ADVERTISEMENT

ಧ್ವನಿ ಗ್ರಹಿಸುವ ಕನ್ನಡ ಆ್ಯಪ್‌

​ಪ್ರಜಾವಾಣಿ ವಾರ್ತೆ
Published 30 ಜುಲೈ 2017, 19:30 IST
Last Updated 30 ಜುಲೈ 2017, 19:30 IST
ಧ್ವನಿ ಗ್ರಹಿಸುವ ಕನ್ನಡ ಆ್ಯಪ್‌
ಧ್ವನಿ ಗ್ರಹಿಸುವ ಕನ್ನಡ ಆ್ಯಪ್‌   

ಸ್ಮಾರ್ಟ್‌ಪೋನ್‌ಗಳಲ್ಲಿ ಕನ್ನಡದಲ್ಲಿ ಸಂದೇಶ ಕಳುಹಿಸುವುದಕ್ಕೆ ಈಗ ಹತ್ತಾರು ಆ್ಯಪ್‌ಗಳು ಸಿಗುತ್ತವೆ. ಜಸ್ಟ್‌ ಕನ್ನಡ, ಪದ, ಈಸಿ ಕನ್ನಡ ಹೀಗೆ ಸುಮಾರು ಕನ್ನಡ ಟೈಪಿಂಗ್‌ ಆ್ಯಪ್‌ಗಳು ಉಚಿತವಾಗಿ ಪ್ಲೇಸ್ಟೋರ್‌ನಲ್ಲಿ ಲಭ್ಯ ಇವೆ. ಈ ಆ್ಯಪ್‌ಗಳಲ್ಲಿ ವಿಶೇಷವಾಗಿ ನಿಲ್ಲುವುದು ಲಿಪಿಕಾರ್‌ ಆ್ಯಪ್‌. ಇದರ ವಿಶೇಷತೆ ಎಂದರೆ ನಾವು ಮಾತನಾಡಿದ್ದನ್ನು ಟೈಪ್‌ ಮಾಡುತ್ತದೆ ಈ ಆ್ಯಪ್‌.

‘ಕನ್ನಡದಲ್ಲಿ ಸಂದೇಶ ಕಳುಹಿಸುವ ಇಚ್ಛೆಯಿದ್ದರೂ ಟೈಪಿಸುವುದು ಬಲು ಕಷ್ಟ’ ಎಂದು ಪೇಚಾಡುವವರಿಗೆ ಲಿಪಿಕಾರ್‌ ಆ್ಯಪ್‌ ಸಹಕಾರಿಯಾಗಬಹುದು. ಮಾತಿನಲ್ಲಿ ಹೇಳುವುದನ್ನು ಯಥಾವತ್ತಾಗಿ ಟೈಪಿಸಿಕೊಳ್ಳುವ ಈ ಆ್ಯಪ್ ಬಹಳಷ್ಟು ಮೊಬೈಲ್‌ ಬಳಕೆದಾರರ ಗಮನ ಸೆಳೆದಿದೆ.

ಗೂಗಲ್‌ ಪ್ಲೇಸ್ಟೋರ್‌ನಿಂದ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡ ಬಳಿಕ ಮೊಬೈಲ್‌ನ ಭಾಷೆ ಸೆಟ್ಟಿಂಗ್‌ಗೆ ಹೋಗಿ ಲಿಪಿಕಾರ್‌ ಕನ್ನಡ ಕೀ ಬೋರ್ಡ್‌ ಆಯ್ಕೆ ಮಾಡಿಕೊಳ್ಳಬೇಕು. ಆಗ ಎನೆಬಲ್‌ ಕೀ ಬೋರ್ಡ್‌ ಎಂದು ಕೇಳುತ್ತದೆ. ಅಲ್ಲಿ ಎನೆಬಲ್‌ ಲಿಪಿಕಾರ್‌ ಕೀಬೋರ್ಡ್‌ ಆಯ್ಕೆ ಮಾಡಿಕೊಳ್ಳಬೇಕು.

ADVERTISEMENT

ಟೈಪ್‌ ಮಾಡಿಕೊಳ್ಳುವಾಗ ಕನ್ನಡ ಮತ್ತು ಇಂಗ್ಲಿಷ್‌ ಎರಡು ಆಯ್ಕೆಗಳು ಸಿಗುತ್ತವೆ. ಇದರಲ್ಲಿ ನಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿಕೊಂಡು ಟೈಪ್‌ ಮಾಡಿಕೊಳ್ಳಬಹುದು. ಇಲ್ಲಿ ಕೀಬೋರ್ಡ್‌ ಬಲಗಡೆ ಮೈಕ್‌ ಚಿಹ್ನೆ ಇದೆ. ಅದನ್ನು ಒತ್ತಿ ಮಾತನಾಡಿದರೆ ನಮ್ಮ ಮಾತು ಅಕ್ಷರ ರೂಪಕ್ಕೆ ಬದಲಾಗುತ್ತದೆ.

ಕೇವಲ 14 ಸೆಕೆಂಡುಗಳ ಕಾಲ ಮಾತ್ರ ಇದು ಕೇಳಿಸಿಕೊಳ್ಳಬಹುದು. 14 ಸೆಕೆಂಡ್ ನಂತರ ನಾವು ಮಾತನಾಡಿದ್ದನ್ನೆಲ್ಲಾ ಅಕ್ಷರ ರೂಪಕ್ಕೆ ಬದಲಾಯಿಸಿ, ಮತ್ತೆ ಕೇಳಿಸಿಕೊಳ್ಳಲು ತಯಾರಾಗುತ್ತದೆ. ಈ ಆ್ಯಪ್‌ನಲ್ಲಿ ಮಾತನಾಡುವಾಗ ಸ್ವಲ್ಪ ನಿಧಾನವಾಗಿ ಹಾಗೂ ಸ್ಪಷ್ಟವಾಗಿ ಮಾತನಾಡಬೇಕು.

ಮೊಬೈಲ್‌ ಹಾಗೂ ಟ್ಯಾಬ್ಲೆಟ್‌ಗಳಲ್ಲಿ ಡೌನ್‌ಲೋಡ್‌ ಮಾಡಿಕೊಂಡರೆ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟ್ವಿಟರ್‌, ಇ–ಮೇಲ್‌, ಸಂದೇಶಗಳನ್ನು ಮಾತನಾಡುತ್ತಾ ಟೈಪ್‌ ಮಾಡಿಕೊಳ್ಳಬಹುದು. ಇನ್ನು ಕೀಬೋರ್ಡ್‌ಗಳನ್ನು ಬದಲು ಮಾಡಿಕೊಳ್ಳದೇ ಕನ್ನಡ, ಇಂಗ್ಲಿಷ್‌ ಭಾಷೆಯನ್ನು ಸುಲಭವಾಗಿ ಬಳಸಬಹುದಾಗಿದೆ. ಆ್ಯಂಡ್ರಾಯ್ಡ್‌ ಫೋನ್‌ಗಳಲ್ಲಿ ಇದು ಚೆನ್ನಾಗಿ ಕೆಲಸ ಮಾಡುತ್ತದೆ.

ಧ್ವನಿ ಗ್ರಹಿಕೆಗೆ ತೆಗೆದುಕೊಳ್ಳುವ ಸಮಯ ಸ್ವಲ್ಪ ಹೆಚ್ಚು ಹಾಗೂ ಆಡಿದ ಮಾತು ಬೇರೆ ಪದವಾಗಿ ಬದಲಾಗುವ ಸಂಭವವೂ ಇದೆ. ಇಂಥ ಕೆಲವು ಕೊರತೆಗಳನ್ನು ಸರಿಪಡಿಸಿದರೆ ಧ್ವನಿ ಗ್ರಹಿಕೆಯ ಉತ್ತಮ ಆ್ಯಪ್‌ ಕನ್ನಡಿಗರಿಗೆ ಲಭ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.