ADVERTISEMENT

ಪಿಚ್ಚರ್ ನೋಡಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2018, 19:30 IST
Last Updated 7 ಮಾರ್ಚ್ 2018, 19:30 IST
ಪಿಚ್ಚರ್ ನೋಡಿ
ಪಿಚ್ಚರ್ ನೋಡಿ   

ಅದು ನಾಗರಿಕ ಬದುಕಿನ ಸೌಲಭ್ಯಗಳ ಗಾಳಿ ಗಂಧವೂ ಸೋಕದ ಹಳ್ಳಿ. ಇಟ್ಟಿಗೆ ಮಾಡುವುದು ಅಲ್ಲಿನ ಜನರ ಕಾಯಕ. ಪುಡಿಗಾಸಿಗಾಗಿ ಜೀವದ ತ್ರಾಣವನ್ನೆಲ್ಲ ಬಸಿದು ದುಡಿಯುತ್ತಿರುವ ಅವರಿಗೆ ತಮ್ಮ ಶ್ರಮದ ಬೆಲೆಯ ಕುರಿತೂ ಅರಿವಿಲ್ಲ. ಅಕ್ಷರದ ಬೀಜ ಅವರೆದೆಗೆ ಬಿದ್ದಿಲ್ಲ. ಇಂಥದ್ದೊಂದು ಹಳ್ಳಿಯಲ್ಲಿ ವಿಮಲ್‌ ಎಂಬ ತರುಣ ಅಕ್ಷರ ಬಿತ್ತಲು ನಿರ್ಧರಿಸುತ್ತಾನೆ. ಶೋಷಣೆಯ ಬದುಕಿಗೆ ಒಗ್ಗಿಕೊಂಡ ಅಲ್ಲಿನ ಜನರಿಗೆ ಅವನ ಯಾವ ಮಾತುಗಳೂ ಪಥ್ಯವೆನಿಸುವುದಿಲ್ಲ. ತಮ್ಮ ಬದುಕಿನ ಉನ್ನತಿಗಾಗಿಯೇ ಅವನು ಯತ್ನಿಸುತ್ತಿರುವುದು ಎಂಬುದನ್ನು ಒಪ್ಪಿಕೊಳ್ಳಲೂ ಅವರಿಗೆ ಸಾಧ್ಯವಿಲ್ಲ.

ಇಲ್ಲಿ ಅಕ್ಷರ ಎನ್ನುವುದು ಕೇವಲ ‘ಸಾಕ್ಷರತೆ’ಯ ಪ್ರತೀಕವಷ್ಟೇ ಅಲ್ಲ. ಅದು ಗೌರವಯುತವಾದ ನಾಗರಿಕ ಬದುಕಿಗೆ, ಆಧುನಿಕ ಜಗತ್ತಿಗೆ ಇರುವ ಬೆಳಕಿಂಡಿಯೂ ಹೌದು. ಆದರೆ ಬದುಕಿಡೀ ಕತ್ತಲಲ್ಲಿಯೇ ಇದ್ದವರಿಗೆ ಒಮ್ಮಿಂದೊಮ್ಮೆಲೇ ಬೆಳಕಿನ ಕಿರಣ ರಾಚಿದಾಗ ಕಣ್ತೆರೆಯುವುದು ಕಷ್ಟವಾಗುತ್ತದಲ್ಲ, ಹಾಗೆಯೇ ಹೊಸತನಕ್ಕೆ ಒಗ್ಗಿಕೊಳ್ಳಲಾಗದೆ ಊರಿನವರು ಮೊದಮೊದಲು ತಿರಸ್ಕರಿಸುತ್ತಾರೆ.

1960ರಲ್ಲಿ ತಮಿಳುನಾಡಿನ ಒಂದು ಹಳ್ಳಿಯ ಕಥನಭಿತ್ತಿಯನ್ನು ಇಟ್ಟುಕೊಂಡು ಸಿನಿಮಾ ಕಟ್ಟಿದ್ದಾರೆ ಎ. ಸರ್ಕುಣಮ್‌. ತಮಿಳು ಭಾಷೆಯ ಈ ಸಿನಿಮಾ 2011ರಲ್ಲಿ ನಿರ್ಮಾಣವಾಗಿದೆ. ಅಕ್ಷರತೆಯನ್ನು ಬಿತ್ತುವ ಸಂಕಷ್ಟದ ಜತೆಗೆ ವಿಮಲ್‌ ಮತ್ತು ಇನಿಯಾ ನಡುವಿನ ನವಿರು ಪ್ರೇಮದ ಎಳೆಯೂ ಇದೆ.

ADVERTISEMENT

ಪಾಳುಬಿದ್ದ ಜೋಪಡಿಯಲ್ಲಿಯೇ ಶಾಲೆಯನ್ನು ಆರಂಭಿಸಿ ಮಕ್ಕಳಿಗೆ ಅಕ್ಷರ ಕಲಿಸಲು ನಾಯಕ ಪ್ರಯತ್ನಿಸುತ್ತಾನೆ. ಆದರೆ ಮಕ್ಕಳೋ ಶಾಲೆಯತ್ತ ತಲೆಯನ್ನೂ ಹಾಕುವುದಿಲ್ಲ. ಹೀಗೆ ತಮ್ಮ ಉನ್ನತಿಯನ್ನು ತಾವೇ ನಿರಾಕರಿಸುವ ಸಮುದಾಯ, ಅದರ ಆ ಅಜ್ಞಾನವನ್ನು ಬಳಸಿಕೊಂಡು ನಿರಂತರವಾಗಿ ಶೋಷಿಸುತ್ತಲೇ ಬರುತ್ತಿರುವ ಪಾಳೆಗಾರ ವರ್ಗ, ಈ ಎರಡರ ನಡುವೆ ಸಿಲುಕಿಕೊಂಡು ಒದ್ದಾಡುವ ತರುಣನ ಸುತ್ತಲೇ ಈ ಚಿತ್ರ ಬೆಳೆಯುತ್ತ ಹೋಗುತ್ತದೆ.

1960ರ ಕಥನವಾದರೂ ಸಿನಿಮಾ ತನ್ನ ಸಾರ್ವಕಾಲಿಕ ಗುಣದಿಂದ ಇಂದಿನ ಕಥೆಯೂ ಆಗಿ ಕಾಡುವಷ್ಟು ಶಕ್ತವಾಗಿದೆ. ಅಲ್ಲಿನ ಹಲವು ದೃಶ್ಯಗಳು ನಮ್ಮ ಊರಿನ, ನಮ್ಮ ಬೀದಿಯ, ನಮ್ಮ ಬದುಕಿನ ಅಂಚಿನಲ್ಲಿಯೇ ಘಟಿಸುತ್ತಿವೆಯೇನೋ ಎನ್ನುವಷ್ಟು ಆಪ್ತವಾಗುವುದು ನಿರ್ದೇಶಕರ ಸೃಜನಶೀಲ ಸತ್ವಕ್ಕೆ ನಿದರ್ಶನ.

ಯೂಟ್ಯೂಬ್‌ನಲ್ಲಿ https://goo.gl/J6xwbb ಕೊಂಡಿ ಬಳಸಿಕೊಂಡು ಈ ಚಿತ್ರವನ್ನು ಉಚಿತವಾಗಿ ವೀಕ್ಷಿಸಬಹುದು.

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.