ADVERTISEMENT

ಸಂಕಟ ಕಡಿಮೆ ಆಗಿಲ್ಲ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 19:30 IST
Last Updated 13 ಜನವರಿ 2012, 19:30 IST

ನಂದಿನಿ ಹಾಲು ಮಾರಾಟ ದರ ಲೀಟರಿಗೆ ಮೂರು ರೂಪಾಯಿ ಹೆಚ್ಚಿದ್ದರೂ ಕೋಲಾರ ಜಿಲ್ಲೆಯ ರೈತರಿಗೆ ಸಂತೋಷವೇನೂ ಆಗಿಲ್ಲ. ಕೋಲಾರ-ಚಿಕ್ಕಬಳ್ಳಾಪುರ ಹಾಲು ಉತ್ಪಾದಕ ಸಹಕಾರಿ ಸಂಘಗಳ ಒಕ್ಕೂಟವು (ಕೋಮುಲ್) ಮೂರು ರೂಪಾಯಿಯಲ್ಲಿ ಎರಡೂವರೆ ರೂಪಾಯಿಯನ್ನು ಮಾತ್ರ ಜ.8ರಿಂದ ಅನ್ವಯವಾಗುವಂತೆ (ಮಾರ್ಚಿ 31ರವರೆಗೆ ಮಾತ್ರ) ರೈತರಿಗೆ ಖರೀದಿ ದರವನ್ನಾಗಿ ಕೊಡಲು ನಿರ್ಧರಿಸಿದೆ. ಉಳಿದ 50 ಪೈಸೆಯನ್ನು ಮಾರಾಟ ವ್ಯವಸ್ಥೆಗಾಗಿ ಮೀಸಲಿಟ್ಟಿದೆ.

ಹಾಲು ಉತ್ಪಾದಕರಿಗೆ ಈಗ ಲೀಟರಿಗೆ ರೂ 17.20 ಸಿಗುತ್ತಿದೆ. ಅದರ ಜೊತೆಗೆ ಎರಡೂವರೆ ರೂಪಾಯಿ ಸೇರಿದರೆ ರೂ 19.70 ಆಗುತ್ತದೆ. ಹಾಗೆಂದು ಇಷ್ಟು ಹಣ ಎಲ್ಲ ರೈತರಿಗೂ ಸಿಗುತ್ತದೆ ಎನ್ನುವಂತಿಲ್ಲ. ಒಕ್ಕೂಟ ನಿಗದಿ ಮಾಡಿರುವ (ಕನಿಷ್ಠ 3.5 ಫ್ಯಾಟ್, 8.5 ಎಸ್‌ಎನ್‌ಎಫ್ ಅಂಶವುಳ್ಳ) ಗುಣಮಟ್ಟದ ಹಾಲನ್ನು ನೀಡಿದವರಿಗೆ ಮಾತ್ರ ಈ ಹೆಚ್ಚುವರಿ ಹಣ ಸಿಗುತ್ತದೆ. ಹೆಚ್ಚಿನ ಗುಣಮಟ್ಟವಿಲ್ಲದ ಹಾಲಿಗೆ ಹೆಚ್ಚುವರಿ ಬೆಲೆ ಇಲ್ಲ. ಹೀಗಾಗಿ ಖರೀದಿ ದರ ಹೆಚ್ಚಳ ಬಹಳಷ್ಟು ರೈತರಿಗೆ ಸಂತಸ ತಂದಿಲ್ಲ. ಬದಲಿಗೆ ಕೊಂಚ ಸಮಾಧಾನ ತಂದಿದೆ.

ಹಾಲಿನ ಖರೀದಿ ದರ ಮತ್ತು ಮಾರಾಟ ದರ ಏಕಕಾಲಕ್ಕೆ ಹೆಚ್ಚುವುದು ಸಾಮಾನ್ಯ. ಆದರೆ ಅದೇ ರೀತಿ, ಹಾಲು ಉತ್ಪಾದಕರಿಗೆ ಲಾಭ ಎಂದು ಬೀಡುಬೀಸಾಗಿ ಹೇಳಲೂ ಬರುವುದಿಲ್ಲ. ಹೀಗಾಗಿಯೇ, ಖರೀದಿ ದರ ಹೆಚ್ಚಳದ ವಿಚಾರದಲ್ಲಿ ಲಾಭ-ನಷ್ಟದ ಮಾತಿಗೆಳೆದರೆ ಬಹಳಷ್ಟು ಹಾಲು ಉತ್ಪಾದಕರು ನಷ್ಟದ ಬಗ್ಗೆಯೇ ಹೆಚ್ಚು ಮಾತನಾಡುತ್ತಾರೆ. ನಷ್ಟ ಅವರ ಪ್ರಕಾರ ಸದಾ ಕಾಲ ಇರುವಂಥದ್ದೆ.

ಹಾಲಿನ ಖರೀದಿ ದರ ಹೆಚ್ಚಾಗುತ್ತಿದ್ದಂತೆಯೇ, ಹಾಲು ಉತ್ಪಾದನೆಗೆ ಅಗತ್ಯವಿರುವ ಸಾಮಗ್ರಿಗಳ ಬೆಲೆಯೂ ಹೆಚ್ಚುವುದು ಅವರ ಚಿಂತೆಗೆ ಕಾರಣ. ಒಂದು ಹಸುವನ್ನು ಇಟ್ಟುಕೊಂಡಿರುವ ಕೋಲಾರ ತಾಲ್ಲೂಕಿನ ಕೋಟಿಗಾನಹಳ್ಳಿಯ ರೈತ ಚಲಪತಿಯವರ ಲೆಕ್ಕಾಚಾರವನ್ನೇ ನೋಡಿ. ಅವರ ಹಸು ದಿನಕ್ಕೆ ಸರಾಸರಿ 10 ಲೀಟರ್ ಹಾಲು ಕೊಡುತ್ತದೆ. ಆ ಹಾಲನ್ನು ಡೈರಿಗೆ ಹಾಕುವುದರಿಂದ ಅವರಿಗೆ ಪ್ರತಿ 15 ದಿನಕ್ಕೆ ರೂ 2700ರಿಂದ 2750 ಸಿಗುತ್ತಿದೆ. 15 ದಿನದಲ್ಲಿ ಅವರು ಮಾಡುವ ಖರ್ಚು- 50 ಕೆ.ಜಿಯ ಒಂದು ಮೂಟೆ ಬೂಸಾ (ರೂ 750), 50 ಕೆ.ಜಿ ಒಂದು ಮೂಟೆ ಹೊಟ್ಟು ಬೂಸಾ (ರೂ 480), ಹಿಂಡಿ 15 ದಿನಕ್ಕೆ 15 ಕೆಜಿ (1 ಕೆ.ಜಿ ರೂ 25). ಮೇವಿನ ಜೋಳ- ಒಂದು ಪಡೆ   300 ರೂ. (ಇದು ಕೆಲವೊಮ್ಮೆ 15 ದಿನಕ್ಕೆ ಮುಂಚೆಯೇ ಮುಗಿಯುತ್ತದೆ). ಹಸು ಹಾಲು ಕರೆಯಬೇಕೆಂದರೆ ಒಟ್ಟು ರೂ 1905 ಖರ್ಚು ಮಾಡಲೇಬೇಕು. ಉಳಿಯುವುದು 800 ರೂ. ಅಂದರೆ ತಿಂಗಳಿಗೆ 1600 ರೂ. ಅಷ್ಟೆ. ಇದರಲ್ಲಿ ಹಸುವಿನ ಆರೈಕೆ ಮತ್ತು ಮೇವು ಒದಗಿಸುವ ಕೂಲಿ ಲೆಕ್ಕ ಹಿಡಿದಿಲ್ಲ. ಇಂದಿನ ದುಬಾರಿ ಸಂದರ್ಭದಲ್ಲಿ ಅದು ಯಾವುದಕ್ಕೂ ಸಾಕಾಗುತ್ತಿಲ್ಲ ಎಂಬುದು ಅವರ ಅಸಹಾಯಕತೆ.

ಪ್ರತಿ ಮೂಟೆ ಬೂಸಾ, ಹಿಂಡಿಯ ಬೆಲೆ 50 ರೂಪಾಯಿ ಹೆಚ್ಚಾದರೂ ಗಳಿಕೆಯ ಪ್ರಮಾಣ ಕುಸಿಯುತ್ತದೆ. ಇತ್ತೀಚೆಗೆ ಇವುಗಳ ಬೆಲೆ ಹೆಚ್ಚುತ್ತಲೇ ಇದೆ. ಮಳೆ ಇಲ್ಲದೆ ಒಣಬೇಸಾಯ ಮಾಡುವ ಮಂದಿ ಹಸಿರು ಮೇವನ್ನು ಕೊಳ್ಳುವುದೂ ಕಷ್ಟ ಎನ್ನುತ್ತಾರೆ ನೆನಮನಹಳ್ಳಿಯ ಎನ್.ಆರ್.ಚಂದ್ರಶೇಖರ್.

ಹಸು ಕೊಳ್ಳಲು ಸರ್ಕಾರ ಸಾಲ ಕೊಡುತ್ತೆ. ಆದರೆ ಅಷ್ಟೇ ಹಣದಲ್ಲಿ ಹಸು ಕೊಳ್ಳಲು ಆಗಲ್ಲ. ಅದಕ್ಕಾಗಿ ಮತ್ತೆ ಕೈ ಸಾಲ ಮಾಡಬೇಕು, ಬಡ್ಡಿಯೂ ತೇರಬೇಕು ಎನ್ನುತ್ತಾರೆ ಕೋಟಿಗಾನಹಳ್ಳಿಯ ರೈತ ಆನಂದ.

ಸರ್ಕಾರ ಇನ್ನಷ್ಟು ಪ್ರೋತ್ಸಾಹಧನ ಕೊಡಬೇಕು. ರಿಯಾಯಿತಿ ದರದಲ್ಲಿ ಸಬ್ಸಿಡಿ ಹಿಂಡಿ, ಬೂಸಾ ಕೊಡಬೇಕು. ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಆಡಳಿತ ಇನ್ನಷ್ಟು ಬಿಗಿಯಾಗಬೇಕು. ಕೋಮುಲ್‌ನಲ್ಲಿ ನಡೆಯುತ್ತಿರುವ ಅನಗತ್ಯ ವೆಚ್ಚಗಳು ತಗ್ಗಬೇಕು ಇತ್ಯಾದಿ. ಈ ಬೇಡಿಕೆಗಳಿಗೆ ಕಿವಿಗೊಡುತ್ತಲೇ ಕೋಮುಲ್ ಹೇಳುತ್ತದೆ: ಸದ್ಯಕ್ಕೆ ಒಕ್ಕೂಟದ ಆರ್ಥಿಕ ಪರಿಸ್ಥಿತಿ ಆಶಾದಾಯಕವಾಗಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.