ADVERTISEMENT

ಕಡ್ಡಿಪುಡಿ

​ಪ್ರಜಾವಾಣಿ ವಾರ್ತೆ
Published 16 ಮೇ 2018, 19:30 IST
Last Updated 16 ಮೇ 2018, 19:30 IST
ಕಡ್ಡಿಪುಡಿ
ಕಡ್ಡಿಪುಡಿ   

‘ಬೇರೆ ಯಾರೋ ಬರೆದಂತಿದೆ ಸಾಲನು...’
ಇದು ಸೂರಿ ನಿರ್ದೇಶನದ ಕಡ್ಡಿಪುಡಿ ಚಿತ್ರಕ್ಕಾಗಿ ಜಯಂತ ಕಾಯ್ಕಿಣಿ ಬರೆದಿರುವ ಹಾಡೊಂದರ ಸಾಲು. ಚಿತ್ರದ ಸನ್ನಿವೇಶವೊಂದಕ್ಕೆ ಹೊಂದಿಕೊಂಡು ಬಂದು ಹೋಗುವ ಈ ಹಾಡು ಇಡೀ ಸಿನಿಮಾದ ಆತ್ಮವನ್ನೇ ಧ್ವನಿಸುವಂತಿದೆ.

ಕನ್ನಡದಲ್ಲಿ ರೌಡಿಸಂ ಕಥೆಗಳನ್ನಿಟ್ಟುಕೊಂಡು ಬಂದ ಸಿನಿಮಾಗಳ ದೊಡ್ಡ ಪಟ್ಟಿಯನ್ನೇ ಕೊಡಬಹುದು. ಆದರೆ ಅವುಗಳಲ್ಲಿ ಬಹುತೇಕ ಸಿನಿಮಾಗಳು ನೆಚ್ಚಿರುವುದು ರೌಡಿಸಂನ ವಿಜೃಂಬಿತ ಜನಪ್ರಿಯ ಬಿಂಬವನ್ನೇ. ಒಂದೋ ಶತ್ರುಗಳನ್ನು ಸರ್ವನಾಶ ಮಾಡಿ ಸೇಡು ತೀರಿಸಿಕೊಳ್ಳುವುದರಲ್ಲಿ ಕಥೆ ಮುಗಿಯುತ್ತದೆ. ಇಲ್ಲವೇ ತಾನೇ ಶತ್ರುವಿನ ದ್ರೋಹಕ್ಕೆ ಬಲಿಯಾಗಿ ನಾಯಕ ಸಾಯುತ್ತಾನೆ. ‘ಕಡ್ಡಿಪುಡಿ’ ಕೂಡ ರೌಡಿಸಂ ಕಥೆಯೇ. ಆದರೆ ನಿರ್ದೇಶಕ ಸೂರಿ ಇದನ್ನು ರೌಡಿಸಂ ವಿಜೃಂಬಣೆಯಷ್ಟೇ ಆಗಿ ಮುಗಿಯಲು ಬಿಡುವುದಿಲ್ಲ. ಆ ಲೋಕದ ಜನಪ್ರಿಯ ಬಿಂಬಗಳಿಂದ ಕೊಂಚ ಆಚೆ ನಿಂತು ವಾಸ್ತವದ ಫ್ಲೆವರ್‌ ಇಟ್ಟುಕೊಂಡೇ ಸಿನಿಮಾ ಕಟ್ಟಿದ್ದಾರೆ. ಹೀಗಾಗಿ ಇದು ವ್ಯವಸ್ಥೆಯ ವಿಷವರ್ತುಲದಲ್ಲಿ ಸಿಲುಕಿಕೊಂಡು ಒದ್ದಾಡುವ ಮನುಷ್ಯನೊಬ್ಬನ ಕಥನವಾಗಿಬಿಡುತ್ತದೆ. ಕಲಾತ್ಮಕವಾಗಿ ಇನ್ನೂ ಮೇಲಕ್ಕೇರುತ್ತದೆ. ಆ ವಿಷವರ್ತುಲ ಮತ್ತೂ ಬೆಳೆಯುತ್ತಲೇ ಹೋಗುವ ಸೂಚನೆಯೊಂದಿಗೇ ಚಿತ್ರ ಮುಗಿಯುತ್ತದೆ.

ರಕ್ತದ ಸಹವಾಸವನ್ನು ಬಿಟ್ಟು ಬದುಕುತ್ತೇನೆ ಎಂದು ಹೊರಟ ನಾಯಕನ ಕೈಗೆ ವ್ಯವಸ್ಥೆಯೇ ಹೇಗೆ ಮತ್ತೆ ಮತ್ತೆ ನೆತ್ತರ ಮೆತ್ತಲು ಯತ್ನಿಸುತ್ತದೆ ಎನ್ನುವುದನ್ನು ನಿರ್ದೇಶಕರು ಗಾಢವಾಗಿ ಹೇಳಿದ್ದಾರೆ. ವಿಕೃತ ಮನಸ್ಸಿನ ಪಾತ್ರಗಳನ್ನು ಕೆತ್ತಿದಷ್ಟೇ ಸೂಕ್ಷ್ಮವಾಗಿ ಸ್ವಚ್ಛ ಬಟ್ಟೆ, ಯೂನಿಫಾರ್ಮಿನಲ್ಲಿದ್ದುಕೊಂಡೇ ರಕ್ಕಸರಾಗಿರುವವರ ಮುಖವಾಡವನ್ನೂ ಬಯಲು ಮಾಡುತ್ತಾರೆ.

ADVERTISEMENT

ಚಂದನವನದಲ್ಲಿ ಮಚ್ಚಿನ ಟ್ರೆಂಡ್‌ ತಂದ ಶಿವರಾಜ್‌ಕುಮಾರ್‌ ಇಲ್ಲಿಯೂ ಮಚ್ಚು ಹಿಡಿದಿದ್ದರೂ ಪೂರ್ತಿ ಬೇರೆಯದೇ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಅವರು ಒಪ್ಪಿಸಿಕೊಂಡಿದ್ದಾರೆ ಕೂಡ. ರಾಧಿಕಾ ಪಂಡಿತ್‌ ಕೂಡ ತಮ್ಮ ಹಿಂದಿನ ಎಲ್ಲ ಪಾತ್ರಗಳನ್ನೂ ಮನಸ್ಸಿಂದ ಅಳಿಸಿಹಾಕುವಂತೆ ನಟಿಸಿದ್ದಾರೆ. ತಮ್ಮಲ್ಲಿನ ನಟನಾಪ್ರತಿಭೆಯನ್ನು ನಿಯಂತ್ರಿಸಿಕೊಂಡು ಅಗತ್ಯವಿರುವಷ್ಟೇ ಕೊಟ್ಟು ಪಾತ್ರಕಟ್ಟುವ ರೀತಿ ಬೆರಗು ಹುಟ್ಟಿಸುತ್ತದೆ.

ಜಯಂತ ಕಾಯ್ಕಿಣಿ ಮತ್ತು ಯೋಗರಾಜ್ ಭಟ್ ಅವರ ಹಾಡುಗಳು ಈ ಚಿತ್ರದ ಇನ್ನೊಂದು ಧನಾತ್ಮಕ ಅಂಶಗಳು. ‘ಸೌಂದರ್ಯ ಸಮರ...’ ‘ಹೆದರಬ್ಯಾಡ್ರೀ ಅಂತ ಗಂಡಗ ಧೈರ್ಯ ಕೊಟ್ಟಾಳ್ರೀ..’ ‘ಬೇರೆ ಯಾರೋ ಬರೆದಂತಿದೆ ಸಾಲನು’ ಹೀಗೆ ಒಂದಕ್ಕಿಂತ ಒಂದು ಒಳ್ಳೆಯ ಹಾಡುಗಳು ಈ ಸಿನಿಮಾದಲ್ಲಿವೆ.

ಇತ್ತೀಚೆಗೆ ಬಿಡುಗಡೆಯಾದ ‘ಟಗರು’ವಿನಲ್ಲಿ ಸೂರಿಯವರ ಬುದ್ದಿವಂತಿಕೆಯನ್ನು ನೋಡಿ ತಲೆದೂಗಿದವರು, ‘ಕಡ್ಡಿಪುಡಿ’ ಸಿನಿಮಾವನ್ನು ಅವರ ಕಲಾವಂತಿಕೆಯ ನಿದರ್ಶನವಾಗಿ ನೋಡಬಹುದು. ಈ ಚಿತ್ರ ಈಗ ಯೂಟ್ಯೂಬ್‌ನಲ್ಲಿ ಲಭ್ಯವಿದೆ. ಕೊಂಡಿ: https://bit.ly/2FyXWYN 

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.