ADVERTISEMENT

ಸಮ್ಮಿಶ್ರ ಸಂಸ್ಕೃತಿ; ತ್ರಿಶಂಕು ಸ್ಥಿತಿ

ಡಾ.ಪುರುಷೋತ್ತಮ ಬಿಳಿಮಲೆ
Published 2 ಡಿಸೆಂಬರ್ 2016, 20:11 IST
Last Updated 2 ಡಿಸೆಂಬರ್ 2016, 20:11 IST
ಸಮ್ಮಿಶ್ರ ಸಂಸ್ಕೃತಿ; ತ್ರಿಶಂಕು ಸ್ಥಿತಿ
ಸಮ್ಮಿಶ್ರ ಸಂಸ್ಕೃತಿ; ತ್ರಿಶಂಕು ಸ್ಥಿತಿ   

ಮಹಾರಾಷ್ಟ್ರದ ಜೆಜೂರಿಯಲ್ಲಿ ಅತ್ಯಂತ ಜನಪ್ರಿಯನಾದ ಖಂಡೋಬಾ ತನ್ನ ಪತ್ನಿ ಮಾಳಸಾ ದೇವಿಯೊಡನೆ ವಾಸಿಸುತ್ತಿದ್ದಾನೆ. ಮೂಲತಃ ಈತ ವಲಸೆಗಾರರ ದೈವ. ಮಳೆ ಕಡಿಮೆ ಬಿದ್ದು ಸಣ್ಣ ಪೊದರಷ್ಟೇ ಬೆಳೆಯುವ ದಕ್ಷಿಣ ಪ್ರಸ್ಥಭೂಮಿಯಲ್ಲಿ ಕುರಿ ಮೇಯಿಸುತ್ತಾ ಓಡಾಡುವ ಕುರುಬರ ದೇವನೀತ. ಜೆಜೂರಿಯಿಂದ ಹಡಗಲಿ ಕಡೆಗೆ ಬಂದು, ಮತ್ತೆ ಉತ್ತರಕ್ಕೆ ಸರಿದು, ಮೀನಗುಂದಿಗಾಗಿ ಮತ್ತೆ ಜೆಜೂರಿಗೆ ಹಿಂದಿರುಗುವ ಕುರಿಗಾಹಿಗಳನ್ನು ರಕ್ಷಿಸುವುದು ಇವನ ಕೆಲಸ. ಹೀಗಾಗಿ ಅವನು ಹೋದಲ್ಲೆಲ್ಲಾ ಅವನಿಗೊಂದು ಗುಡಿಯಿದೆ.

ಮಧ್ಯ ಕರ್ನಾಟಕದ ಹಡಗಲಿ ಸಮೀಪದ ಮಣ್ಣುಮೈಲಾರ ಅಂಥದ್ದೊಂದು ಪ್ರಸಿದ್ಧ ಕ್ಷೇತ್ರ. ಇಲ್ಲಿ ಭಾರತ ಹುಣ್ಣಿಮೆಯಂದು ನಡೆಯುವ ಕಾರಣಿಕ ಮಹೋತ್ಸವಕ್ಕೆ ಜೆಜೋರಿ ಕಡೆಯಿಂದ ಕಡಿಮೆಯೆಂದರೂ ಸುಮಾರು 25 ಸಾವಿರ ಚಕ್ಕಡಿಗಳು ಬರುತ್ತವೆ. ಲಕ್ಷಾಂತರ ಭಕ್ತರೂ ಮಹಾರಾಷ್ಟ್ರದ ಕಡೆಯಿಂದ ಬರುತ್ತಾರೆ. ಈ ಬಗೆಯ ಸಾಂಸ್ಕೃತಿಕ ಪಯಣಕ್ಕೆ ಗಡಿರೇಖೆಗಳ ಹಂಗಿಲ್ಲ. ಈ ಭಕ್ತರಿಗೆ ತಿಳಿದಿರುವುದು ಕುರಿ, ಕುದುರೆ, ಕಂಬಳಿ, ನಾಯಿ ಮತ್ತು ತಮ್ಮ ದೈವ. ಆದರೆ ಭಾಷಾವಾರು ಪ್ರಾಂತ್ಯ ರಚನೆಯಾಗುತ್ತಿದ್ದಂತೆ ಇವರನ್ನು ಗುರುತಿಸುವ ಪರಿಕ್ರಮಗಳೇ ಬದಲಾದವು. ಸಾಂಸ್ಕೃತಿಕ ಪರಿಭಾಷೆಗಳ ಜಾಗದಲ್ಲಿ ರಾಜಕೀಯ ಪರಿಭಾಷೆಗಳು ಕಾಣಿಸಿಕೊಂಡು, ಅವರು ಮಹಾರಾಷ್ಟ್ರದವರು, ಇವರು ಆಂಧ್ರದವರು ಎಂದೆಲ್ಲಾ ಕರೆಯಲಾರಂಭಿಸಿದೆವು. ಎಷ್ಟೋ ಬಾರಿ ಇದು ಅವರ ಪಾರಂಪರಿಕ ಚಲನೆಯ ಮೇಲೆ ನಿಯಂತ್ರಣ ಹೇರಿದ್ದೂ ಉಂಟು. ಹೀಗೆ ಗಡಿ ರೇಖೆಗಳು ಬದಲಾದಾಗಲೆಲ್ಲ ಜನರನ್ನು ಗುರುತಿಸುವ ಕ್ರಮಗಳೂ ಬದಲಾಗುತ್ತಿರುವುದು ನಮ್ಮ ಸಂಸ್ಕೃತಿಯನ್ನು ಅಭ್ಯಾಸ ಮಾಡುವವರಿಗೆ ಹೊಸ ಒಳನೋಟಗಳನ್ನು ನೀಡಬಲ್ಲವು. ಕುಂಬಳೆ, ಕಾಸರಗೋಡು, ಬದಿಯಡ್ಕ ಮೊದಲಾದೆಡೆಗಳಲ್ಲಿದ್ದ ತುಳುವರು ಇದ್ದಕ್ಕಿದ್ದಂತೆ ಮಲಯಾಳಿಗಳಾಗಿದ್ದು ಇನ್ನೊಂದು ಉದಾಹರಣೆ. ಈ ರಾಜಕೀಯ ಪರಿವರ್ತನೆಯೊಂದು ತರುವ ಬದಲಾವಣೆಗಳಿಗೆ ತೀವ್ರವಾಗಿ ಬಲಿಯಾಗುವವರೆಂದರೆ ಗಡಿನಾಡಿಗರೇ ಆಗಿರುತ್ತಾರೆ. ಒಂದಕ್ಕಿಂತ ಹೆಚ್ಚು ಭಾಷಾ ಪರಿಸರದಲ್ಲಿ ಬದುಕುವ ಅವರದು ಆ ಕಡೆಯದೂ ಅಲ್ಲದ, ಈ ಕಡೆಯದೂ ಅಲ್ಲದ ಒಂದು ಬಗೆಯ ಸಮ್ಮಿಶ್ರ ಸಂಸ್ಕೃತಿ ಅಥವಾ ನಿಜವಾದ ಅರ್ಥದಲ್ಲಿ ತ್ರಿಶಂಕು ಸ್ಥಿತಿ. ಅವರು ನಿರಂತರವಾಗಿ ಅನಿಶ್ಚಿತತೆ ಹುಟ್ಟಿಸುವ ಘಟನೆಗಳಿಗೆ ಸಾಕ್ಷಿಯಾಗುವ ಅನಿವಾರ್ಯದಲ್ಲಿ ಬದುಕುತ್ತಾರೆ.

‘ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಹಲ್ಲೆ’ ಎಂಬ ಸುದ್ದಿ ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾದಾಗ ಅಥವಾ ‘ಗಡಿಭಾಗದಲ್ಲಿ ಮರಾಠಿಗರ ಮೇಲೆ ದೌರ್ಜನ್ಯ’ ಎಂಬ ವರದಿಯನ್ನು ಮರಾಠಿ ಪತ್ರಿಕೆಗಳು ಪ್ರಕಟಿಸಿದಾಗ, ಗಡಿ ಭಾಗದಲ್ಲಿ ಬದುಕುತ್ತಿರುವ ಜನರಲ್ಲಿ ಉಂಟಾಗುವ ತಳಮಳವನ್ನು ಅರ್ಥಮಾಡಿಕೊಂಡವರಿಲ್ಲ. ನಾಡಿನೊಳಗೆ ಸುಭದ್ರವಾಗಿ ಕುಳಿತವರು ಹೇಳಿಕೆಗಳನ್ನು ನೀಡಿ, ತಾವು ಗಡಿನಾಡಿನ ಜನರ ರಕ್ಷಕರು ಎಂಬ ಭ್ರಾಮಕ ಭಾವವನ್ನೇನೋ ಮೂಡಿಸಿಬಿಡುತ್ತಾರೆ. ಆದರೆ ಅದು ಉಂಟು ಮಾಡುವ ತಳಮಳಗಳ ಜವಾಬ್ದಾರಿಯನ್ನೇನೂ ಅವರು ಹೊರುವುದಿಲ್ಲ. ಈ ಮಾತು ದೇಶ ವಿದೇಶಗಳ ಗಡಿಯಲ್ಲಿ ಬದುಕುವವರಿಗೂ ಅನ್ವಯವಾಗುತ್ತದೆ.

ADVERTISEMENT

ಗಡಿನಾಡಿನ ಕನ್ನಡಿಗರ ಬದುಕು ಹೊರನಾಡಿನ ಕನ್ನಡಿಗರ ಬದುಕಿಗಿಂತ ತುಂಬಾ ಭಿನ್ನ. ಹೊರನಾಡಿನ ಕನ್ನಡಿಗರು ಎ.ಕೆ.ರಾಮಾನುಜನ್ ಅವರ ಕವಿತೆಯೊಂದರಲ್ಲಿ ಬರೆದುಕೊಂಡಂತೆ- ‘ಆ ಊರು, ನೀರು, ಹಿಂಗಾರು, ಆ ಪ್ರದೇಶ, ಆ ಇಡೀ ರಾಜ್ಯ ಎಲ್ಲ ಹೊತ್ತು ಹಾಕಬೇಕು ಎನಿಸಿ, ಇದ್ದ ಬಿದ್ದ ಆನೆ, ಕುದುರೆ, ರಥ, ಸೈನ್ಯ ಎಲ್ಲ ಕೂಡಿಸಿ, ಇಡೀ ರಾಜ್ಯವನ್ನೆಲ್ಲ ಗೆದ್ದು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡು ಮನೆಗೇ ಹೋಗದೆ ಉಳಿವವರು’. ಆದರೆ ಗಡಿನಾಡಿನವರು ಹಾಗಲ್ಲ. ಅವರು ಅಲ್ಲಿಯೇ ಹುಟ್ಟಿ ಬೆಳೆಯುವವರು. ಹುಟ್ಟಿ ಬೆಳೆದ ಮಣ್ಣಿಗೆ ಇದ್ದಕ್ಕಿದ್ದಂತೆ ಅಪರಿಚಿತವಾಗುವವರು. ಉದಾಹರಣೆಗೆ ಬಾದಾಮಿ ಚಾಲುಕ್ಯರ ಆಡಳಿತಾವಧಿಯಲ್ಲಿ ನಾಸಿಕ್‌ ಕನ್ನಡ ಪ್ರದೇಶವಾಗಿತ್ತು, ಆದರೆ ಹೊಯ್ಸಳರ ಕಾಲದಲ್ಲಿ ಅದು ಕನ್ನಡ ಪ್ರದೇಶವಲ್ಲ. ಮಂಗಳೂರು ಟಿಪ್ಪುವಿನ ಕಾಲದಲ್ಲಿ ಮೈಸೂರು ಪ್ರಾಂತ್ಯದ್ದು, ಆದರೆ ವಸಾಹತು ಆಡಳಿತ ಕಾಲದಲ್ಲಿ ಅದು ಮದರಾಸು ಪ್ರೆಸಿಡೆನ್ಸಿಗೆ ಸೇರಿದ್ದು. ಇಂಥ ಬದಲಾವಣೆಗಳು ಆಯಾ ಪ್ರದೇಶದಲ್ಲಿ ಬದುಕುವ ಜನರ ಸಂಸ್ಕೃತಿಯ ಮೇಲೆ ಆಳವಾದ ಮತ್ತು ಗಂಭೀರವಾದ ಪರಿಣಾಮ ಬೀರುತ್ತಲೇ ಇರುತ್ತವೆ. ಉದಾಹರಣೆಗೆ ಕೊಲ್ಹಾಪುರದಲ್ಲಿ ವಾಸಿಸುತ್ತಿರುವ ಕನ್ನಡಿಗರು ಆ ಪ್ರದೇಶದಲ್ಲಿ ಬದುಕುತ್ತಿರುವಾಗ ಅವರು ಮರಾಠಿಗರ ನಡುವೆ ಅಲ್ಪಸಂಖ್ಯಾತರಂತೆ ಕೆಲಸ ಮಾಡಬೇಕಾಗುತ್ತದೆ. ಆದರೆ ಕೆಲವು ಗಂಟೆಗಳ ಪ್ರಯಾಣ ಮಾಡಿ ಕರ್ನಾಟಕದೊಳಕ್ಕೆ ಬರುತ್ತಿದ್ದಂತೇ ಅವರು ಬಹುಸಂಖ್ಯಾತರ ಬದುಕಿನ ಭಾಗವಾಗುತ್ತಾರೆ. ಕುಂಬಳೆ, ಕಾಸರಗೋಡು ಪ್ರದೇಶದಲ್ಲಿ ವಾಸಿಸುವ ಕನ್ನಡಿಗರು (ತುಳುವರು) ಬೆಳಗಿನ ಜಾವ ಮಂಗಳೂರಿಗೆ ಬಂದು ದಿನವಿಡೀ ಕೆಲಸ ಮಾಡುವಾಗ ಕರ್ನಾಟಕದವರು. ರಾತ್ರಿ ಮನೆಗೆ ಹಿಂದಿರುಗುವಾಗ ಅವರು ಕೇರಳೀಯರು. ಈ ಅಲ್ಪಸಂಖ್ಯಾತತನ ಮತ್ತು ಬಹುಸಂಖ್ಯಾತತನಗಳ ನಡುವೆ ಬದುಕುತ್ತಿರುವ ಕನ್ನಡಿಗರನ್ನು ಸಾಂಸ್ಕೃತಿಕವಾಗಿ ನಾವು ಇನ್ನಷ್ಟೇ ಸರಿಯಾಗಿ ಅರ್ಥಮಾಡಿಕೊಳ್ಳಬೇಕಾಗಿದೆ.

ಕಲಬುರ್ಗಿ ಜಿಲ್ಲೆಯ ಗಡಿ ಭಾಗದಲ್ಲಿ ಈ ಸಮಸ್ಯೆ ಇನ್ನೂ ಸಂಕೀರ್ಣವಾಗಿದೆ. ಒಮ್ಮೆ ಕನ್ನಡ, ಇನ್ನೊಮ್ಮೆ ತೆಲುಗು, ಮಗದೊಮ್ಮೆ ಉರ್ದು ಹೀಗೆ ಹಲವು ಭಾಷೆಗಳ ನಡುವೆ ಬದುಕುವ ಜನರು ಕ್ಷಣಮಾತ್ರದಲ್ಲಿ ಹಲವು ಸಂಸ್ಕೃತಿಗಳನ್ನು ಹಾದು ಹೋಗುತ್ತಾರೆ. ಈ ಪ್ರಕ್ರಿಯೆಯಲ್ಲಿ ಅವರು ಏನನ್ನೋ ಕಳೆದುಕೊಳ್ಳುತ್ತಿರುತ್ತಾರೆ, ಏನನ್ನೋ ಪಡೆದುಕೊಳ್ಳುತ್ತಿರುತ್ತಾರೆ, ಮತ್ತೇನನ್ನೋ ಮರೆತಿರುತ್ತಾರೆ, ಮಗದೇನನ್ನೋ ನೆನಪಿಸಿಕೊಳ್ಳುತ್ತಿರುತ್ತಾರೆ. ಸೂಕ್ಷ್ಮವಾಗಿ ನೋಡಿದಾಗ ಇದೊಂದು ಸಂಕೀರ್ಣ ಸ್ಥಿತಿ. ಇದನ್ನು ಒಳನಾಡಿನ ಕನ್ನಡಿಗರೊಡನೆ ಹೋಲಿಸಿ ಸರಳೀಕರಿಸಿ ನೋಡಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.