ADVERTISEMENT

ಮತ್ತೆ ಬಂದಳು ರಾಣಿ

ಮಂಜುಶ್ರೀ ಎಂ.ಕಡಕೋಳ
Published 5 ಮಾರ್ಚ್ 2018, 19:30 IST
Last Updated 5 ಮಾರ್ಚ್ 2018, 19:30 IST
ರಾಣಿ ಮುಖರ್ಜಿ
ರಾಣಿ ಮುಖರ್ಜಿ   

* ಮಗಳು ಹುಟ್ಟಿದ ಮೇಲೆ ಮತ್ತೆ ಬಣ್ಣದ ಲೋಕಕ್ಕೆ ಹಿಂದಿರುಗಿದ್ದೀರಿ. ಹೇಗನಿಸುತ್ತೆ?
ನಾನೇನು ಸಿನಿ ರಂಗದಿಂದ ವರ್ಷಾನುಗಟ್ಟಲೆ ದೂರ ಇರಲಿಲ್ಲ (ನಗು). ಉದ್ಯೋಗಕ್ಕೆ ಹೋಗುವ ಮಹಿಳೆಯರು ಹೇಗೆ ಹೆರಿಗೆ ರಜೆ ಮುಗಿಸಿಕೊಂಡು ಕೆಲಸಕ್ಕೆ ಮರುಳುತ್ತಾರೋ ನಾನು ಹಾಗೆಯೇ ಕೆಲಸ ಶುರು ಮಾಡಿದ್ದೀನಿ ಅಷ್ಟೇ. ನನ್ನ ಕಥೆ ಬಿಡಿ. ಉದ್ಯೋಗಸ್ಥ ಮಹಿಳೆಯರು ತಮ್ಮ ಉದ್ಯೋಗ ಮತ್ತು ತಾಯ್ತನವನ್ನು ಚೆನ್ನಾಗಿ ಸಂಭಾಳಿಸುತ್ತಾರೆ. ನಿಜಕ್ಕೂ ಅವರು ಗ್ರೇಟ್. ನಾನು ಮತ್ತೆ ಸಿನಿಮಾ ರಂಗಕ್ಕೆ ಮರಳಲು ಪತಿ ಆದಿತ್ಯ ಚೋಪ್ರಾ ಮುಖ್ಯ ಕಾರಣ. ನಟಿಯರು ಮದುವೆಯಾದ ಮೇಲೆ ಅಭಿನಯಕ್ಕೆ ತೆರೆದುಕೊಳ್ಳುವುದು ವಿರಳ. ಸ್ಟೀರಿಯೋಟೈಪ್ (ತಥಾಕಥಿಕ ಪರಂಪರೆ) ಮುರಿಯುವುದರಲ್ಲಿ ನನಗೆ ಖುಷಿಯಿದೆ.

* ತಾಯ್ತನ ನಿಮ್ಮಲ್ಲಿ ತಂದ ಬದಲಾವಣೆಗಳೇನು?
ಮೊದಲಿಗಿಂತ ಹೆಚ್ಚು ಸಂಯಮ, ತಾಳ್ಮೆ ಕಲಿತಿದ್ದೇನೆ. ಈಗ ಮಗಳೇ ನನ್ನ ಪ್ರಪಂಚ. ಅವಳ ಸಣ್ಣ ಹೊರಳು, ನಗು, ತೊದಲ್ನುಡಿ, ಮೊದಲ ಹೆಜ್ಜೆ... ಯಾವುದನ್ನೂ ಮಿಸ್ ಮಾಡಿಕೊಂಡಿಲ್ಲ. ಮಗಳು ಆದಿರಾಳನ್ನು ಬಿಟ್ಟು ಈಗ ಒಂದು ಕ್ಷಣವೂ ಯೋಚಿಸಲಾಗದು.

* ಶೂಟಿಂಗ್ ವೇಳೆ ಮಗಳನ್ನು ಮಿಸ್ ಮಾಡಿಕೊಳ್ಳುವುದಿಲ್ಲವೇ?
ಖಂಡಿತಾ ಮಿಸ್ ಮಾಡಿಕೊಳ್ಳುತ್ತೇನೆ. ಅವಳನ್ನು ಮನಸಿಲ್ಲಿಟ್ಟುಕೊಂಡೇ ಚಿತ್ರೀಕರಣದ ಸಮಯವನ್ನು ಹೊಂದಿಸಿಕೊಳ್ಳುತ್ತೇನೆ. ಬೆಳಿಗ್ಗೆ ಅವಳು ಏಳುವ ಮುನ್ನವೇ ಚಿತ್ರೀಕರಣಕ್ಕೆ ತೆರಳುತ್ತೇನೆ. ಅವಳೊಂದಿಗೆ ವಾಕಿಂಗ್ ಮಾಡುವುದು. ಅವಳಿಗೆ ಬೆಳಗಿನ ಉಪಾಹಾರ ಮಾಡಿಸುವುದನ್ನು ಆದಿ ಎಂಜಾಯ್ ಮಾಡುತ್ತಾರೆ. ನಾನು ಸಾಮಾನ್ಯವಾಗಿ ಮಧ್ಯಾಹ್ನವೇ ಮನೆಗೆ ಬಂದುಬಿಡುತ್ತೇನೆ. ಅವಳಿಗೆ ಅಮ್ಮ ಇಲ್ಲ ಅನ್ನುವುದು ಅರಿವಿಗೆ ಬರುವ ಮುನ್ನವೇ ಅವಳೆದುರು ಹಾಜರಿರುತ್ತೇನೆ.

ADVERTISEMENT

* ಅಮ್ಮನಾಗಿ ವೃತ್ತಿ ಬದುಕಿನ ಬಗ್ಗೆ ಏನು ಹೇಳ್ತೀರಿ?
‘ರಾಣಿಯನ್ನು ಹಾಕ್ಕೊಂಡು ಸಿನಿಮಾ ಮಾಡೋಣ’ ಅಂತ ನಿರ್ಮಾಪಕರು ಹೇಳುವಂತಾಗಬೇಕು. ‘ಅಯ್ಯೋ ಅವಳನ್ನು ಯಾಕಪ್ಪಾ ಸಿನಿಮಾಕ್ಕೆ ತಗೊಂಡ್ವಿ’ ಅನ್ನುವಂತೆ ಆಗಬಾರದು.

* ‘ಹಿಚ್ಕಿ’ ಸಿನಿಮಾ ಏಕೆ ಒಪ್ಪಿಕೊಂಡ್ರಿ?
ಅದರ ಕಥೆ ಚೆನ್ನಾಗಿದೆ. ಉಗ್ಗುವಿಕೆ ಕುರಿತ ಸಿನಿಮಾ ಇದು. ಶೂಟಿಂಗ್ ದಿನಗಳು ಆದಿರಾಗೆ ಹೊಂದುವಂತಿದ್ದವು. ಅದಕ್ಕಾಗಿಯೇ ಈ ಸಿನಿಮಾ ಒಪ್ಪಿಕೊಂಡೆ. ಭಾರತದಲ್ಲಿ ಈ ಕಾಯಿಲೆ ಬಗ್ಗೆ ಸಾಮಾಜಿಕ ಮತ್ತು ಆರ್ಥಿಕ ಆಯಾಮಗಳಿವೆ. ಶಾಲಾ ಮಕ್ಕಳು ನೋಡಲೇಬೇಕಾದ ಸಿನಿಮಾವಿದು.

* ಈ ಪಾತ್ರಕ್ಕೆ ಹೇಗೆ ತಯಾರಿ ಮಾಡಿಕೊಂಡ್ರಿ?
ಈ ಸಿನಿಮಾ ಬ್ರಾಡ್ ಕೊಹಿನ್ ಅವರ ‘ಮೇಡ್ ಮಿ ದಿ ಟೀಚರ್ ನೆವರ್ ಹ್ಯಾಡ್’ ಕೃತಿಯನ್ನು ಆಧರಿಸಿದೆ. ನನ್ನದು ಉಗ್ಗು ಸಮಸ್ಯೆಯುಳ್ಳ ಶಿಕ್ಷಕಿಯ ಪಾತ್ರ. ತಯಾರಿ ನಡೆಸಲು ನಾನು ಅನೇಕ ಬಾರಿ ಬ್ರಾಡ್ ಕೊಹಿನ್ ಅವರಿಗೆ ಸ್ಕೈಪ್ ಕರೆ ಮಾಡಿದ್ದೇನೆ. ದೈಹಿಕ ಮತ್ತು ಮಾನಸಿಕ ಬದಲಾವಣೆ ಕುರಿತು ಚರ್ಚಿಸಿದ್ದೇನೆ. ನಮ್ಮ ದೇಶದಲ್ಲಿ ಉಗ್ಗುವಿಕೆ ಸಮಸ್ಯೆ ಇದ್ದವರನ್ನು ಹೊರಗಿನ ಪ್ರಪಂಚಕ್ಕೆ ತೆರೆದುಕೊಳ್ಳಲು ಬಿಡುವುದಿಲ್ಲ. ಅದು ಅವರಲ್ಲಿ ಕೆಲ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅವುಗಳನ್ನೆಲ್ಲಾ ಅಧ್ಯಯನ ಮಾಡಿ ನನ್ನ ಪಾತ್ರಕ್ಕೆ ಸಿದ್ಧತೆ ಮಾಡಿಕೊಂಡೆ.
***
ಫಿಟ್‌ನೆಸ್‌ಗಾಗಿ ಇಷ್ಟೆಲ್ಲಾ...
ಪ್ರತಿದಿನ ಒಂದು ತಾಸು ಯೋಗ ಮಾಡ್ತೀನಿ. ವಾಕಿಂಗ್ ತಪ್ಪಿಸಲ್ಲ. ಸಿಹಿ ಪದಾರ್ಥ ತಿನ್ನುವುದು ಅಪರೂಪ. ಜಂಕ್ ಫುಡ್ ಮುಟ್ಟಲ್ಲ. ಪೌಷ್ಟಿಕ ಆಹಾರ ಮಾತ್ರ ಸೇವಿಸ್ತೀನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.