ADVERTISEMENT

ಉಗುರಲ್ಲಿದೆ ಕಂದನ ಕಲೆ

​ಪ್ರಜಾವಾಣಿ ವಾರ್ತೆ
Published 16 ಮೇ 2018, 19:30 IST
Last Updated 16 ಮೇ 2018, 19:30 IST
ಉಗುರಲ್ಲಿದೆ ಕಂದನ ಕಲೆ
ಉಗುರಲ್ಲಿದೆ ಕಂದನ ಕಲೆ   

ಅಮ್ಮನಾಗುವ ಹೊತ್ತಿನಲ್ಲಿ ಕಂದನ ಕನವರಿಕೆಯ ಪರಿ ವರ್ಣನೆಗೆ ನಿಲುಕದ್ದು. ಒಡಲಿಗೆ ಬರಲಿರುವ ಮಗುವಿನ ಆ ನಿರೀಕ್ಷೆಯನ್ನು ವ್ಯಕ್ತಪಡಿಸುವುದಾದರೂ ಹೇಗೆ? ಅದು ಅನುಭವಕ್ಕಷ್ಟೇ ದಕ್ಕುವುದು.

ಆದರೆ ಆ ಅನುಭವಗಳಿಗೆ ಕಲೆಯ ರೂಪ ಕೊಡುವುದು ಈಗಿನ ಜಮಾನದ ಕಲೆ. ಅಮ್ಮನಾಗುವ ಅನುಭವಕ್ಕೂ ಕಲೆಯ ರೂಪ ದಕ್ಕುತ್ತಿದೆ. ಅದೀಗ ನೇಲ್‌ ಆರ್ಟ್ ಮೂಲಕ ಸುದ್ದಿಯಾಗಿದೆ. ಮೊದಲು ಬೇಬಿ ಬಂಪ್ ಪೇಂಟಿಂಗ್ ಸಾಕಷ್ಟು ವೈರಲ್ ಆಗಿತ್ತು. ನಂತರ ಬೇಬಿ ಬಂಪ್ ಫೋಟೊಶೂಟ್ ಹುಟ್ಟಿಕೊಂಡಿತು. ಈಗ ಇನ್‍ಸ್ಟಾಗ್ರಾಂ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ‘ಅಲ್ಟ್ರಾಸೌಂಡ್ ನೇಲ್ ಆರ್ಟ್’ ಹೊಸ ಟ್ರೆಂಡ್ ಆಗಿ ಸದ್ದು ಮಾಡುತ್ತಿದೆ.

ನೇಲ್ ಆರ್ಟ್‌ನಲ್ಲಿ ಏನೆಲ್ಲಾ ಬಂದು ಹೋದವು! ಹೂವಿನ ಕಲೆ, ಮುತ್ತಿನ ಕಲೆ, ಕೃತಕ ಉಗುರು, ಬಗೆ ಬಗೆ ಚಿತ್ತಾರಗಳ ಕಲೆ... ಆಯಾ ಕಾಲಕ್ಕೆ ತಕ್ಕಂತೆ ಉಗುರಿನ ಕಲೆಯಲ್ಲೂ ಸಾಕಷ್ಟು ಮಾರ್ಪಾಡುಗಳಾದವು. ಈಗ ಅಲ್ಟ್ರಾಸೌಂಡ್ ಸರದಿ.

ADVERTISEMENT

ಗರ್ಭಿಣಿಯಾದವರು ತಮ್ಮ ಮಗುವಿನ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಫೋಟೊವನ್ನು ಸ್ಕ್ಯಾನ್ ಮಾಡಿ ಉಗುರಿನ ಮೇಲೆ ಪಡಿಯಚ್ಚು ಮೂಡಿಸಿಕೊಳ್ಳುವುದು ಅಥವಾ ಕಪ್ಪು ಬಿಳುಪಿನ ಫೋಟೊ ನೋಡಿಕೊಂಡು ಚಿತ್ರಕಲೆ ಬಿಡಿಸಿಕೊಳ್ಳುವುದು ಈ ಕಲೆಯ ಮೂಲ.

‘ಚೌಕಟ್ಟಿನಿಂದಾಚೆಗೆ ಯೋಚಿಸಬೇಕಿದೆ' ಎನ್ನುವುದು ಈಗಿನವರ ಮಂತ್ರ. ಅದು ಯಾವುದೇ ವಿಷಯಕ್ಕೂ ಹೊರತಲ್ಲ. ಬ್ರಿಟನ್‍ನ ನೇಲ್ ಆರ್ಟಿಸ್ಟ್ ಸರಾ ಕ್ಲಾರ್ಕ್ ಈ ಕಲೆಯ ರೂವಾರಿ. ಅವರ ಫೇಸ್‍ಬುಕ್ ಪುಟಗಳಲ್ಲಿ ಈ ಕಲೆ ರಾರಾಜಿಸಿದ ನಂತರ ಈಗ ಎಲ್ಲೆಲ್ಲೂ ಅಲ್ಟ್ರಾಸೌಂಡ್ ನೇಲ್ ಆರ್ಟ್ ಪ್ರಚಲಿತಗೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.