ADVERTISEMENT

ಆಯುರ್ವೇದದಲ್ಲಿ ಸರ್ಜರಿ ಇದೆಯೇ?

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2011, 19:30 IST
Last Updated 11 ಮಾರ್ಚ್ 2011, 19:30 IST

ವೈ ದ್ಯ ಸುಶ್ರುತನನ್ನು ‘ಫಾದರ್ ಆಫ್ ಇಂಡಿಯನ್ ಸರ್ಜರಿ’ ಎಂದು ಕರೆಯುತ್ತಾರೆ. ಈ ಬಿರುದನ್ನು ಅವರು ಶಲ್ಯತಂತ್ರದಲ್ಲಿ ಅಂದರೆ ಸರ್ಜರಿಯಲ್ಲಿ ಮಾಡಿರುವ ಅಪಾರ ಕೊಡುಗೆಗೆ ನೀಡಲಾಗಿದೆ.

ಸುಶ್ರುತ ಮತ್ತು ಶಲ್ಯತಂತ್ರಕ್ಕೆ ಇಷ್ಟು ಮಹತ್ತರವಾದ ಸ್ಥಾನ ಇದ್ದರೂ - ಆಯುರ್ವೇದ ಮತ್ತು ಶಲ್ಯತಂತ್ರ ಎಂದು ಮಾತಾಡುವಾಗ ವೈದ್ಯರಂಗದಲ್ಲಿರುವ ಜನರು, ಸುಶಿಕ್ಷಿತ ಜನರು ಹಾಗೂ ಸಾಮಾನ್ಯ ಜನರು  ವರ್ತಿಸುವ ರೀತಿ ಒಂದೇ ಆಗಿದೆ - ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಬರುತ್ತವೆ. ಮೊಟ್ಟಮೊದಲ ಪ್ರಶ್ನೆ ಏನೆಂದರೆ - ಆಯುರ್ವೇದದಲ್ಲಿ  ಸರ್ಜರಿ ಇದೆಯೇ? ಅಥವಾ ಆಯುರ್ವೇದ ವೈದ್ಯರಿಗೆ ಸರ್ಜರಿ ಗೊತ್ತಿದೆಯೇ?

ಇಂತಹ ಪ್ರಶ್ನೆಗಳು - ಒಬ್ಬ ಆಯುರ್ವೇದ ಶಲ್ಯತಂತ್ರಜ್ಞನಿಗೆ - ಮನ ನೋಯಿಸುವ ವಿಷಯವಾದರೂ, ಸಹಜ ಹಾಗೂ ವಾಸ್ತವ ಕೂಡ. ಇದರಲ್ಲಿ ಜನರ ಅಜ್ಞಾನ ಹಾಗೂ ಆಯುರ್ವೇದ ವೈದ್ಯರ ತಪ್ಪೂ ಇದೆ. ಈ ವಿಷಯದ ಬಗ್ಗೆ ವಿವಿಧ ಕ್ಷೇತ್ರಗಳ ಜನರಿಗೆ ಅರಿವು ಮೂಡಿಸುವಂತಹ ಜವಾಬ್ದಾರಿ ಶಲ್ಯತಂತ್ರದ ವೈದ್ಯರದ್ದಾಗಿದೆ.

ಮುಂಚೆ ರಾಜರ ಕಾಲದಲ್ಲಿ, ಅವರ ಸಂಸ್ಥಾನದಲ್ಲಿ ಶಲ್ಯತಂತ್ರಜ್ಞರಿಗೆ ಅಗ್ರ ಸ್ಥಾನ ನೀಡಲಾಗಿತ್ತು. ಇವರು ಸಾಮಾನ್ಯ ರೋಗಗಳ ಚಿಕಿತ್ಸೆ ಅಲ್ಲದೆ ಯುದ್ಧದಲ್ಲಿ ಆಗುವ ಯಾವುದೇ ತರಹದ ಗಾಯಗಳು, ಅದರಿಂದ ಆಗುವ ರಕ್ತಸ್ರಾವ, ಮೂಳೆ ಮುರಿತ, ಸಂಧಿಮೂಳೆ ಜಾರುವಿಕೆ (ಡಿಸ್ಲೊಕೇಶನ್), ಗ್ಯಾಂಗ್ರೀನ್ ಮುಂತಾದ ರೋಗಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುತ್ತಿದ್ದರು. ಆ ಕಾಲದಲ್ಲಿ ಯುದ್ಧದಲ್ಲಿ ಬಹಳಷ್ಟು ಸೈನಿಕರು  ಮೂಗು, ಕಿವಿ, ಕೈ-ಕಾಲು ಬೆರಳುಗಳನ್ನು ಕಳೆದುಕೊಳ್ಳುತ್ತಿದ್ದರು. ಇದಲ್ಲದೆ ಶಿಕ್ಷೆಯ ರೂಪದಲ್ಲಿ ಕೂಡಾ ಕಿವಿ, ಮೂಗು ಇತ್ಯಾದಿಗಳನ್ನು ಕತ್ತರಿಸಲಾಗುತ್ತಿತ್ತು.

ಸುಶ್ರುತಾಚಾರ್ಯರು ಆ ಕಾಲದಲ್ಲೇ ಇದನೆಲ್ಲಾ ಸರಿಪಡಿಸುತ್ತಿದ್ದರು (ಕಾಸ್ಮೆಟಿಕ್ ರೀಕನ್‌ಸ್ಟ್ರಕ್ಷನ್). ದೇಹದ ಬೇರೆ ಕಡೆಯಿಂದ ತ್ವಚೆಯನ್ನು ತೆಗೆದು ಕತ್ತರಿಸಿದ ಭಾಗವನ್ನು ಪುನಃ ರಚಿಸಲಾಗುತ್ತಿತ್ತು. ಇದನ್ನು ಇಂದಿನ ವೈದ್ಯ ಶಾಸ್ತ್ರದಲ್ಲಿ  ‘ಪ್ಲಾಸ್ಟಿಕ್ ಸರ್ಜರಿ’ ಎಂದು ಕರೆಯುತ್ತಾರೆ. ಆಗಿನ ಕಾಲದಲ್ಲಿ ಇಂತಹ ಸರ್ಜರಿಗಳನ್ನು ಬಹಳ ಸೂಕ್ಷ್ಮವಾಗಿ ಮಾಡುತ್ತಿದ್ದರು. ಇಂತಹ ಕತ್ತರಿಸಿಹೋದ ಭಾಗದಿಂದ ಆಗುವ ರಕ್ತಸ್ರಾವವನ್ನು ಕೂಡ ಹೊಲಿಗೆ (ಸೂಚರ್) ಹಾಕಿ ನಿಲ್ಲಿಸುತ್ತಿದ್ದರು. ಸುಶ್ರುತಾಚರ್ಯರು ಎಲ್ಲಾ ಶಸ್ತ್ರಕರ್ಮಗಳನ್ನು ಮಾಡಲು ತಮ್ಮದೇ ಆದ ಶಸ್ತ್ರಗಳನ್ನು ತಯಾರಿಸುತ್ತಿದ್ದರು. ಈ ಶಸ್ತ್ರಗಳನ್ನು ಚಿನ್ನ, ಬೆಳ್ಳಿ, ತಾಮ್ರ, ಪಂಚಲೋಹ ಮುಂತಾದ ವಸ್ತುಗಳಿಂದ ಮಾಡುತ್ತಿದ್ದರು. ಶಸ್ತ್ರಗಳನ್ನು ಬಾಳಿಕೆ ಬರುವಂತೆ ಮಾಡುವ ವಿಧಾನ(ಟೆಂಪರಿಂಗ್), ಅವುಗಳನ್ನು ಕ್ರಿಮಿ ಮುಕ್ತ (ಡಿಸ್-ಇನ್ಫೆಕ್ಟ್) ಮಾಡುವ ವಿಧಾನವನ್ನು ಕೂಡ ತಿಳಿಸಿಕೊಟ್ಟಿದ್ದಾರೆ.

ಶಸ್ತ್ರಕರ್ಮ ಮಾಡಲು ಮಾನವ ಶರೀರ ರಚನೆಯ ಜ್ಞಾನವು ಅತಿ ಅವಶ್ಯಕ. ಹಾಗಾಗಿ ಶಲ್ಯತಂತ್ರಜ್ಞರಿಗೆ ಮಾನವ ಶವ ಛೇದನ ಮಾಡುವುದು ಕಡ್ಡಾಯವಾಗಿತ್ತು (ಹ್ಯುಮನ್ ಕೆಡಾವರ್ ಡಿಸೆಕ್ಷನ್). ಈ ವೈಜ್ಞಾನಿಕ ತಿಳಿವಳಿಕೆಯಿಂದಾಗಿ ವೈದ್ಯರು ಮುರಿದ ಮೂಳೆ ಮತ್ತು ಸಂಧಿಗಳನ್ನು ಯಾವುದೇ ವಿಕಾರವಿಲ್ಲದೆ ಸರಿಯಾಗಿ ಜೋಡಿಸುತ್ತಿದ್ದರು. ಸುಶ್ರುತಾಚಾರ್ಯರ ಈ ಪದ್ಧತಿ ಎಷ್ಟು ವೈಜ್ಞಾನಿಕವಾಗಿತ್ತು ಅಂದರೆ, ಈಗಿನ ಆಧುನಿಕ ಮೂಳೆ ತಜ್ಞರು ಕೂಡ ಅದೇ ಪದ್ಧತಿಯನ್ನು ಪಾಲಿಸುತ್ತಾರೆ. ಒಂದೇ ಒಂದು ವ್ಯತ್ಯಾಸವೆಂದರೆ ಭಾಷೆ - ಆಗ ಎಲ್ಲವೂ ಸಂಸ್ಕೃತದಲ್ಲಿ ಇತ್ತು, ಈಗ ಎಲ್ಲವೂ ಆಂಗ್ಲ ಭಾಷೆಯಲ್ಲಿದೆ.

ಆಯುರ್ವೇದ ಗ್ರಂಥಗಳಲ್ಲಿ ಗಾಯಗಳನ್ನು ಸಂಪೂರ್ಣವಾಗಿ (ಯಾವುದೇ ವಿಕಾರವಿಲ್ಲದೆ) ಸರಿಪಡಿಸುವುದು, ಗ್ಯಾಂಗ್ರೀನ್ ಆದ ಅಂಗವನ್ನು ಕತ್ತರಿಸಿಹಾಕುವುದು(ಆಂಪ್ಯುಟೇಷನ್), ಗಾಯವಾದ ಕರುಳನ್ನು ಶಸ್ತ್ರ ಚಿಕಿತ್ಸೆಯಿಂದ ಪುನಃ ಜೋಡಣೆ ಮಾಡುವುದು ಮುಂತಾದ ಹಲವಾರು ಸರ್ಜರಿಗಳ ಮಾಹಿತಿ ದೊರೆಯುತ್ತದೆ. ಇದನ್ನೆಲ್ಲಾ ನೋಡುವಾಗ ಆಯುರ್ವೇದ ಶಲ್ಯತಂತ್ರಜ್ಞರ ವೈಜ್ಞಾನಿಕ ದೃಷ್ಟಿಕೋನದ ಅರಿವು ಆಗುತ್ತದೆ.

ಹಾಗಾಗಿ ಆಯುರ್ವೇದದಲ್ಲಿ ಶಲ್ಯತಂತ್ರಕ್ಕೆ (ಶಸ್ತ್ರ ಚಿಕಿತ್ಸೆ) ಬಹಳ ಉತ್ತಮವಾದ ಸ್ಥಾನಮಾನವಿತ್ತು. ಶಸ್ತ್ರ ಚಿಕಿತ್ಸೆ ಮಾಡುವ ವೈದ್ಯರಿಗೂ ಸಮಾಜದಲ್ಲಿ ಎತ್ತರವಾದ ಸ್ಥಾನವಿತ್ತು.  ವಿದೇಶಿಯರ ದಾಳಿಯಿಂದ, ಅಹಿಂಸಾವಾದಿಗಳ ಪ್ರಭಾವದಿಂದ, ಶವ ಛೇದನದ ವಿರೋಧದಿಂದ, ಶಲ್ಯತಂತ್ರ ಗ್ರಂಥಗಳ ನಾಶದಿಂದಾಗಿ ಕ್ರಮೇಣ ಶಲ್ಯತಂತ್ರ ನೇಪಥ್ಯಕ್ಕೆಸರಿಯಿತು. ಇದಕ್ಕೆ ಸರಿಯಾಗಿ ಶಲ್ಯತಂತ್ರಜ್ಞರಿಗೆ ಪರಿಣಾಮಕಾರಿಯಾದ ಅರಿವಳಿಕೆ (ಅನಸ್ತೆಷಿಯಾ) ದ್ರವ್ಯದ ಸೌಲಭ್ಯವಿರಲಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಆಯುರ್ವೇದದಲ್ಲಿ ಶಲ್ಯತಂತ್ರದ ಬೆಳವಣಿಗೆ ಬಹಳಷ್ಟು ಕುಂಠಿತವಾಯಿತು.

ಶಲ್ಯತಂತ್ರದ ಬಗ್ಗೆ ಇರುವ ಅಜ್ಞಾನ ಅಥವಾ ಅಲ್ಪ ಜ್ಞಾನಕ್ಕೆ ಜನರ ಮನೋಭಾವ ಕೂಡ ಒಂದು ಕಾರಣ. ಪಾಶ್ಚಾತ್ಯ ದೇಶದಿಂದ ಬರುವಂಥ ಜ್ಞಾನ ಮಾತ್ರ ಸರಿಯಾದದ್ದು ಮತ್ತು ವೈಜ್ಞಾನಿಕ ಎಂಬಂತಹ ಧೋರಣೆಯೂ ಇದಕ್ಕೆ ಕಾರಣ.  ‘ನಾವು ಯಾವತ್ತೂ ಆಯುರ್ವೇದದ ಔಷಧ ತಿಂದಿಲ್ಲ. ಹಾಗಾಗಿ ಈಗ ಈ ಔಷಧವನ್ನು ತಿಂದರೆ ನಮ್ಮ ದೇಹದ ಮೇಲೆ ಯಾವುದೇ ದುಷ್ಪರಿಣಾಮ ಆಗೋದಿಲ್ವಾ?’ ಎಂಬ  ಪ್ರಶ್ನೆಯನ್ನು ಹಲವಾರು ಜನರು ಕೇಳುತ್ತಾರೆ. ಪಾಶ್ಚಾತ್ಯ ವೈದ್ಯ ಪದ್ಧತಿಯ ಔಷಧಿಗಳಲ್ಲಿ  ಅಡ್ಡ ಪರಿಣಾಮಗಳು ಹೆಚ್ಚು, ಜನರಿಗೆ ಅವುಗಳ ರಾಸಾಯನಿಕ ಸಂಘಟನೆ ಹಾಗೂ ಅದರ ಔಷಧೀಯ ಗುಣ-ಕರ್ಮಗಳ ಪರಿಚಯ ಇರುವುದಿಲ್ಲ ಮತ್ತು ಅಲೋಪತಿ ವೈದ್ಯರ ಬಳಿ ಅವರು ಈ ಔಷಧಿಗಳ ಅಡ್ಡ ಪರಿಣಾಮಗಳ ಬಗ್ಗೆ ಗೊತ್ತಿದ್ದೂ ಪ್ರಶ್ನಿಸೋದಿಲ್ಲ.

ಎಲ್ಲಾ ವೈದ್ಯಕೀಯ ಪದ್ಧತಿಯಲ್ಲಿ, ಅಲೋಪತಿ, ಆಯುರ್ವೇದ, ಹೊಮಿಯೋಪತಿ ಮುಂತಾದ ಹಲವಾರು ಪದ್ಧತಿಗಳಲ್ಲಿ, ಅವುಗಳದೇ ಆದ ಮಿತಿಗಳು ಇವೆ. ಕೆಲವು ಕಾಯಿಲೆಗಳಿಗೆ/ಪರಿಸ್ಥಿತಿಗಳಿಗೆ ಒಂದು ಪದ್ಧತಿಯಲ್ಲಿ ಪರಿಣಾಮಕಾರಿಯಾದ ಚಿಕಿತ್ಸೆ ಇರುತ್ತದೆ, ಕೆಲವು ಕಾಯಿಲೆಗಳಿಗೆ ಅಷ್ಟೊಂದು ಪರಿಣಾಮಕಾರಿ ಚಿಕಿತ್ಸೆ ಇರುವುದಿಲ್ಲ. ಇನ್ನೊಂದು ಚಿಕಿತ್ಸಾ ಪದ್ಧತಿಯ ಬಗ್ಗೆ ಏನೂ ಗೊತ್ತಿಲ್ಲದೇ - ಆ ವೈದ್ಯರನ್ನು ಹಾಗೂ ಪದ್ಧತಿಯನ್ನು ಹೀಯಾಳಿಸುವುದು ಬಹಳ ತಪ್ಪು. ಮುಂದಿನ ಪ್ರಶ್ನೆ - ಆಯುರ್ವೇದದ ಪುಸ್ತಕಗಳಲ್ಲಿ ಹೇಳಿದಂತಹ ಯಾವುದಾದರೂ ಶಸ್ತ್ರಕರ್ಮ ಈಗಲೂ ಮಾಡುತ್ತಾರೆಯೇ? ಇಲ್ಲಾ ಪೂರ್ತಿಯಾಗಿ ನಶಿಸಿ ಹೋಗಿದೆಯೇ?

ಪುಸ್ತಕಗಳಲ್ಲಿ ಹೇಳಿದ ಹಲವಾರು ಸರ್ಜರಿಗಳಲ್ಲಿ, ಮೂಲವ್ಯಾಧಿ (ಪೈಲ್ಸ್, ಫಿಸ್ತುಲ, ಫಿಷರ್), ನಾಡಿ ವ್ರಣಗಳಿಗೆ ( ಸೈನಸ್-ಪೈಲೊನಿಡಲ್ ಸೈನಸ್)ಹೇಳಿದ ಕ್ಷಾರ-ಸೂತ್ರ ಚಿಕಿತ್ಸೆ, ಫ್ರಾಕ್ಚರ್‌ಗಳಿಗೆ ಚಿಕಿತ್ಸೆ, ವಾಸಿಯಾಗದ ಗಾಯಗಳಿಗೆ ಹೇಳಿದ (ನಾನ್-ಹೀಲಿಂಗ್ ಅಲ್ಸರ್)ಚಿಕಿತ್ಸೆ, ಅಗ್ನಿಕರ್ಮ, ಜಲೋಕಾವಚರಣ ( ಚಿಕಿತ್ಸೆಗೆ ಜಿಗಣೆಯ ಪ್ರಯೋಗ) ಮುಂತಾದ ಹಲವಾರು ಶಲ್ಯತಂತ್ರದ ಚಿಕಿತ್ಸೆಗಳು ಇಂದಿಗೂ ಜೀವಂತವಾಗಿವೆ.

ಆಯುರ್ವೇದದ ಶಲ್ಯತಂತ್ರಜ್ಞರು ಇದನೆಲ್ಲಾ ಯಶಸ್ವಿಯಾಗಿ ಮಾಡುತ್ತಾ ಇದ್ದಾರೆ. ಆದರೆ ಇದರ ಬಗ್ಗೆ ಜನರಿಗೆ ಮಾಹಿತಿ ದೊರಕದೇ ಇರುವ ಕಾರಣ ಅವರಿಗೆ ಆಯುರ್ವೇದದ ಈ ಮುಖದ ಅರಿವೇ ಇಲ್ಲ. ಈ ಅರಿವು ಮೂಡಿಸುವ ಹೊಣೆ ಶಲ್ಯತಂತ್ರಜ್ಞರದಾಗಿದೆ. ಆಯುರ್ವೇದ ಪದ್ಧತಿ, ಕೇವಲ - ಅಡುಗೆ ಮನೆಯಲ್ಲಿ ಸಿಗುವ ಕೊತ್ತಂಬರಿ, ಜೀರಿಗೆ, ಮೆಂತೆಯನ್ನು ಆರೋಗ್ಯ ರಕ್ಷಣೆಗಾಗಿ ಹೇಗೆ ಉಪಯೊಗಿಸಬೇಕು ಅನ್ನುವ ಮಾಹಿತಿ ನೀಡೋದಿಲ್ಲ, ಇದು ಹಲವಾರು ರೋಗಗಳಿಗೆ ವೈಜ್ಞಾನಿಕ ರೀತಿಯಲ್ಲಿ ಉಪಶಮನವನ್ನು ನೀಡುತ್ತದೆ. ಈ ಉಪಶಮನದ ಹಾದಿಯಲ್ಲಿ ಆಯುರ್ವೇದದ ಶಲ್ಯತಂತ್ರಜ್ಞರ ಪಾತ್ರ ಕೂಡಾ ಮುಖ್ಯವಾಗಿದೆ.

ಶಲ್ಯತಂತ್ರಕ್ಕೆ ಇಷ್ಟೆಲ್ಲ ತೊಂದರೆಗಳು ಇದ್ದರೂ, ಗ್ರಂಥಗಳಲ್ಲಿ ಹೇಳಿರುವ ಹಲವಾರು ಶಸ್ತ್ರ ಕರ್ಮಗಳಲ್ಲಿ ಪ್ರಮುಖವಾದ  ‘ಕ್ಷಾರ ಕರ್ಮ’ ಇಂದಿಗೂ ವೈಜ್ಞಾನಿಕ ಜಗತ್ತಿನಲ್ಲಿ ತನ್ನದೇ ಆದ  ಪ್ರಮುಖ ಸ್ಥಾನವನ್ನು ಉಳಿಸಿಕೊಂಡಿದೆ.

ಕ್ಷಾರಕರ್ಮದಲ್ಲಿ ಕ್ಷಾರ ಎಂಬ ದ್ರವ್ಯವನ್ನು ರೋಗನಿವಾರಿಸಲು ಉಪಯೋಗಿಸುತ್ತಾರೆ. ಈ ಕ್ಷಾರವು ವಿವಿಧ ಆಯುರ್ವೇದದ ಔಷಧೀಯ ಗಿಡಗಳ ಕ್ಷಾರೀಯ ಅಂಶ (ಆಲ್ಕಲೈನ್ ಎಕ್ಸ್‌ಟ್ರಾಕ್ಟ್). ಕ್ಷಾರವನ್ನು ಬಾಹ್ಯ ಮತ್ತು ಆಭ್ಯಂತರ ಪ್ರಯೋಗಕ್ಕೆ ಅಳವಡಿಸಬಹುದು. ಇದರ ಬಾಹ್ಯ ಪ್ರಯೋಗ ವೈಜ್ಞಾನಿಕವಾಗಿ ಆರದ ಗಾಯಗಳಿಗೆ (ನಾನ್ ಹೀಲಿಂಗ್ ಅಲ್ಸರ್), ಪೈಲ್ಸ್, ಫಿಷರ್, ಫಿಸ್ತುಲಾದಲ್ಲಿ ಆಗುತ್ತದೆ.

ಈ ಕ್ಷಾರಕರ್ಮ ಬಹಳ ಪರಿಣಾಮಕಾರಿಯಾಗಿದ್ದರೂ, ಮಧ್ಯ ಹಲವಾರು ವರ್ಷ ಲುಪ್ತವಾಗಿತ್ತು. ಇತ್ತೀಚಿನ ದಿನಗಳಲ್ಲಿ ಹಲವಾರು ಶಲ್ಯತಂತ್ರಜ್ಞರ ನಿರಂತರ ಕಠಿಣ ಪ್ರಯತ್ನದಿಂದಾಗಿ ಈ ಚಿಕಿತ್ಸೆಯು ತನ್ನ ಅಸ್ತಿತ್ವವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ. ಹಲವಾರು ವೈಜ್ಞಾನಿಕ ಪರೀಕ್ಷೆಗಳ ನಂತರ ಈ ಚಿಕಿತ್ಸೆಯನ್ನು ಆಧುನಿಕ ಜಗತ್ತಿಗೆ ಒಂದು ಪರಿಣಾಮಕಾರಿ, ಅಪಾಯರಹಿತ ಮತ್ತು ಆಧುನಿಕ ಸರ್ಜರಿಗೆ ಒಂದು ಮಾದರಿ ಪರ್ಯಾಯ ಚಿಕಿತ್ಸೆ ಎಂದು ಸ್ಥಾಪಿಸಲಾಗಿದೆ.

ಹಾಗಾಗಿ ಆ ಕಾಲದಲ್ಲಿ ಸುಶ್ರುತಾಚಾರ್ಯರು ಹಾಕಿದ ಶಲ್ಯತಂತ್ರದ ಬುನಾದಿಯ ಸಹಾಯದಿಂದ ಬೆಳೆದು ಇಂದು ಕ್ಷಾರ ಕರ್ಮ (ಕ್ಷಾರ ಸೂತ್ರ) ಚಿಕಿತ್ಸೆಯು ಆಧುನಿಕ ಜಗತ್ತಿನಲ್ಲಿ ಅತೀ ಎತ್ತರಕ್ಕೆ ಏರಿ ಆಯುರ್ವೇದಕ್ಕೆ ಹಾಗೂ ಆಯುರ್ವೇದ ವೈದ್ಯರಿಗೆ ಹೆಮ್ಮೆತಂದು ಕೊಟ್ಟಿದೆ.
ಲೇಖಕರ ದೂರವಾಣಿ: 9845407543

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.