ADVERTISEMENT

ನ್ಯಾಯಾಂಗ ನಿಂದನೆ ಎಂಬ ವಜ್ರಾಯುಧ ಬೇಕೇ?

ನ್ಯಾಯಾಂಗದ ಪ್ರಜಾಸತ್ತೆಯನ್ನು ರಕ್ಷಿಸಲು...

ಕೋ.ಚೆನ್ನಬಸಪ್ಪ
Published 21 ಡಿಸೆಂಬರ್ 2012, 19:41 IST
Last Updated 21 ಡಿಸೆಂಬರ್ 2012, 19:41 IST
ಚಿತ್ರ: ಅಭಿಜಿತ್ ಜೆ.ಕೆ
ಚಿತ್ರ: ಅಭಿಜಿತ್ ಜೆ.ಕೆ   

`ಕಂಟೆಮ್ಟ ಆಫ್ ಕೋರ್ಟ್' ಅಂದರೆ ನ್ಯಾಯ ಪರಿಪಾಲನೆಯನ್ನು ತುಚ್ಛೀಕರಿಸುವ, ಅದರ ಘನತೆ, ಗೌರವ ಗಾಂಭೀರ್ಯ, ಪಾವಿತ್ರ್ಯಕ್ಕೆ ಭಂಗ ತರುವ, ಭಗ್ನಗೊಳಿಸುವ ನಡತೆ. ನ್ಯಾಯಾಧೀಶರ ಸಮ್ಮುಖದಲ್ಲೇ - ಒಮ್ಮಮ್ಮೆ ನ್ಯಾಯಾಲಯದ ಹೊರಗೂ ಸಹಿತ ನ್ಯಾಯಾಲಯದ ಘನತೆಯನ್ನು ಜನರ ಕಣ್ಣಲ್ಲಿ ಅವಮಾನಿಸುವ ಮಾತು ಮತ್ತು ಕೃತಿ. ಅಪಹಾಸ್ಯಕ್ಕೆ ಈಡುಮಾಡುವಂಥ ನಡವಳಿಕೆ.

ಗಮನಿಸಬೇಕಾದ ಮುಖ್ಯ ಸಂಗತಿ ಎಂದರೆ ಆ ದುಷ್ಟ ನಡತೆ ನ್ಯಾಯಾಧೀಶರ, ನ್ಯಾಯಾಂಗದ ನಿಂದನೆಯಲ್ಲ. ಒಟ್ಟು ನ್ಯಾಯ ಪರಿಪಾಲನೆಯನ್ನು ನಗೆಪಾಟಲಿಗೆ ಗುರಿ ಮಾಡುವಂತಹ ನಡತೆ. ಇಂಥ ನಡತೆಯನ್ನು ನ್ಯಾಯಾಲಯದಲ್ಲಿ ನ್ಯಾಯಾಧೀಶರು ತಕ್ಷಣವೆ ಶಿಕ್ಷಿಸುವ ಅನಿರ್ಬಂಧ ಅಧಿಕಾರವನ್ನು ಕಂಟೆಮ್ಟ ಆಫ್ ಕೋರ್ಟ್ ಆಕ್ಟ್ (1971) ಶಾಸನದ ಮೂಲಕ ಅವರಿಗೆ ಕೊಟ್ಟಿದೆ. ಈ ಶಿಕ್ಷೆ ಕೊಡುವಾಗ ನ್ಯಾಯಾಧೀಶರೇ ಫಿರ್ಯಾದಿ. ಆ ಆರೋಪ ನಿಜವೇ? ಸುಳ್ಳೇ ಎಂಬುದನ್ನು ನಿರ್ಧರಿಸಲು ಯಾವ ಸಾಕ್ಷ್ಯವೂ, ಸಾಕ್ಷಿಯೂ ಬೇಕಿಲ್ಲ! ಯಾಕೆಂದರೆ ನ್ಯಾಯಾಧೀಶರ ಕಣ್ಣೆದುರಿನಲ್ಲೇ ಕೃತ್ಯ ನಡೆದಿದೆ!

ಫಿರ್ಯಾದಿ ಕೊಟ್ಟ ನ್ಯಾಯಾಧೀಶ ಜಡ್ಜ್! ತನ್ನ ಫಿರ್ಯಾದಿಯಲ್ಲಿ ತಾನೇ ತೀರ್ಪು ಕೊಡುವ ನ್ಯಾಯಾಧೀಶ!! ಅರೆ, ಇದೇನಿದು ನ್ಯಾಯ? ಹೌದು. ಈ ವಿಚಾರದಲ್ಲಿ ಇದೇ ನ್ಯಾಯ ಎನ್ನುತ್ತದೆ ಈ ಕಂಟೆಮ್ಟ ಶಾಸನ!! ಇಂಥ ಅಧಿಕಾರ ಬೇಕು; ಅಗತ್ಯ ಎನ್ನುತ್ತದೆ ಈ ಶಾಸನ. ಯಾಕೆಂದರೆ ನ್ಯಾಯಾಂಗದ ಸ್ವಾತಂತ್ರ್ಯ, ಪಾವಿತ್ರ್ಯ ಉಳಿಸಲು ಈ ವಜ್ರಾಯುಧ ನ್ಯಾಯಾಧೀಶರಿಗೆ ಬೇಕು ಎನ್ನುತ್ತದೆ, ಪ್ರಜಾಸತ್ತಾತ್ಮಕ ನ್ಯಾಯಾಂಗ ಪದ್ಧತಿ! ಒಂದು ಅರ್ಥದಲ್ಲಿ ಇದು ಸರ್ವಾಧಿಕಾರ.

ಹಾಗಾದರೆ ನ್ಯಾಯಾಧೀಶರು ಶಾಸನಕ್ಕೂ ಅತೀತರೆ? ಅವರ ನಡತೆ, ಅವರ ತೀರ್ಪನ್ನು ಯಾರೂ ಟೀಕಿಸಬಾರದೆ? ಹಾಗೇನೂ ಅಲ್ಲ ಎನ್ನುತ್ತದೆ ನಮ್ಮ ಸುಪ್ರೀಂಕೋರ್ಟು.  ನ್ಯಾಯ ಸಮ್ಮತ ಟೀಕೆ  (Fair Criticism) ಮಾಡಬಹುದು ಎನ್ನುತ್ತಾರೆ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ನೋಡಿ: 1978 ಖ.ಇ. 727 ರೆ ವರ್ಸಸ್  ಮುಲ್‌ಗಾಂವ್‌ಕರ್) ಮತ್ತು ನ್ಯಾಯಮೂರ್ತಿ ಡಿ. ಎ. ದೇಸಾಯಿ (ನೋಡಿ: ರಾಮ್‌ದಯಾಳ್ ವರ್ಸಸ್ ಸ್ಟೇಟ್ ಆಫ್ ಮಧ್ಯಪ್ರದೇಶ 1978 ಖ.ಇ 921) ನ್ಯಾಯಾಧೀಶರಿಗೆ ಇಂಥ ಅನಿರ್ಬಂಧ, ಒಂದರ್ಥದಲ್ಲಿ ಸರ್ವಾಧಿಕಾರ ಶಿಕ್ಷಾಧಿಕಾರ ಅಗತ್ಯ ಎನ್ನುತ್ತಾರೆ ನ್ಯಾಯಶಾಸ್ತ್ರ ಪರಿಣತರು. ಯಾಕೆಂದರೆ ನ್ಯಾಯಾಧೀಶರು ಈ ಅಧಿಕಾರ ಚಲಾಯಿಸುವುದು ತಮ್ಮ ಪ್ರತಿಷ್ಠೆ, ಮರ‌್ಯಾದೆಯನ್ನು ವೈಯಕ್ತಿಕ ಅಹಮಿಕೆಯನ್ನು ರಕ್ಷಿಸಿಕೊಳ್ಳಲಿಕ್ಕಲ್ಲ. ನ್ಯಾಯಾಂಗದ, ಪ್ರಜಾಸತ್ತೆಯನ್ನು ರಕ್ಷಿಸಲು; ಎತ್ತಿ ಹಿಡಿಯಲು.

ಈ ವಿಚಾರವಾಗಿ ಇಂಗ್ಲೆಂಡಿನ ಉಚ್ಚನ್ಯಾಯಾಲಯದ ಮಾಸ್ಟರ್ ಆಫ್ ಕೋರ್ಟ್ಸ್ ನ್ಯಾಯಮೂರ್ತಿ ಲಾರ್ಡ್ ಡೆನಿಂಗ್ ಎಂಬ ಮಹಾನ್ಯಾಯಾಧೀಶರು ತಮ್ಮ ಗ್ರಂಥ  ಈ್ಠಛಿ ಕ್ಟೃಟ್ಚಛಿ ಟ್ಛ ಔಡಿ  ದಲ್ಲಿ ತಾವು ತೀರ್ಮಾನಿಸಿದ ಒಂದು ಸ್ವಾರಸ್ಯಕರ ಕೇಸನ್ನು ಪ್ರಸ್ತಾಪಿಸಿದ್ದಾರೆ. ಅದು ಹೀಗಿದೆ. ಅದು ನಮಗೂ ಪ್ರಸ್ತುತ. ಏಕೆಂದರೆ ಅದು ವೇಲ್ಸ್ ಪ್ರಾಂತದ ವೆಲ್ಷ್ ಭಾಷೆಗೆ ಸಂಬಂಧಿಸಿದ ಭಾಷಾಭಿಮಾನಕ್ಕೆ ಸಂಬಂಧಿಸಿದ ಕೇಸು:-

1970 ಫೆಬ್ರವರಿ 4ನೇ ತಾರೀಖು, ಲಂಡನ್‌ನಲ್ಲಿ ನ್ಯಾ.ಮೂ. ಲಾರ್ಡ್ ಲಾಟನ್ ಹೈಕೋರ್ಟ್‌ನಲ್ಲಿ ನ್ಯಾಯ ಪರಿಪಾಲನಾ ಪ್ರಕ್ರಿಯೆಯಲ್ಲಿ ನಿರತರಾಗಿದ್ದರು. ಆಗ ಇದ್ದಕ್ಕಿದ್ದಂತೆ 20-30 ಯುವಕ ಯುವತಿಯರ ವಿದ್ಯಾರ್ಥಿಗಳ ಗುಂಪು ನ್ಯಾಯಾಂಗಣಕ್ಕೆ ನುಗ್ಗಿ ಘೋಷಣೆ ಕೂಗತೊಡಗಿದರು; ಕರಪತ್ರಗಳನ್ನು ತೂರತೊಡಗಿದರು; ದಾಂಧಲೆ ಮಾಡಿದರು. ಸಾಮೂಹಿಕವಾಗಿ ಹಾಡತೊಡಗಿದರು!! ನ್ಯಾಯಾಲಯ ನಡೆಸಲಾರದೆ ಎದ್ದುಹೋದರು.

ಸಿಬ್ಬಂದಿ ನ್ಯಾಯಾಲಯದಲ್ಲಿ ಶಾಂತಿ ಉಂಟು ಮಾಡಿದ ಮೇಲೆ ನ್ಯಾಯಾಧೀಶರು ಬಂದರು. ಮೂವರು ವಿದ್ಯಾರ್ಥಿಗಳನ್ನು ನ್ಯಾಯಾಧೀಶರ ಮುಂದೆ ನಿಲ್ಲಿಸಿದರು. ನ್ಯಾಯಮೂರ್ತಿಗಳು ಅವರು ನ್ಯಾಯಾಲಯದ ಘನತೆ, ಗೌರವಕ್ಕೆ ಭಂಗ ತಂದರೆಂದು ತೀರ್ಮಾನಿಸಿ ತಲಾ ಮೂರು ತಿಂಗಳು ಜೈಲುಶಿಕ್ಷೆ ವಿಧಿಸಿದರು. ಉಳಿದವರನ್ನು ಮರುದಿನ ಹಾಜರುಪಡಿಸಿದಾಗ 11 ಯುವಕರಿಗೆ ಅಂಥದೆ ಶಿಕ್ಷೆವಿಧಿಸಿದರು. ಆ ಶಿಕ್ಷೆಯ ವಿರುದ್ಧವಾಗಿ ಅಪೀಲು ಮಾಡಿಕೊಂಡರು. ಆ ಅಪೀಲು ಲಾರ್ಡ್ ಡೆನಿಂಗ್ ಮತ್ತಿಬ್ಬರು ನ್ಯಾಯಮೂರ್ತಿಗಳ ಮುಂದೆ ಫೆಬ್ರವರಿ 9 ರಂದು ವಿಚಾರಣೆಗೆ ಬಂತು. ಕೆಳ ನ್ಯಾಯಾಲಯದ ಶಿಕ್ಷೆಯನ್ನು ಕಾಯಂ ಮಾಡಿದ ತೀರ್ಪಿನಲ್ಲಿ ನಾಯಮೂರ್ತಿ ಡೆನಿಂಗ್ ಅಮೋಘ ಸಿದ್ಧಾಂತ ದಾಖಲಿಸಿದ್ದಾರೆ.

ಈ ವಿದ್ಯಾರ್ಥಿಗಳು ವೇಲ್ಸ್ ಪ್ರಾಂತ್ಯದ ಅಬೆರಿಸ್ಪಿತ್ ವಿಶ್ವವಿದ್ಯಾಲಯದಿಂದ ಬಂದಿದ್ದರು. ವೇಲ್ಸ್‌ನಲ್ಲಿ ವೆಲ್ಷ್ ಭಾಷೆಗೆ ಸೂಕ್ತ ಸ್ಥಾನ ಬೇಕೆಂಬುದು ಅವರ ಭಾಷಾ ಪ್ರೇಮ. ಬಿ.ಬಿ.ಸಿ. ಆಕಾಶವಾಣಿಯಿಂದ ವೆಲ್ಷ್ ಭಾಷೆಯಲ್ಲಿ ಕಾರ‌್ಯಕ್ರಮಗಳು ಪ್ರಾರಂಭವಾಗಬೇಕು.... ಇದು ಅವರ ಆಕಾಂಕ್ಷೆ. ಅದಕ್ಕೆ ಮನ್ನಣೆ ಸಿಗಲಿಲ್ಲವೆಂಬ ಅಸಮಾಧಾನ. ಆದ್ದರಿಂದ ವೇಲ್ಸ್‌ನಿಂದ ಲಂಡನ್ನಿಗೆ ಬಂದು ನ್ಯಾಯಾಲಯದಲ್ಲಿ ದಾಂಧಲೆ ಮಾಡಿದರು. ಅವರ ಈ ನಡತೆ ಅವರಿಗೆ ಸಹಜ. ಅವರ ಭಾಷಾಭಿಮಾನ ಸರಿ. ಆದರೆ ನ್ಯಾಯಾಲಯದ ಕಲಾಪಕ್ಕೆ ಅಡ್ಡಿಪಡಿಸಿದ್ದು ತಪ್ಪು. ಯಾಕೆಂದರೆ  ಲಾರ್ಡ್ ಡೆನಿಂಗ್ ಅವರ ಈ ಮಾತು ಅಮೋಘ - ನ್ಯಾಯಾಂಗ, ನ್ಯಾಯಾಧೀಶರು ಪ್ರಜೆಗಳ ಸ್ವಾತಂತ್ರ್ಯದ ಸಂರಕ್ಷಕರೂ ಅವರಿಗೆ ಬೆಂಬಲ ಕೊಡಬೇಕಾದ್ದು ಪ್ರಜೆಗಳ ಕರ್ತವ್ಯ. ಅದನ್ನು ಭಗ್ನಪಡಿಸುವುದು ಭಂಗವನ್ನುಂಟು ಮಾಡುವುದು ತಪ್ಪು. ಆದ್ದರಿಂದ ಅವರು ಶಿಕ್ಷಾರ್ಹರು.

ಆದರೆ..... ಈ ಯುವಕರು ಈಗಾಗಲೇ ಆರು ದಿನ ಜೈಲುಶಿಕ್ಷೆ ಅನುಭವಿಸಿದ್ದಾರೆ. ಅಷ್ಟು ಸಾಕು. ಹೀಗೆ ಮತ್ತೆ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಡಬೇಕು. ಮತ್ತೆ ಮಾಡಿದರೆ ಉಳಿದ ಶಿಕ್ಷೆ ಅನುಭವಿಸಲು ಸೆರೆಮನೆ ಸೇರಬೇಕು.
ಇದು ನ್ಯಾಯಾಲಯದ ದೃಷ್ಟಿ! ಅವರ ಅಸಮಾಧಾನಕ್ಕೆ ನ್ಯಾಯಾಲಯ ಕಾರಣವಲ್ಲ; ಪ್ರದರ್ಶನಕ್ಕೆ ಸ್ಥಳವಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.