ADVERTISEMENT

ದೇವರಿಗೆ ಮುನಿಸಿದೆ; ಪ್ರತಿಭೆಗಲ್ಲ

ಸಂತೋಷ ಗುಡ್ಡಿಯಂಗಡಿ
Published 27 ಜನವರಿ 2013, 19:59 IST
Last Updated 27 ಜನವರಿ 2013, 19:59 IST
ದೇವರಿಗೆ ಮುನಿಸಿದೆ; ಪ್ರತಿಭೆಗಲ್ಲ
ದೇವರಿಗೆ ಮುನಿಸಿದೆ; ಪ್ರತಿಭೆಗಲ್ಲ   

ಗುರುಗಳಾದ ಸಂಜೀವ ಸುವರ್ಣರ ದೇವರಿನ್ನೂ ಕೋಪಿಸಿಕೊಂಡಿಲ್ಲ. ಆದರೆ ನಮ್ಮ ದೇವರ ಮುನಿಸು ಇನ್ನೂ ಇಳಿದಿಲ್ಲ. ನಿಮಗೇ ದೇವಾಲಯದ ಒಳಗೆ ಬಿಡದಿದ್ದವರು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಜಾತಿಗಳಾದ ಕೂಸಾಳು ಮತ್ತು ಕೊರಗರಿಗೆ ಬಿಟ್ಟಾರೆಯೇ? ದೇವಾಲಯಕ್ಕೆ ಈಗೀಗ ಬಿಟ್ಟರೂ ಯಕ್ಷಗಾನಕ್ಕೆ ಬಿಟ್ಟುಕೊಂಡಿಲ್ಲ, ಬಿಡುವುದೂ ಇಲ್ಲ.

ನನ್ನಕ್ಕ ಬೇಬಿ ಕನ್ಯಾನ ಸಂಜೀವ ಸುವರ್ಣರ ಶಿಷ್ಯೆ. ಅಕ್ಕ ಮತ್ತು ನಾನು ಕುಂದಾಪುರದ  ನಮ್ಮ ಭೂಮಿ  ಸಂಸ್ಥೆಯಲ್ಲಿ ಮೊದಲು ಯಕ್ಷಗಾನದ ಪ್ರಾಥಮಿಕ ಪಾಠಗಳನ್ನು ಕಲಿತವರು. ನಾವಿಬ್ಬರು ಬಣ್ಣದ ವೇಷ ಹಾಕಿ ರಂಗಸ್ಥಳದಲ್ಲಿ ಕುಣಿದೆವು. ಆದರೆ ಇದು ನಮಗೆ ಸಾಧ್ಯವಾಗಿದ್ದು ಜಾತ್ಯಾತೀತ ಮನೋಭಾವವುಳ್ಳ `ನಮ್ಮ ಭೂಮಿ'ಯಂಥ ಸಂಸ್ಥೆಯಲ್ಲಿ. ಕರಾವಳಿಯ ಯಾವ ಯಕ್ಷಗಾನ ಮೇಳಗಳಲ್ಲಿಯೂ ಇದು ಈಗಲೂ ಸಾಧ್ಯವಿಲ್ಲ.

ಆದರೆ ನನ್ನಕ್ಕ ನಮ್ಮ ಮನೆಯಲ್ಲಿ ನಮ್ಮ ಜಾತಿಯ ಪುಟ್ಟ ಪುಟ್ಟ ಮಕ್ಕಳಿಗೆ ತಾನು ಕಲಿತ ಯಕ್ಷಗಾನದ ಹೆಜ್ಜೆಗಳನ್ನು ಕಲಿಸುತ್ತಾ ತಾನು ಯಕ್ಷಗಾನದ ಗುರುವಾಗಿದ್ದಾಳೆ. ಅದೇ `ನಮ್ಮ ಭೂಮಿ' ಸಂಸ್ಥೆ ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆಸಿದ ಯಕ್ಷಗಾನದಲ್ಲಿ ತಾನೂ ವೇಷ ಮಾಡಿ ಆ ಮಕ್ಕಳಿಗೂ ವೇಷ ಹಾಕಿಸಿ ರಂಗಪ್ರವೇಶವನ್ನೂ ಮಾಡಿಸಿದ್ದಾಳೆ.

ಇದೇ ಫೆಬ್ರವರಿಯಲ್ಲಿ ಮತ್ತೆ ವೇಷ ಮಾಡುತ್ತಾ ಹೊಸ ಮಕ್ಕಳನ್ನು ರಂಗಪ್ರವೇಶಕ್ಕೆ ಅಣಿಗೊಳಿಸಿದ್ದಾಳೆ. ನಮ್ಮ ಜಾತಿಯವರಿಗೆ ಸಂಜೀವ ಸುವರ್ಣರಂತಹ ಶ್ರೇಷ್ಠ ಗುರುಗಳು ಸಿಗಬಹುದು ಆದರೆ ಕರಾವಳಿಯ ಮೇಳಗಳಲ್ಲಿ ವೇಷ ಹಾಕಿ ಕುಣಿಯುವ ಅವಕಾಶ ಖಂಡಿತಾ ಸಿಗಲಾರದು. ಈ ಮಾತನ್ನು ಗುರು ಸಂಜೀವ ಸುವರ್ಣರು ಒಪ್ಪುತ್ತಾರೆ ಎಂದುಕೊಂಡಿದ್ದೇನೆ.

ನಾವು ಯಕ್ಷಗಾನ ನೋಡುತ್ತಲೇ ಬೆಳೆದವರು. ಚಿಕ್ಕಂದಿನಿಂದಲೂ ಭಾಗವತನಾಗಬೇಕೆಂಬ ಮಹದಾಸೆಯಿತ್ತು. ಕಾಳಿಂಗ ನಾವಡರನ್ನು ಅನುಕರಣೆ ಮಾಡುತ್ತಲೇ ಬೆಳೆದೆ. ಶಾಲೆಯಲ್ಲಿಯೂ ಯಕ್ಷಗಾನ ಮಾಡುವ ಅವಕಾಶ ತಪ್ಪಿತು. `ನಮ್ಮ ಭೂಮಿ'ಯಲ್ಲಿ ಸಾಧ್ಯವಾದರೂ ಅದು ಹವ್ಯಾಸಿ ತಂಡವಷ್ಟೇ.

ಆದರೆ ನನಗೆ ಹೆಮ್ಮೆ ಎಂದರೆ ನಾವು ಮೂವರು ಮಕ್ಕಳಲ್ಲಿ ಅಕ್ಕ ಈಗಲೂ ಹವ್ಯಾಸಿಯಾಗಿ ಯಕ್ಷಗಾನ ಮಾಡುತ್ತಾ ನಮ್ಮ ಜಾತಿಯ ಮಕ್ಕಳಿಗೆ ಯಕ್ಷಗಾನದ ಪ್ರಾಥಮಿಕ ಪಾಠ ಹೇಳಿಕೊಡುತ್ತಿದ್ದಾಳೆ. ತಂಗಿ ಶಾಂತಿ ಭರತನಾಟ್ಯ ಕಲಿತು ಒಂದಷ್ಟು ಮಕ್ಕಳಿಗೆ ಕಲಿಸಿದಳು. ನಾನು ನೀನಾಸಮ್‌ನಲ್ಲಿ ನಾಟಕ ಕಲಿತು ಈಗ ಪ್ರೌಢ ಶಾಲೆಯಲ್ಲಿ ನಾಟಕದ ಮೇಸ್ಟ್ರಾಗಿ ನೌಕರಿಯಲ್ಲಿದ್ದೇನೆ.

ನನ್ನಪ್ಪ ಚಿಕ್ಕಂದಿನಲ್ಲಿ ನಮಗೆ ಭಜನೆಗಳನ್ನು ಹೇಳಿಕೊಟ್ಟರು. ನಮ್ಮ ಪುಟ್ಟ ಕುಟುಂಬ ನಮ್ಮ ಆಸಕ್ತಿಗಳ ಮೂಲಕವೇ ಈ ಕಲೆಯೊಳಗಿನ ಜಾತಿ ವ್ಯವಸ್ಥೆಯ ವಿರುದ್ಧ ನಿರಂತರ ಹೋರಾಟವನ್ನು ಅರಿವಿಲ್ಲದೆಯೇ ನಡೆಸಿಕೊಂಡು ಬಂದಿದೆ ಅನಿಸುತ್ತದೆ. ನಮ್ಮ ಮನೆಯ ಪುಟ್ಟ ಕಲಾವಿದ ಸುಮಿತ್ ಮುಂದಿನ ತಿಂಗಳು ಯಕ್ಷಗಾನ ರಂಗಪ್ರವೇಶ ಮಾಡಲಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.