ADVERTISEMENT

ನಾಯಿ ಜೋಪಾನ

​ಪ್ರಜಾವಾಣಿ ವಾರ್ತೆ
Published 28 ಮೇ 2018, 19:30 IST
Last Updated 28 ಮೇ 2018, 19:30 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಸದ್ದಿಲ್ಲದೆ, ಸುಳಿವೇ ಕೊಡದೆ ಮಳೆರಾಯ ಧುಮ್ಮಿಕ್ಕುತ್ತಲೇ ಇದ್ದಾನೆ. ಮುಂಗಾರು ಶುರುವಾಯಿತೇ ಎಂದು ಆಕಾಶ ನೋಡುವಷ್ಟರಲ್ಲಿ ನಾವು ತೋಯ್ದು ತೊಪ್ಪೆಯಾಗಿರುತ್ತೇವೆ. ನಾವು ಮಳೆಗೆ ನೆನೆದರೆ ಬಟ್ಟೆ ಬದಲಾಯಿಸಿಬಿಡಬಹುದು. ಮನೆಯ ಸಾಕುಪ್ರಾಣಿಗಳು ಅಕಾಲಿಕ ಮಳೆಯಲ್ಲಿ ನೆನೆದರೆ?

ರೋಮ ಮೈಗೆ ಅಂಟಿಕೊಳ್ಳುವ ಹಾಗೆ ನಾಯಿ, ಬೆಕ್ಕುಗಳು ನೆನೆದರೆ ದುರ್ವಾಸನೆ ಶುರುವಾಗುತ್ತದೆ. ಸೊಳ್ಳೆ ಕಡಿತ, ಶೀತ, ಕೆಮ್ಮು, ಅಜೀರ್ಣದಂತಹ ಸಣ್ಣಪುಟ್ಟ ಸಮಸ್ಯೆಗಳಿಂದ ಅವು ನಲುಗುವಂತಾಗುತ್ತದೆ. ಹಾಗಿದ್ದರೆ ಅವುಗಳನ್ನು ಬೆಚ್ಚಗೆ ಮತ್ತು ಆರೋಗ್ಯದಿಂದ ಇರಿಸುವ ಬಗೆ ಹೇಗೆ ಎಂದು ನೋಡೋಣ ಬನ್ನಿ.

* ಸಾಕು ನಾಯಿಗಳನ್ನು ‘ವಾಕಿಂಗ್‌’ ನೆಪದಲ್ಲಿ ಕರೆದೊಯ್ದು ತಮ್ಮ ಮನೆಯ ವಠಾರದಿಂದ ಆಚೆ ಮಲ ಮೂತ್ರ ವಿಸರ್ಜನೆ ಮಾಡಿಸುವುದು ರೂಢಿ. ಉದ್ಯಾನಕ್ಕೋ, ಬೀದಿಗೋ ಕರೆದೊಯ್ದಾಗ ಹೆಚ್ಚು ಹುಲ್ಲು, ಕೊಳಚೆ ನೀರು ಇಲ್ಲದ ಕಡೆ ನಿಲ್ಲಿಸಿ. ಅಂತಹ ಜಾಗಗಳಲ್ಲಿ ಸೊಳ್ಳೆಗಳ ಆಗರವೇ ಇರುತ್ತದೆ.

ADVERTISEMENT

* ಮಳೆಗೆ ಒದ್ದೆಯಾದ ತಕ್ಷಣ ಒಣ ಬಟ್ಟೆಯಿಂದ ಒರೆಸಿ. ರೋಮ ಒಣಗಿಸದಿದ್ದರೆ ಚರ್ಮದಲ್ಲಿ ನವೆ, ಕಡಿತ ಶುರುವಾಗುತ್ತದೆ. ಆಗ ಅವು ಹಲ್ಲಿನಿಂದ ಕಚ್ಚಿಕೊಳ್ಳುತ್ತವೆ ಇಲ್ಲವೇ ಉರುಗಿನಿಂದ ಕೆರೆದುಕೊಳ್ಳುತ್ತವೆ. ಮಳೆಗಾಲದಲ್ಲಿ ನಾಯಿಗಳ ಮೈಯಲ್ಲಿ ಗಾಯಗಳಾಗದಂತೆ ನೋಡಿಕೊಳ್ಳುವುದು ಅಗತ್ಯ.

* ಮಳೆಗಾಲದಲ್ಲಿ ನಾಯಿಗಳನ್ನು ಬೆಚ್ಚಗೆ ಇರಿಸಿಕೊಳ್ಳುವುದು ಎಂದರೆ ಮೈ ಒದ್ದೆಯಾಗದಂತೆ ನೋಡಿಕೊಳ್ಳುವುದು ಅಷ್ಟೇ ಅಲ್ಲ. ಅವುಗಳ ಊಟ, ಉಪಾಹಾರ, ನೀರು, ಸ್ನಾನ, ವಾಯುವಿಹಾರ.. ಹೀಗೆ ಎಲ್ಲಾ ಚಟುವಟಿಕೆಗಳಲ್ಲೂ ಹೆಚ್ಚಿನ ಕಾಳಜಿವಹಿಸಬೇಕು.

* ಸ್ನಾನಕ್ಕೆ ನಿತ್ಯ ಬಳಸುವ ಶ್ಯಾಂಪೂಗಿಂತ ಆ್ಯಂಟಿಸೆಪ್ಟಿಕ್‌ ಶ್ಯಾಂಪೂ ಬಳಸುವುದರಿಂದ ಹೇನು ಮತ್ತು ನುಸಿಗಳ ಕಾಟ ತಪ್ಪುವುದು.

* ನಿಯಮಿತವಾಗಿ ವಾರಕ್ಕೆ ನಾಲ್ಕು ಬಾರಿ ಮೈಗೆ ಬ್ರಶ್‌ ಮಾಡುತ್ತಿದ್ದರೆ ಮಳೆಗಾಲದಲ್ಲಿ ಪ್ರತಿನಿತ್ಯ ಐದು ನಿಮಿಷವಾದರೂ ಬ್ರಶ್‌ ಮಾಡುವುದರಿಂದ ವಾತಾವರಣದ ತೇವಾಂಶದಿಂದಾಗಿ ಜಡಗಟ್ಟಿರುವ ಮೈ ಮತ್ತು ಕೂದಲಿಗೆ ಹೊಸ ಚೈತನ್ಯ ಸಿಕ್ಕಿದಂತಾಗುತ್ತದೆ. ಹೇನು, ನುಸಿ, ಸೊಳ್ಳೆಗಳಿಂದ ಕಿರಿಕಿರಿ ಉಂಟಾಗುತ್ತಿದ್ದರೆ ನಿಮ್ಮ ನಾಯಿಗೆ ತಾಜಾತನವೂ ಸಿಗುತ್ತದೆ.

* ಉದ್ದ ಕೂದಲಿನ ನಾಯಿಗಳಿಗೆ ಮಳೆಗಾಲದಲ್ಲಿ ಕೂದಲನ್ನು ಟ್ರಿಮ್‌ ಮಾಡಿಸುವುದು ಅತ್ಯಂತ ಸೂಕ್ತ. ಸ್ನಾನ ಮಾಡಿ ಡ್ರಯರ್‌ನಿಂದ ಕೂದಲು ಒಣಗಿಸಿ ಕೋಟ್‌ ಹಾಕಿಬಿಡುವುದು ಸೂಕ್ತ.

* ಈ ಬಾರಿಯ ಮಳೆಗಾಲದಲ್ಲಿ ಮಳೆಗಿಂತಲೂ ಗುಡುಗು, ಸಿಡಿಲು ಮತ್ತು ಮಿಂಚಿನ ಆರ್ಭಟ ಹೆಚ್ಚಾಗಿರುವ ಲಕ್ಷಣಗಳು ಕಾಣುತ್ತಿವೆ. ಗುಡುಗು, ಸಿಡಿಲು ಮತ್ತು ಮಿಂಚು ಸಾಕುಪ್ರಾಣಿಗಳಲ್ಲಿ ಆತಂಕ, ಭಯದ ವಾತಾವರಣ ಸೃಷ್ಟಿಸುತ್ತವೆ. ಜೋರಾಗಿ ಕಿರುಚಾಡುವುದು, ಭಯದಿಂದ ಮಂಚ, ಕುರ್ಚಿ, ಜೋಕಾಲಿಯ ಅಡಿಯಲ್ಲೋ, ಕತ್ತಲು ಇರುವಲ್ಲೋ ಬಚ್ಚಿಟ್ಟುಕೊಳ್ಳಲು ಅವು ಬಯಸುತ್ತವೆ. ಹೀಗೆ ಭಯಪಟ್ಟುಕೊಂಡರೆ ಅವುಗಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಅಪಾಯ ತಪ್ಪಿದ್ದಲ್ಲ. ಹಾಗಾಗಿ ಮಳೆಗಾಲದಲ್ಲಿ ಕಿಟಕಿ, ಬಾಗಿಲು ಮುಚ್ಚಿ, ಪರದೆ ಹಾಕಿ ನಿಮ್ಮ ಜೊತೆಯಲ್ಲೇ ಇರುವಂತೆ ನೋಡಿಕೊಳ್ಳುವುದು ಉತ್ತಮ. ಅವುಗಳಿಗೆ ನಿಗದಿ ಮಾಡಿದ ಜಾಗದಲ್ಲೋ, ಗೂಡಿನಲ್ಲೋ ಬಿಡುವುದಾದರೂ ಅವುಗಳ ಇಷ್ಟದ ಆಟಿಕೆಯನ್ನು ಪಕ್ಕದಲ್ಲೇ ಇಟ್ಟುಬಿಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.