ADVERTISEMENT

ಮೊಬೈಲ್‌ ಗೀಳೇ? ಹೀಗೆ ಹೊರಬನ್ನಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 19:30 IST
Last Updated 24 ಡಿಸೆಂಬರ್ 2017, 19:30 IST
ಮೊಬೈಲ್‌ ಗೀಳೇ? ಹೀಗೆ ಹೊರಬನ್ನಿ
ಮೊಬೈಲ್‌ ಗೀಳೇ? ಹೀಗೆ ಹೊರಬನ್ನಿ   

ಕೆಲಸದ ಭರಾಟೆಯಲ್ಲಿ ಕ್ಷಣ ಬಿಡುವು ಸಿಕ್ಕರೂ ಸಾಕು, ಕೈ ತನ್ನಿಂತಾನೇ ಮೊಬೈಲ್‌ ಹತ್ತಿರ ಹೋಗುತ್ತದೆ. ಇಮೇಲ್‌, ವಾಟ್ಸಾಪ್‌, ಫೇಸ್‌ಬುಕ್‌, ಅಲಾರಂ, ನೋಟ್‌ಗಳು ಎಂದು ದಿನದ ಹೆಚ್ಚಿನ ಸಮಯ ನಾವು ಮೊಬೈಲ್‌ ನೋಡುವುದರಲ್ಲಿಯೇ ಕಳೆಯುತ್ತೇವೆ. ಮೊಬೈಲ್ ಬಳಕೆ ನಿಲ್ಲಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯ. ಆದರೆ ನಮಗೆ ಬೇಕಾದಂತೆ ಮೊಬೈಲ್ ಬಳಕೆ ನಿಯಂತ್ರಣಕ್ಕಂತೂ ಖಂಡಿತಾ ಅವಕಾಶವಿದೆ.

ಮೊಬೈಲ್ ಬಳಕೆ ನಿಯಂ‌ತ್ರಿಸುವ ಮನಸು ನಿಮಗಿದ್ದರೆ ಇಲ್ಲಿವೆ ಕೆಲ ಟಿಪ್ಸ್‌...

* ವಿವೇಚನೆ ಇರಲಿ: ಯಾವುದೇ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳುವ ಮೊದಲು ಅದು ಅಗತ್ಯವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಪ್ರಚಾರ, ಜಾಹೀರಾತುಗಳಿಗೆ ಮಣಿದು ಇನ್‌ಸ್ಟಾಲ್ ಮಾಡಿಕೊಳ್ಳುವ ಎಷ್ಟೋ ಆ್ಯಪ್‌ಗಳು ನಂತರದ ದಿನಗಳಲ್ಲಿ ಅನಗತ್ಯ ಎನಿಸುವುದೂ ಉಂಟು. ಅನಗತ್ಯ ಎನಿಸಿದ ಆ್ಯಪ್‌ಗಳನ್ನು ಮುಲಾಜಿಲ್ಲದೆ ಅನ್‌ಇನ್‌ಸ್ಟಾಲ್ ಮಾಡಿ.

* ಹೋಂ ಸ್ಕ್ರೀನ್‌ ಸೆಟ್ಟಿಂಗ್ಸ್‌: ಮೊಬೈಲ್‌ನ ಹೋಂ ಸ್ಕ್ರೀನ್‌ ಮೇಲೆ ಸಿಕ್ಕಸಿಕ್ಕ ಆ್ಯಪ್‌ಗಳ ಐಕಾನ್‌ಗಳು ರಾರಾಜಿಸುವುದು ಬೇಡ. ನಿತ್ಯದ ಚಟುವಟಿಕೆಗೆ ಸಹಕಾರಿಯಾಗುವ ಆ್ಯಪ್‌ಗಳಿಗೆ ಮಾತ್ರ ಅಲ್ಲಿ ಸ್ಥಾನ ಸಿಗಲಿ. ಕ್ಯಾಲೆಂಡರ್, ಗಡಿಯಾರ, ಟ್ಯಾಕ್ಸಿ ಬುಕಿಂಗ್, ಗೂಗಲ್‌ ಮ್ಯಾಪ್, ಗೂಗಲ್‌ ನೋಟ್‌ನಂಥ ಆ್ಯಪ್‌ಗಳಿಗೆ ನಿತ್ಯೋಪಯೋಗಿಗಳಿಗೆ ಮಾತ್ರ ಅಲ್ಲಿ ಅವಕಾಶ ಇರಲಿ.

ADVERTISEMENT

* ಏಕೆ ಬೇಕು ನೋಟಿಫಿಕೇಶನ್: ವೈಬ್ರೇಷನ್‌ನೊಂದಿಗೆ ಬೀಪ್‌ ಸದ್ದು ಮೊಳಗಿಸುವ ನೋಟಿಫಿಕೇಶನ್‌ಗಳು ನಮ್ಮ ಗಮನವನ್ನು ಮೊಬೈಲ್‌ನತ್ತ ಹರಿಯಲು ನೆಪವಾಗುತ್ತವೆ. ಮೊಬೈಲ್‍ ಸೆಟ್ಟಿಂಗ್‌ನಲ್ಲಿ ಸೂಕ್ತ ಟಿಂಗ್‍ಗೆ ಹೋಗಿ ಅವಶ್ಯಕ ಆ್ಯಪ್‌ಗಳನ್ನು ಬಿಟ್ಟು ಉಳಿದ ಆ್ಯಪ್‌ಗಳ ನೋಟಿಫಿಕೇಷನ್‌ ಅಥವಾ ವೈಬ್ರೇಟ್‌ ಅನ್ನು ನಿಷ್ಕ್ರಿಯಗೊಳಿಸಿ.

* ಎಲ್ಲದಕ್ಕೂ ಫೋನ್ ಬಳಸುವುದನ್ನು ನಿಲ್ಲಿಸಿ: ನಿರ್ದಿಷ್ಟ ಉದ್ದೇಶಗಳಿಗೆ ನಿರ್ದಿಷ್ಟ ಉಪಕರಣ ಬಳಸುವುದನ್ನು ರೂಢಿಸಿಕೊಳ್ಳಿ. ಫೋಟೊ ತೆಗೆಯಲು ಕ್ಯಾಮೆರಾ, ಬೆಳಿಗ್ಗೆ ನಮ್ಮನ್ನು ಎಬ್ಬಿಸಲು ಅಲಾರಾಂ, ವಿಳಾಸ ಹುಡುಕಲು ಬಾಯಿಮಾತು ಒಳಿತಲ್ಲವೇ? ಹೀಗೆ ಮಾಡುವುದರಿಂದ ಅಪರಿಚಿತರೊಡನೆ ಮಾತನಾಡುವ ಕಲೆ ರೂಢಿಯಾಗುತ್ತದೆ. ಮೊಬೈಲ್ ಮೇಲಿನ ಅವಲಂಬನೆಯೂ ಕೊಂಚ ತಪ್ಪುತ್ತದೆ.

* ಮಲಗುವ ಮೊದಲು ಮೊಬೈಲ್ ಸ್ವಿಚ್‌ಆಫ್ ಮಾಡಿ: ಮೊಬೈಲ್‌ ನೋಟಿಫಿಕೇಷನ್‌ಗಳು ನಿದ್ದೆಗೆ ಭಂಗ ತರಬಹುದು. ಮಲಗುವ ಸ್ಥಳದಿಂದ ಮೊಬೈಲ್ ದೂರ ಇರಿಸಿ ಅಥವಾ ಸ್ವಿಚ್‌ ಆಫ್‌ ಮಾಡಿ.

* ‘ನೋ ಮೊಬೈಲ್’ ಸಮಯ, ಸ್ಥಳ ಘೋಷಿಸಿ: ಊಟ ಮಾಡುವಾಗ, ಗೆಳೆಯರೊಡನೆ ಇರುವಾಗ, ಯಾರ ಜೊತೆಗಾದರೂ ಮಾತನಾಡುವಾಗ, ಏನಾದರೂ ಓದುವಾಗ, ಬಚ್ಚಲು–ಶೌಚಗೃಹಗಳಲ್ಲಿ ಮೊಬೈಲ್‌ ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.