ADVERTISEMENT

ಅಭಿನಯ ನಿರಾಕರಿಸಿದ ಸಂಗೀತ ತಪಸ್ವಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 19:30 IST
Last Updated 13 ಏಪ್ರಿಲ್ 2018, 19:30 IST
ಶ್ರೇಯಾ ಘೋಷಾಲ್
ಶ್ರೇಯಾ ಘೋಷಾಲ್   

ಹಿರಿಯ ನಟಿ ರೇಖಾ ತಮ್ಮ ಬೊಗಸೆಯಲ್ಲಿ ಶ್ರೇಯಾ ಘೋಷಾಲ್ ಮುಖವನ್ನು ಹಿಡಿದುಕೊಂಡು, ‘ನೀನು ನಟಿಯಾಗಿಬಿಡು. ತುಂಬಾ ಸುಂದರವಾಗಿದ್ದೀಯ’ ಎನ್ನುತ್ತಾ ಹಣೆಗೊಂದು ಮುತ್ತಿಟ್ಟಿದ್ದರು. ಚೆನ್ನೈನ ಸ್ಟುಡಿಯೊದಲ್ಲಿ ತಮಿಳು ಹಾಡಿನ ರೆಕಾರ್ಡಿಂಗ್‌ ಮಾಡುತ್ತಿದ್ದಾಗ ನಿರ್ಮಾಪಕರು, ‘ನಿನ್ನ ಮುಖದಲ್ಲಿ ಶ್ರೀದೇವಿ ತೇಜಸ್ಸು ಇದೆ’ ಎಂದು ಶಹಬ್ಬಾಸ್‌ಗಿರಿಯನ್ನೂ ಕೊಟ್ಟಿದ್ದರು. ‘ನೀ ಹ್ಞೂಂ ಅನ್ನು. ನಾನೇ ನಿನ್ನನ್ನು ಹಾಕಿಕೊಂಡು ಸಿನಿಮಾ ಮಾಡುವೆ’ -ಹಿಂದಿ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹೀಗೊಂದು ಆಫರ್‌ ಮುಂದಿಟ್ಟು ಮಂದಹಾಸ ಬೀರಿದ್ದರು.

ಶ್ರೇಯಾ ಯಾವ ಹೊಗಳಿಕೆಗಳಿಗೂ ಕರಗಿ ನಟಿಯಾಗಲಿಲ್ಲ. ‘ಮಾ’ ಎಂಬ ಮೊದಲ ಮಾತು ಬಂದಾಗಿನಿಂದಲೂ ಸಂಗೀತವನ್ನು ರಕ್ತಗತ ಮಾಡಿಕೊಂಡಂತೆ ವರ್ತಿಸುತ್ತಾ ಬಂದಿರುವ ಅವರಿಗೆ ಅಭಿನಯ ಒಪ್ಪಿಕೊಂಡರೆ ಸಂಗೀತ ಮುಕ್ಕಾಗುತ್ತದೆ ಎಂಬ ಆತಂಕ.

ಬಂಗಾಳಿ ಮನೆತನದವರಾದರೂ ಶ್ರೇಯಾ ಬಾಲ್ಯದ ನೆನಪುಗಳಲ್ಲಿ ಇರುವುದು ರಾಜಸ್ಥಾನದ ರಾವತ್ ಭಾಟ ಎಂಬ ಊರು. ವಿಜ್ಞಾನಿಗಳು, ಎಂಜಿನಿಯರ್ ಗಳೇ ಹೆಚ್ಚಾಗಿದ್ದ ಬಂಧು-ಮಿತ್ರರನ್ನು ಹೊಂದಿದ್ದ ಶ್ರೇಯಾ ಕಿವಿ ಮೇಲೆ ಸದಾ ಬೀಳುತ್ತಿದ್ದುದು ಶಿಕ್ಷಣ ಕುರಿತ ಗಂಭೀರ ಮಾತು. ಜೊತೆಗೆ ಸಂಗೀತದ ಸ್ವರಗಳು. ವಿಜ್ಞಾನದ ಹಾದಿ ತುಳಿಯದೇ ಇದ್ದರೂ ನಾದದ ಲೋಕದಲ್ಲಿ ಅವರು ಕಳೆದುಹೋದರು.

ADVERTISEMENT

ಒಮ್ಮೆ ಅವರ ಸಂಗೀತದ ಶಿಕ್ಷಕಿ ದೊಡ್ಡ ಸಭಾಂಗಣಕ್ಕೆ ಕರೆದುಕೊಂಡು ಹೋಗಿ ನಿಲ್ಲಿಸಿ, ಹಾಡುವಂತೆ ಇಶಾರೆ ಮಾಡಿದರು. ಆಗಿನ್ನೂ ಶ್ರೇಯಾಗೆ ಐದು ವರ್ಷ. ‘ಔರ್ ಇಸ್ ದಿಲ್ ಮೆ ಕ್ಯಾ ರಖಾ ಹೈ’ ಹಿಂದಿ ಚಿತ್ರಗೀತೆಯ ಎರಡು ಸಾಲುಗಳ ಹಾಡಿದ್ದೇ ಪ್ರೇಕ್ಷಕರಿಂದ ಕರತಾಡನ. ಸಂಗೀತಕ್ಕೆ ಅಷ್ಟೊಂದು ಪ್ರೀತಿ ಹುಟ್ಟಿಸುವ ಶಕ್ತಿ ಇದೆ ಎಂದು ಶ್ರೇಯಾಗೆ ಮೊದಲು ಗೊತ್ತಾದದ್ದೇ ಆಗ.

ಮಗಳು ಶ್ರದ್ಧೆಯಿಂದ ಶಾಸ್ತ್ರೀಯ ಸಂಗೀತ ಕಲಿಯಬೇಕು ಎಂದು ಪೋಷಿಸಿದವರು ಅಪ್ಪ. 1997ರಲ್ಲಿ ಮುಂಬೈಗೆ ಸ್ಥಳಾಂತರಗೊಂಡ ಕುಟುಂಬ ಮಗಳಿಗಾಗಿ ಮಾಡಿದ ತ್ಯಾಗ ಸಣ್ಣದಲ್ಲ. ಶಾಸ್ತ್ರೀಯ ಸಂಗೀತದ ಕಲಿಕೆಯಲ್ಲದೆ ಕಲ್ಯಾಣ್ ಜೀ ಅವರಿಂದ ಜನಪ್ರಿಯ ಗೀತೆಗಳ ಪಾಠವನ್ನೂ ಕಲಿತುಕೊಂಡ ಶ್ರೇಯಾ, ಜನಮನ ಸೆಳೆದದ್ದು ‘ಸರೆಗಮ’ ಹಿಂದಿ ರಿಯಾಲಿಟಿ ಷೋ ಮೂಲಕ. ಹನ್ನೊಂದನೇ ವಯಸ್ಸಿನಲ್ಲೇ ಮನೆಮಾತಾದ ಹುಡುಗಿ, ಹಾರ್ಮೋನಿಯಂ ನುಡಿಸುತ್ತಾ ಹಿಂದೂಸ್ತಾನಿ ಸಂಗೀತದ ಅಲೆಗಳನ್ನು ತನ್ಮಯಳಾಗಿ ಹಿಡಿಯುವುದನ್ನು ಕಂಡ ಅನೇಕರು ತಲೆದೂಗಿದರು.

ಸಂಜಯ್ ಲೀಲಾ ಬನ್ಸಾಲಿ ಅವರ ಮನೆಗೇ ಹುಡುಕಿಕೊಂಡು ಹೋದರು. ‘ದೇವದಾಸ್’ ಹಿಂದಿ ಸಿನಿಮಾಗೆ ಶಾಸ್ತ್ರೀಯ ಧಾಟಿಯ ಹಾಡೊಂದನ್ನು ಹಾಡುವ ಅವಕಾಶ ಇತ್ತರು. ಐಶ್ವರ್ಯಾ ರೈಗೆ ದನಿಯಾಗುವ ಮೊದಲ ಅವಕಾಶ ಸಿಕ್ಕಾಗ ಶ್ರೇಯಾಗೆ ಆಕಾಶ ಮೂರೇ ಗೇಣು. ಆ ಸಿನಿಮಾ ಹಾಗೂ ಹಾಡುಗಳು ಯಶಸ್ವಿಯಾದವು. ಇನ್ನಷ್ಟು ಅವಕಾಶಗಳು ಸಿಕ್ಕವು. ಹಾಗೆಂದು ಎಲ್ಲವೂ ಸಲೀಸಾಗಿರಲಿಲ್ಲ.

ತಾವು ಹಾಡಿದ ಕೆಲವು ಗೀತೆಗಳನ್ನು ಟ್ರ್ಯಾಕ್ ಆಗಿ ಬಳಸಿಕೊಂಡು, ಬೇರೆಯವರಿಂದ ಹಾಡಿಸಿದ ಗೋಸುಂಬೆ ಸಂಗೀತ ನಿರ್ದೇಶಕರನ್ನು ಕಂಡರು. ನಿಗದಿಪಡಿಸಿದ ಸಂಭಾವನೆಗೆ ಕೈಎತ್ತಿದ ರೆಕಾರ್ಡಿಂಗ್ ಸ್ಟುಡಿಯೊ ಮಾಲೀಕರ ಅವಕಾಶವಾದಿತನ ನೋಡಿ ತಲೆಮೇಲೆ ಕೈಹೊತ್ತರು. ಶಿಸ್ತಿನ ಬದುಕು ನಡೆಸುತ್ತಿದ್ದ ತಮ್ಮ ತಂದೆ ಸಣ್ಣ ಮೊತ್ತದ ಚೆಕ್ ಪಡೆಯಲು ಏಳೆಂಟು ಸಲ ಚಪ್ಪಲಿ ಸವೆಸಿದ್ದನ್ನು ಕಂಡು ಕಣ್ಣೀರಿಟ್ಟಿದ್ದೂ ಇದೆ.

ಮುಂಬೈನಲ್ಲಿ ನಟನೆಯ ಮೋಹಕ್ಕೆ ಸಿಲುಕುವ ವಾರಗೆಯ ಹುಡುಗಿಯರ ನಡುವೆ ಶ್ರೇಯಾ ಸಂಗೀತ ತಪಸ್ವಿಯ ತರಹ ನಿಂತರು. ದುಃಖವಾಗಲಿ, ಸುಖವಾಗಲಿ; ಕಣ್ಣುಮುಚ್ಚಿ ಹಾಡತೊಡಗಿದರೆ ತಮ್ಮದೇ ನಾದಲೋಕದ ಸೃಷ್ಟಿ. ಹಾಡಿನಿಂದ ಬಂದ ಕಷ್ಟಗಳನ್ನು ನುಂಗಿಕೊಳ್ಳಲೂ ಸಂಗೀತದ ಹಾದಿಯನ್ನೇ ಆರಿಸಿಕೊಂಡದ್ದು ಅವರ ಅಚಲ ನಿಲುವಿಗೆ ಸಾಕ್ಷಿಯಾಗಿತ್ತು.

ನಾಲ್ಕೈದು ವರ್ಷಗಳ ಕಲ್ಲು-ಮುಳ್ಳಿನ ಹಾದಿ. ಆಮೇಲೆ ಶ್ರೇಯಾ ಕನ್ನಡ, ತಮಿಳು, ತೆಲುಗು, ಮಲಯಾಳ, ಬಂಗಾಳಿ, ಪಂಜಾಬಿ ಗುಜರಾತಿ, ಭೋಜ್ ಪುರಿ ಎಲ್ಲ ಭಾಷೆಗಳಲ್ಲೂ ಹಾಡಿದರು. ಹಿಂದಿಯಲ್ಲಿ ಸಾಹಿತ್ಯ ಬರೆದುಕೊಂಡು, ಸಾಲುಗಳ ಅರ್ಥ, ಉಚ್ಚಾರದ ಜ್ಞಾನ ಸಂಪಾದಿಸಿಯೇ ಹಾಡಿದ್ದು ಹೆಗ್ಗಳಿಕೆ.

ಭಾಷೆಗಳ ಗಡಿ ಮೀರಿದ ಅವರ ಕಂಠ ನೋಡಿ ಕನ್ನಡದ ನಿರ್ದೇಶಕ ಯೋಗರಾಜ ಭಟ್ಟರು, ‘ಆಕೆ ಶ್ರುತಿಯ ತಲೆಮೇಲೆ ಕುಳಿತು ಹಾಡುತ್ತಾಳೆ’ ಎಂಬ ಕಾಂಪ್ಲಿಮೆಂಟ್ ಕೊಟ್ಟಿದ್ದರು. ಈಗಲೂ ಶ್ರೇಯಾ ಗಾಯಕಿಯಾಗಿಯೇ ಉಳಿದಿರುವುದು ಸಂಗೀತ ಸರಸ್ವತಿಯ ಆರಾಧಕಿ ಎನ್ನುವ ಕಾರಣಕ್ಕೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.