ADVERTISEMENT

ಇಲ್ಲ ಅನ್ನೋದು ಹೀಗೆ...

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2017, 19:30 IST
Last Updated 19 ಡಿಸೆಂಬರ್ 2017, 19:30 IST
ಇಲ್ಲ ಅನ್ನೋದು ಹೀಗೆ...
ಇಲ್ಲ ಅನ್ನೋದು ಹೀಗೆ...   

‘ಮಾತು ಬಲ್ಲವನಿಗೆ ಜಗಳವಿಲ್ಲ’ ಎಂಬ ಮಾತಿನ ಆಳ–ವಿಸ್ತಾರ ಬಹಳ ದೊಡ್ಡದು. ಎದುರಿಗಿರುವ ವ್ಯಕ್ತಿಯ ಮನಸ್ಸಿಗೆ ನೋವಾಗದಂತೆ ನಿರಾಕರಣೆಯನ್ನು ದಾಟಿಸುವಾಗ ಈ ಮಾತು ನೆನಪಾಗದಿರಲು ಸಾಧ್ಯವಿಲ್ಲ. ವಿಶೇಷವಾಗಿ, ಮಕ್ಕಳು ’ಬೇಡ‘, ‘ಇಲ್ಲ’, ‘ಇಷ್ಟ ಇಲ್ಲ’ ಎಂದು ಹೇಳಿದರೆ ದೊಡ್ಡವರಿಗೆ ಮುಜುಗರವಾಗುವುದು, ಸ್ವಾಭಿಮಾನಕ್ಕೆ ಧಕ್ಕೆಯಾಗುವುದು ಸಹಜ. ನಿರಾಕರಣೆಯ ಗುಣವೇ ಅಂತಹುದು. ಹಾಗಿದ್ದರೆ, ದೊಡ್ಡವರಿಗೆ ಮುಜುಗರವಾಗದಂತೆ ನಿರಾಕರಣೆ ವ್ಯಕ್ತಪಡಿಸಲು ಒಂದು ಶಿಸ್ತು ಬೇಕು ಎಂದಾಯಿತು!

‘ಮನೆಗೆ ಐಸ್‌ಕ್ರೀಂ ತಂದಿದ್ವಿ. ನೀನೂ ತಗೋ ಪುಟ್ಟ’

‘ಅಯ್ಯೋ ಬೇಡ ಆಂಟಿ, ನಾನು ತಿನ್ನಲ್ಲ’

ADVERTISEMENT

‘ಹಾಗೆಲ್ಲಾ ಹೇಳ್ಬಾರ್ದು ತಗೋ’

‘ಬೇಡ ಅಂದ್ನಲ್ಲ ಆಂಟಿ ನಂಗೆ ಇಷ್ಟ ಇಲ್ಲ ಅಷ್ಟೇ’.

ಪುಟ್ಟನ ಕಡ್ಡಿಮುರಿದಂಥ ಈ ಮಾತು ಆಂಟಿಗೆ ಸಹಜವಾಗಿಯೇ ಇರುಸುಮುರುಸು ಉಂಟುಮಾಡಿತು. ಪುಟ್ಟನ ಅಮ್ಮನೇ ಇದನ್ನೆಲ್ಲಾ ಹೇಳಿಕೊಟ್ಟಿರೋದು, ತಮ್ಮ ಮೇಲೆ ಅವರಿಗೇನೋ ಅಸಮಾಧಾನ ಇರಬೇಕು ಎಂದು ತೀರ್ಮಾನಿಸಿ ಪುಟ್ಟನ ಅಮ್ಮನೊಂದಿಗೆ ಆಂಟಿ ಮಾತೇ ಬಿಟ್ಟುಬಿಟ್ಟರು.

‘ಯಾರೂ ಏನೇ ತಿನ್ನಲು ಕೊಟ್ಟರೂ ತಗೋಬಾರ್ದು’, ‘ಯಾರಾದ್ರೂ ಏನಾದ್ರೂ ಕೊಡಲು ಬಂದ್ರೆ ಬೇಡ ಅಂತ ಹೇಳ್ಬೇಕು’ ಎಂಬುದು ಅಮ್ಮ ಪುಟ್ಟನಿಗೆ ಹೇಳಿದ ಕಿವಿಮಾತು. ಎಚ್ಚರಿಕೆ ಅಂದುಕೊಳ್ಳಿ. ಆದರೆ ಈ ನಿರಾಕರಣೆಯನ್ನು ಪುಟ್ಟ ಹೇಳಿದ ಧಾಟಿ ಒಂದು ಮನಸ್ತಾಪಕ್ಕೆ ಕಾರಣವಾಯಿತು.

ಹಾಗಿದ್ದರೆ, ಪುಟ್ಟ ಅದೇ ಮಾತನ್ನು ಹೇಗೆ ದಾಟಿಸಬೇಕಿತ್ತು? ‘ಆಂಟಿ, ಈಗಷ್ಟೇ ತಿಂಡಿ ತಿಂದ್ಕೊಂಡು ಬಂದಿದ್ದೀನಿ’ ಎಂದೋ, ‘ಆಂಟಿ ನಾನು ಈಗ ಐಸ್‌ಕ್ರೀಂ ತಿನ್ನಲ್ಲ’ ಎಂದೋ, ‘ಈಗ ಬೇಡ’ ಎಂದೋ ಹೇಳಿದ್ದಿದ್ದರೆ ಪರಿಣಾಮ ಕೆಟ್ಡದಾಗುತ್ತಿರಲಿಲ್ಲ.

ಪುಟ್ಟ ಹಾಗೆ ಹೇಳಿದರೆ ಸುಳ್ಳು ಹೇಳಿದಂತಾಗುವುದಿಲ್ಲವೇ ಎಂಬ ಪ್ರಶ್ನೆ ಎದುರಾಗುವುದೂ ಸಹಜವೇ. ಆದರೆ ತಂದೆ ತಾಯಿಯ ಅನುಮತಿ ಇಲ್ಲದೆ, ಗಮನಕ್ಕೆ ತರದೆ ಆಂಟಿ ಕೊಟ್ಟಿದ್ದನ್ನು ತಿಂದರೆ, ಆಗಂತುಕರ ಕೈಯಿಂದಲೂ ತಿನ್ನುವ ಪರಿಪಾಠ ಬೆಳೆಯುತ್ತದೆ ಎಂಬುದು ಹೆತ್ತವರ ಲೆಕ್ಕಾಚಾರ. ಇದು ಮಕ್ಕಳ ಸುರಕ್ಷತೆಯೂ ಹೌದು.

ಇಂತಹುದೇ ಸನ್ನಿವೇಶವನ್ನು ಏಳನೇ ತರಗತಿಯ ಅದಿತಿ ನಿಭಾಯಿಸಿದ ರೀತಿ ನೋಡಿ: ‘ಅಮ್ಮ, ನಾಳೆ ನಮ್ಮ ಮಹಡಿಯ ಎಲ್ಲಾ ಮಕ್ಕಳು ಮಾಲ್‌ಗೆ ಹೋಗಿ ಸುತ್ತಾಡ್ಕೊಂಡು ಬರ್ತಾರಂತೆ. ಸೌಭಾಗ್ಯ ಆಂಟಿ ನನ್ನನ್ನೂ ಕರೆದ್ರು. ನಾವು ಮಾವನ ಮನೆಗೆ ಹೋಗ್ತಿದ್ದೀವಿ ಅಂತ ಹೇಳಿ ಬಂದೆ’ ಎಂದು ಅದಿತಿ ವರದಿ ಒಪ್ಪಿಸಿದಳು.

‘ಒಳ್ಳೆ ಕೆಲಸ ಮಾಡಿದೆ ಅದಿತಿ. ಬರೋದಿಲ್ಲ ಅಂದಿದ್ರೆ ಬೇಜಾರು ಮಾಡ್ಕೊಂಡಿರೋರು’ ಎಂದು ಅಮ್ಮ ಮೆಚ್ಚಿನುಡಿದಳು.

‘ನಿಮ್ಮ ಮಗನಿಗೆ ಏನೇ ಕೊಟ್ರೂ ನನಗೆ ಹೊಟ್ಟೆ ತುಂಬಿದೆ ಏನೂ ಬೇಡ ಬೇಡ ಅಂತಾನೆ ಕಣ್ರೀ ಅವನಿಗೆ ಸ್ವಲ್ಪ ಹೇಳಿ’– ಪ್ರಭಂಜನನ ಬಗ್ಗೆ ಪಕ್ಕದ ಮನೆಯ ಅನಿತಾ ಸಾಮಾನ್ಯವಾಗಿ ಹೀಗೆ ದೂರುತ್ತಾರೆ. ‘ದಿನಾ ಸಂಜೆ ಅವರ ಮನೆಗೆ ಆಟ ಆಡೋಕೆ ಹೋಗ್ತೀಯಲ್ವಾ ಏನಾದ್ರೂ ತಿನ್ನು ಪರವಾಗಿಲ್ಲ’ ಎಂದು ಅಮ್ಮ ಅನುನಯ ಮಾಡಿದಾಗ ಪ್ರಭಂಜನ ಬಾಯಿಬಿಟ್ಟ.

‘ಅಮ್ಮ, ಅವರ ಬಾತ್‌ರೂಂನಿಂದ ಕೆಟ್ಟ ವಾಸನೆ ಬರ್ತಾ ಇರುತ್ತೆ. ನಿಶಾಂತ್‌ ನೋಡಿದ್ರೆ ಕಚ್ಚಿ ಕುಡಿದ ನೀರಿನ ಲೋಟದಲ್ಲೇ ಮತ್ತೆ ಡ್ರಮ್‌ನಿಂದ ನೀರು ಎತ್ಕೋತಾನೆ ಅದಕ್ಕೆ ನಂಗೆ ಅಲ್ಲಿ ತಿನ್ನಲು ಇಷ್ಟ ಇಲ್ಲ’ ಎಂದು ಪ್ರಭಂಜನ ವಿವರಿಸಿದ. ಸದ್ಯ, ‘ನಿಮ್ಮ ಮನೆಯಲ್ಲಿ ಸ್ವಚ್ಛತೆ ಕಾಪಾಡಲ್ಲ ಅದಕ್ಕೆ ನಾನು ತಿನ್ನಲ್ಲ’ ಎಂದು ಮಗ ಹೇಳಲಿಲ್ವಲ್ಲಾ ಎಂದು ಅಮ್ಮ ನಿಟ್ಟುಸಿರುಬಿಟ್ಟಳು!

ಒಪ್ಪಿಕೊಳ್ಳುವಂತೆ, ಮನಸ್ಸಿಗೆ ನೋವಾಗದಂತೆ ನಿರಾಕರಿಸುವ ಕಲೆ ಎಷ್ಟು ನಾಜೂಕನದು ಅಲ್ವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.