‘ಅಧಿಕಾರ ಎನ್ನುವುದು ಹುಲಿ ಸವಾರಿ ಇದ್ದಂತೆ’ ಎಂದು ಇಂದಿರಾ ಗಾಂಧಿ ಒಮ್ಮೆ ಹೇಳಿದ್ದರು. ಬಹುಶಃ ಈ ಕಾರಣಕ್ಕೇ ಇರಬಹುದು ರಾಜಕಾರಣಿಗಳು ಆ ಹುಲಿ ಸವಾರಿಯನ್ನು ತಾವು ಮಾಡಬೇಕು ಇಲ್ಲವೇ ತಮ್ಮ ಮಕ್ಕಳು, ಮೊಮ್ಮಕ್ಕಳು ಮಾಡಬೇಕು ಎಂದು ಬಯಸುವುದು. ಈ ಮಾತು ‘ದೆಹಲಿ ಗದ್ದುಗೆ’ಗೆ ಮಾತ್ರವಲ್ಲ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ದೇಶದ ಎಲ್ಲೆಡೆ ನಿಜವಾಗಿದೆ.
ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಕುಟುಂಬದಲ್ಲಿ ಅಧಿಕಾರಕ್ಕಾಗಿ ಅವರ ಪುತ್ರರಿಬ್ಬರ ನಡುವೆ ಕಿತ್ತಾಟ ನಡೆದಿದೆ. ಈ ಹಿರಿಯ ನಾಯಕನಿಗೆ ಇದು ಬಿಸಿ ತುಪ್ಪ. ನುಂಗುವಂತಿಲ್ಲ, ಉಗುಳುವಂತಿಲ್ಲ. ಕೊನೆಗೂ ಗಟ್ಟಿ ಮನಸು ಮಾಡಿ ಕಿರಿ ಮಗ ಎಂ.ಕೆ. ಸ್ಟಾಲಿನ್ ಪರ ನಿಂತಿದ್ದಾರೆ. ಹಿರಿಯ ಮಗ ಅಳಗಿರಿಯನ್ನು ಪಕ್ಷದಿಂದ ಅಮಾನತುಗೊಳಿಸಿದ್ದಾರೆ.
ಕರುಣಾನಿಧಿ ಕುಟುಂಬದಲ್ಲಿ ಅಧಿಕಾರ ಕಲಹ ನಡೆಯುತ್ತಿರುವಾಗಲೇ ಅದೇ ರಾಜ್ಯದ ಮತ್ತೊಬ್ಬ ಹಿರಿಯ ರಾಜಕಾರಣಿ, ಸಚಿವ ಪಿ. ಚಿದಂಬರಂ ತಮ್ಮ ಪುತ್ರ ಕಾರ್ತಿ ಚಿದಂಬರಂ ಅವರಿಗೆ ರಾಜಕೀಯ ದೀಕ್ಷೆ ನೀಡಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಶಿವಗಂಗಾ ಕ್ಷೇತ್ರದಿಂದ ಕಾರ್ತಿಗೆ ಪಕ್ಷ ಟಿಕೆಟ್ ನೀಡಿದೆ. ಚಿದಂಬರಂ ಲೋಕಸಭೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ.
ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಪುತ್ರ ಅಜಿತ್ ಸಿಂಗ್ ಅವರು ಮನಮೋಹನ್ ಸಿಂಗ್ ಸಂಪುಟದಲ್ಲಿ ಸಚಿವರು. ಅಜಿತ್ ಪುತ್ರ ಜಯಂತ್ ಚೌಧರಿ ಲೋಕಸಭಾ ಸದಸ್ಯ. ಮಾಜಿ ಉಪ ಪ್ರಧಾನಿ ದೇವಿಲಾಲ್ ಅವರ ಮಗ ಓಂಪ್ರಕಾಶ್ ಚೌತಾಲ ಹರಿಯಾಣ ಮಾಜಿ ಮುಖ್ಯಮಂತ್ರಿ. ಅವರ ಮೊಮ್ಮಗ ಅಜಯ್ ಕೂಡಾ ರಾಜಕಾರಣಿ (ಶಿಕ್ಷಕರ ನೇಮಕಾತಿ ಅಕ್ರಮದಲ್ಲಿ ಇವರಿಬ್ಬರೂ ಜೈಲಿನಲ್ಲಿದ್ದಾರೆ).
ಸಮಾಜವಾದಿ ಪಕ್ಷದ ನೇತಾರ ಮುಲಾಯಂ ಸಿಂಗ್ ಯಾದವ್ ಅವರ ಪುತ್ರ ಅಖಿಲೇಶ್ ಯಾದವ್ ಉತ್ತರ ಪ್ರದೇಶದ ಮುಖ್ಯಮಂತ್ರಿ. ಅಖಿಲೇಶ್ ಪತ್ನಿ ಡಿಂಪಲ್ ಲೋಕಸಭಾ ಸದಸ್ಯೆ. ಮುಖ್ಯಮಂತ್ರಿ ಸ್ಥಾನದಲ್ಲಿ ಮಗನನ್ನು ಕೂರಿಸಿರುವ ಮುಲಾಯಂ ಪ್ರಧಾನಿ ಪಟ್ಟದ ಕನಸು ಕಾಣುತ್ತಿದ್ದಾರೆ.
ಪಂಜಾಬಿನ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರ ಪುತ್ರ ಸುಖಬೀರ್ ಸಿಂಗ್ ಬಾದಲ್ ಅಪ್ಪನ ಸಂಪುಟದಲ್ಲಿ ಉಪ ಮುಖಮಂತ್ರಿ. ಸುಖಬೀರ್ ಪತ್ನಿ ಹರ್‌ಸಿಮ್ರತ್ ಕೌರ್ ಲೋಕಸಭೆ ಸದಸ್ಯೆ. ಹಿರಿಯ ರಾಜಕಾರಣಿಯಾಗಿದ್ದ ದಿ. ಬಿಜು ಪಟ್ನಾಯಕ್ ಪುತ್ರ ನವೀನ್ ಪಟ್ನಾಯಕ್ ಒಡಿಶಾ ಮುಖ್ಯಮಂತ್ರಿ. ಕೇಂದ್ರ ಸಚಿವ ಫಾರೂಕ್ ಅಬ್ದುಲ್ಲಾ ಪುತ್ರ ಒಮರ್ ಅಬ್ದುಲ್ ಜಮ್ಮು– ಕಾಶ್ಮೀರದ ಮುಖ್ಯಮಂತ್ರಿ. ಕಣಿವೆ ರಾಜ್ಯದ ವಿರೋಧ ಪಕ್ಷದ ನಾಯಕಿ ಮೆಹಬೂಬಾ ಮುಫ್ತಿ ಅವರು ಹಿರಿಯ ರಾಜಕಾರಣಿ ಮುಫ್ತಿ ಮಹಮದ್ ಸಯೀದ್ ಅವರ ಪುತ್ರಿ.
ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಪುತ್ರ ಸಂದೀಪ್ ದೀಕ್ಷಿತ್ ಲೋಕಸಭೆ ಹಾಲಿ ಸದಸ್ಯ. ಶೀಲಾ ಅವರ ಪತಿ ಉಮಾಶಂಕರ್ ದೀಕ್ಷಿತ್ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದವರು. ಕರ್ನಾಟಕದ ರಾಜ್ಯಪಾಲರಾಗಿಯೂ ಕೆಲಸ ಮಾಡಿದ್ದರು. ಹರಿಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರ ಪುತ್ರ ದೀಪೇಂದರ್ ಹೂಡಾ ಲೋಕಸಭೆ ಸದಸ್ಯ. ರಾಜೇಶ್ ಪೈಲಟ್ ಪುತ್ರ ಸಚಿನ್ ಪೈಲಟ್, ಮಾಧವರಾವ್ ಸಿಂಧಿಯಾ ಅವರ ಪುತ್ರ ಜ್ಯೋತಿರಾದಿತ್ಯ ಸಿಂಧಿಯಾ ಅವರೂ ಕೇಂದ್ರ ಸಚಿವರು.
ಮಹಾರಾಷ್ಟ್ರ ಕೂಡಾ ಕುಟುಂಬ ರಾಜಕಾರಣದಲ್ಲಿ ಹಿಂದೆ ಬಿದ್ದಿಲ್ಲ. ಶರದ್ ಪವಾರ್ ಕೇಂದ್ರ ಸರ್ಕಾರದ ಕೃಷಿ ಸಚಿವ. ಮಗಳು ಸುಪ್ರಿಯಾ ಸುಳೆ ಲೋಕಸಭೆ ಸದಸ್ಯೆ. ಅಣ್ಣನ ಮಗ ಅಜಿತ್ ಪವಾರ್ ರಾಜ್ಯ ಸರ್ಕಾರದ ಉಪ ಮುಖ್ಯಮಂತ್ರಿ. ತೆಲುಗುದೇಶಂ ಸಂಸ್ಥಾಪಕ ಎನ್.ಟಿ.ರಾಮರಾವ್ ಅಳಿಯ ನಾರಾ ಚಂದ್ರಬಾಬು ನಾಯ್ಡು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಈಗ ಟಿಡಿಪಿ ಅಧ್ಯಕ್ಷ.
ಎನ್‌ಟಿಆರ್ ಪುತ್ರಿ ದಗ್ಗುಬಾಟಿ ಪುರಂದೇಶ್ವರಿ ಕೇಂದ್ರದಲ್ಲಿ ಸಚಿವೆಯಾಗಿದ್ದರು. ಮತ್ತೊಬ್ಬ ಅಳಿಯ ಡಾ.ವೆಂಕಟೇಶ್ವರ ರಾವ್ ಅವರೂ ರಾಜಕೀಯದಲ್ಲಿ ಸಕ್ರಿಯ. ವೈ.ಎಸ್. ರಾಜಶೇಖರ ರೆಡ್ಡಿ ಅವರ ಮಗ ಜಗನ್ಮೋಹನ್ರೆಡ್ಡಿ ಸಂಸದ. ತಂದೆ ಹೆಸರಿನಲ್ಲಿ ಪಕ್ಷ (ವೈಎಸ್‌ಆರ್ ಕಾಂಗ್ರೆಸ್) ಕೂಡ ಸ್ಥಾಪಿಸಿ-ದ್ದಾರೆ. ವೈಎಸ್‌ಆರ್ ಪತ್ನಿ ವಿಜಯಲಕ್ಷ್ಮೀ ಶಾಸಕಿ, ಪುತ್ರಿ ಶರ್ಮಿಳಾ ಅವರೂ ಸಕ್ರಿಯ ರಾಜಕಾರಣದಲ್ಲಿದ್ದಾರೆ.
ಮಾತೆತ್ತಿದರೆ ತತ್ವ–ಸಿದ್ಧಾಂತವೆಂದು ಬೊಬ್ಬೆ ಹಾಕುವ ಬಿಜೆಪಿ ಕೂಡಾ ಕುಟುಂಬ ರಾಜಕಾರಣದಲ್ಲಿ ಎತ್ತಿದ ಕೈ. ರಾಜಸ್ತಾನದ ಮುಖ್ಯಮಂತ್ರಿ ವಸುಂಧರಾರಾಜೆ ಅವರ ಪುತ್ರ ದುಶ್ಯಂತ್ ಸಿಂಗ್, ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಜಸ್ವಂತ್ ಸಿಂಗ್, ಯಶವಂತ ಸಿನ್ಹ ಅವರ ಮಕ್ಕಳು ಕೂಡಾ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಲೋಕಸಭೆ ಮತ್ತು ಶಾಸನಸಭೆ ಸದಸ್ಯರಾಗಿದ್ದಾರೆ. ರಾಜಕಾರಣದಲ್ಲಿ ಸಕ್ರಿಯವಾಗಿರುವ ಕುಟುಂಬಗಳನ್ನು ಹೆಸರಿಸುತ್ತಾ ಹೋದರೆ ಹನುಮಂತನ ಬಾಲದಂತೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಕುಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಪ್ರಜಾಪ್ರಭುತ್ಷದ ಮೂಲ ಮಂತ್ರವೇ ಸರ್ವರಿಗೂ ಸಮಪಾಲು. ಸರ್ವರಿಗೂ ಸಮಬಾಳು. ಆದರೆ, ಭಾರತದ ಪ್ರಜಾಪ್ರಭುತ್ವದಲ್ಲಿ ಈ ಮಾತಿಗೆ ಯಾವ ಅರ್ಥವೂ ಉಳಿದಿಲ್ಲ. ಪ್ರಭಾವಿ ರಾಜಕಾರಣಿಗಳು
ಮತ್ತು ಅವರ ಕುಟುಂಬದ ಸದಸ್ಯರು ಅಧಿಕಾರವೆಂಬ ಹುಲಿಯ ಮೇಲೆ ಸವಾರಿ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.