ADVERTISEMENT

ಏಂಜಲಿನಾ ಜೋಲಿ ಸಿಂಡ್ರೋಮ್‌ ನಿಮಗೂ ಇದೆಯೇ?

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2015, 19:53 IST
Last Updated 18 ಡಿಸೆಂಬರ್ 2015, 19:53 IST

ಚಿಕಿತ್ಸೆಗೆ ಮಾತ್ರ ವೈದ್ಯರು ಎನ್ನುವ ಕಾಲವಿತ್ತು. ಇದೀಗ ಮುಂಜಾಗೃತೆಗಾಗಿ ವೈದ್ಯರು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮವೇ ಈ ಏಂಜಲಿನಾ ಜೋಲಿ ಸಿಂಡ್ರೋಮ್‌.

ಏಂಜಲಿನಾ ಜೋಲಿ ಅಂದೊಡನೆ ನೆನಪಾಗುವುದು ತೀಕ್ಷ್ಣ ಕಣ್ಣು, ಆತ್ಮವಿಶ್ವಾಸ ಸೂಚಿಸುವ ನಿಲುವು, ಅತ್ಯಾಕರ್ಷಕ ಮೈಕಟ್ಟು, ಮಿಂಚಿನಂಥ ಚಲನೆ. ಈ ಸುಂದರಿ ಯಾರಿಗೆ ಪರಿಚಿತಳಿಲ್ಲ? ಆದರೆ ಈ ಹೆಸರಿನ ಸಿಂಡ್ರೋಮ್‌ ಒಂದಿದೆ ಗೊತ್ತೆ? ನಮಗೇನೋ ಆಗಿದೆ.., ನಮಗೇನೋ ಆಗಲಿದೆ.., ಭಯಾನಕವಾದುದು.., ಏನೋ ಜರುಗಲಿದೆ ಹೀಗೆ ನಿಮಗೆ ಮೇಲಿಂದ ಮೇಲೆ ಎನಿಸುತ್ತಿದ್ದರೆ ಖಂಡಿತವಾಗಿಯೂ ಈ ಚೆಲುವೆ ನಿಮ್ಮನ್ನು ಕಾಡುತ್ತಿದ್ದಾಳೆ ಎಂದರ್ಥ.

‘ನ್ಯಾಷನಲ್ ರಿಸರ್ಚ್‌ ಯುನಿವರ್ಸಿಟಿ ಹೈಯರ್ ಸ್ಕೂಲ್ ಆಫ್ ಎಕನಾಮಿಕ್ಸ್’ನ ಸಂಶೋಧಕರ ತಂಡವೊಂದು ಇಂಥ ವರ್ತನೆಯ ಮೇಲೆ ಹೆಚ್ಚು ಬೆಳಕು ಚೆಲ್ಲಿದೆ. ಅಷ್ಟೇ ಅಲ್ಲ ಇದಕ್ಕೆ ಕಾರಣ ನಮ್ಮಲ್ಲಿ ಆರೋಗ್ಯದ ಬಗ್ಗೆ ಹೆಚ್ಚುತ್ತಿರುವ ಜಾಗೃತಿ ಎಂದೂ ವಿವರಿಸಿದೆ. ಚಿಕಿತ್ಸೆಗಿಂತ ಮುಂಜಾಗೃತೆ ಒಳಿತು ಎನ್ನುವ ಸೂತ್ರ ನಮ್ಮಲ್ಲಿ ನಮಗರಿವಿಲ್ಲದಂತೆಯೇ ಈ ಸಿಂಡ್ರೋಮ್‌ ಹುಟ್ಟುಹಾಕಿದೆ. ‘ಆರೋಗ್ಯಕರ’ ಅಥವಾ ಸ್ವಾಸ್ಥ್ಯ ಎನ್ನುವ ಸೂತ್ರ ಬದಲಾಗಿದೆ. ಬಳಕುವ ಬಳ್ಳಿಯಂಥ ದೇಹ, ಮಿಂಚುವ ಚರ್ಮ, ಅಂದಚಂದ ಮಾತ್ರ ಆರೋಗ್ಯ ಎನ್ನುವ ಪರಿಕಲ್ಪನೆಯನ್ನು ಬಿತ್ತಲಾಗುತ್ತಿದೆ.

ಕ್ಯಾನ್ಸರ್‌ ಆದರೆ ಅಂಗವಿಹೀನವಾಗಬೇಕಾಗಬಹುದು, ಕೂದಲು ಉದುರಬಹುದು ಇಂಥ ಆತಂಕಗಳಿಂದ ಹೊರ ಬರಲು ಪ್ರಿವೆಂಟಿವ್‌ ಹೆಲ್ತ್‌ ಕೇರ್‌ಗೆ ಮೊರೆ ಹೋಗುತ್ತೇವೆ. ಅತಿ ಹೆಚ್ಚು ಆತಂಕಕ್ಕೆ ಒಳಗಾದಂತೆಲ್ಲ ಅತಿ ಹೆಚ್ಚು ಜಾಗೃತರಾಗುತ್ತೇವೆ. ಇದೇ ಈ ಏಂಜಲಿನಾ ಜೋಲಿ ಸಿಂಡ್ರೋಮ್‌. ಚಂದ ಕಾಣಬೇಕೆ? ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಳ್ಳಿ. ಸಪೂರ ಕಾಯದವರಾಗಬೇಕೇ? ಜಿಮ್‌ಗೆ ಹೋಗಿ. ಕಾಯಿಲೆಗಳಿಂದ ದೂರವಿರಬೇಕೆ? ಲಸಿಕೆ ಹಾಕಿಸಿಕೊಳ್ಳಿ.. ಶಸ್ತ್ರಚಿಕಿತ್ಸೆಯಾಗಬೇಕಿದೆಯೇ? ಪಾಲಿಸಿ ಮಾಡಿಸಿಕೊಳ್ಳಿ. ಹೀಗೆ ಇಡೀ ಆರೋಗ್ಯದ ಸೂತ್ರವನ್ನು  ವಾಣಿಜ್ಯೀಕರಿಸಲಾಗುತ್ತಿದೆ.

ಜೊತೆಗೆ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಸಪೂರ, ಸುಂದರ ಕಾಯ, ಪ್ರಮಾಣಬದ್ಧ ರಚನೆ ಮುಂತಾದ ಸಿದ್ಧಮಾದರಿಗಳನ್ನು ಹೆಚ್ಚು ಜನಪ್ರಿಯಗೊಳಿಸಲಾಗುತ್ತಿದೆ. ಚಿಕಿತ್ಸೆಗೆ ಮಾತ್ರ ವೈದ್ಯರು ಎನ್ನುವ ಕಾಲವಿತ್ತು. ಇದೀಗ ಮುಂಜಾಗೃತೆಗಾಗಿ ವೈದ್ಯರು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮವೇ ಈ ಏಂಜಲಿನಾ ಜೋಲಿ ಸಿಂಡ್ರೋಮ್‌ ಹುಟ್ಟಿಕೊಂಡಿರುವುದು ಎನ್ನುತ್ತಾರೆ ಸಂಶೋಧನೆಯ ಮುಖ್ಯಸ್ಥ ಗೋಲ್ಮನ್‌. ನಿಮಗೂ ಇದೆಯೇ ಈ ಸಿಂಡ್ರೋಮ್‌?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT