ADVERTISEMENT

ಬೆಳದಿಂಗಳ ಬಾಲೆಯ ಮನದ ಮಾತು

ಸುಮನಾ ಕೆ
Published 4 ಜೂನ್ 2018, 19:30 IST
Last Updated 4 ಜೂನ್ 2018, 19:30 IST
ನಟಿ ಸುಮನ್ ನಗರ್‌ಕರ್.- ಚಿತ್ರ– ರಂಜು ಪಿ
ನಟಿ ಸುಮನ್ ನಗರ್‌ಕರ್.- ಚಿತ್ರ– ರಂಜು ಪಿ   

ತುಂಬ ವರ್ಷದ ಬಳಿಕ ಕನ್ನಡ ಚಿತ್ರರಂಗಕ್ಕೆ ವಾಪಸಾಗಿದ್ದೀರಿ?

ನಾನು 15 ವರ್ಷ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ ಅಷ್ಟೇ. ಆದರೆ ಕನ್ನಡ ನೆಲದಿಂದ ದೂರವಾಗಿರಲಿಲ್ಲ. ಆಗಾಗ್ಗೆ ಬಂದು ಹೋಗಿ ಮಾಡುತ್ತಿದ್ದೆ. ಕನ್ನಡ ಸಂಪರ್ಕ ಪ್ರತಿದಿನ ಇತ್ತು. ಈಗ ಎರಡು ವರ್ಷಗಳ ಹಿಂದೆ ಅಧಿಕೃತವಾಗಿ ‘ನಾಗತಿಹಳ್ಳಿ ಚಂದ್ರಶೇಖರ್‌ ಅವರ ‘ಇಷ್ಟಕಾಮ್ಯ’ ಸಿನಿಮಾದಲ್ಲಿ ಅತಿಥಿ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ವಾಪಸಾದೆ.

ಎರಡನೇ ಇನಿಂಗ್ಸ್‌ ಬಗ್ಗೆ ಹೇಳಿ?

ADVERTISEMENT

ಇಷ್ಟಕಾಮ್ಯದ ನಂತರ ಮಕ್ಕಳ ಚಿತ್ರ ‘ಜೀಜಿಂಬೇ’ಯಲ್ಲಿ ನನ್ನದು ನಗರದ ಮಹಿಳೆಯೊಬ್ಬಳು ಹಳ್ಳಿಗೆ ಹೋಗಿ ಗ್ರಾಮೀಣ ಮಕ್ಕಳಿಗೆ ಭವಿಷ್ಯದ ಬಗ್ಗೆ ತಿಳಿ ಹೇಳಿ, ಅವರನ್ನು ತಯಾರು ಮಾಡುವ ಪಾತ್ರ. ಈ ಚಿತ್ರಕ್ಕೆ ನಾಲ್ಕು ರಾಜ್ಯಪ್ರಶಸ್ತಿಗಳು ಬಂದವು. ನಂತರ ಕವಿತಾ ಲಂಕೇಶ್‌ ಅವರ ‘ಸಮ್ಮರ್‌ ಹಾಲಿಡೇಸ್‌’ನಲ್ಲೂ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದೆ. ಈಗ ‘ಬಬ್ರು’ ಹಾಗೂ ‘ಬ್ರಾಹ್ಮೀ’ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದೇನೆ. ಇದು ಬಿಟ್ಟು ಎರಡು– ಮೂರು ಚಿತ್ರಗಳು ಕೈಯಲ್ಲಿವೆ. ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ.

ನೀವು ಸಿನಿಮಾ ಒಪ್ಪಿಕೊಳ್ಳುವುದರಲ್ಲಿ ತುಂಬ ಚ್ಯೂಸಿ ಅಂತೆ?

ನನ್ನ ಮೊದಲ ಸಿನಿಮಾದ ಬಳಿಕ ಅನೇಕ ಸಿನಿಮಾಗಳ ಆಫರ್‌ಗಳು ಬಂದಿದ್ದವು. ಆದರೆ ನನ್ನ ಮನಸ್ಸಿಗೆ ಯಾವುದೂ ಇಷ್ಟವಾಗುತ್ತೋ ಅದನ್ನಷ್ಟೇ ಒಪ್ಪಿಕೊಂಡು ಬಂದೆ. ನಾನು ಎಲ್ಲಾ ಸಿನಿಮಾಗಳನ್ನು ಒಪ್ಪಿಕೊಂಡಿದ್ದರೆ ತುಂಬ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬಹುದಿತ್ತು. ಆದರೆ ನನಗೆ ಸಿನಿಮಾದಲ್ಲಿ ಸಣ್ಣ ಪಾತ್ರವಾದರೂ, ಅದು ಸ್ವತಂತ್ರವಾಗಿರಬೇಕು, ಅದಕ್ಕೆ ಮಹತ್ವ ಇರಬೇಕು. ಇಂತಹ ಪಾತ್ರಗಳನ್ನೇ ನಾನು ಆರಿಸಿಕೊಂಡಿದ್ದು. ಈಗಲೂ ಅಷ್ಟೇ.

ನಿಮ್ಮ ‘ಬಬ್ರು’ ಚಿತ್ರದ ಬಗ್ಗೆ ಹೇಳಿ?

ಪೂರ್ತಿ ಅಮೆರಿಕದಲ್ಲೇ ಚಿತ್ರೀಕರಣ ಆಗಿರುವ ಮೊದಲ ಕನ್ನಡ ಚಿತ್ರ ‘ಬಬ್ರು’. ಈ ಸಿನಿಮಾದ ನಿರ್ಮಾಣ, ನಿರ್ದೇಶನ, ಕ್ಯಾಮೆರಾ, ಎಡಿಟಿಂಗ್‌ ಎಲ್ಲವೂ ಅಮೆರಿಕದ ಅನಿವಾಸಿ ಭಾರತೀಯರೇ ಮಾಡಿರುವುದು ವಿಶೇಷ. ಆದರೆ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಿರುವುದು ಪೂರ್ಣಚಂದ್ರ ತೇಜಸ್ವಿ. ಚಿತ್ರೀಕರಣ ಪೂರ್ತಿ ಅಮೆರಿಕದ ವಿವಿಧ ಭಾಗಗಳಲ್ಲಿ ನಡೆದಿರುವುದರಿಂದ ಅಮೆರಿಕದ ಸೌಂದರ್ಯವನ್ನು ನೋಡಬಹುದು. ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ನಡೆಯುತ್ತಿದೆ. ಜುಲೈ ಅಥವಾ ಆಗಸ್ಟ್‌ ತಿಂಗಳಲ್ಲಿ ಬಿಡುಗಡೆ ಮಾಡಲಿದ್ದೇವೆ.

ಈ ಸಿನಿಮಾದಲ್ಲಿ ನಿಮ್ಮ ಪಾತ್ರ?

ಇದೊಂದು ಜರ್ನಿ ಸಿನಿಮಾ. ಅಮೆರಿಕದಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಯೊಬ್ಬ ಮಾಯಾ ಎನ್ನುವವಳನ್ನು ಪ್ರೀತಿಸುತ್ತಿರುತ್ತಾನೆ. ಈ ನಡುವೆ ಮಧ್ಯ ವಯಸ್ಸಿನ ಭಾರತೀಯ ಮಹಿಳೆಯು ಗಂಡನ ಕಿರುಕುಳದಿಂದ ಮುಕ್ತಿ ಪಡೆಯಲು ಬಯಸುತ್ತಿರುತ್ತಾಳೆ. ಆ ಭಾರತೀಯ ಮಹಿಳೆ ಹಾಗೂ ವಿದ್ಯಾರ್ಥಿ ಒಂದು ಪ್ರಯಾಣದಲ್ಲಿ ಜೊತೆಯಾಗುತ್ತಾರೆ. ಆದರೆ ಇಲ್ಲಿ ಒಂದು ಹುಡುಗ– ಹುಡುಗಿ ಎಂದಾಕ್ಷಣ ರೋಮ್ಯಾನ್ಸ್‌, ಹಾಡು ಇರುವುದಿಲ್ಲ. ಇಲ್ಲಿ ಮಹಿಳೆ ಪಾತ್ರ ನನ್ನದು. ಸಿನಿಮಾ ಪೂರ್ತಿ ಥ್ರಿಲ್ಲಿಂಗ್‌, ಸಸ್ಪೆನ್ಸ್‌ ಇರುತ್ತದೆ.

ನಿರ್ಮಾಪಕಿಯಾಗಿದ್ದೀರಿ?

‘ಬಬ್ರು’ ಚಿತ್ರ ಸುಮನ್‌ ನಗರ್‌ಕರ್‌ ಪ್ರೊಡಕ್ಷನ್‌ ಹೌಸ್‌ನಿಂದ ನಿರ್ಮಾಣವಾಗುತ್ತಿದೆ. ಐದು ಜನ ಸಮಾನ ಮನಸ್ಕ ಗೆಳೆಯರು ಒಟ್ಟಾಗಿ ಫ್ರೆಂಡ್‌ ಫಂಡಿಂಗ್‌ ಮಾಡಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ಪ್ರೊಡಕ್ಷನ್‌ ಹೆಸರು ‘ಸುಮನ್‌ ನಗರ್‌ಕರ್‌’ ಇದ್ದರೂ, ಬಂಡವಾಳ ಅನೇಕ ಮಂದಿಯದ್ದು. ಮುಂದೆ ಹೀಗೆ ಇನ್ನೊಂದಷ್ಟು ಉತ್ತಮ ಸಿನಿಮಾಗಳನ್ನು ನಿರ್ಮಾಣ ಮಾಡಬೇಕು ಎಂಬ ಆಲೋಚನೆಯಿದೆ.

15 ವರ್ಷಗಳ ಅಮೆರಿಕ ಜೀವನ ಹೇಗಿತ್ತು?

ಚಿಕ್ಕವಯಸ್ಸಿನಿಂದಲೂ ಪಂಡಿತ್‌ ಶೇಷಾದ್ರಿ ಗವಾಯಿ ಅವರಿಂದ ಹಿಂದೂಸ್ತಾನಿ ಗಾಯನ ಕಲಿತಿದ್ದೆ. ಮುಂಚೆ ದೂರದರ್ಶನದಲ್ಲಿ ಹಾಡುತ್ತಿದ್ದೆ. ಅಮೆರಿಕಕ್ಕೆ ಹೋದ ಮೇಲೆ ಅಲ್ಲಿ ಮಕ್ಕಳಿಗೆ ಸಂಗೀತ ತರಗತಿ ನಡೆಸುತ್ತಿದ್ದೆ. ಹೇಳಿಕೊಡುವ ಮೂಲಕ ಸಂಗೀತದ ಟಚ್‌ ಇರುತ್ತದೆ, ನಾನೂ ಆ ಮೂಲಕ ಹೆಚ್ಚು ಕಲಿಯಬಹುದು ಎಂಬ ಆಸೆಯಿಂದ. ಈಗ ಸಿನಿಮಾ ಓಡಾಟ ಇರುವುದರಿಂದ ಎರಡು ವರ್ಷಗಳಿಂದ ನಾನು ಸಂಗೀತ ತರಗತಿ ನಡೆಸುತ್ತಿಲ್ಲ. ಮಕ್ಕಳೂ ದೊಡ್ಡವರಾಗಿದ್ದಾರೆ. ನನ್ನ ಜವಾಬ್ದಾರಿ ಜಾಸ್ತಿಯಾಗಿದೆ.

ಫಿಟ್‌ನೆಸ್‌ಗೆ ಏನು ಮಾಡ್ತೀರಿ?

ನಾನು ನನ್ನ ಪತಿ ಇಬ್ಬರೂ ಮ್ಯಾರಥಾನ್‌ ಓಟಗಾರರು. 50ಕ್ಕಿಂತ ಹೆಚ್ಚು ಹಾಫ್‌ ಮ್ಯಾರಥಾನ್‌ಗಳಲ್ಲಿ ಭಾಗವಹಿಸಿದ್ದೇನೆ. 21 ಕಿ. ಮೀ ಓಡುತ್ತೇನೆ. 15– 20 ಮ್ಯಾರಥಾನ್‌ಗಳಲ್ಲಿ ಪಾಲ್ಗೊಂಡಿದ್ದೇನೆ. ಇದು ಬಿಟ್ರೆ ಆರೋಗ್ಯಕರ ಆಹಾರ ಹಾಗೂ ಪ್ರತಿದಿನ ವ್ಯಾಯಾಮ ನನ್ನ ಫಿಟ್‌ನೆಸ್‌ ಗುಟ್ಟು ಎನ್ನಬಹುದು. ಜಿಮ್‌ಗೆ ಹೋಗಿ ಸ್ಟ್ರೆಂಥ್‌ ಟ್ರೈನಿಂಗ್‌ ಮಾಡುತ್ತೇನೆ. ವಾರಕ್ಕೆ ನಾಲ್ಕು ದಿನ ಓಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.