ADVERTISEMENT

ಪ್ರಜಾಪ್ರಭುತ್ವ ಎತ್ತ ಸಾಗಿದೆ: ಯೋಗ್ಯರಾಗುವ ಹಾದಿಯಲ್ಲಿ...

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 19:30 IST
Last Updated 21 ಜನವರಿ 2011, 19:30 IST

ಜನವರಿ 26ರಂದೇ ಸಂವಿಧಾನವನ್ನು ಅಂಗೀಕರಿಸಿದ್ದಕ್ಕೆ ಒಂದು ಅರ್ಥಪೂರ್ಣ ಹಿನ್ನೆಲೆ ಇದೆ. 1929ರ ಡಿಸೆಂಬರ್ 31ರ ರಾತ್ರಿ ಲಾಹೋರ್‌ನಲ್ಲಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಭಾರತಕ್ಕೆ ಪೂರ್ಣ ಸ್ವರಾಜ್ಯ ಪಡೆಯಬೇಕೆಂಬ ಗೊತ್ತುವಳಿಯನ್ನು ಅನುಷ್ಠಾನಕ್ಕೆ ತರುವ ಜವಾಬ್ದಾರಿಯನ್ನು ಮಹಾತ್ಮಾ ಗಾಂಧೀಜಿಯವರಿಗೆ ನೀಡಲಾಗಿತ್ತು. ಆ ಗೊತ್ತುವಳಿಯನ್ನು ಕಾರ್ಯಗತಗೊಳಿಸಲು ಪ್ರಜೆಗಳು ಎಷ್ಟರಮಟ್ಟಿಗೆ ಸಿದ್ಧರಾಗಿದ್ದಾರೆ ಎಂಬುದನ್ನು ಪರೀಕ್ಷಿಸಲು ಗಾಂಧೀಜಿ ಒಂದು ಉಪಾಯ ಮಾಡಿದರು. ಡಿಸೆಂಬರ್ 31ರ ರಾತ್ರಿ ಅಂಗೀಕರಿಸಿದ ಗೊತ್ತುವಳಿಯ ಒಂದೆರಡು ವಾಕ್ಯಗಳನ್ನು - ಅಂದರೆ, ‘ಭಾರತದ ಸ್ವಾತಂತ್ರ್ಯ ಸಂಗ್ರಾಮದ ಏಕಮಾತ್ರ ಗುರಿ ಪೂರ್ಣ ಸ್ವರಾಜ್ಯ. ತನ್ಮೂಲಕ ಈ ದೇಶದಲ್ಲಿ ಸರ್ವರೂ ಸಮಾನರಾಗಿ ಬದುಕುವ ಆಜನ್ಮಸಿದ್ಧ ಹಕ್ಕು ಪ್ರಜೆಗಳಿಗಿದೆ. ಈ ಉದ್ದೇಶಕ್ಕೆ ಭಂಗ ತರುವ ಆಡಳಿತವನ್ನು ಬದಲಾಯಿಸಲು, ಅಗತ್ಯಬಿದ್ದರೆ ಬುಡಮೇಲು ಮಾಡಲು ನಮಗೆ ಅಧಿಕಾರ, ಹಕ್ಕು ಇದೆ...’ ಎಂಬ ಮಾತುಗಳನ್ನು 1930ರ ಜನವರಿ 26ರಂದು ದೇಶದ ಜನ ಕಾಂಗ್ರೆಸ್ ಧ್ವಜ ಹಾರಿಸಿ ಸಾಮೂಹಿಕವಾಗಿ ಘೋಷಿಸಬೇಕೆಂದು ಕರೆಕೊಟ್ಟರು.

ಅಂದು ದೇಶದ ಪ್ರಜೆಗಳು ಧೈರ್ಯದಿಂದ ಈ ಪೂರ್ಣ ಸ್ವರಾಜ್ಯದ ಗೊತ್ತುವಳಿಯನ್ನು ಪ್ರಚಂಡವಾಗಿ ಬೆಂಬಲಿಸಿದರು. ಆಗ ಗಾಂಧೀಜಿಗೆ ದೇಶದ ಜನ ಪೂರ್ಣ ಸ್ವರಾಜ್ಯ ಪ್ರಾಪ್ತಿಗೆ ಹೋರಾಡಲು ಸಿದ್ಧರಿದ್ದಾರೆ ಎಂಬುದು ದಿಟವಾಯಿತು. ಈ ಉದ್ದೇಶ ಫಲಿಸಿದ್ದು 1947ರಲ್ಲಿ, ಸ್ವಾತಂತ್ರ್ಯ ಬಂದ ದಿನದಂದು. ಸ್ವಾತಂತ್ರ್ಯ ಪ್ರಾಪ್ತಿಯೊಂದೇ ಸ್ವರಾಜ್ಯದ ಗುರಿಯಾಗಿರಲಿಲ್ಲ. ಬಂದೇ ಬರಲಿದ್ದ ಸ್ವಾತಂತ್ರ್ಯವನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬುದು ಮುಖ್ಯವಾದ ಗುರಿಯಾಗಿತ್ತು.

ಸೂತ್ರದೋಪಾದಿಯಲ್ಲಿರುವ ಪ್ರಜಾಸತ್ತೆಯ ಈ ಅಂಶವನ್ನು ಕಾರ್ಯಗತಗೊಳಿಸುವ ಯಂತ್ರ ಯಾವುದು? ತಂತ್ರ ಯಾವುದು? ಇಂಗ್ಲೆಂಡಿನ ಮಹಾಪ್ರಧಾನಿಯಾಗಿದ್ದ ವಿನ್ಸ್‌ಟನ್ ಚರ್ಚಿಲ್ ಸರಳವಾದ ಮಾತುಗಳಲ್ಲಿ ಹೀಗೆ ಹೇಳಿದ್ದಾರೆ: ‘ಒಬ್ಬ ಸಣ್ಣ ಮನುಷ್ಯ ಒಂದು ಸಣ್ಣ ಕೊಠಡಿಗೆ ಹೋಗಿ ಒಂದು ಸಣ್ಣ ಸೀಸದ ಕಡ್ಡಿಯಿಂದ ಒಂದು ಸಣ್ಣ ಕಾಗದದ ತುಂಡಿನ ಮೇಲೆ ಸಣ್ಣ ಗುರುತು ಮಾಡುವುದು ಪ್ರಜಾಸತ್ತಾತ್ಮಕ ರಾಜ್ಯಾಡಳಿತ ವ್ಯವಸ್ಥೆ. ಇದನ್ನೇ ಪ್ರಜಾಸತ್ತೆ ಎನ್ನುವುದು.’

ನಮ್ಮ ಸಂವಿಧಾನ ಮತ್ತು ಪ್ರಜಾಪ್ರಾತಿನಿಧ್ಯ ಕಾಯ್ದೆಯ ವೈಶಿಷ್ಟ್ಯವೆಂದರೆ ಈ ದೇಶದ ಪ್ರತಿಯೊಬ್ಬ (18 ವರ್ಷ ತುಂಬಿದ) ವಯಸ್ಕರರಿಗೂ ಮತದಾನದ ಹಕ್ಕನ್ನು ಕೊಟ್ಟಿದ್ದು. ಈ ದೃಷ್ಟಿಯಿಂದ ದೇಶದ ಎಲ್ಲ ಪ್ರಜೆಗಳೂ ರಾಜಕೀಯವಾಗಿ ಸಮಾನರು. ಈ ವ್ಯವಸ್ಥೆಯ ಜೀವಂತ ಅಂಗಗಳೆಂದರೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ. ಇಲ್ಲಿ ಶಾಂತಿ, ಸಮೃದ್ಧಿ ನೆಲೆಸಬೇಕೆಂದರೆ ಅಂಗೀಕೃತ ಶಾಸನದ ವ್ಯವಸ್ಥೆ ಇರಬೇಕು. ಅದಕ್ಕಾಗಿಯೇ ಇಡೀ ದೇಶಕ್ಕೆ ಲೋಕಸಭೆ, ಪ್ರತಿ ರಾಜ್ಯಗಳಲ್ಲೂ ಒಂದು ಶಾಸನಸಭೆಯನ್ನು ಚುನಾವಣೆಗಳ ಮೂಲಕ ಸ್ಥಾಪಿಸುವ ಸಂವಿಧಾನ ಜಾರಿಯಲ್ಲಿ ಬಂದಿದೆ. ಶಾಸಕಾಂಗ ಮಾಡಿದ ಶಾಸನಗಳನ್ನು ಅನುಷ್ಠಾನದಲ್ಲಿ ತರುವುದು ಕಾರ್ಯಾಂಗದ ಕರ್ತವ್ಯ.

ಶಾಸಕಾಂಗ ಮಾಡಿದ ಶಾಸನವನ್ನು ಸಂವಿಧಾನಾತ್ಮಕವಾಗಿ ಆಚರಣೆಯಲ್ಲಿ ತಂದಿದ್ದಾರೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಲು, ಶಾಸಕಾಂಗ ಸಂವಿಧಾನ ವಿರೋಧಿ ಶಾಸನಗಳನ್ನು ತಂದಲ್ಲಿ ಅಂತಹ ಅತಿರೇಕಗಳನ್ನು ತಿದ್ದುವುದು ನ್ಯಾಯಾಂಗದ ಕರ್ತವ್ಯ. ಹಾಗೆಯೇ ಸಂವಿಧಾನಾತ್ಮಕ ಸದುದ್ದೇಶದ ಶ್ರೇಷ್ಠ ಶಾಸನಗಳನ್ನು ಕಾರ್ಯಾಂಗ ಆಚರಣೆಯಲ್ಲಿ ತರುತ್ತದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಿ ಕಾರ್ಯಾಂಗದ ಕಿವಿ ಹಿಂಡಿ ದಾರಿಗೆ ತರುವುದೂ ನ್ಯಾಯಾಂಗದ ಕರ್ತವ್ಯ. ಈ ದೃಷ್ಟಿಯಿಂದ ನ್ಯಾಯಾಂಗ ನಮ್ಮ ಸಂವಿಧಾನದ ‘ಆತ್ಮ’ ಎಂದು ಧಾರಾಳವಾಗಿ ಹೇಳಬಹುದು. ನಮ್ಮ ಶಾಸಕಾಂಗ ಮತ್ತು ಕಾರ್ಯಾಂಗ ಕೆಟ್ಟುಹೋದರೆ, ದುರುಪಯೋಗವಾದರೆ ಅವೆರಡನ್ನೂ ತಿದ್ದುವ, ಸರಿಪಡಿಸುವ, ಅಪರಾಧವಾಗಿದ್ದರೆ ಶಿಕ್ಷಿಸುವ ದಂಡಾಧೀಶನ ಪಾತ್ರ ನ್ಯಾಯಾಂಗದ್ದು. ಆದ್ದರಿಂದಲೇ ನ್ಯಾಯಾಂಗವನ್ನು ಶಾಸಕಾಂಗ ಮತ್ತು ಕಾರ್ಯಾಂಗಗಳಿಂದ ಸಂಪೂರ್ಣವಾಗಿ ಪ್ರತ್ಯೇಕಿಸಿ ಅಖಂಡ ಸ್ವಾತಂತ್ರ್ಯವನ್ನು ನೀಡಲಾಗಿದೆ. ಅಂಥ ಪವಿತ್ರ ಸಂವಿಧಾನದ ಮಹಾಶಕ್ತಿ ನ್ಯಾಯಾಂಗ ಎಂದಿಗೂ ಕೆಡಬಾರದು. ಅದು ಕೆಟ್ಟರೆ ನಮ್ಮ ಸಂವಿಧಾನವೇ ಕುಸಿದುಬಿದ್ದಂತೆ.

1949ರ ನವೆಂಬರ್ 26ರಂದು ಸಂವಿಧಾನವನ್ನು ಅಂದಿನ ಸಂವಿಧಾನ ರಚನಾ ಸಭೆ ಅಂಗೀಕರಿಸಿ ದೇಶಕ್ಕೆ ಈ ವಜ್ರಕವಚವನ್ನು ಅರ್ಪಿಸಿತು. ಅಂದು ಮಂಜೂರಾದ ಸಂವಿಧಾನವನ್ನು 1950ರ ಜನವರಿ 26ರಂದು ನಮ್ಮ ಲೋಕಸಭೆ ದೇಶಕ್ಕೆ ನಮ್ಮ ಪ್ರಜೆಗಳ ಹೆಸರಿನಲ್ಲಿ ಅಂಗೀಕರಿಸಿತು. ಸಂವಿಧಾನವನ್ನು ಜಾರಿಗೆ ತಂದಿತು. ಸಂವಿಧಾನವನ್ನು ಮಂಜೂರು ಮಾಡಿದ ನವೆಂಬರ್ 26ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಒಂದು ಅಮೋಘ ಭಾಷಣ ಮಾಡಿದರು. ಅವರು ಧನ್ಯತಾಭಾವದಿಂದ ಈ ದೇಶಕ್ಕೆ ಶುಭವಾಗಲಿ ಎಂದು ಹಾರೈಸುತ್ತಾ ಎಚ್ಚರಿಕೆಯ ಮಾತನ್ನೂ ಹೇಳಿದರು. ‘ಇಂದು ನಮ್ಮ ದೇಶಕ್ಕೆ ಸಂಪೂರ್ಣ ಸ್ವಾತಂತ್ರ್ಯ ಬಂದಿದೆ. ಗಣರಾಜ್ಯ ಸ್ಥಾಪನೆ ಆಗುತ್ತದೆ. ಕೆಲವರು ಈ ಸಂವಿಧಾನ ಒಳ್ಳೆಯದು ಎನ್ನುತ್ತಾರೆ. ಇನ್ನು ಕೆಲವರು ಇದು ಒಳ್ಳೆಯದಲ್ಲ ಎನ್ನುತ್ತಾರೆ. ಒಂದು ಸಂವಿಧಾನ ಒಳ್ಳೆಯದು ಅಥವಾ ಕೆಟ್ಟದ್ದು ಆಗುವುದು ಅದರಲ್ಲಿ ಏನು ಬರೆದಿದ್ದಾರೆ ಎಂಬುದರಿಂದಲ್ಲ. ಅದು ಒಳ್ಳೆಯದು ಅಥವಾ ಕೆಟ್ಟದ್ದು ಆಗುವುದು ಅದನ್ನು ಆಚರಣೆಯಲ್ಲಿ ತರುವ ಜನರಿಂದ. ಅವರು ಒಳ್ಳೆಯವರಾದರೆ ಒಳ್ಳೆಯ ಸಂವಿಧಾನ, ಅವರು ಕೆಟ್ಟವರಾದರೆ ಅದು ಕೆಟ್ಟ ಸಂವಿಧಾನ.’

ಡಾ. ಅಂಬೇಡ್ಕರ್‌ರ ಈ ಮುತ್ತಿನಂಥ ಮಾತು ಎಷ್ಟು ಸತ್ಯ ಎಂಬುದು ಕಳೆದ ಒಂದೆರಡು ದಶಕಗಳಿಂದ ಪ್ರತಿನಿತ್ಯ ನಮಗೆ ಅನುಭವವಾಗುತ್ತಿದೆ. ನಾವು ಪ್ರತಿನಿತ್ಯ ಕಣ್ಣೆದುರೇ ಕಾಣುವಂತೆ ಶಾಸನ ಸಭೆಗಳು ಕುಸ್ತಿಯ ಕಣಗಳಾಗಿವೆ. ಶಾಸಕರು ಹೊಡೆದಾಡುವ ರೌಡಿಗಳಾಗಿದ್ದಾರೆ. ಈಗ ಆರಿಸಿ ಬರುವ ಶಾಸಕರಲ್ಲಿ ಅರ್ಧಕ್ಕರ್ಧ ಜನ ಕೊಲೆ, ಸುಲಿಗೆ, ಕೊಳ್ಳೆ, ದರೋಡೆ, ಹಾದರ ಮುಂತಾದ ಹೀನ ಅಪರಾಧಗಳನ್ನು ಮಾಡಿ ಧನಬಲದಿಂದ ಆರಿಸಿ ಬಂದವರು. ಅವರಿಗೆ ನೀತಿ, ನಿಯಮ, ಸದಾಚಾರ, ಸದ್ವರ್ತನೆ, ಪ್ರಜೆಗಳ ಒಳಿತು ಎಂಬ ಯಾವ ಸದ್ಗುಣಗಳೂ ಇಲ್ಲ. ಕೊಲೆ, ಸುಲಿಗೆ ಇತ್ಯಾದಿ ಅಪರಾಧಕ್ಕಾಗಿ ಶಿಕ್ಷೆ ಹೊಂದಿ ಸೆರೆಮನೆಯಲ್ಲಿ ಕುಳಿತು ಗೆದ್ದುಬರುವ ಪುಂಡರು ಶಾಸಕಾಂಗದಲ್ಲಿ ತುಂಬಿದ್ದಾರೆ. ಕಾರ್ಯಾಂಗವಂತೂ ಭ್ರಷ್ಟರ, ದುಷ್ಟರ, ಲಂಚಕೋರರ ಧೀರ ಪಡೆಯಾಗಿದೆ. ಅದಕ್ಕೆ ಕಾರಣ ರಾಜಕಾರಣಿಗಳ ಭ್ರಷ್ಟಾಚಾರ.

ಕಾರ್ಯಾಂಗದಲ್ಲಿರುವ ಅಧಿಕಾರಿಗಳನ್ನು ಅಪ್ರಾಮಾಣಿಕರಾಗಿಸುವವರೇ ಭ್ರಷ್ಟ ರಾಜಕಾರಣಿಗಳು. ಲೋಕಾಯುಕ್ತರು ದಿನದಿನವೂ ಬಯಲಿಗೆಳೆಯುತ್ತಿರುವ ಕಾರ್ಯಾಂಗ ಮತ್ತು ಶಾಸಕಾಂಗದ ಭ್ರಷ್ಟರ ಕೋಟ್ಯಂತರ ಮೌಲ್ಯದ ಪಾಪದ್ರವ್ಯದ ಮೂಲವೇ ಶಾಸಕಾಂಗ. ಈ ಪಾಪದ್ರವ್ಯದ ಬಲದಿಂದ ಜನರ ತೋಳ್ಬಲವನ್ನು ಮತ್ತು ಜನಾದೇಶವೆಂಬ ಧನಾದೇಶವನ್ನು ಪಡೆಯುತ್ತಿದ್ದಾರೆ. ಈ ಎರಡು ದುಷ್ಟ ಶಕ್ತಿಗಳಿಂದ ಪಾರಾಗುವ ಮಾರ್ಗೋಪಾಯವನ್ನು ಸಂವಿಧಾನದಲ್ಲಿ ಸೂಚಿಸಲಾಗಿದೆ. ನ್ಯಾಯಾಂಗವೇ ಆ ತಾರಕ ಯಂತ್ರ ಹಾಗೂ ಮಂತ್ರ. ಆದರೆ ದುರ್ದೈವದಿಂದ ನ್ಯಾಯಾಂಗವೂ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬುದನ್ನು ದಿನದಿನವೂ ಕಾಣುತ್ತಿದ್ದೇವೆ.

ರಾಜ್ಯ ಹೈಕೋರ್ಟ್‌ನ ಹಿಂದಿನ ಮುಖ್ಯ ನ್ಯಾಯಮೂರ್ತಿಗಳು (ಪಿ.ಡಿ. ದಿನಕರನ್), ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿಗಳು, ಹರ್ಯಾಣ -ಪಂಜಾಬ್ ಹೈಕೋರ್ಟ್‌ನ ನ್ಯಾಯಮೂರ್ತಿಗಳು, ಅಷ್ಟೇ ಏಕೆ, ಸುಪ್ರೀಂ ಕೋರ್ಟ್‌ನ ನಿವೃತ್ತ ಹಾಗೂ ಹಾಲಿ ನ್ಯಾಯಮೂರ್ತಿಗಳು ಭ್ರಷ್ಟಾಚಾರದಲ್ಲಿ ಮುಳುಗಿ ಎದ್ದಿದ್ದಾರೆ ಎಂಬುದು ಸುಪ್ರೀಂ ಕೋರ್ಟ್‌ನಲ್ಲಿಯೇ ಬಹಿರಂಗವಾಗಿ ಚರ್ಚೆಯಾಗುತ್ತಿದೆ. ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಕುತ್ತಿಗೆ ಮಟ್ಟ ಭ್ರಷ್ಟಾಚಾರದಲ್ಲಿ ಹುದುಗಿಹೋಗಿದ್ದಾರೆ. ಇವನ್ನೆಲ್ಲ ಮಾತನಾಡಲೂ ಹೇಸಿಗೆಯೆನಿಸುವ ಪರಿಸ್ಥಿತಿ ಬಂದಿದೆ.

ಡಾ. ಅಂಬೇಡ್ಕರ್ ಅವರು 1949ರಲ್ಲಿ ಕೊನೆಯ ಭಾಷಣ ಮಾಡಿದಾಗ ಇನ್ನೂ ಒಂದು ಎಚ್ಚರಿಕೆಯ ಮಾತು ಹೇಳಿದ್ದಾರೆ. ‘ಬಹುಕಾಲದ ಹಿಂದೆ ನಾವು ಸ್ವತಂತ್ರರಾಗಿದ್ದೆವು. ಈಗ ಸ್ವಾತಂತ್ರ್ಯ ಪಡೆದಿದ್ದೇವೆ. ನನಗಿರುವ ಅಂಜಿಕೆ ಮತ್ತು ಸಂದೇಹ ಏನೆಂದರೆ ಈ ಸ್ವಾತಂತ್ರ್ಯವನ್ನು ನಾವು ಉಳಿಸಿಕೊಳ್ಳುತ್ತೇವೆಯೇ? ನಾವು ಈ ದೇಶದಲ್ಲಿರುವ ಜಾತಿ, ಮತ, ಪಂಥದ ಅಸಮಾನತೆಯನ್ನು ತೊಲಗಿಸದಿದ್ದರೆ ಅನೈಕ್ಯತೆ ಉಂಟಾಗಿ ಮತ್ತೆ ನಾವು ದಾಸ್ಯದಲ್ಲಿ ಬಿದ್ದುಹೋದೇವು. ಅಂಥ ಕಾಲ ಬಾರದಿರಲಿ ಎಂದು ನಾನು ಆಶಿಸುತ್ತೇನೆ.’

ಆದರೆ ಇಂದು ದೇಶದಲ್ಲಿ ನಡೆಯುತ್ತಿರುವ ಅನ್ಯಾಯ, ಅಸತ್ಯ, ಅಪ್ರಾಮಾಣಿಕತೆ, ಮೌಲ್ಯಗಳ ಅಧಃಪತನ ನೋಡಿದಾಗ ಎದೆ ನಡುಗುತ್ತದೆ. ಈಗಾಗುತ್ತಿರುವುದನ್ನು ನೋಡಿದರೆ ನಾವು ಸ್ವಾತಂತ್ರ್ಯಕ್ಕೆ ಅರ್ಹರೇ, ಇಂಥ ಸಂವಿಧಾನಕ್ಕೆ ನಾವು ಯೋಗ್ಯರೇ ಎಂಬ ನಿರಾಸೆಯ ಕತ್ತಲು ಕವಿಯುತ್ತದೆ. ಅಂದು ಚರ್ಚಿಲ್ ಹೇಳಿದಂತೆ ನಾವು ಪ್ರಜಾಸತ್ತಾತ್ಮಕ ಆಡಳಿತ ಪದ್ಧತಿಗೆ ಅಯೋಗ್ಯರು ಎಂಬುದೇ ದಿಟವಾಗುವಂತೆ ಕಾಣುತ್ತಿದೆ. ಅಂಥ ದಿನ ಬಾರದಿರಲಿ ಎಂದು ಆಶಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.