಹಿಳೆಗಷ್ಟೇ ಗೊತ್ತು. ಇಲ್ಲೇ ಒಂದು ಮಾತು ಹೇಳಿಬಿಡುತ್ತೇನೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳೆಗೆ ಮೀಸಲಾತಿ ಇಲ್ಲದಿದ್ದರೆ, ವಿಧಾನಸಭೆ– ಲೋಕಸಭೆಗಳಲ್ಲಿ ದುರ್ಬಲ ವರ್ಗಗಳಿಗೆ ಮೀಸಲಾತಿ ಇಲ್ಲದಿದ್ದರೆ ಈ ವರ್ಗಗಳು ರಾಜಕೀಯದಲ್ಲಿ ಖಂಡಿತ ಮುಂದೆ ಬರುತ್ತಿರಲಿಲ್ಲ. ಅಲ್ಲೇನಿದ್ದರೂ ಪ್ರಬಲರ ಆಟವೇ ನಡೆಯುತ್ತಿತ್ತು.
ಸೂತ್ರದ ಬೊಂಬೆಯಂತೆ ಕೆಲಸ ಮಾಡುವ ಹೆಣ್ಣನ್ನು, ರಾಜಕೀಯ ಕ್ಷೇತ್ರ ಸಹಿಸಿಕೊಳ್ಳುತ್ತದೆ. ಆದರೆ ಸ್ವಂತಿಕೆ–ಸ್ವಾಭಿಮಾನ ಇರುವ ಹೆಣ್ಣನ್ನು ಈ ಕ್ಷೇತ್ರದ ಪ್ರಬಲರು ಸಹಿಸಲಾರರು. ಇಂಥ ಕ್ಷೇತ್ರದಲ್ಲಿದ್ದರೂ ಹೆಣ್ತನದ ಗೌರವ ಕಾಯ್ದುಕೊಳ್ಳುವುದು ಒಂದು ಸವಾಲಿನ ಕೆಲಸವೇ ಸರಿ.
ಮಹಿಳೆಯರು ಲಾಬಿ ನಡೆಸುವ ಶಕ್ತಿಯನ್ನು ರಾಜ್ಯದ ಯಾವ ಪಕ್ಷದಲ್ಲೂ ಗಳಿಸಿಕೊಂಡಿಲ್ಲ. ಮಹಿಳೆಯರು ಸಂಘಟಿತರಾದರೆ ರಾಜಕೀಯದಲ್ಲಿ ಒಂದು ಪ್ರಬಲ ಶಕ್ತಿಯಾಗಿ, ಲಾಬಿ ನಡೆಸುವ ಮಟ್ಟಕ್ಕೆ ಬೆಳೆಯಬಹುದು. ಒಗ್ಗಟ್ಟಿದ್ದರೆ ಪಕ್ಷಗಳ ಹೈಕಮಾಂಡ್ ಕೂಡ ಬಗ್ಗುತ್ತದೆ.
ಕೊನೆಯದಾಗಿ ಒಂದು ಮಾತು: ಎಲ್ಲರಿಗೂ ಒಂದು ಜಾತಿ ಇರುತ್ತದೆ. ಆದರೆ ಮಹಿಳೆಗೆ ಜಾತಿ ಇಲ್ಲ. ಎಲ್ಲ ಜಾತಿಗಳಲ್ಲಿರುವ ಮಹಿಳೆಯರ ನೋವೂ ಒಂದೇ. ಆ ನೋವಿಗೆ ಮಹಿಳಾ ರಾಜಕಾರಣಿ ಧ್ವನಿ ಎತ್ತುವಂತಾದರೆ ಆಕೆಯ ರಾಜಕೀಯ ಜೀವನವೂ ಸಾರ್ಥಕ್ಯ ಕಾಣುತ್ತದೆ.
(ಲೇಖಕಿ ಪುತ್ತೂರು ಶಾಸಕಿ, ಕಾಂಗ್ರೆಸ್ ನಾಯಕಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.