ADVERTISEMENT

ಮಳೆಗಾಲ ಕಾಲಿಡುತ್ತಿದೆ, ಜಾಗೃತರಾಗಿ...

ರೇಷ್ಮಾ
Published 2 ಜೂನ್ 2016, 19:57 IST
Last Updated 2 ಜೂನ್ 2016, 19:57 IST
ಮಳೆಗಾಲ ಕಾಲಿಡುತ್ತಿದೆ, ಜಾಗೃತರಾಗಿ...
ಮಳೆಗಾಲ ಕಾಲಿಡುತ್ತಿದೆ, ಜಾಗೃತರಾಗಿ...   

ಭೂಮಿ ಕಾದು ಬೆಂಡಾಗಿದೆ. ಹನಿ ಮಳೆ ಬಿದ್ದರೆ ಸಾಕು ಎಂದು ಕಾಯುವ ಮನ ಜೂನ್ ತಿಂಗಳಿಗೆ ಎದುರು ನೋಡುತ್ತಿರುತ್ತದೆ. ಇನ್ನೆನ್ನೂ ಮುಂಗಾರು ಪ್ರವೇಶಿಸುವ ಸಮಯ. ಮಳೆ ಹನಿ, ಕಾದ ಭೂಮಿಯನ್ನು ತಣಿಸಿದಂತೆ ಮನಸ್ಸಿಗೂ ಖುಷಿ ಕೊಡುತ್ತದೆ. ಆದರೆ ಮಳೆ ಬೀಳುತ್ತಿದ್ದಂತೆ ಗಿಡಗಂಟಿಗಳು ಚಿಗುರಿಕೊಂಡಂತೆ ಕಾಯಿಲೆಗಳು ಹುಟ್ಟಿಕೊಳ್ಳಲಾರಂಭಿಸುತ್ತದೆ.

ಹಾಗಾಗಿ ಮಳೆಗಾಲದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಒಂದಷ್ಟು ಸಿದ್ಧತೆ ಮಾಡಿಕೊಳ್ಳಲೇಬೇಕು. ಮಳೆಗಾಲದಲ್ಲಿ ಜಿಟಿಜಿಟಿ ಸುರಿಯುವ ಜಡಿಮಳೆಗೆ ಬಾಯಿ ಚಪಲ ಹೆಚ್ಚುತ್ತದೆ. ಬಿಸಿಬಿಸಿಯಾಗಿ ಕಾಫಿ, ಟೀ ಕುಡಿಯಬೇಕು, ರಸ್ತೆ ಬದಿಯ ಗಾಡಿ ಅಂಗಡಿಯಲ್ಲಿ ಹಬೆಯಾಡುವ ಪಾನಿಪುರಿ ತಿನ್ನಬೇಕು ಎಂಬೆಲ್ಲ ಆಸೆಗಳು ಮನದ ಮೂಲೆಯಲ್ಲಿ ನಿಧಾನ ಏಳುತ್ತವೆ.

ಆದರೆ ಮನಸ್ಸಿಗೆ  ಮಳೆಗಾಲ ಎಷ್ಟು ಹಿತಕರವೋ ಅಷ್ಟೇ ದೇಹಕ್ಕೆ ಅಪಾಯಕಾರಿ. ಮಳೆಗಾಲದಲ್ಲಿ ಮಲೇರಿಯಾ, ಡೆಂಗೆಯಂತಹ ಸಾಂಕ್ರಾಮಿಕ ರೋಗಗಳು ಬರಬಹುದು. ಅಲ್ಲದೇ ನೀರಿನ ಅಲರ್ಜಿಯಿಂದ ಸೋಂಕುಗಳು ಕೂಡ ಹರಡಬಹುದು. ಅಷ್ಟೇ ಅಲ್ಲದೇ ವೈರಲ್ ಜ್ವರಗಳು ಕೂಡ ಮಳೆಗಾಲದಲ್ಲೇ ಅಧಿಕವಾಗಿ ಕಾಣಿಸಿಕೊಳ್ಳುತ್ತವೆ. ಇವೆಲ್ಲದರಿಂದ ತಪ್ಪಿಸಿಕೊಳ್ಳಲು ಕೆಲವೊಂದು ಸಲಹೆಗಳು ಇಲ್ಲಿದೆ.

ಮಳೆಗಾಲದ ಅಗತ್ಯ ವಸ್ತುಗಳು ಜೊತೆಗಿರಲಿ
ಹವಮಾನ ಇಲಾಖೆಯ ವರದಿ ಹಾಗೂ ಆಕಾಶ ನೋಡಿ ಇಂದು ಮಳೆ ಬರುತ್ತದೆ ಎಂದು ಹೇಳುವ ಕಾಲ ಬದಲಾಗಿದೆ. ನೀವು ಎಲ್ಲಿಯೋ ಇದ್ದಾಗ ಇದ್ದಕ್ಕಿದ್ದಂತೆ ಮೋಡವಾಗಿ ಮಳೆ ಸುರಿಯುತ್ತದೆ. ಹಾಗಾಗಿ ಕೊಡೆಯನ್ನು ಸದಾ ಕಾಲ ನಿಮ್ಮ ಜೊತೆಗೆ ಇರುವಂತೆ ನೋಡಿಕೊಳ್ಳಿ. ಸ್ಕೂಟರ್ ಅಥವಾ ಬೈಕ್‌ನಲ್ಲಿ ಪ್ರಯಾಣಿಸುವುದಾದರೆ ರೈನ್‌ಕೋಟ್‌ ಜೊತೆಗಿರಲಿ.

ರಸ್ತೆಯ ಬದಿಯ ಆಹಾರಕ್ಕೆ ಕಡಿವಾಣ ಹಾಕಿ
ಹಲವರ ಬಾಯಿ ಚಪಲವನ್ನು ತಣಿಸುವುದು ರಸ್ತೆ ಬದಿಯಲ್ಲಿ ಸಿಗುವ ತಿಂಡಿ ತಿನಿಸುಗಳೇ. ರಸ್ತೆ ಬದಿಯ ಗಾಡಿ ಅಂಗಡಿಲ್ಲಿರುವ ಎಣ್ಣೆ  ಪಾತ್ರೆಗೆ ನೀರು ಸಿಡಿಯುತ್ತದೆ. ಹಳೆಯ ಎಣ್ಣೆ ಹಾಗೂ ಮಳೆಯ ನೀರು ಮಿಶ್ರಣವಾದ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸುವುದರಿಂದ ಆರೋಗ್ಯ ಹದಗೆಡುತ್ತದೆ.  ಮಳೆಗಾಲದಲ್ಲಿ ಜ್ಯೂಸ್ ಕುಡಿಯುವುದನ್ನು ಕಡಿಮೆ ಮಾಡಿ.

ಗಾಯವಾಗದಂತೆ ನೋಡಿಕೊಳ್ಳಿ
ಮಳೆಗಾಲದಲ್ಲಿ ಆದಷ್ಟು ದೇಹದ ಮೇಲೆ ಯಾವುದೇ ಗಾಯಗಳಾಗದಂತೆ ನೋಡಿಕೊಳ್ಳುವುದು ಉತ್ತಮ. ಗಾಯದ ಮೂಲಕ ಸೂಕ್ಷ್ಮಜೀವಿಗಳು ದೇಹದೊಳಗೆ ಪ್ರವೇಶ ಮಾಡುವ ಸಾಧ್ಯತೆ  ಇದೆ. ಅಂತಹ ಸಮಯದಲ್ಲಿ ಡಾಕ್ಟರ್‌ ಬಳಿ ತೆರಳಿ ಗಾಯ ವಾಸಿ ಮಾಡಿಕೊಳ್ಳುವುದು ಉತ್ತಮ.

ಮಳೆಗಾದಲ್ಲಿ ಸೊಳ್ಳೆಗಳ ಸಂಖ್ಯೆ ಹೆಚ್ಚುತ್ತದೆ. ಯಾಕೆಂದರೆ ಮಳೆಗಾಲದಲ್ಲಿ ಒಡೆದ ಮಡಕೆ, ತೆಂಗಿನ ಚಿಪ್ಪುಗಳಲ್ಲಿ ನೀರು ನಿಂತೇ ಇರುತ್ತದೆ. ಹೀಗೆ ನೀರು ಸಂಗ್ರಹವಾದ ಜಾಗದಲ್ಲಿ ಸೊಳ್ಳೆಗಳು ಹಾಗೂ ವೈರಾಣುಗಳು ಸಂತಾನೋತ್ಪತಿ ನಡೆಸುತ್ತದೆ. ಹಾಗಾಗೀ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ಮತ್ತು ಡಿರ್ಟಜೆಂಟ್ ಪೌಡರ್‌ಗಳನ್ನು ಸಿಂಪಡಿಸುತ್ತಿರಿ.

ಹರ್ಬಲ್ ಚಹಾ ಕುಡಿಯಿರಿ
ಹರ್ಬಲ್ ಚಹಾದಲ್ಲಿ ರೋಗ ನಿರೋಧಕ ಅಂಶಗಳು ಅಧಿಕವಾಗಿವೆ. ಹರ್ಬಲ್ ರೋಗ ಪ್ರತಿರೋಧಕವಾಗಿರುವುದರಿಂದ ಆರೋಗ್ಯ ಕಾಪಾಡುವಲ್ಲಿ ಸಹಾಯ ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.