ADVERTISEMENT

ಬಂತು ದುಬಾರಿ ಸೈಕಲ್

​ಪ್ರಜಾವಾಣಿ ವಾರ್ತೆ
Published 24 ಜುಲೈ 2014, 19:30 IST
Last Updated 24 ಜುಲೈ 2014, 19:30 IST
ಬಂತು ದುಬಾರಿ ಸೈಕಲ್
ಬಂತು ದುಬಾರಿ ಸೈಕಲ್   

ಮೆಟ್ರೊ ಜನರಲ್ಲಿ ಈಗ ಫಿಟ್‌ನೆಸ್‌ ಕುರಿತ ಕಾಳಜಿ ಹೆಚ್ಚುತ್ತಿದೆ. ಇಲ್ಲಿನ ಅನೇಕರು ಜಿಮ್‌, ಜುಂಬಾ ಡಾನ್ಸ್‌, ಏರೋಬಿಕ್ಸ್‌ ಅಂತ ಗಂಟೆಗಟ್ಟಲೆ ದೇಹ ದಂಡಿಸಿ ಬೆವರಿಳಿಸುತ್ತಾರೆ. ಇನ್ನು ಕೆಲವರು ತಮ್ಮ ಮನೆಗಳಲ್ಲಿರುವ ಕಾರು, ಬೈಕ್‌ಗಳಿಗೆ ವಿಶ್ರಾಂತಿ ನೀಡಿ ನಡಿಗೆ ಅಥವಾ ಸೈಕಲ್‌ ಮೂಲಕ ಕಚೇರಿ ತಲುಪುವ ದಾರಿ ಕಂಡುಕೊಂಡಿದ್ದಾರೆ. ಇವೆಲ್ಲವುಗಳ ಉದ್ದೇಶ ಒಂದೇ– ಅತ್ಯುತ್ತಮ ಫಿಟ್‌ನೆಸ್‌ ಕಾಯ್ದುಕೊಳ್ಳುವುದು.

ಫಿಟ್‌ನೆಸ್‌ ಮತ್ತು ಸೈಕ್ಲಿಂಗ್‌ ಪ್ರಿಯರಿಗಾಗಿಯೇ ಜೈಂಟ್‌ ಸ್ಟಾರ್ಕೆನ್‌ ಸೈಕ್ಲಿಂಗ್‌ ವರ್ಲ್ಡ್‌ ಒಂದು ವಿಶೇಷ ಸೈಕಲ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆಧುನಿಕ ತಂತ್ರಜ್ಞಾನ ಹೊಂದಿರುವ ಈ ಸೈಕಲ್‌ನ ಬೆಲೆ ಬರೋಬ್ಬರಿ ರೂ.10.59 ಲಕ್ಷ. ಪ್ರೊಪೆಲ್‌ ಅಡ್ವಾನ್ಸ್ಡ್‌ ಎಸ್‌ಎಲ್ಒ ಎಂದು ಈ ಸೈಕಲ್‌ ಹೆಸರು. ಇದು ಬೆಂಗಳೂರಿನಲ್ಲಿ ದೊರಕುವ ಅತ್ಯಂತ ದುಬಾರಿ ಬೆಲೆಯ ಸೈಕಲ್‌. ವಿಶ್ವದ ಅತ್ಯಂತ ವೇಗದ ಬೈಸಿಕಲ್‌ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಆದರೆ, ಬೆಂಗಳೂರಿಗರು ಇಷ್ಟೊಂದು ದುಬಾರಿ ಬೆಲೆಯ ಬೈಸಿಕಲ್‌ಗಳನ್ನು ಕೊಂಡುಕೊಳ್ಳುತ್ತಾರಾ ಎಂಬ ಪ್ರಶ್ನೆಗೆ ಸ್ಟಾರ್‌ಕೆನ್‌ ಸ್ಪೋರ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್‌ ವಿ.ಪಾಟೀಲ್‌ ಹೇಳುವುದು ಹೀಗೆ: ‘ಈ ಬೈಸಿಕಲ್‌ ಸವಾರಿ ಸೈಕ್ಲಿಂಗ್‌ ಪ್ರಿಯರಿಗೆ ಹಿಂದೆಂದೂ ನೀಡದ ಅಭೂತಪೂರ್ವ ಅನುಭೂತಿ ನೀಡಲಿದೆ. ಇದರ ಜೊತೆಗೆ ಈ ಬೈಸಿಕಲ್‌ನಲ್ಲಿರುವ ತಂತ್ರಜ್ಞಾನ, ಆಕರ್ಷಕ ವಿನ್ಯಾಸ, ಬಳಕೆ ಮಾಡಿರುವ ಆಕ್ಸಸರಿಗಳು ಎಲ್ಲವೂ ಗ್ರಾಹಕರಿಗೆ ಇಷ್ಟವಾಗುವಂತಿವೆ. ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗೆ ನಮ್ಮ ಮಳಿಗೆ ಹೈ–ಎಂಡ್‌ ಶ್ರೇಣಿಯ ದೊಡ್ಡ ಆಯ್ಕೆ ಒದಗಿಸಿದೆ. ಪ್ರತಿ ವರ್ಷವೂ ನಮ್ಮ ಮಾರಾಟದಲ್ಲಿ ಶೇ 30ರಷ್ಟು ಪ್ರಗತಿ ಸಾಧಿಸುವ ಹಾಗೂ ಪ್ರತಿ ತಿಂಗಳೂ ಮೂರು ಹೈ–ಎಂಡ್‌ ಬೈಸಿಕಲ್‌ಗಳನ್ನು ಮಾರಾಟ ಮಾಡುವ ಗುರಿ ಹೊಂದಿದ್ದೇವೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.