ADVERTISEMENT

ಗುಣಮಟ್ಟಕ್ಕೆ ಮಾರಕ

ಅನಿಲ್ ಕುಮಾರ್ ಕೆ.ಎಂ.
Published 31 ಮಾರ್ಚ್ 2013, 19:59 IST
Last Updated 31 ಮಾರ್ಚ್ 2013, 19:59 IST

ಪ್ರತಿಯೊಂದು ಪಕ್ಷದಲ್ಲಿ ಚುನಾವಣಾ ಸ್ಪರ್ಧೆಗೆ ಟಿಕೆಟ್ ಕೊಡುವುದರಿಂದ, ಅಧ್ಯಕ್ಷರು ಯಾರಾಗಬೇಕು ಎಂಬುದರಿಂದ ಹಿಡಿದು, ಮುಖ್ಯಮಂತ್ರಿ ಯಾರನ್ನು ಆಯ್ಕೆ ಮಾಡಬೇಕು, ಯಾರು ಯಾರಿಗೆ ಮಂತ್ರಿ ಪಟ್ಟ ಕೊಡಬೇಕು ಎಂಬ ಕುರಿತಾಗಿ ನಿರ್ಣಯ ಕೈಗೊಳ್ಳುವ ಮೊದಲು ರಾಜ್ಯದಲ್ಲಿ ಪ್ರಮುಖವಾಗಿ ಕೇಳಿಬರುವುದು ಲಿಂಗಾಯತರಿಗೆಷ್ಟು, ಒಕ್ಕಲಿಗರಿಗೆಷ್ಟು, ಬ್ರಾಹ್ಮಣರಿಗೆಷ್ಟು, ದಲಿತರಿಗೆಷ್ಟು ಮತ್ತು ಅಲ್ಪಸಂಖ್ಯಾತರಿಗೆಷ್ಟು ಎಂಬ ಚಿಂತನ-ಮಂಥನ. ಪ್ರತಿಯೊಂದು ಪಕ್ಷದಲ್ಲಿಯೂ ಈ ಜಾತಿ ಲೆಕ್ಕಾಚಾರವು ತಳಮಟ್ಟದಲ್ಲೇ ಇರುತ್ತದೆ.

ಮೀಸಲಾತಿ ವ್ಯಾಪ್ತಿಗೆ ಒಳಪಡದ ಜನರ ಜೀವನವು  ಎಲ್ಲಾ ಬಗೆಯಲ್ಲಿಯೂ ಮೀಸಲಾತಿಗೆ ಒಳಪಡುವ ಜನರ ಜೀವನಕ್ಕಿಂತ ಕಷ್ಟಕರವಾಗಿದೆ.  ಅಗತ್ಯವಿರುವಷ್ಟು ಅಂಕಗಳು ಮತ್ತು ಅರ್ಹತೆ ಇದ್ದರೂ ಸೀಟು ಕಳೆದುಕೊಳ್ಳುವ ಸ್ಥಿತಿ ಇದಕ್ಕೆ ಮುಖ್ಯ ಕಾರಣ ಜಾತಿ. ಚಾರಿತ್ರಿಕವಾದ ಅನ್ಯಾಯಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಮಾರ್ಗವಾಗಿ ನಾವು ಅನುಸರಿಸುತ್ತಿರುವ ಮೀಸಲಾತಿ ಪದ್ಧತಿ ಜಾತಿಯ ಹೆಸರಿನಲ್ಲಿ ಅಸಮಾನತೆಯನ್ನು ರೂಢಿಗೆ ತರುತ್ತಿದೆ.

ಸಂವಿಧಾನವು ಪ್ರತಿ ಮಗುವಿಗೆ ಶಿಕ್ಷಣ ಹಕ್ಕನ್ನು ನೀಡಿದೆ. ಇದರರ್ಥ ಕೆಳ ವರ್ಗದ ಅಥವಾ ಹಿಂದುಳಿದ ವರ್ಗಕ್ಕೆ ಸೇರಿದ ಯಾವುದೇ ಮಗುವು ಸಾಮಾನ್ಯ ವರ್ಗದ ಮಕ್ಕಳಿಗಿಂತ ಹೆಚ್ಚಿನ ಹಕ್ಕು ಹೊಂದಿರುತ್ತದೆ ಎಂದಲ್ಲ. ಸ್ವಾತಂತ್ರ್ಯ ಬಂದಾಗಿನ ಸ್ಥಿತಿ ಇಂದಿಲ್ಲ. ನಾವು ಒಬ್ಬ ಮನುಷ್ಯನಿಗೆ ಮೀಸಲಾತಿ  ಪದ್ಧತಿಯನ್ನು ಆಧರಿಸಿ ಒಂದು ಕೆಲಸ, ಒಂದು ಪದೋನ್ನತಿ, ಅತ್ಯುತ್ತಮ ವಿಶ್ವವಿದ್ಯಾಲಯದಲ್ಲಿ ಶಿಕ್ಷಣಕ್ಕೆ ಪ್ರವೇಶ ನೀಡಬಹುದೇ ಹೊರತು ಜೀವನಕ್ಕೆ ಅಗತ್ಯವಿರುವ ಆತ್ಮ ವಿಶ್ವಾಸ, ಕ್ಷಾತ್ರ ಮತ್ತು ಸ್ವಾಭಿಮಾನ ನೀಡಲು ಸಾಧ್ಯವಿಲ್ಲ.  ಜಾತಿ ಆಧಾರದ ಮೇಲೆ ಅವಕಾಶಗಳನ್ನು ವಿತರಿಸುವ ಮೂಲಕ ನಾವು ದೇಶಕ್ಕಾಗಿ ನಿರೀಕ್ಷಿತ ಸೇವೆಗಳನ್ನು ಪಡೆಯಲು ಸಾಧ್ಯವಿಲ್ಲ.

ಈಗಲೂ ಕೆಲವು ಕೇಂದ್ರ ಶೈಕ್ಷಣಿಕ, ಸಂಶೋಧನಾ ಸಂಸ್ಥೆಗಳು ಮತ್ತು ಪ್ರಯೋಗಾಲಯಗಳನ್ನು ಗುಣಮಟ್ಟ ಕಾಯ್ದುಕೊಳ್ಳುವ ದೃಷ್ಟಿಯಿಂದ ಮೀಸಲಾತಿ  ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಅಂದರೆ ಮೀಸಲಾತಿ ಗುಣಮಟ್ಟಕ್ಕೆ ಮಾರಕ ಎಂಬುದನ್ನು ಸರ್ಕಾರವೇ ಒಪ್ಪಿಕೊಂಡಿದೆ. ಇದನ್ನೇ ಎಲ್ಲಾ ಕ್ಷೇತ್ರಗಳಲ್ಲಿಯೂ ಜಾರಿಗೆ ತರುವುದಕ್ಕೆ ಇರುವ ತೊಂದರೆಯಾದರೂ ಏನು? ದೇಶದ ಹಿತಕ್ಕೆ ಮೀಸಲಾತಿಯನ್ನು ನಿಲ್ಲಿಸುವುದು ಅಗತ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.