ADVERTISEMENT

ಬದುಕಿನ ಪ್ರೀತಿ ಕಲಿಸಿದ ನೀತಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 19:30 IST
Last Updated 15 ಅಕ್ಟೋಬರ್ 2017, 19:30 IST
ಬದುಕಿನ ಪ್ರೀತಿ ಕಲಿಸಿದ ನೀತಿ
ಬದುಕಿನ ಪ್ರೀತಿ ಕಲಿಸಿದ ನೀತಿ   

ಪ್ರತೀಕ್‌ ಬಬ್ಬರ್‌ ಗಾಸಿಪ್‌ಗಳಿಂದಲೇ ಪರಿಚಿತರಾದವರು. 2008ರಲ್ಲಿ ‘ಜಾನೇ ತು ಜಾನೇ ನಾ’ ಸಿನಿಮಾದ ಮೂಲಕ ಬಾಲಿವುಡ್‌ ಪ್ರವೇಶಿಸಿದ ಪ್ರತೀಕ್‌, ಸಿನಿರಂಗದಲ್ಲಿ ಯಶಸ್ಸು ಕಂಡಿದ್ದು ಕಡಿಮೆಯೇ. ಒಂದು ಕಾಲದಲ್ಲಿ ಡ್ರಗ್‌, ಕುಡಿತದ ದಾಸರಾಗಿದ್ದ ಇವರು ಅದರಿಂದ ಪಟ್ಟ ವ್ಯಥೆ ಹಂಚಿಕೊಂಡಿದ್ದಾರೆ.

ಅಮ್ಮ ಸ್ಮಿತಾ ಪಾಟೀಲ್‌ ಹುಟ್ಟಿದಾಗಲೇ ತೀರಿಕೊಂಡರು. ಅಜ್ಜಿಯೊಂದಿಗೆ ನನ್ನ ಬಾಲ್ಯ ಕಳೆದಿದ್ದು, ಅಜ್ಜಿ ಹೇಳಿದ ಕತೆ ಹೇಳುತ್ತಾ, ಅವರ ಕೈ ರುಚಿ ಮೆಲ್ಲುತ್ತಾ ಬಾಲ್ಯ ಕಳೆದೆ. ಅಮ್ಮನ ಪ್ರೀತಿ ಅಜ್ಜಿಯಿಂದ ದೊರಕಿತು. ಅನಾರೋಗ್ಯದಿಂದ ಅಜ್ಜಿ ತೀರಿಕೊಂಡರು. ಅಪ್ಪ ರಾಜ್‌ ಬಬ್ಬರ್‌ ಜೊತೆಗೆ ನನ್ನ ಸಂಬಂಧ ಚೆನ್ನಾಗಿರಲಿಲ್ಲ. ಸಂಬಂಧಗಳ ಏರಿಳಿತ, ಒತ್ತಡದಿಂದ ಕಂಗಾಲಾಗಿದ್ದ ನಾನು ಪ್ರೀತಿ ತೋರುವವರಿಗಾಗಿ ಹಾತೊರೆಯುತ್ತಿದ್ದೆ. ಇವೇ ಕಾರಣಗಳಿಂದ 19ನೇ ವರ್ಷಕ್ಕೆ ಡ್ರಗ್‌ ದಾಸನಾದೆ.

ವ್ಯಕ್ತಿಯ ವೈಫಲ್ಯಕ್ಕೆ ಖಿನ್ನತೆ, ಕೋಪ ಎರಡೇ ಸಾಕು. ನನಗೂ ಆಗಿದ್ದು ಅದೇ, ಸತತ ವೈಫಲ್ಯದಿಂದ ಜೀವನಪ್ರೀತಿಯನ್ನೇ ಕಳೆದುಕೊಂಡೆ. ನನ್ನ ಕೆಟ್ಟ ಅಭ್ಯಾಸಗಳೇ ಗಾಸಿಪ್‌ಗಳಿಗೆ ಈಡಾಗುವಂತೆ ಮಾಡಿತು. ಚಿಕ್ಕ ವಯಸ್ಸಿನಲ್ಲಿಯೇ ಜಾಹೀರಾತುಗಳಲ್ಲಿ ಮಿಂಚುವ ಅವಕಾಶಗಳು ದೊರಕಿದವು. ಈ ಅವಕಾಶಗಳೇ ನನ್ನನ್ನು ಅತಿಆತ್ಮವಿಶ್ವಾಸಿ (ಓವರ್ ಕಾನ್ಫಿಡೆಂಟ್) ಆಗಿಸಿದವು.

ADVERTISEMENT

ಆದರೆ ಒಂದೊಳ್ಳೆ ಗಳಿಗೆಯಲ್ಲಿ ನಾನು ಮಾಡುತ್ತಿರುವುದು ತಪ್ಪು ಎಂಬುದು ತಿಳಿಯಿತು. ದುರಭ್ಯಾಸಗಳಿಂದ ಹೊರಬರಲು ನಿರ್ಧರಿಸಿದೆ. ಆರಂಭದಲ್ಲಿ ಕಷ್ಟ ಎನಿಸಿತು. ಆದರೆ ನಮ್ಮನ್ನು ನಾವು ಪ್ರೀತಿಸಲು ಪ್ರಾರಂಭಿಸಿದರೆ ಕಷ್ಟ ಎನ್ನುವುದು ಇರುವುದೇ ಇಲ್ಲ.

ಕುಡಿತ, ಡ್ರಗ್ಸ್‌ ಸೇವನೆಯೇ ನಮ್ಮೆಲ್ಲೆ ದುಃಖಗಳಿಗೆ ಪರಿಹಾರವಲ್ಲ. ಈ ವಿಷಯವನ್ನು ಎಲ್ಲರಿಗೂ ತಲುಪಿಸಬೇಕು ಎಂಬುದು ನನ್ನ ಉದ್ದೇಶ. ಅವಕಾಶ ಸಿಕ್ಕಲೆಲ್ಲ ನಾನು ಕೆಟ್ಟ ಅಭ್ಯಾಸದಿಂದ ಹೊರಬಂದ ಕಥೆಯನ್ನು ಹೇಳಿದ್ದೇನೆ. ಪ್ರತಿಯೊಬ್ಬರು ಬದುಕನ್ನು ಪ್ರೀತಿಸಿ, ಖುಷಿಯಾಗಿ ಜೀವನ ನಡೆಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.