ADVERTISEMENT

ನ್ಯೂರೋನಾಕ್ಸ್ ನಿರಿಗೆ ಚಿಕಿತ್ಸೆ

ಡಾ.ಸುಜಯ್ ಶಾಂತಕುಮಾರ್
Published 19 ಏಪ್ರಿಲ್ 2013, 19:59 IST
Last Updated 19 ಏಪ್ರಿಲ್ 2013, 19:59 IST

ಮುಖ ಹಾಗೂ ಕೈಗಳ ಮೇಲೆ ನೆರಿಗೆ ಮೂಡುವುದು ವಯಸ್ಸಾಗುವುದರ ಸಂಕೇತ. ಚರ್ಮ ಸುಕ್ಕುಗಟ್ಟುವುದು, ಮಡಚಿಕೊಳ್ಳುವುದು, ಜೋತು ಬೀಳುವುದು ನೆರಿಗೆಗಳ ಲಕ್ಷಣ.

ನೆರಿಗೆಗಳಿಗೆ ಚಿಕಿತ್ಸೆ ನೀಡುವ ವಿಧಾನವೇ ನ್ಯೂರೋನಾಕ್ಸ್. ಈ ವಿಧಾನದಲ್ಲಿ, ದೇಹದ ಯಾವ ಭಾಗದಲ್ಲಿ ನೆರಿಗೆ ಮೂಡಿದೆಯೋ ಆ ಭಾಗಕ್ಕೆ ಚುಚ್ಚುಮದ್ದು ನೀಡಲಾಗುತ್ತದೆ. 16ರಿಂದ 65 ವರ್ಷದ ನಡುವಿನ ಮಹಿಳೆಯರು ಹಾಗೂ ಪುರುಷರು ಈ ಚಿಕಿತ್ಸೆ ಪಡೆಯಲು ಅರ್ಹರು.

ತಮ್ಮ ಭಾವನೆಗಳನ್ನು ಅಭಿವ್ಯಕ್ತಗೊಳಿಸಲು ಕೆಲವರು ಸ್ನಾಯುಗಳನ್ನು ಅತಿಯಾಗಿ ಬಳಸುತ್ತಾರೆ. ಇದರಿಂದ ಮುಖದ ಮೇಲೆ ನೆರಿಗೆಗಳು ಮೂಡುತ್ತವೆ. ಅವರು ಬೇಗ ಮುಪ್ಪಾದವರಂತೆ ಕಾಣುತ್ತಾರೆ. ಅಂತಹವರಿಗೆ ನ್ಯೂರೋನಾಕ್ಸ್ ಚಿಕಿತ್ಸೆ ನೀಡಬಹುದು.

ಹಣೆಯ ಮೇಲೆ ಮೂಡುವ ನೆರಿಗೆಗಳು, ಹುಬ್ಬುಗಂಟು, ಕಣ್ಣಿನ ಸುತ್ತಮುತ್ತಲಿನ ಭಾಗದಲ್ಲಿ ಕಂಡುಬರುವ ಚಿಹ್ನೆಗಳು ಮುಖದಲ್ಲಿ ಕಂಡುಬರುವ ವಯಸ್ಸಾಗುವಿಕೆಯ ಲಕ್ಷಣಗಳು. ಮುಖದ ಅಂದ, ಆಕರ್ಷಣೆ, ಭಾವನೆಗಳನ್ನು ಅಭಿವ್ಯಕ್ತಗೊಳಿಸುವಲ್ಲಿ ಹುಬ್ಬುಗಳಿಗೆ ಬಹಳ ಮುಖ್ಯವಾದ ಸ್ಥಾನವಿದೆ. ಮಹಿಳೆಯರಲ್ಲಿ ಹುಬ್ಬುಗಳು ಬಿಲ್ಲಿನಂತೆ ಬಾಗಿದ್ದರೆ ಅವರ ಅಂದ ಹತ್ತಾರು ಪಾಲು ಹೆಚ್ಚಾಗಿರುತ್ತದೆ. ಆದರೆ, ವಯಸ್ಸು ಹೆಚ್ಚಿದಂತೆಲ್ಲ ಹುಬ್ಬುಗಳು ಸಡಿಲಗೊಳ್ಳುತ್ತವೆ. ಅಷ್ಟೇ ಅಲ್ಲ, ಇಳಿಬಿದ್ದಂತಾಗಿ ಮುಖದ ಅಂದವೇ ಕೆಟ್ಟುಹೋಗುತ್ತದೆ.

ಅತಿಯಾಗಿ ಬೆವರುವುದು, ಕೈಕಾಲು, ಉಗುರುಗಳಲ್ಲಿ ಬೆವರು ಕಾಣಿಸಿಕೊಳ್ಳುವುದು, ಕಂಕುಳಲ್ಲಿ ಬೆವರುವಿಕೆ ಹೆಚ್ಚುವುದು, ಮೆಳ್ಳೆಗಣ್ಣು, ದೀರ್ಘಾವಧಿ ಮೈಗ್ರೇನ್ ಸಹ ವಯಸ್ಸಾಗುವುದರ ಸಂಕೇತ.

ನ್ಯೂರೋನಾಕ್ಸ್ ಚಿಕಿತ್ಸೆ ನರಗಳಿಂದ ಮಾಂಸಖಂಡಗಳಿಗೆ ಹೋಗುವ ಸಂದೇಶಗಳನ್ನು ತಡೆಯುತ್ತದೆ. ಆಗ ಚುಚ್ಚುಮದ್ದು ನೀಡಿದ ಮಾಂಸಖಂಡದ ಮೇಲಿನ ನೆರಿಗೆಗಳು ಕಡಿಮೆಯಾಗುವುದಲ್ಲದೆ, ಚರ್ಮ ಮೃದುವಾಗುತ್ತದೆ.

ಚಿಕಿತ್ಸಾ ವಿಧಾನ
ಕೆಲವೇ ನಿಮಿಷಗಳಲ್ಲಿ ಮಾಡಿ ಮುಗಿಸಬಹುದಾದ ಚಿಕಿತ್ಸೆ ಇದು. ಈ ಚಿಕಿತ್ಸೆಗೆ ಅರಿವಳಿಕೆ ಮದ್ದಿನ ಅಗತ್ಯವಿಲ್ಲ. ಅತ್ಯುತ್ತಮ ಸೂಜಿಯನ್ನು ಬಳಸುವ ಮೂಲಕ ಚಿಕಿತ್ಸೆ ಪಡೆಯುವವರಿಗೆ ಹೆಚ್ಚು ಘಾಸಿಯಾಗದಂತೆ ನೋಡಿಕೊಳ್ಳಲಾಗುತ್ತದೆ. ಮಾಂಸಖಂಡಗಳಿಗೆ ಹಲವು ಸಣ್ಣ ಚುಚ್ಚುಮದ್ದುಗಳನ್ನು ನೀಡಲಾಗುತ್ತದೆ. ಅದನ್ನು ಎಲ್ಲಿಗೆ ನೀಡಬೇಕು ಹಾಗೂ ಚುಚ್ಚುಮದ್ದಿನ ಡೋಸೇಜ್ ಎಷ್ಟಿರಬೇಕು ಎನ್ನುವುದನ್ನು ಮಾಂಸಖಂಡದ ಗಾತ್ರ ಹಾಗೂ ಅದರ ಇರುವಿಕೆಯನ್ನು ನೋಡಿ ನಿರ್ಧರಿಸಲಾಗುತ್ತದೆ. ಚಿಕಿತ್ಸೆ ಪಡೆದ ಮೂರರಿಂದ ಏಳು ದಿನಗಳ ಒಳಗೆ ಅದು ಕೆಲಸ ಮಾಡಲಾರಂಭಿಸುತ್ತದೆ. ಚಿಕಿತ್ಸೆಯ ಗರಿಷ್ಠ ಪರಿಣಾಮವನ್ನು ಹದಿನೈದರಿಂದ ಮೂವತ್ತು ದಿನಗಳ ನಂತರದಲ್ಲಿ ಕಾಣಬಹುದು.

ರೋಗಿಯ ಪಾಲಿಗೆ ಇದು ಉಳಿದೆಲ್ಲ ಚಿಕಿತ್ಸೆಗಳಿಗಿಂತ ಅತ್ಯಂತ ಕಡಿಮೆ ಶ್ರಮ ಬೇಡುವ ಹಾಗೂ ವಿಶ್ರಾಂತಿಯ ಅಗತ್ಯ ಇಲ್ಲದ ಚಿಕಿತ್ಸಾ ವಿಧಾನ. ಇದು ದೇಹದ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡುವುದಲ್ಲದೆ, ಮುಂದೆ ಆಗಬಹುದಾದ ನೆರಿಗೆಗಳನ್ನೂ ತಡೆಯುತ್ತದೆ.
 

ಯಾರಿಗೆ ಚಿಕಿತ್ಸೆ ನೀಡಬಾರದು?

*ಗರ್ಭಿಣಿಯರು
*ಹಾಲೂಡಿಸುವ ಬಾಣಂತಿಯರು

ADVERTISEMENT

ನೆರಿಗೆಗೆ ಕಾರಣ
*ಸ್ವಾಭಾವಿಕವಾಗಿಯೇ ವಯಸ್ಸಾಗುವಿಕೆ
*ದೀರ್ಘಕಾಲ ಅಪಾಯಕಾರಿ ವಿಕಿರಣಗಳಿಗೆ ಒಡ್ಡಿಕೊಳ್ಳುವುದು
*ಚರ್ಮದ ಕೆಳಗಿನ ಕೊಬ್ಬಿನ ನಾಶ
*ಸ್ನಾಯುಗಳ ಅತಿಯಾದ ಬಳಕೆ
*ಮೃದು ಅಂಗಾಂಶಗಳ ಸ್ಥಿತಿಸ್ಥಾಪಕ ಗುಣ ನಶಿಸುವುದರಿಂದ ಚರ್ಮದಲ್ಲಿ ಬದಲಾವಣೆಗಳು ಕಾಣಿಸುತ್ತವೆ
*ಧೂಮಪಾನ, ಸೂರ್ಯನ ಬೆಳಕು, ವಿಪರೀತ ಮಾನಸಿಕ ಒತ್ತಡದಿಂದ ಕೂಡ ಶೀಘ್ರ ಮುಪ್ಪು ಆವರಿಸುತ್ತದೆ

ಅಡ್ಡ ಪರಿಣಾಮ
*ಚುಚ್ಚಮದ್ದು ನೀಡಿದ ಜಾಗ ಕೆಂಪಾಗುತ್ತದೆ
*ಹಾಗೂ ತಲೆಭಾರ ಕಾಣಿಸಿಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.