ADVERTISEMENT

ಯಾರಿಗೆ ಬಂಧನ, ಯಾರಿಗೆ ಬಿಡುಗಡೆ?

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 19:30 IST
Last Updated 6 ಜನವರಿ 2012, 19:30 IST

ಚಳಿ ಮಳೆ ಗಾಳಿಗಳಿಂದ ದೇಹವನ್ನು ಮುಚ್ಚಿಕೊಳ್ಳಲು ಹುಟ್ಟಿಕೊಂಡ ಬಟ್ಟೆಗೆ, ನಾಗರಿಕತೆಯ ವಿಕಾಸದ ಹಾದಿಯಲ್ಲಿ ಸಂಹಿತೆಯೊಂದು ಹುಟ್ಟಿಕೊಂಡಿದೆ. ಹಾಗೆಯೇ ಚರಿತ್ರೆಯ ಗತಿಯಲ್ಲಿ ಪ್ರಬಲವಾಗುತ್ತಾ ಹೊರಟ ಪುರುಷ ಸಂಸ್ಕೃತಿ ಸೃಷ್ಟಿಸಿದ ವಸ್ತ್ರ ಸಂಹಿತೆ , ಅವರು ಹೆಣ್ಣಿಗಾಗಿ ಸೃಷ್ಟಿಸಿರುವ ನೀತಿ ಸಂಹಿತೆಯ ಭಾಗವೇ ಆಗಿದೆ. ಗೋಪಿಕಾ ವಸ್ತ್ರಾಪಹರಣ ಮಾಡಿದ ಕೃಷ್ಣನೇ ದುಶ್ಶಾಸನನಿಂದ ಸೀರೆ ಸೆಳೆದುಕೊಂಡ ದ್ರೌಪದಿಗೆ ವಸ್ತ್ರ ನೀಡಿದವನೂ ಆಗಿರುವುದು ನಮ್ಮ ನಡುವಿನ ವಿಪರ್ಯಾಸ. ಹೀಗೆ ಹೆಣ್ಣಿನ ಪಾಲಿಗೆ ದೇವರಾಗಲಿ, ದೆವ್ವವಾಗಲೀ, ಅವಳ ವಸ್ತ್ರಸಂಹಿತೆಯನ್ನು ನಿರ್ಧರಿಸುವವರು ಪುರುಷರೇ. ಇಪ್ಪತ್ತನೆಯ ಶತಮಾನದ ಅರುಣೋದಯದಲ್ಲಿ ಹೆಣ್ಣನ್ನು ಕುರಿತ ಇಂತಹ ನೈತಿಕ ಲಾಠಿಗಳು ಹೆಚ್ಚಾಗುತ್ತಿರುವುದು ದುರಂತವೇ ಸರಿ.

ರವಿವರ್ಮನ ಕಲಾಚಿತ್ರವನ್ನು ನೋಡಿ, ಬೇಲೂರು ಹಳೆಬೀಡು, ಖಜರಾಹೋ ಚಿತ್ರಗಳನ್ನು ನೋಡಿ ಅತ್ಯಾಚಾರಕ್ಕೆ ಪ್ರೇರಣೆ ದೊರೆಯಿತು ಎಂದು ಹೇಳುವ ದಿನ ಬಂದೀತೆ? ಕಾದು ನೋಡಬೇಕು. ನಾಗರಿಕತೆಯ ವಿಕಾಸದ ಹಾದಿಯಲ್ಲಿ ಬಟ್ಟೆಯ ತಯಾರಿಕೆ ಇನ್ನೂ ಪ್ರಾಥಮಿಕ ಮಟ್ಟದಲ್ಲೇ ಇದ್ದಾಗ ಮಹಿಳೆ ಎಷ್ಟೊಂದು ಕಡಿಮೆ ಬಟ್ಟೆ ಧರಿಸುತ್ತಿದ್ದಳು, ಎಂಬುದು ಯಾರಿಗಾದರೂ ಮನವರಿಕೆಯಾಗುವ ಸಂಗತಿ. ಇವೇ ನಮ್ಮ ಪ್ರಾಚೀನ ಕಲೆ, ಕಾವ್ಯಗಳಲ್ಲಿ ಅಭಿವ್ಯಕ್ತವಾಗಿರುವುದು.  ಇಂದು ನಾವು ಪಠಿಸುವ  ಅತ್ಯಾಚಾರದ ಪದ ಮತ್ತು ಅದರ ಪರಿಕಲ್ಪನೆಯಂತೂ ಅಲ್ಲಿ ಕಾಣುವುದು ಕಷ್ಟ. ವಾತ್ಸಾಯನ ಕಾಮಸೂತ್ರದಲ್ಲಂತೂ  ಅತ್ಯಾಚಾರದ ಪ್ರಸ್ತಾಪವಿಲ್ಲ. ಸಮಾಜದ ವಿಕಾಸದ ಸಂದರ್ಭದಲ್ಲಿ ಬಟ್ಟೆಯು ಸಾಮಾಜಿಕ ಉತ್ಪಾದನೆಯಾಗಿ ಪಡೆದುಕೊಂಡ ಸ್ವರೂಪ ಮತ್ತು ಕಲಾಭಿರುಚಿಯೆರಡೂ ವಸ್ತ್ರ ಮೀಮಾಂಸೆಯನ್ನು ಸೃಷ್ಟಿಸಿದೆ, ಎಂದು ಹೇಳಬಹುದು. ಮಹಿಳೆ ಉಡುವ ಬಟ್ಟೆ, ಅವಳ ಸಾಮಾಜಿಕ ಸ್ಥಾನಮಾನ ಹಾಗೂ ಅಭಿರುಚಿಯ ಅಭಿವ್ಯಕ್ತಿಯೂ ಹೌದು. 

ಪುರುಷ ಪ್ರಧಾನ ಸಂಸ್ಕೃತಿಯಲ್ಲಿ ಹೆಣ್ಣು ಎಂದಾಕ್ಷಣ ಅವಳ  ದೇಹವೇ ಪ್ರಧಾನವಾಗುವುದರಿಂದ ಹೆಣ್ಣಿನ ಮೇಲೆ ಅಧಿಪತ್ಯ ಸಾಧಿಸುವುದು, ಎಂದರೆ, ಅವಳಿಗೊಂದು ನೀತಿ ಸಂಹಿತೆಯನ್ನು ರೂಪಿಸುವುದು. ಆ ನೀತಿ ಸಂಹಿತೆಯಲ್ಲಿ ವಸ್ತ್ರ ಸಂಹಿತೆಯೂ ಒಂದು. ಹದಿಹರೆಯದ ವಯಸ್ಸಿನವರಿಗೆ ವಸ್ತ್ರಸಂಹಿತೆ ವಿಧಿಸುವುದು ಅವರ ದೇಹವನ್ನು ಕಾಪಾಡಲೆಂದು. ಸರಿಯಾದ ಬಟ್ಟೆ ತೊಡದಿದ್ದರೆ ಕಾಮ ಪ್ರಚೋದನೆಯಾಗಿ ಸಮಸ್ಯೆಗಳಾಗುತ್ತವೆ. ಸ್ತ್ರೀಯರ ಮೇಲೆ ಪುರುಷರ ಕಾಮದೃಷ್ಟಿ ಬಿದ್ದು ಅನಾಹುತಕ್ಕೆ ಕಾರಣವಾಗಬಹುದು ಎನ್ನುವಂತಹ ಆಲೋಚನೆಗಳು ಪ್ರಗತಿ ವಿರೋಧಿಯಷ್ಟೇ ಅಲ್ಲ, ಪುರುಷಜನ್ಯವಾದವು ಎಂಬುದನ್ನು ಗಮನಿಸಬೇಕು. ಹಿಂದೂ ವಿಧವೆಯರು ತಲೆ ಬೋಳಿಸಿ ಕೆಂಪು ಅಥವಾ ಬಿಳಿ ಸೀರೆ ಉಡಬೇಕೆಂದು ನಿಯಮ ವಿಧಿಸಿರುವುದರ ಹಿಂದಿರುವ ಮನಸ್ಸು ಇದೇ ಆಗಿದೆ. ಇಲ್ಲೆಲ್ಲಾ ಆಕ್ರಮಣಕ್ಕೆ ಒಳಗಾಗುವರು ಮಹಿಳೆಯರಾದರೆ, ಆಕ್ರಮಣ ಮಾಡುವವರು ಪುರುಷರಾದ್ದರಿಂದ ಇದೊಂದು ಪುರುಷಪ್ರಧಾನತೆಯ ಲಕ್ಷಣ. ಭಾರತದಲ್ಲಿ ಈ ಜೆಂಡರ್ ಸಮಸ್ಯೆಯ ಜೊತೆಗೆ ಈಗ ಧರ್ಮದ ಸಮಸ್ಯೆಯೂ ಬೆರೆತುಕೊಂಡು, ಅದೊಂದು ತೊಡಕಾಗಿ ಎದ್ದು ಕಾಣುತ್ತಿದೆ. ಕೆಲವು ವರ್ಷಗಳ ಹಿಂದೆ, ಬಂಟ್ವಾಳದ ಎಸ್. ವಿ.ಎಸ್ ಕಾಲೇಜಿನ ವಿದ್ಯಾರ್ಥಿಯೊಬ್ಬಳು ಹಿಜಾಬ್ ಧರಿಸಿಕೊಂಡು ಬಂದು ಅದು ತನ್ನ ಧಾರ್ಮಿಕ ಹಕ್ಕು, ಎಂಬಂತಹ ಮಾತುಗಳನ್ನಾಡಿದ್ದುದು ಮತ್ತು ಅದಕ್ಕೆ ಬಲಪಂಥೀಯ ಸಂಘಟನೆಗಳ ಪುರುಷರು ವಿರೋಧ ತೋರಿಸಿದ್ದರಿಂದ ಅವಳು ಕಾಲೇಜು ಬಿಡಬೇಕಾಗಿಬಂತು. ಹಿಂದು ಹೆಸರುಳ್ಳ ಕಾಲೇಜಿನಲ್ಲಿ ಮುಸ್ಲಿಂರ ವಸ್ತ್ರಸಂಹಿತೆಗೆ ಅವಕಾಶವಿಲ್ಲ, ಎಂದು ಹೇಳುತ್ತಲೇ, ಆ ಹುಡುಗಿಗೆ ಪ್ರವೇಶ ನಿರಾಕರಿಸುವುದರಿಂದ ಇದು ಧಾರ್ಮಿಕ ಸಂಘರ್ಷದ ಸಮಸ್ಯೆಯಾಗಿ ಪರಿವರ್ತಿತವಾದದ್ದು ಈಗ ಇತಿಹಾಸ.

ಇಂದು ನಾವು ಬದುಕುತ್ತಿರುವ ಸಂದರ್ಭದಲ್ಲಿರುವ ಬಹುರೂಪಿ ಪುರುಷಪ್ರಾಧಾನ್ಯತೆಯು ಅದು ಯಾವುದೇ ಧರ್ಮಕ್ಕೆ ಸೇರಿರಲಿ ಹೆಣ್ಣನ್ನು ನೋಡುವ ದೃಷ್ಟಿಯು ಅವಳ ದೇಹದ ಮೂಲಕವೇ. ಅದು ಪವಿತ್ರ / ಅಪವಿತ್ರ ಎನ್ನುವ ವರ್ಗೀಕರಣದ ಮೂಲಕವೇ. ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ, ಶಿವಮೊಗ್ಗದ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ವಸ್ತ್ರಸಂಹಿತೆ ವಿಧಿಸಿದಾಗ ಹೆಣ್ಣಿನ ದೇಹದಿಂದ ಸಮಾಜಕ್ಕೆ ಕೆಡುಕಾಗಬಹುದು, ಅನ್ನುವ ಮನೋಭಾವವೇ ಕೆಲಸ ಮಾಡುತ್ತದೆ. ಮಂಗಳೂರಿನಲ್ಲಿ ಕ್ಲಬ್ ದಾಳಿಯ ನಂತರ ಕೆಲವು ಮಡಿವಂತ ಹುಡುಗರು ಬೆಂಗಳೂರು ಮತ್ತು ಕೆಲವು ಊರುಗಳಲ್ಲಿ ಆಧುನಿಕ ವಸ್ತ್ರಧಾರಿಗಳಾಗಿದ್ದ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದರ ಹಿಂದೆ ಮಹಿಳೆಯರು ತಾವು ಲೈಂಗಿಕ ಜೀವಿಗಳು ಅಂತ ತೋರಿಸಿಕೊಳ್ಳದಿರಲಿ ಎನ್ನುವ ಧೋರಣೆಯಿದೆ. ನೀವು ಹೀಗೆ ಬಟ್ಟೆ ಧರಿಸಬಾರದು. ಧರಿಸಿದರೆ, ನಾವು ನಿಮ್ಮನ್ನು ಹೇಗೆ ಬಳಸ್ತೀವಿ ಗೊತ್ತಾ ಅನ್ನುವ ಧೋರಣೆಯದು.

ಕಾಪ್ ಪಂಚಾಯತ್‌ಗಳು ಮತ್ತು ಕೆಲವು ಹಳ್ಳಿಗಳಲ್ಲಿ ಇನ್ನೂ ಚಾಲ್ತಿಯಲ್ಲಿರುವ ಸಾಂಪ್ರದಾಯಿಕ ಗ್ರಾಮ ಪಂಚಾಯತಿಗಳು ಹೆಣ್ಣಿನ ಮೇಲೆ ಇಂತಹ ಫತ್ವಾಗಳನ್ನು ಹೊರಡಿಸುವುದರಲ್ಲಿ ನಿರತವಾಗಿವೆ. ಕೆಲವು ತಿಂಗಳ ಹಿಂದೆ ಉತ್ತರ ಪ್ರದೇಶದ ಕಾಪ್ ಪಂಚಾಯತಿಯು ಹೆಣ್ಣುಮಕ್ಕಳು ಜೀನ್ಸ್ ಪ್ಯಾಂಟುಗಳನ್ನು ಧರಿಸುವುದನ್ನು ನಿಷೇಧಿಸಿದ್ದರೆ, ಇದರಿಂದ ಸ್ಪೂರ್ತಿ ಪಡೆದ ನಾಗ ಮಹಿಳೆಯರ ವಿಭಾಗವು ತಮ್ಮ ಸಭೆಗಳಲ್ಲಿ ಹೆಂಗಸರು ಯಾವುದೇ ವಯಸ್ಸಿನವರಾದರೂ ಅಸಭ್ಯ ವಸ್ತ್ರಗಳನ್ನು ಧರಿಸಬಾರದು, ಎಂಬ ನಿರ್ಣಯವನ್ನು ಕೈಗೊಂಡಿವೆ. ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚುತ್ತಿರುವ  ಎಲ್ಲ ಧರ್ಮಗಳಲ್ಲೂ ಹೆಚ್ಚುತ್ತಿರುವ  ಪಿತೃಪ್ರಾಧಾನ್ಯತೆಯು ತನ್ನ ನಿಯಂತ್ರಣವನ್ನು ಹೆಣ್ಣಿನ ಮೇಲೆ ಹೇರುತ್ತಿದೆ. ಹಾಗೆಯೇ ಈ ವಾಸ್ತವತೆಯ ಸತ್ಯವನ್ನು ತಡವಾಗಿಯಾದರೂ ಅರ್ಥಮಾಡಿಕೊಳ್ಳುತ್ತಿರುವ ಕೆಲವರಾದರೂ ಎಚ್ಚೆತ್ತ ಹೆಣ್ಣುಮಕ್ಕಳು ಮತ್ತು ಎಲ್ಲ ಪ್ರಗತಿಪರ ಮನಸ್ಸುಗಳು  ಈ ದಮನಕಾರಿನೀತಿಯನ್ನು ಖಂಡಿಸಲು, ಎದುರಿಸಲು ಸನ್ನದ್ಧವಾಗುತ್ತಿವೆ.
ಮುಸ್ಲಿಂ ಮಹಿಳೆ ಬುರ್ಕಾ ತೊಡಬೇಕಾಗಿ ಬಂದಿರುವುದು ಅನಾರೋಗ್ಯಕರವಾದ ಪದ್ಧತಿ. ಅದೊಂದು ರೀತಿಯ ಅಸ್ಪೃಶ್ಯತೆಯ ಆಚರಣೆ, ಎಂದು ಹೇಳಿ 1986ರಲ್ಲಿ ಷೆಹನಾಜ್ ಶೇಕ್ ಪರಿಹಾರಕ್ಕಾಗಿ ಸುಪ್ರೀಂ ಕೋರ್ಟಿಗೆ ಮೊರೆ ಇಟ್ಟಿದ್ದರು. ಹಾಗೆಯೇ ಗೂಂಘಟ್, ಪರ್ದಾ, ಬುರ್ಕಾ ಹಾಗೂ ಹಿಜಾಬ್ ಯಾವುದೇ ಆಗಿರಲಿ ಎಲ್ಲ ಪ್ರಗತಿಪರರು ಅದನ್ನು ಬಂಧನವಾಗಿಯೇ ಕಂಡಿದ್ದಾರೆ.

ಒಟ್ಟಾರೆಯಾಗಿ ನಮ್ಮ ಸಮಾಜದ ಸ್ತ್ರೀ ಪುರುಷರ  ಯೋಚನಾಕ್ರಮದಲ್ಲಿಯೇ ಹೆಣ್ಣನ್ನು ಕುರಿತ ಈ ಪೂರ್ವಗ್ರಹಗಳು ಆಳವಾಗಿ ಬೇರು ಬಿಟ್ಟಿವೆಯೆಂಬ ಅಂಶವನ್ನು ಮತ್ತೆ ಮತ್ತೆ ನಮ್ಮ ನಡುವಿನ ಪ್ರಸಂಗಗಳು ಸಾಬೀತುಪಡಿಸುತ್ತಿವೆ. ಕೆಲವು ವರ್ಷಗಳ ಹಿಂದೆ ಅಸೆಂಬ್ಲಿಯಲ್ಲಿ ಅತ್ಯಾಚಾರ ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಮಂತ್ರಿಯೊಬ್ಬರು ಹೆಂಗಸರಿರುವುದೇ ಭೋಗಿಸಲಿಕ್ಕೆ. ಅದರ ಬಗ್ಗೆ ಅಷ್ಟೊಂದು ಚರ್ಚೆಯೇಕೆ? ಎನ್ನುವ ಧಾರ್ಷ್ಟ್ಯ ತೋರಿದ್ದರು.

  ಇಂತಹುದೇ ಅಭಿಪ್ರಾಯವನ್ನು ಹಿಂದೆ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳು ಬಹಿರಂಗವಾಗಿ ವ್ಯಕ್ತಪಡಿಸಿದ್ದರು ಎನ್ನುವುದನ್ನು ಮರೆಯುವಂತಿಲ್ಲ. ಹಾಗಾದರೆ ಗಂಡಸರಿಗೆ ನಿಗ್ರಹ ಶಕ್ತಿ ಇಲ್ಲವೆನ್ನುವುದು ಧನಾತ್ಮಕ ಗುಣವೆನಿಸುತ್ತದೆಯೇ? ಹಾಗೆನಿಸಿಬಿಟ್ಟರೆ, ಅತ್ಯಾಚಾರ ಶಿಕ್ಷಾರ್ಹವೇ ಆಗಬೇಕಿಲ್ಲವಲ್ಲ?  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.