ADVERTISEMENT

ಪಿಚ್ಚರ್ ನೋಡಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2017, 19:30 IST
Last Updated 14 ಜೂನ್ 2017, 19:30 IST
ಪಿಚ್ಚರ್ ನೋಡಿ
ಪಿಚ್ಚರ್ ನೋಡಿ   

‘ಒಂದು ಸಿನಿಮಾ ಗೆಲ್ಲಲು ಕಾರಣವಾಗುವ ಅಂಶ ಯಾವುದು?’ ಈ ಪ್ರಶ್ನೆಯನ್ನು ಸಿನಿಮಾ ಮಾಧ್ಯಮದಲ್ಲಿ ತೊಡಗಿಕೊಂಡಿರುವ ಪ್ರತಿಯೊಬ್ಬನೂ ಪದೇ ಪದೇ ಕೇಳಿಕೊಳ್ಳುತ್ತಲೇ ಇರುತ್ತಾನೆ. ಆದರೆ ಯಾರಿಗೂ ಒಂದು ಸಿದ್ಧ ಉತ್ತರ ಇದುವರೆಗೆ ಸಿಕ್ಕಿಲ್ಲ ಎಂಬುದೇ ಆ ಮಾಧ್ಯಮವನ್ನು ಇನ್ನೂ ಪ್ರಯೋಗಶೀಲವಾಗಿರಿಸಿದೆ. ವೈಭವೋಪೇತ ದೃಶ್ಯಗಳು, ಅನಿರೀಕ್ಷಿತ ತಿರುವುಗಳು, ಪ್ರೇಕ್ಷಕನನ್ನು ಗಟ್ಟಿಯಾಗಿ ಹಿಡಿದಿಡುವ ಕಥೆ... ಹೀಗೆ ಒಳ್ಳೆಯ ಸಿನಿಮಾದಲ್ಲಿ ಇರಬೇಕಾದ ಅಂಶಗಳನ್ನು ಪಟ್ಟಿ ಮಾಡುತ್ತಲೇ ಹೋಗಬಹುದು. ಆದರೆ ಈ ಪಟ್ಟಿಯಲ್ಲಿ ಹಲವು ಅಂಶಗಳು ಇಲ್ಲದೆಯೂ ಒಂದು ಸಿನಿಮಾ ಶ್ರೇಷ್ಠತೆಯ ಗಡಿ ಮುಟ್ಟಿಬಿಡಬಹುದು. ಅದು ಆ ಮಾಧ್ಯಮದ ಮ್ಯಾಜಿಕ್‌!

ಬ್ರಿಟಿಷ್‌–ಅಮೆರಿಕನ್‌ ಚಿತ್ರ ‘127 ಅವರ್ಸ್‌’, ಸಿನಿಮಾ ಮಾಧ್ಯಮದ ವ್ಯಾಕರಣದ ಕುರಿತ ಹಲವು ನಂಬಿಕೆಗಳನ್ನು ಬುಡಮೇಲು ಮಾಡುತ್ತದೆ. ತೊಂಬತ್ತಮೂರು ನಿಮಿಷದ ಈ ಸಿನಿಮಾದ ಕಥೆಯನ್ನು ಮೂರು ಸಾಲಿನಲ್ಲಿ ಹೇಳಿಬಿಡಬಹುದು!  ‘ಸಾಹಸಿ ಪರ್ವತಾರೋಹಿ ಆ್ಯರೋನ್‌ ರ್‍ಯಾಸ್ಟೋನ್‌ ಕಡಿದಾದ ಕಣಿವೆಯೊಂದರಲ್ಲಿ ಇಳಿಯಬೇಕಾದರೆ ಕಾಲು ಜಾರಿ ಬೀಳುತ್ತಾನೆ. ಅವನ ಬಲಗೈ ಆ ಕಣಿವೆಯಲ್ಲಿನ ಕಲ್ಲೊಂದರ ನಡುವೆ ಜಜ್ಜಿಕೊಂಡು ಸಿಕ್ಕಿಹಾಕಿಕೊಳ್ಳುತ್ತದೆ. ಆ ಸ್ಥಿತಿಯಲ್ಲಿಯೇ ಅವನು 127 ಗಂಟೆಗಳ ಕಾಲ ಏಕಾಂಗಿಯಾಗಿ ಕಳೆಯಬೇಕಾಗುತ್ತದೆ’.

ಆದರೆ ಹೀಗೆ ಹೇಳಿದರೆ ಈ ಸಿನಿಮಾದ ಬಗ್ಗೆ ಏನನ್ನೂ ಹೇಳಿದಂತಾಗುವುದಿಲ್ಲ. ಆ ಕಡಿದಾದ ಕಣಿವೆಯ ಒಂದೇ ಜಾಗದಲ್ಲಿ ಬಂಡೆಯ ನಡುವೆ ಸಿಕ್ಕಿಹಾಕಿಕೊಂಡ ಕೈಯನ್ನು ಬಿಡಿಸಿಕೊಳ್ಳಲು ಪ್ರಯತ್ನಿಸುವುದನ್ನೇ ತೊಂಬತ್ತಮೂರು ನಿಮಿಷಗಳ ಕಾಲ ಉಸಿರುಬಿಗಿಹಿಡಿದು ನೋಡುವಂತೆ ಮಾಡುತ್ತದೆ ಸಿನಿಮಾ.

ADVERTISEMENT

ಅದೊಂದು ನಿರ್ಜನ ಪ್ರದೇಶ, ಆ್ಯರೋನ್‌ನ ಸಹಾಯಕ್ಕೆ ಯಾರೆಂದರೆ ಯಾರೂ ಬರುವುದಿಲ್ಲ. ಆದರೆ ಅಲ್ಲಿ ಹಾಗೆಯೇ ಇದ್ದರೆ ಉಪವಾಸದಿಂದಲೇ ಸಾಯುವುದು ಖಚಿತ. ಕೂಗಿ, ಸಹಾಯಕ್ಕಾಗಿ ಅರಚಿ ನಿತ್ರಾಣನಾಗುವ ಆ್ಯರೋನ್‌, ಕೊನೆಗೆ ತನ್ನ ಕೈಯನ್ನು ತಾನೇ ಕತ್ತರಿಸಿಕೊಂಡು ಅಲ್ಲಿಂದ ಪಾರಾಗುವ ನಿರ್ಧಾರಕ್ಕೆ ಬರುತ್ತಾನೆ.

ಒಂದೇ ಸ್ಥಳದಲ್ಲಿ ನಡೆಯುವ ಸಿನಿಮಾ ಆದರೂ ಎಲ್ಲಿಯೂ ಏಕತಾನತೆ ಸುಳಿವೂ ಸುಳಿಯುವುದಿಲ್ಲ. ಆ್ಯರೋನ್‌ನ  ನಿರಾಶೆ, ಹತಾಶೆ, ಅಸಹಾಯಕತೆ, ಮತ್ತೆ ಬದುಕಬೇಕು ಎಂಬ ಛಲ, ಅದಕ್ಕೆ ತನ್ನ ಅಂಗವನ್ನೇ ತಾನು ಕತ್ತರಿಸಿಕೊಳ್ಳಬೇಕಾದ ಅನಿವಾರ್ಯತೆ ಎಲ್ಲವೂ ನಮ್ಮವೂ ಆಗುತ್ತ ಹೋಗುತ್ತದೆ. ಒಂದೇ ಪಾತ್ರ– ಒಂದೇ ಸ್ಥಳ ಇಟ್ಟುಕೊಂಡು ಇಷ್ಟೊಂದು ಬಿಗಿಯಾದ ಚಿತ್ರಕಥೆ ಹೆಣೆದಿರುವ ನಿರ್ದೇಶಕ ಡ್ಯಾನಿ ಬೋಯ್ಲೆ ಪ್ರತಿಭೆಯ ಬಗ್ಗೆ ಬೆರಗು ಹುಟ್ಟುತ್ತದೆ.

ಇದು ಆ್ಯರೋನ್‌ ಎಂಬ ಪರ್ವತಾರೋಹಿ ಸಾಹಸಿಗನ ಬದುಕಿನಲ್ಲಿ ನಡೆದ ಸತ್ಯಘಟನೆಯ ಬಗ್ಗೆ ಡ್ಯಾನಿ ಬೋಯ್ಲೆ ಬರೆದಿರುವ ‘ಬಿಟ್ವೀನ್‌ ದ ರಾಕ್‌ ಆ್ಯಂಡ್‌ ಹಾರ್ಡ್‌ ಪ್ಲೇಸ್‌’ ಎಂಬ  ಪುಸ್ತಕವನ್ನು ಆಧರಿಸಿದ ಸಿನಿಮಾ.  ಕಣಿವೆಯಲ್ಲಿ ಸಿಕ್ಕಿಹಾಕಿಕೊಳ್ಳುವ ಆ್ಯರೋನ್‌ನ ಬದುಕಿನ ಕೆಲವು ಚಿತ್ರಗಳನ್ನೂ ಫ್ಲಾಶ್‌ಬ್ಯಾಕ್‌ ತಂತ್ರ ಬಳಸಿ ಸಿನಿಮಾದಲ್ಲಿ ತೋರಿಸಲಾಗಿದೆ. ಇದು ಅವನ ಈ ಕ್ಷಣದ ಪರಿಸ್ಥಿತಿಯ ಬರ್ಬರತೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಪ್ರೇಕ್ಷಕನಿಗೆ ದಾಟಿಸಲು ಪೂರಕವಾಗಿದೆ.

ಆ್ಯಂಟೋನಿ ಡಾಡ್‌ ಮ್ಯಾಂಟಲ್‌ ಮತ್ತು ಎನ್‌ರಿಕ್ಯೂ ಚೆಡಿಯಾಕ್‌ ಅವರ ಛಾಯಾಗ್ರಹಣ, ಜಾನ್‌ ಹ್ಯಾರೀಸ್‌ ಸಂಕಲನ ಈ ಚಿತ್ರಕ್ಕೆ ನೀಡಿರುವ ಕೊಡುಗೆ ಗಮನಾರ್ಹ. ಚಿತ್ರದ ಗತಿಯನ್ನು ತೀವ್ರಗೊಳಿಸಲು ಅವರು ನಡೆಸಿದ ಕಸರತ್ತು ಪ್ರತಿ ದೃಶ್ಯದಲ್ಲೂ ಎದ್ದು ಕಾಣುತ್ತದೆ. ಭಾರತದ ಎ. ಆರ್‌. ರೆಹಮಾನ್‌ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆನ್ನುವುದು ಇನ್ನೊಂದು ವಿಶೇಷ. ಸಾಹಸಿ ಪರ್ವತಾರೋಹಿ ಆ್ಯರೋನ್‌ ರ್‍ಯಾಸ್ಟೋನ್‌ ಪಾತ್ರದಲ್ಲಿ ನಟಿಸಿರುವ ಜೇಮ್ಸ್‌ ಫ್ರಾನ್ಕೋ ಅಭಿನಯ ಬಹುಕಾಲ ನೆನಪಿನಲ್ಲಿ ಉಳಿಯುವಂಥದ್ದು. ಚಿತ್ರವನ್ನು ಯೂ ಟ್ಯೂಬ್‌ನಲ್ಲಿ goo.gl/roHR5M ಕೊಂಡಿ ಬಳಸಿ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.