ADVERTISEMENT

ಯುವ ನಿರ್ದೇಶಕನ ಬಗೆ ಬಗೆ ಕನವರಿಕೆ

ಪ್ರಜಾವಾಣಿ ವಿಶೇಷ
Published 31 ಜನವರಿ 2016, 19:30 IST
Last Updated 31 ಜನವರಿ 2016, 19:30 IST
ಯುವ ನಿರ್ದೇಶಕನ ಬಗೆ ಬಗೆ ಕನವರಿಕೆ
ಯುವ ನಿರ್ದೇಶಕನ ಬಗೆ ಬಗೆ ಕನವರಿಕೆ   

‘ಗೊಂಬೆಗಳ ಲವ್‌’ ಮತ್ತು ‘ಒಂದು ರೊಮ್ಯಾಂಟಿಕ್‌ ಕ್ರೈಂ ಕಥೆ’ ಚಿತ್ರಗಳಲ್ಲಿ ಅಭಿನಯಿಸಿದ ರೋಹಿತ್ ಆದಿತ್ಯಗೆ ಹಿರಿಯ ನಟರಿಂದ ಮೆಚ್ಚುಗೆಯ ಮಾತುಗಳು ಪ್ರೋತ್ಸಾಹವಾದವು. ಚಿಕ್ಕವಯಸ್ಸಿನಿಂದಲೇ ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಬೇಕೆಂದು ಎಸ್‌ಎಸ್‌ಎಲ್‌ಸಿ ಮುಗಿದ ನಂತರ ನಟನೆ, ನಿರ್ದೇಶನದ ತರಬೇತಿ ಪಡೆದು ಸಿಕ್ಕ ಸಣ್ಣಪುಟ್ಟ ಅವಕಾಶಗಳನ್ನು ಬಿಡದೇ ನಟಿಸಿದ್ದಾರೆ. ನಟ ಕಂ ನಿರ್ದೇಶಕ ಆಗುವ ಗುರಿ ಹೊಂದಿರುವ ರೋಹಿತ್‌ ಸದ್ಯ ‘ಅಬ್ಬರ’ ಚಿತ್ರದ ಸ್ಕ್ರಿಪ್ಟ್‌ಅನ್ನು ಸಿದ್ಧಪಡಿಸಿದ್ದಾರೆ. ತಮ್ಮ ಸಿನಿಮಾ ಪ್ರೀತಿಯನ್ನು ರೋಹಿತ್‌ ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

* ನಿಮ್ಮ ಸಿನಿಮಾಗಳ ಬಗ್ಗೆ ಹೇಳಿ?
ಮೊದಲು ಅಭಿನಯಿಸಿದ ಸಿನಿಮಾ ‘ಗೊಂಬೆಗಳ ಲವ್‌’. ಇದು ಒಳ್ಳೆಯ ಹೆಸರು ತಂದುಕೊಟ್ಟಿತು. ನಾಯಕನ ಸ್ನೇಹಿತನ ಪಾತ್ರ ಮಾಡಿದೆ. ಇಡೀ ಸಿನಿಮಾದಲ್ಲಿ ಹಾಸ್ಯ ಮತ್ತು ಗಂಭೀರತೆ ಇತ್ತು. ಚಿತ್ರ ಪೂರ್ತಿ ಜುಬ್ಬ ಪೈಜಾಮ ಹಾಕಿಕೊಂಡು ಮಾಡಿದೆ. ನನ್ನ ಮಾತುಗಳು ಗಂಭೀರವಾಗಿದ್ದರೂ, ಹಾಸ್ಯದಿಂದ ಕೂಡಿರುತ್ತಿದ್ದವು.

ಈ ಚಿತ್ರದಲ್ಲಿನ ನಟನೆ ನೋಡಿದ ರವಿಚಂದ್ರನ್‌ ಸರ್‌ ಮೆಚ್ಚುಗೆ ವ್ಯಕ್ತಪಡಿಸಿದರು. ಹಿರಿಯ ನಟನ ಮೆಚ್ಚುಗೆ ಬೆನ್ನುತಟ್ಟಿದಂತಾಗಿತ್ತು. ನಂತರ ‘ಒಂದು ರೊಮ್ಯಾಂಟಿಕ್‌ ಕ್ರೈಂ ಕಥೆ’ ಸಿನಿಮಾ ಮಾಡಿದೆ. ಇದರಲ್ಲಿ ಸರಗಳ್ಳನ ಪಾತ್ರ. ಇದರಲ್ಲೂ ಉತ್ತಮ ಪ್ರಶಂಸೆ ಸಿಕ್ಕಿತು. ಸದ್ಯ ‘ನಾನು ಲವ್ವರ್‌ ಆಫ್‌ ಜಾನು’ ಸಿನಿಮಾದಲ್ಲಿ ಹೀರೊ ಸ್ನೇಹಿತನ ಪಾತ್ರ ಮಾಡುತ್ತಿದ್ದೇನೆ. ಹಾಸ್ಯ ನಟ ಚಿಕ್ಕಣ್ಣ ಸಹ ಇದ್ದಾರೆ. ಜೊತೆಗೆ ‘ಗಾಂಧಿಗಿರಿ’ ಸಿನಿಮಾದಲ್ಲಿ ಜೋಗಿ ಪ್ರೇಮ್‌ ಜೊತೆಗೆ ನಟಿಸುತ್ತಿದ್ದೇನೆ. ‘ಉಡುಂಬ’ ಚಿತ್ರಕ್ಕೂ ಸಹಿ ಹಾಕಿದ್ದೇನೆ. ತಮಿಳು ಚಿತ್ರಕ್ಕೂ ಮಾತುಕತೆ ನಡೆಯುತ್ತಿದೆ.

* ಸಿನಿಮಾ ಅವಕಾಶ ಸಿಕ್ಕಿದ್ದು ಹೇಗೆ?
ನಾನು ಹುಟ್ಟಿ, ಬೆಳೆದದ್ದು ಬೆಂಗಳೂರಿನಲ್ಲೇ. 10ನೇ ತರಗತಿವರೆಗೂ ಮಾತ್ರ ಓದಿದ್ದು. ಚಿಕ್ಕವಯಸ್ಸಿನಿಂದಲೂ ಸಿನಿಮಾದೆಡೆಗೆ ಆಸಕ್ತಿಯಿತ್ತು. ಶಾಲಾ ದಿನಗಳಲ್ಲಿ ನಾಟಕ, ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದೆ. 2004ರಲ್ಲಿ ಸುಚಿತ್ರ ಫಿಲ್ಮ್‌ ಸೊಸೈಟಿಯಲ್ಲಿ ಆರು ತಿಂಗಳ ನಟನೆ, ನಿರ್ದೇಶನದ ತರಬೇತಿ ಪಡೆದೆ. ನಟನೆಯ ಜೊತೆಯಲ್ಲೇ ನಿರ್ದೇಶಕ ಆಗಬೇಕೆಂಬ ಬಯಕೆಯೂ ಇತ್ತು.

‘ಗೊಂಬೆಗಳ ಲವ್‌’ ಸಿನಿಮಾದ ನಿರ್ದೇಶಕ ಸಂತೋಷ್‌, ನಟ ಅರುಣ್‌, ನಿರ್ಮಾಪಕ ಅಜಯ್‌ ರಾಜ್‌ ಅರಸ್‌ ನನ್ನ ಸ್ನೇಹಿತರು. ನಮ್ಮ ಸಿನಿಮಾಗೆ ನಿರ್ಮಾಪಕರು ಸಿಗದಿದ್ದಾಗ ನಾವೇ ಸಿನಿಮಾ ಮಾಡಬೇಕೆಂದು ನಿರ್ಧರಿಸಿದೆವು. ಸಿನಿಮಾಗೆ ಒಳ್ಳೆಯ ಹೆಸರು ಬಂತು. ಅಲ್ಲಿಂದ ನನ್ನ ಸಿನಿಪಯಣ ಆರಂಭವಾಯಿತು. ಹಿರಿತೆರೆ ಅಲ್ಲದೇ ಕಿರುತೆರೆಯಲ್ಲೂ ಅಭಿನಯಿಸಿದ್ದೇನೆ. ಆದರೆ ಹಿರಿತೆರೆಯಲ್ಲೇ ಯಶಸ್ಸು ಗಳಿಸಬೇಕೆಂಬ ಆಸೆ ಇದೆ.

* ಚಿತ್ರ ನಿರ್ದೇಶನದ ತಯಾರಿ ಹೇಗಿದೆ?
‘ಗೊಂಬೆಗಳ ಲವ್‌’ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದೆ. ಅಲ್ಲದೇ ನಿರ್ದೇಶಕ ಪಿ.ಎನ್‌. ಸತ್ಯ ಅವರ ಬಳಿಯೂ ಪಾಠ ಕಲಿತಿದ್ದೇನೆ. ನನ್ನ ಮನಸಿನಲ್ಲಿ ಕೆಲವು ಕಥೆಗಳು ಹುಟ್ಟಿಕೊಳ್ಳುತ್ತವೆ ಹಾಗೂ ಸಮಾಜದಲ್ಲೂ ಅನೇಕ ಕಥೆಗಳೂ ಸಿಗುತ್ತವೆ. ಅಂಥ ಕಥೆಗಳಿಗೆ ಜೀವ ತುಂಬುವ ಕೆಲಸ ಮಾಡುತ್ತೇನೆ. ಆ ಕಥೆಗೆ ಯಾವ ಸ್ಥಳ, ನಾಯಕ ಸೂಕ್ತ ಎಂಬುದನ್ನು ಪಟ್ಟಿ ಮಾಡಿಕೊಳ್ಳುತ್ತೇನೆ. ಕಥೆಯನ್ನು ಒಬ್ಬ ಪ್ರೇಕ್ಷಕನಾಗಿ ನೋಡುತ್ತೇನೆ. ಸದ್ಯ ‘ಅಬ್ಬರ’ ಸ್ಕ್ರಿಪ್ಟ್‌ ಸಿದ್ಧವಾಗಿದೆ. ಇದು ಹೊಸಬರ ಅಬ್ಬರ. ಮನಸ್ಸಿಗೆ ಮುಟ್ಟುವ ಸಿನಿಮಾ. ಇಲ್ಲಿ ಭಾವನೆಗಳ ಬೆಲೆ ಎದ್ದು ಕಾಣುತ್ತದೆ ಎಂದು ಇಷ್ಟನ್ನು ಮಾತ್ರ ಹೇಳುತ್ತೇನೆ.

* ಬಿಡುವಿನ ವೇಳೆ?
ನಟನೆಯಲ್ಲಿ ಬ್ಯುಸಿಯಾಗಿದ್ದೇನೆ. ಪುಸ್ತಕಗಳನ್ನು ಓದುತ್ತೇನೆ. ಅದರಲ್ಲೂ ಎಸ್‌.ಎಲ್‌. ಭೈರಪ್ಪ ಅವರ ಕಾದಂಬರಿಗಳನ್ನು ಹೆಚ್ಚಾಗಿ ಓದುತ್ತೇನೆ. ಜೊತೆಗೆ ಅಧ್ಯಾತ್ಮದ ಪುಸ್ತಕಗಳನ್ನು ಓದುತ್ತೇನೆ. ಎಲ್ಲಾ ಹೊಸ ಸಿನಿಮಾಗಳನ್ನೂ ನೋಡುತ್ತೇನೆ.

*ಮುಂದಿನ ಯೋಜನೆ?
ಕಲಾವಿದನಾಗಿ ಗುರ್ತಿಸಿಕೊಂಡು, ಸಿನಿಮಾ ನಿರ್ದೇಶನ ಮಾಡುವುದೇ ನನ್ನ ಮುಂದಿನ ಯೋಜನೆ. ನನ್ನಲ್ಲಿರುವ ಕಥೆಗಳನ್ನು ಸಿನಿಮಾ ಮಾಡುತ್ತೇನೆ. ನನ್ನ ಕಥೆಗಳಿಗೆ ಕಮರ್ಷಿಯಲ್‌ ಆಗಿ ನೋಡದೇ ಪ್ಯಾಷನ್‌ ಆಗಿ ನೋಡುವ ನಿರ್ಮಾಪಕರು ಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.