ADVERTISEMENT

ಬರೆದು ಮುಗಿಸಲಾಗದ ವ್ಯಕ್ತಿಚಿತ್ರ ‌ಎಬಿಡಿ

ವಿಶಾಖ ಎನ್.
Published 28 ಮೇ 2018, 19:30 IST
Last Updated 28 ಮೇ 2018, 19:30 IST
ಎ.ಬಿ. ಡಿವಿಲಿಯರ್ಸ್
ಎ.ಬಿ. ಡಿವಿಲಿಯರ್ಸ್   

ವ್ಯಕ್ತಿಚಿತ್ರ ಹೀಗೆ ಶುರುವಾಗಬೇಕು: 1984ರ ಫೆಬ್ರುವರಿ 17ರಂದು ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ಜನನ. ಅದಕ್ಕೇ 17 ಅದೃಷ್ಟದ ಸಂಖ್ಯೆ. ಕ್ರಿಕೆಟಿಗ ಎ.ಬಿ. ಡಿವಿಲಿಯರ್ಸ್ ಜೆರ್ಸಿ ಮೇಲೆ ಕಂಡದ್ದೂ ಅದೇ ಸಂಖ್ಯೆ.

ಬ್ಯಾಟಿಂಗ್ ಶೈಲಿ– ಬಲಗೈ. ಅಡ್ಡ ಹೆಸರು– ಮಿಸ್ಟರ್ 360 ಡಿಗ್ರಿ! ಪ್ರತಿನಿಧಿಸಿದ ತಂಡಗಳು– ಆಫ್ರಿಕಾ ಇಲೆವೆನ್‌, ನಾದರ್ನ್ಸ್, ದಕ್ಷಿಣ ಆಫ್ರಿಕಾ ‘ಎ’, ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಡೇರ್‌ಡೆವಿಲ್ಸ್, ದಕ್ಷಿಣ ಆಫ್ರಿಕಾದ 19 ವರ್ಷದೊಳಗಿನವರ ತಂಡ, ಟ್ರೈಡೆಂಟ್ಸ್‌, ಪ್ರಿಟೋರಿಯಾ ಮಾವೆರಿಕ್ಸ್‌. ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದ ಸಂಖ್ಯೆ– ಟೆಸ್ಟ್‌ನಲ್ಲಿ ಐದು, ಏಕದಿನದ ಪಂದ್ಯಗಳಲ್ಲಿ 27, ವಿಶ್ವಕಪ್‌ ಪಂದ್ಯಗಳಲ್ಲಿ 5, ಐಪಿಎಲ್‌ನಲ್ಲಿ 18. ವೃತ್ತಿಪರ ಕ್ರಿಕೆಟ್ ಆಡಿದ
ಅವಧಿ– 2004ರಿಂದ 2018 (ಟೆಸ್ಟ್). 2005ರಿಂದ 2008 (ಏಕದಿನ ಪಂದ್ಯಗಳು), 2008ರಿಂದ 2018 (ಐಪಿಎಲ್).

ಇಷ್ಟು ಬರೆದು ಮುಗಿಸಲಾಗದು. ಮೊನ್ನೆಯಷ್ಟೇ ಡಿವಿಲಿಯರ್ಸ್ ಬೌಂಡರಿ ಗೆರೆ ಬಳಿ ಎತ್ತರಕ್ಕೆ ಜಿಗಿದು ಹರೆಯದ ಹುಡುಗ ಮರದ ಹಣ್ಣು ಕಿತ್ತುಕೊಳ್ಳುವಂತೆ ಚೆಂಡೊಂದನ್ನು ಹಿಡಿತಕ್ಕೆ ಪಡೆದದ್ದನ್ನು ಕಂಡವರು ಇಷ್ಟು ಬೇಗ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಬಹುದು ಎಂದುಕೊಂಡಿರಲಿಲ್ಲ.

ADVERTISEMENT

ಹತ್ತು ವರ್ಷಗಳಿಂದ ಐಪಿಎಲ್‌ನಲ್ಲಿ ಆಡುತ್ತಿದ್ದರೂ ಅವರ ಪಾದರಸಸದೃಶ ಉತ್ಸಾಹ ಕಿಂಚಿತ್ತೂ ಮುಕ್ಕಾಗಿಲ್ಲ. ಕಡಿಮೆ ಆಗಿರುವುದು ತಲೆ ಮೇಲಿನ ಕೂದಲಷ್ಟೆ.

‘ಮೈದಾನದ ಹೊರಗೂ ನಿಮ್ಮ ಬದುಕು 360 ಡಿಗ್ರಿ ಇರಲಿ’ ಎಂದು ದಿಗ್ಗಜ ಸಚಿನ್ ತೆಂಡೂಲ್ಕರ್ ಟ್ವೀಟ್ ಮೂಲಕ ಹಾರೈಸಿರುವುದು ಅರ್ಥಪೂರ್ಣ.

ನೋಡಲು ಅತಿ ಚುರುಕಾಗಿ ಕಾಣುವ ಡಿವಿಲಿಯರ್ಸ್ ‘ಸುಸ್ತಾಗಿದೆ’ ಎಂದು ಟ್ವೀಟ್ ಮಾಡಿಯೇ ನಿವೃತ್ತಿ ಪ್ರಕಟಿಸಿರುವುದು ಕ್ರಿಕೆಟ್ ಕ್ಷೇತ್ರದ ಅನೇಕರಿಗೆ ಸೋಜಿಗದ ಸಂಗತಿ.
ಡಿವಿಲಿಯರ್ಸ್ ಹಾಡುಗಾರ. ತನ್ನದೇ ಬ್ಯಾಂಡ್ ಇದೆ. ದಕ್ಷಿಣ ಆಫ್ರಿಕಾದ ಗಾಯಕ ಆ್ಯಂಪಿ ಡ್ಯು ಪ್ರೀಜ್ ಜೊತೆಗೂಡಿ ಒಂದು ಮ್ಯೂಸಿಕ್ ಆಲ್ಬಂ ಕೂಡ ಹೊರತಂದಿದ್ದು ಅಭಿಮಾನಿಗಳಿಗೆ ನೆನಪಿದೆ. ಅಪ್ಪನ ಹೆಸರು ಅಬ್ರಹಾಂ ಬೆಂಜಮಿನ್ ಡಿವಿಲಿಯರ್ಸ್. ಮಗನ ಹೆಸರೂ ಅದೇ. ಎಲ್ಲರೂ ಒಂದೇ ಎನ್ನುವುದರ ಸಂಕೇತವಾಗಿ ಇಂಥ ನಾಮಕರಣ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2,958 ರನ್ ಗಳಿಸುವವರೆಗೆ ಒಮ್ಮೆಯೂ ಅವರು ಸೊನ್ನೆಗೆ ಔಟೇ ಆಗಿಲ್ಲ. ಇದೂ ಒಂದು ದಾಖಲೆ.

ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಇವರಷ್ಟು ರನ್‌ಗಳನ್ನು ದಕ್ಷಿಣ ಆಫ್ರಿಕಾದ ಬೇರೆ ಯಾವ ಬ್ಯಾಟ್ಸ್‌ಮನ್‌ ಕೂಡ ಗಳಿಸಿಲ್ಲ. ಫಾಪ್ ಡುಪ್ಲೆಸಿಸ್ ಹಾಗೂ ಡಿವಿಲಿಯರ್ಸ್ ಚಡ್ಡಿ ದೋಸ್ತ್‌ಗಳು. ಇಬ್ಬರೂ ಒಂದೇ ಕ್ಲಬ್‌ನಲ್ಲೇ ಕ್ರಿಕೆಟ್ ಕಲಿತದ್ದು. ಮೈದಾನದಲ್ಲಷ್ಟೇ ಅಲ್ಲ, ಹೊರಗೂ ಇಬ್ಬರೂ ಜಿಗ್ರಿ ದೋಸ್ತ್‌ಗಳಾಗೇ ಉಳಿದಿದ್ದಾರೆ. ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಜೂನಿಯರ್ ತಂಡವನ್ನು ಹಾಕಿ ಆಟದಲ್ಲೂ ಪ್ರತಿನಿಧಿಸಿರುವ ಈ ಪ್ರತಿಭೆ, ಶಾಲಾದಿನಗಳಲ್ಲಿ ಈಜಿನಲ್ಲಿ ಆರು ಪ್ರಶಸ್ತಿಗಳನ್ನು ಪಡೆದಿದ್ದು ವಿಶೇಷ.

ಶಾಲೆಯ ರಗ್ಬಿ ತಂಡದಲ್ಲೂ ಆಡಿದ್ದ ಡಿವಿಲಿಯರ್ಸ್ ಹೆಸರು ರಾಷ್ಟ್ರೀಯ ಜೂನಿಯರ್ ಫುಟ್‌ಬಾಲ್‌ ತಂಡದಲ್ಲೂ ಇತ್ತು. ವೃತ್ತಿಪರ ಗಾಲ್ಫ್ ಆಡಿ ಅಲ್ಲೊಂದು ಕಾಲು, ಕ್ರಿಕೆಟ್‌ನಲ್ಲಿ ಇನ್ನೊಂದು ಕಾಲು ಇಟ್ಟ ದಿನಗಳೂ ಇದ್ದವು. ಡಿವಿಲಿಯರ್ಸ್ ಆಸ್ತಿಕ. ಬೈಬಲ್ ಅವರು ಹೆಚ್ಚು ಇಷ್ಟಪಡುವ ಪುಸ್ತಕ.

2016ರಲ್ಲಿ ಆತ್ಮಕಥೆಯನ್ನೂ ಬರೆದ ಅವರಿಗೆ ರೋಜರ್ ಫೆಡರರ್ ಟೆನಿಸ್ ಆಟ ಅಚ್ಚುಮೆಚ್ಚು. ಏಕದಿನ ಕ್ರಿಕೆಟ್‌ ಪಂದ್ಯಗಳಲ್ಲಿ ವೇಗವಾಗಿ 50, 100, 150 ರನ್‌ ಗಳಿಸಿದವರ ಪಟ್ಟಿಯಲ್ಲಿ ಇವರ ಹೆಸರನ್ನು ಬಿಡಲು ಸಾಧ್ಯವೇ ಇಲ್ಲ. ಎಲ್ಲವೂ ವೆಸ್ಟ್‌ಇಂಡೀಸ್‌ ವಿರುದ್ಧ ಬಂದವು ಎನ್ನುವುದು ಕಾಕತಾಳೀಯ.

ಇಷ್ಟು ಹೇಳಿದರೂ ಅವರ ವ್ಯಕ್ತಿಚಿತ್ರ ಮುಗಿಯುವುದಿಲ್ಲ. ಆಟವನ್ನು ಪದೇ ಪದೇ ನೋಡಿದರೆ ಅದರ ಇನ್ನಷ್ಟು ಪುಟಗಳು ತೆರೆದುಕೊಂಡಾವು! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.