ADVERTISEMENT

ನಡುಕ ಹುಟ್ಟಿಸುವ ಕೋಡಂಗಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 19:30 IST
Last Updated 23 ಅಕ್ಟೋಬರ್ 2017, 19:30 IST
ನಡುಕ ಹುಟ್ಟಿಸುವ ಕೋಡಂಗಿ
ನಡುಕ ಹುಟ್ಟಿಸುವ ಕೋಡಂಗಿ   

ನಗೆಮೊಗವ ಹೊದ್ದು, ಗಾಳಿಯಲ್ಲಿ ಬಲೂನ್ ತೇಲಿಸುತ್ತಾ, ತನ್ನ ಇರುವಿಕೆಯನ್ನು ಖಾತ್ರಿಪಡಿಸಿ ತಣ್ಣನೆಯ ಗಾಳಿಯು ಸುಳಿದಾಡುವಂತೆ, ಮನಸ್ಸಿನಲ್ಲಿ ನಡುಕ ಹುಟ್ಟಿಸುವ ಸಿನಿಮಾ ‘ಇಟ್’ (It).

ಇದು ದಶಕದ ಅದ್ಭುತ ಹಾರರ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಿನಿಮಾದ ಮೂರೂ ಟ್ರೇಲರ್‌ಗಳು ವೈರಲ್ ಆಗಿದ್ದವು. ಸ್ಟೀಫನ್ ಕಿಂಗ್ ಅವರ ಜನಪ್ರಿಯ ಕಾದಂಬರಿ ‘ಇಟ್’. ಇದಕ್ಕೆ ದೃಶ್ಯ ರೂಪ ನೀಡಿ ನಿರ್ದೇಶನ ಮಾಡಿದವರು ಆ್ಯಂಡಿ ಮುಶೆಟ್ಟಿ.

ಮಕ್ಕಳ ಗುಂಪಿನಲ್ಲಿ ಪುಟ್ಟ ಹುಡುಗನಿದ್ದರೆ ಅವನು ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗುತ್ತಾನೆ. ಸಣ್ಣವ ಎಂದು ಯಾವ ಆಟಕ್ಕೂ ಅವನನ್ನು ಹೆಚ್ಚಾಗಿ ಪರಿಗಣಿಸುವುದಿಲ್ಲ. ನಂತರ ಆ ಪುಟ್ಟ ಹುಡುಗ ಬೇಸರಿಸಿಕೊಳ್ಳುವುದು. ಮತ್ತೊಬ್ಬರ ಗೆಳೆತನ ಬಯಸುವುದು. ಹೀಗೆ ಜೊತೆಗಾರನನ್ನು ಅರಸುತ್ತಾ ಹೋಗುವ ಹುಡುಗ ಕೊನೆಗೆ ಭೇಟಿಯಾಗುವುದು ಕೋಡಂಗಿ ವೇಷದಲ್ಲಿ ಇರುವ ಒಂದು ದೆವ್ವವನ್ನು. ಆ ಕೋಡಂಗಿ ಬದುಕುವುದು ಒಳಚರಂಡಿಯಲ್ಲಿ. ಒಂಟಿಯಾಗಿ ಕೊರಗುವ ಮಕ್ಕಳೇ ಈ ಕೊಡಂಗಿಯ ಟಾರ್ಗೆಟ್. ಒಮ್ಮೆ ಈ ಒಳ ಚರಂಡಿಗೆ ಬರುವ ಮಕ್ಕಳನ್ನು ರಂಜಿಸುತ್ತಾ ಆ ಮಕ್ಕಳೊಂದಿಗೆ ಆಟವಾಡಿಕೊಂಡು ಇರುತ್ತದೆ, ಆದರೆ ಮತ್ತೆ ಆ ಮಗುವನ್ನು ಹೊರಹೋಗಲು ಬಿಡುವುದಿಲ್ಲ.

ADVERTISEMENT

ಹೀಗೆ ಸಿಕ್ಕಿಹಾಕಿಕೊಂಡ ಪುಟ್ಟ ಹುಡುಗನನ್ನು ಹುಡುಕಿಕೊಂಡು ಬರುವ ಆತನ ಗೆಳಯರನ್ನು ಹೆದರಿಸಿ ಓಡಿಸುವ ಕೋಡಂಗಿ. ಬಲೂನ್ ಆಗಿ ಬದಲಾಗಿ ಮಕ್ಕಳ ಮುಂದೆ ತೇಲುತ್ತಾ ಬರುವ ದೃಶ್ಯ. ಹೀಗೆ ಒಂದೇ ಉಸಿರಿನಲ್ಲಿ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ. ‘ದೃಶ್ಯಗಳು ನೋಡುಗರನ್ನು ಹೆಚ್ಚು ವಿಚಲಿತರನ್ನಾಗಿ ಮಾಡುತ್ತವೆ’ ಎಂದು ಹಲವು ವೀಕ್ಷಕರು ಪ್ರತಿಕ್ರಿಯಿಸಿದ್ದಾರೆ. ಈ ಸಿನಿಮಾಕ್ಕೆ ‘ಆರ್–ರೇಟೆಡ್‌ ಹಾರರ್‌’ ಎಂಬ ಮಾನ್ಯತೆಯೂ ಸಿಕ್ಕಿದೆ. ವರ್ಲ್ಡ್‌ ಸಿನಿಮಾ ಸಾಲಿನಲ್ಲಿ ಶ್ರೇಷ್ಠವಾದ ಹಾರರ್ ಸಿನಿಮಾ ಎಂಬುದು ಈ ಮಾನ್ಯತೆ.

ಸಿನಿಮಾದಲ್ಲಿ ಮೌನ ಹಾಗೂ ಶಬ್ದದ ಬಳಕೆ ತೂಗಿ ಅಳತೆ ಮಾಡಿದಂತೆ ಸಂಯೋಜನೆ ಮಾಡಿದ್ದಾರೆ ಬೆಂಜಮಿನ್ ವಾಲ್‌ಫಿಚ್. ಕಥೆ ಪ್ರೇಕ್ಷಕರನ್ನು ಸಮರ್ಥವಾಗಿ ತಲುಪಲು ಪ್ರತಿ ಫ್ರೇಮಿನಲ್ಲೂ ಬಂದು ಹೋಗುವ ಹಿನ್ನೆಲೆ ಸಂಗೀತ ಮುಖ್ಯ ಕಾರಣವಾಗಿದೆ. ಕೋಡಂಗಿ ಪ್ರತ್ಯಕ್ಷವಾಗಲು ಕೆಲವೇ ಕ್ಷಣಗಳಿರುವಾಗ ಈ ಭಯವನ್ನು ಹೆಚ್ಚಿಸಲು ಚರಂಡಿ ನೀರು ಹರಿಯುವ ರಭಸವನ್ನು ನಿಧಾನವಾಗಿ ಹೆಚ್ಚಿಸುತ್ತಾ ಹೋಗಲಾಗುತ್ತದೆ. ನೀರೊಳಗಿಂದ ನಿಧಾನಕ್ಕೆ ನಗುತ್ತಾ ಎದ್ದು ಬರುವ ಕೋಡಂಗಿ, ನೀರಿನ ಹರಿವಿನ ಶಬ್ದ ಒಂದಕ್ಕೊಂದು ಸಾಥ್ ನೀಡಿ ಹೆಚ್ಚು ನಾಟಕೀಯವಾಗದೆ ಸಹಜತೆಯಿಂದ ನೋಡುಗರನ್ನು ಹೆದರಿಸಿಬಿಡುತ್ತದೆ. ಅನಿರೀಕ್ಷಿತವಾಗಿ ಕೋಡಂಗಿ ಎದುರಾಗುವುದು ಮಕ್ಕಳು ಹೆದರುವುದು ಹಳೆಯ ತಂತ್ರಗಾರಿಕೆ ಯಾದರೂ ನೋಡುಗರನ್ನು ವಿಚಲಿತಗೊಳಿಸುತ್ತದೆ.

ಕೋಡಂಗಿ ಪಾತ್ರ ಮಾಡಿರುವ ಬಿಲ್ ಸ್ಕಸ್‌ಗಾರ್ಡ್ ಅವರ ಅಭಿನಯಕ್ಕೆ ಮೆಚ್ಚುಗೆಯ ಮಹಾಪೂರ ಹರಿದಿದೆ. ಮುಖದ ಮೇಲೆ ಕೋಡಂಗಿ ಬಣ್ಣ ಇದ್ದರೂ ಭಾವಗಳ ಅಭಿವ್ಯಕ್ತಿಯಲ್ಲಿ ಯಾವುದೇ ಕೊರತೆ ಮಾಡಿಲ್ಲ ಬಿಲ್. ಪುಟ್ಟ ಹುಡುಗನನ್ನು ಕಾಪಾಡುವ ದಿಟ್ಟ ಹುಡುಗನ ಪಾತ್ರದಲ್ಲಿ ಜೇಡೆನ್ ಲೀಬೆರ್ ಅಭಿನಯಿಸಿದ್ದಾರೆ.

ಬೆಳಕು ಕತ್ತಲೆಗಳ ನಡುವೆ ಆಟವಾಡುತ್ತಾ, ಕಾದಂಬರಿಯನ್ನು ದೃಶ್ಯಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಛಾಯಾಗ್ರಾಹಕ ಚುಂಗ್ ಹಾನ್ ಚುಂಗ್. ಸಿನಿಮಾ ನಿರ್ಮಾಣಕ್ಕೆ 3.5 ಕೋಟಿ ಡಾಲರ್ ಖರ್ಚಾಗಿದೆ. ಬಾಕ್ಸ್‌ ಆಫೀಸ್‌ನಲ್ಲಿ 63 ಕೋಟಿ ಡಾಲರ್ ಗಳಿಸಿದೆ.

*

ಡಬ್‌ಸ್ಮಾಶ್ ಆದ ‘ಇಟ್’ ಪಾತ್ರ
‘ಇಟ್‌’ ಸಿನಿಮಾ ಟ್ರೇಲರ್ ವೈರಲ್‌ ಆಗುತ್ತಿದ್ದಂತೆ, ಟ್ರೇಲರ್‌ನಲ್ಲಿರುವ ಹಲವು ದೃಶ್ಯಗಳನ್ನು ಇಟ್ಟುಕೊಂಡು ಮಾಡಿದ ರಿಮಿಕ್ಸ್‌ ಹಾಗೂ ಡಬ್‌ಸ್ಮಾಶ್ ವಿಡಿಯೊಗಳು ಬರುತ್ತಿವೆ. ಜಗತ್ತಿನ ಶ್ರೇಷ್ಠ ಹಾರರ್ ಸಿನಿಮಾಗಳ ಸಂಭಾಷಣೆ ಇಟ್ಟುಕೊಂಡು ಡಬ್‌ಸ್ಮಾಶ್ ಮಾಡುವ ಕೆಲ್ಲಿ ಸ್ಟಾಕನ್ ಎಂಬುವವರು ಮಾಡಿದ ‘ಇಟ್‌’ ಸಿನಿಮಾದ ‘ಯು ವಿಲ್‌ ಫ್ಲೋಟ್ ಟೂ’ ಎಂಬ ಸಂಭಾಷಣೆಯ ಡಬ್‌ಸ್ಮಾಶ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪುಟ್ಟ ಹುಡುಗ ‘ಯು ವಿಲ್‌ ಫ್ಲೋಟ್ ಟೂ’ ಎಂದಾಗಲೆಲ್ಲಾ ಕೋಡಂಗಿ ಪ್ರತ್ಯಕ್ಷವಾಗುತ್ತದೆ. ಈ ಸಾಲು ಸಿನಿಮಾದ ಹಿಟ್‌ ಸಾಲು. ಈ ಸಾಲುಗಳನ್ನು ಇಟ್ಟುಕೊಂಡು ‘1 ಅವರ್ ಆಂಡ್ 10 ಅವರ್ಸ್‌’ (1 Hour And 10 Hours) ಎಂಬ ಯುಟ್ಯೂಬ್ ವಾಹಿನಿ ರಿಂಗ್‌ಟ್ಯೂನ್ ಮಾಡಿದೆ. ಕೇಳಲು ಭಯಾನಕವಾಗಿರುವ ಈ ರಿಂಗ್‌ಟ್ಯೂನ್ ಪುಟ್ಟ ಮಗು ಮೆಲುದನಿಯಲ್ಲಿ ‘ಯು ವಿಲ್‌ ಫ್ಲೋಟ್ ಟೂ’ ಎನ್ನುವ ಸಾಲಿಗೆ ನಡುಕ ಹುಟ್ಟಿಸುವ ಸಂಗೀತವನ್ನು ಸಂಯೋಜಿಸಿದ್ದಾರೆ.

ಕೆಸರಿನಲ್ಲಿ ಕಾಗದದ ದೋಣಿಯನ್ನು ಬಿಟ್ಟು ಪುಟ್ಟ ಹುಡುಗ ಆಟವಾಡುತ್ತಿರುತ್ತಾನೆ. ಈ ದೋಣಿ ತೇಲುತ್ತಾ ಸೀದಾ ಚರಂಡಿ ಗುಂಡಿಯೊಳಗೆ ಬೀಳುತ್ತದೆ. ತಕ್ಷಣ ಅಲ್ಲಿಂದ ಎದ್ದು ಬರುವ ಕೋಡಂಗಿ ಈ ದೋಣಿಯನ್ನು ಹುಡುಗನಿಗೆ ನೀಡುತ್ತಾನೆ. ಈ ದೃಶ್ಯವನ್ನು ಇಟ್ಟುಕೊಂಡು ಆರೋನ್ ಫ್ರೇಸರ್ ಎಂಬ ಹಾಡುಗಾರ ತಮಾಷೆಯಾದ ಡಬ್‌ಸ್ಮಾಶ್ ಮಾಡಿದ್ದಾರೆ. ‘ಮಕ್ಕಳನ್ನು ತಿನ್ನುವ ಕೋಡಂಗಿ’ ಎಂಬ ಈ ಹಾಡು ಅಮೆರಿಕದ ಪಾರ್ಟಿ ಹಾಡಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.