ADVERTISEMENT

ಒರಗಿಕೊಂಡೇ ಕೆಲಸ ಮಾಡಿ..

ಕಿರಣ್ ಇಜಿಮಾನ್
Published 28 ಜೂನ್ 2015, 19:30 IST
Last Updated 28 ಜೂನ್ 2015, 19:30 IST

ನೀವು ಆಫೀಸ್‌ನಲ್ಲಿ ದಿನವಿಡೀ ಕುಳಿತುಕೊಂಡೇ ಕೆಲಸ ಮಾಡುತ್ತೀರಾ? ಹಾಗಾದರೆ ನಿಮಗೆ ಬೆನ್ನು ನೋವು ಮತ್ತು ಸೊಂಟ ನೋವು ಆಗಾಗ ಕಾಣಿಸುಕೊಳ್ಳುತ್ತಿರಬೇಕಲ್ಲವೇ? ಇದಕ್ಕೇನು ಪರಿಹಾರ ಎಂದು ನೀವು ಖಂಡಿತಾ ಚಿಂತಿಸಿರುತ್ತೀರಿ. ಅಲ್ಲದೇ ಆ ಚಿಕಿತ್ಸೆ, ಈ ಚಿಕಿತ್ಸೆ ಎಂದು ಕೆಲವು ಸಾವಿರವನ್ನಾದರೂ ಅದಕ್ಕೆ ಸುರಿದಿರುತ್ತೀರಿ. ಏನು ಮಾಡಿದರೂ ಪ್ರಯೋಜನವಿಲ್ಲ ಎಂದು ಮತ್ತದೇ ಕುರ್ಚಿಗೆ ಅಂಟಿಕೊಂಡಿರುತ್ತೀರಿ.

ಆಫೀಸ್ ಕೆಲಸ ಎಂದ ಮೇಲೆ ಡೆಸ್ಕ್ ಕೆಲಸ ಇದ್ದದ್ದೇ... ಅಂದರೆ, ಕುಳಿತುಕೊಂಡೇ ಕೆಲಸ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಇನ್ನು ಕಂಪ್ಯೂಟರ್ ಬಳಸಿಕೊಂಡು ಕೆಲಸ ಮಾಡಬೇಕಾದರೆ, ನಿರ್ದಿಷ್ಟ ಭಂಗಿಯಲ್ಲೇ, ನಿಗದಿತ ಜಾಗದಲ್ಲೇ ಇರಬೇಕು. ಅದನ್ನು ಬಿಟ್ಟು ಹೋಗುವಂತಿಲ್ಲ, ಕಂಪ್ಯೂಟರ್ ಮಾನಿಟರ್, ಕೀ-ಬೋರ್ಡ್ ಎಂದು ನಮಗೆ ಲಭ್ಯವಿರುವ ಆಯ್ಕೆಯಲ್ಲಿ ನಾವು ಹೊಂದಾಣಿಕೆ ಮಾಡಬೇಕಾಗುತ್ತದೆ.

ಇದರಿಂದ ನಮಗೆ ಅರಿವಿಲ್ಲದೆಯೇ ಬೆನ್ನು, ಸೊಂಟ ನೋವಿನಂತಹ ವಿವಿಧ ಕಾಯಿಲೆಗಳು ನಮ್ಮನ್ನು ಬಾಧಿಸತೊಡಗುತ್ತದೆ. ನಮ್ಮ ದೇಹದ ಭಾರವೆಲ್ಲ ಕಾಲಿನ ಮೇಲೆ ಬೀಳುತ್ತದೆ, ಒಂದೇ ಭಂಗಿಯಲ್ಲಿ ಇರುವುದರಿಂದ ಬೆನ್ನು ಮೂಳೆ ನಿಧಾನವಾಗಿ ಬಾಗುತ್ತಾ ಬರುತ್ತದೆ. ಕ್ರಮೇಣ ಇದು ನೋವನ್ನು ದಯಪಾಲಿಸುತ್ತದೆ. ಇದರಿಂದ ಹೊರಬರಲು ಕೆಲವು ವಿಧದ ಚಿಕಿತ್ಸೆಗಳು ಅಗತ್ಯವಿದೆ. ಆದರೂ ಆಗಾಗ ಕುರ್ಚಿಯಿಂದ ಎದ್ದು ಒಂದೈದು ನಿಮಿಷ ಹೊರಗೆ ಅಡ್ಡಾಡಿ ಬಂದರೇ, ಕುಳಿತಲ್ಲೇ ಕೆಲವೊಂದು ಆಸನ ಮಾಡಿದರೆ ತಕ್ಕ ಮಟ್ಟಿಗೆ ಇದರಿಂದ ಪಾರಾಗಬಹುದು.

ಆದರೆ ಬ್ಯುಸಿ ಜೀವನಶೈಲಿಯಲ್ಲಿ ಇದಕ್ಕೆಲ್ಲ ಸಮಯವೆಲ್ಲಿದೆ? ಇದ್ದರೂ ಕೆಲಸದ ಒತ್ತಡದ ಮಧ್ಯೆ ಅದನ್ನು ಪಾಲಿಸಲು ನೆನಪೂ ಆಗುವುದಿಲ್ಲ. ಇದಕ್ಕೆ ಪರಿಹಾರ ಕಂಡುಹಿಡಿಯಲು ಚಿಂತಿಸಿದ ಅಮೆರಿಕ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ‘ಲೀನ್ ಚೈರ್’ ಎಂಬ ವಿಶಿಷ್ಟ ವಿನ್ಯಾಸದ ಚೈರ್ ತಯಾರಿಸಿದ್ದಾರೆ. ಇದರಲ್ಲಿ ಕುಳಿತುಕೊಳ್ಳಬೇಕಾಗಿಲ್ಲ, ಅಲ್ಲದೇ ನಿಂತುಕೊಳ್ಳುವುದೂ ಬೇಡ, ಬದಲಾಗಿ ಒರಗಿಕೊಂಡೇ ಕೆಲಸ ಮಾಡಬಹುದು.

ದಿನವಿಡೀ ನಿಂತುಕೊಂಡು ಇಲ್ಲವೇ ಕುಳಿತುಕೊಂಡು ಕೆಲಸ ಮಾಡಿ ಬೆನ್ನು ಮತ್ತು ಸೊಂಟ ನೋವು ತಂದುಕೊಳ್ಳುವವರು ತಮ್ಮ ಸಮಸ್ಯೆಯಿಂದ ಪಾರಾಗಲು ಈ ಕುರ್ಚಿ ಉತ್ತಮ. ಇದಕ್ಕೆ ಕಂಪ್ಯೂಟರ್ ಟೇಬಲ್ ಕೂಡಾ ಅಳವಡಿಸಿ, ಆಫೀಸ್‌ನಲ್ಲೂ ಬಳಸಬಹುದು. ಬ್ಯಾಲೆನ್ಸ್ ಮಾಡಿಕೊಂಡು ಈ ಚೈರ್‌ನಲ್ಲಿ ಒರಗುವುದರಿಂದ ದೇಹದ ಭಾರ ಪೂರ್ತಿ ಕಾಲಿನ ಮೇಲೆ ಬೀಳದೆ, ಚೈರ್‌ನ ಮೇಲೆ ಬೀಳುತ್ತದೆ. ಇದರಿಂದ ಬೆನ್ನಿಗೂ ನೇರವಾಗಿ ಆಧಾರ ದೊರೆಯುತ್ತದೆ. ಇದರಿಂದ ಬಾಗಿಕೊಂಡು ಇಲ್ಲವೇ ಕುಳಿತುಕೊಂಡು ಕೆಲಸ ಮಾಡುವುದು ತಪ್ಪುತ್ತದೆ. ಸುಮಾರು 2 ವರ್ಷಗಳಿಂದ ಈ ಚೈರ್‌ನ ವಿನ್ಯಾಸದ ಬಗ್ಗೆ ಚರ್ಚಿಸಿ, ಇದನ್ನು ರೂಪಿಸಿದ್ದಾರೆ. ಇದರ ಬೆಲೆ 255 ಡಾಲರ್, ಅಂದರೆ ಸುಮಾರು 16 ಸಾವಿರ ರೂಪಾಯಿಗಳು.

ಸಾಮಾನ್ಯವಾಗಿ ಕುಳಿತುಕೊಳ್ಳುವ ಸಂದರ್ಭದಲ್ಲಿ ನಮ್ಮ ದೇಹ 90 ಡಿಗ್ರಿಯಾಕಾರದಲ್ಲಿರುತ್ತದೆ. ಇದರಿಂದ ಬೆನ್ನಿಗೆ ಹೆಚ್ಚಿನ ಶ್ರಮ ಬೀಳುತ್ತದೆ. ಆದರೆ ಈ ‘ಲೀನ್ ಚೈರ್’ನಲ್ಲಿ ಓರೆಯಾಗಿ ನಿಂತುಕೊಳ್ಳುವುದರಿಂದ ಬೆನ್ನಿಗೆ ಏನೂ ಸಮಸ್ಯೆಯಾಗುವುದಿಲ್ಲ. ಕಂಪ್ಯೂಟರ್ ಟೇಬಲ್‌ಗೂ ಸೂಕ್ತವಾಗಿರುವುದರಿಂದ ಇದು ಆಫೀಸ್‌ನಲ್ಲಿ ಬಳಕೆದಾರರಿಗೆ ಪರಿಣಾಮಕಾರಿಯಾಗಿ ಉಪಯೋಗಿ. ಕೂತು ಕೂತು ಬೆನ್ನು ನೋವು ಎಂದು ಹೇಳುವವರಿಗೆ ಇದರಿಂದ ಪರಿಹಾರ ದೊರೆಯಲಿದೆ. ಕೇವಲ ಆಫೀಸ್‌ನಲ್ಲಿ ಮಾತ್ರವಲ್ಲದೇ ಕ್ಯಾಂಟೀನ್‌ಗಳಲ್ಲೂ ಇದನ್ನು ಬಳಸಲು ಅಡ್ಡಿಯಿಲ್ಲ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.