ADVERTISEMENT

‘ಅಪ್ಪ ನನ್ನ ಹೀರೊ’

ರಮೇಶ ಕೆ
Published 7 ಜುಲೈ 2017, 19:30 IST
Last Updated 7 ಜುಲೈ 2017, 19:30 IST
‘ಅಪ್ಪ ನನ್ನ ಹೀರೊ’
‘ಅಪ್ಪ ನನ್ನ ಹೀರೊ’   

ರಿಯಾಲಿಟಿ ಶೋಗಳ ತಾಂತ್ರಿಕ ತಂಡದಲ್ಲಿ ಕೆಲಸ ಮಾಡಿ, ಕಿರುತೆರೆ ಪ್ರವೇಶ ಮಾಡಿದವರು ಯುವ ನಟಿ ಅಪೂರ್ವ ಭಾರದ್ವಾಜ್‌. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ‘ಸತ್ಯಂ ಶಿವಂ ಸುಂದರಂ’ ಧಾರಾವಾಹಿಯಲ್ಲಿ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಬೆಂಗಳೂರಿನ ಅಪೂರ್ವ ಅವರು ಸಮೂಹ ಸಂವಹನ ವಿಷಯದಲ್ಲಿ ಎಂ.ಎ. ಮಾಡಿದ್ದಾರೆ. ಬಿಗ್‌ಬಾಸ್‌ 2ನೇ ಆವೃತ್ತಿಗೆ ಟಾಸ್ಕ್‌ ಪ್ರೊಡ್ಯೂಸರ್‌ ಆಗಿಯೂ ಕೆಲಸ ಮಾಡಿದ್ದಾರೆ. ಆಡಿಷನ್‌ನಲ್ಲಿ ಭಾಗವಹಿಸಿ ‘ಅನುರೂಪ’ ಧಾರಾವಾಹಿ ಮೂಲಕ ಕಿರುತೆರೆಯಲ್ಲೂ ಅವಕಾಶ ಗಿಟ್ಟಿಸಿಕೊಂಡವರು.

‘ಚಕ್ರವ್ಯೂಹ’, ‘ಗಿರಿಜಾ ಕಲ್ಯಾಣ’ ಹಾಗೂ ‘ವಾರಸ್ದಾರ’ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ADVERTISEMENT

* ಹುಟ್ಟಿದ ವರ್ಷ?
ಹುಟ್ಟಿದ ದಿನ ಹೇಳ್ತೀನಿ... ನವೆಂಬರ್‌ 1

* ನೀವು ಯಾರನ್ನು ಹೆಚ್ಚು ಇಷ್ಟಪಡುತ್ತೀರಾ?
ಅಮ್ಮ, ಅಪ್ಪ ಹಾಗೂ ಸ್ನೇಹಿತರು.

* ದ್ವೇಷಿಸೋದು?
ಯಾರನ್ನೂ ದ್ವೇಷಿಸುವುದಿಲ್ಲ.

* ಯಾರಿಗೆ ಹೆದರುತ್ತೀರಾ?
ಅಪ್ಪ ಮತ್ತು ದೇವರು.

* ಹೆಚ್ಚಾಗಿ ಎಲ್ಲಿಗೆ ಹೋಗಲು ಇಷ್ಟವಾಗುತ್ತದೆ?
ಬೆಟ್ಟಗುಡ್ಡ, ಹೆಚ್ಚು ಚಳಿಯಿರುವ ಸ್ಥಳಗಳಿಗೆ ಹೋಗಲು ಇಷ್ಟವಾಗುತ್ತದೆ.

* ನಿಮ್ಮ ಶಕ್ತಿ?
ಮಾತೇ ನನ್ನ ಶಕ್ತಿ. ಮಾತುಗಳಿಂದಲೇ ಬಹಳಷ್ಟು ಮಂದಿ ಸ್ನೇಹಿತರಾಗಿದ್ದಾರೆ.

* ನಿಮ್ಮ ಹೀರೊ?
ತಂದೆಯೇ ನನ್ನ ಹೀರೊ. ಅವರಿಗೆ ಎಲ್ಲಾ ಕೆಲಸಗಳೂ ಗೊತ್ತು. ಕಚೇರಿಯಿಂದ ಮನೆಗೆ ಬಂದಾಗ ನಲ್ಲಿ ಹಾಳಾಗಿದ್ದರೂ ಅವರೇ ಸರಿಪಡಿಸುತ್ತಾರೆ. ನನಗೆ ಏನೇ ಅನುಮಾನಗಳಿದ್ದರೂ ಅವರ ಬಳಿ ಕೇಳಿ ಪರಿಹರಿಸಿಕೊಳ್ಳುತ್ತೇನೆ.

* ನಿಮ್ಮ ನೆಚ್ಚಿನ ತಿನಿಸು?
ಸಸ್ಯಾಹಾರಿ ತಿನಿಸುಗಳೆಲ್ಲಾ ಇಷ್ಟ. ಆಲೂಗಡ್ಡೆಯಿಂದ ಮಾಡಿದ ಕುರುಕಲು ತಿನಿಸುಗಳು ಪಂಚಪ್ರಾಣ.

* ನಿಮ್ಮ ಪ್ಯಾಷನ್‌?
ವೃತ್ತಿ ಹಾಗೂ ಪ್ಯಾಷನ್‌ ಎರಡೂ ನಟನೆಯೇ. ಪ್ರೊಡಕ್ಷನ್‌ ಹೌಸ್‌ ಆರಂಭಿಸುವ ಯೋಜನೆ ಇದೆ.

* ನಿಮ್ಮ ಜೀವನಸಂಗಾತಿಯಾಗುವ ಹುಡುಗ ಹೇಗಿರಬೇಕು?
ವೃತ್ತಿಗೆ ಬೆಂಬಲ ಸೂಚಿಸಬೇಕು. ಹೆಂಡತಿಯನ್ನು ತನ್ನ ಸಮಾನವಾಗಿ ನೋಡಬೇಕು. ನನ್ನ ಅಭಿಪ್ರಾಯಗಳಿಗೂ ಬೆಲೆ ಕೊಡಬೇಕು. ಕನಸುಗಳಿಗೆ ನೀರೆರೆಯಬೇಕು.

* ತುಂಬಾ ಸಿಟ್ಟು ಬಂದ್ರೆ?
ಸಾಮಾನ್ಯವಾಗಿ ಸಿಟ್ಟು ಬರೋದಿಲ್ಲ. ಬಂದ್ರೆ ಐದರಿಂದ ಹತ್ತು ನಿಮಿಷ ಇರುತ್ತೆ ಅಷ್ಟೆ. ಸಿಟ್ಟು ಬಂದಾಗ ನಾನಿದ್ದ ಜಾಗದಿಂದ ಎದ್ದು ಹೋಗುತ್ತೇನೆ.

* ತುಂಬಾ ಬೇಜಾರಾದ್ರೆ?
ಒಂಟಿಯಾಗಿ ಇರಲು ಬಯಸುತ್ತೇನೆ. ಸಿನಿಮಾ ನೋಡಲು ಹೋಗುತ್ತೇನೆ.

* ‘ಸತ್ಯಂ ಶಿವಂ ಸುಂದರಂ’ ಧಾರಾವಾಹಿ ಬಗ್ಗೆ ಹೇಳಿ?
ಸತ್ಯದ ಪರ ನಿಲ್ಲುವ ಹುಡುಗಿ. ಅನ್ಯಾಯವಾದರೆ ಖಂಡಿಸುತ್ತೇನೆ. ಖುಷಿ ಖುಷಿಯಾಗಿ, ಬಬ್ಲಿ ಹುಡುಗಿಯಾಗಿರುತ್ತೇನೆ.

* ‘ಉಪ್ಪಿನ ಕಾಗದ’ದಲ್ಲಿ ನಿಮ್ಮ ಪಾತ್ರವೇನು?
ಬಿ.ಸುರೇಶ್‌ ಅವರು ನಿರ್ದೇಶನ ಮಾಡಿದ್ದಾರೆ. ನಾಗಾಭರಣ ಅವರ ಮಗಳಾಗಿ ಹಾಗೂ ಪತ್ರಕರ್ತೆಯಾಗಿ ಅಭಿನಯಿಸಿದ್ದೇನೆ. ತಂದೆ ನನ್ನನ್ನು ಬಿಟ್ಟು ಹೋಗಿರುತ್ತಾರೆ. ನಾನು ತಂದೆಯನ್ನು ಹುಡುಕಿಕೊಂಡು ಹೋಗುತ್ತೇನೆ. ಇಬ್ಬರೂ ಭೇಟಿಯಾದ ನಂತರ ನಡೆಯುವ ಕಥೆಯೇ ಸಿನಿಮಾದ ತಿರುಳು. ಇದೊಂದು ವಿಭಿನ್ನ ಪಾತ್ರವಾಗಿದ್ದು, ಆಡಂಬರವಿಲ್ಲದ ಪಾತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.