ಸುಶಾಂತ್ ಸಿಂಗ್ ರಜಪೂತ್ ಮತ್ತು ಕೃತಿ ಸನೂನ್ ಮಧ್ಯೆ ಏನೋ ನಡೀತಾ ಇದೆ ಎನ್ನುವುದು ಬಾಲಿವುಡ್ ಗಲ್ಲಿಗಳ ಬಹುದಿನದ ಗುಲ್ಲು. ಇದೀಗ ಯುಟ್ಯೂಬ್‌ಗೆ ಅಪ್‌ಲೋಡ್ ಆಗಿರುವ ‘ರಾಬ್ತಾ’ ಚಿತ್ರದ ಟ್ರೇಲರ್‌ನಲ್ಲಿ ಇಬ್ಬರ ಕೆಮಿಸ್ಟ್ರಿ ಗಮನಿಸಿದರೆ ಇದು ಕೇವಲ ಗಾಳಿ ಮಾತಷ್ಟೇ ಆಗಿರಲಾರದು ಎನಿಸುವಂತಿದೆ.
2.19 ನಿಮಿಷದ ಟ್ರೇಲರ್‌ನಲ್ಲಿ ಕೃತಿ ಸಖತ್ ಹಾಟ್ ಆಗಿ ಕಾಣಿಸುತ್ತಾರೆ. ಸುಶಾಂತ್‌ಗೆ ತುಟಿಯೊತ್ತುವ, ಮೈಬೆಸೆಯುವ ಸನ್ನಿವೇಶಗಳನ್ನು ತೀರಾ ಸಹಜ ಎನ್ನುವಂತೆ ನಿಭಾಯಿಸಿದ್ದಾರೆ. ಚೆಲುವೆಯ ಹಿಂದೆ ತಿರುಗುವ ರೋಮಿಯೊ ಪಾತ್ರದ ಸುಶಾಂತ್ ಹುಡುಗಿಯರ ಎದೆಬಡಿತ ಹೆಚ್ಚಿಸುವಂತಿದ್ದಾರೆ.
ಬಿಡುಗಡೆಯಾದ ಎರಡೇ ದಿನಗಳಲ್ಲಿ ಎರಡು ಕೋಟಿಗೂ ಹೆಚ್ಚು ಮಂದಿ ಟ್ರೇಲರ್ ವೀಕ್ಷಿಸಿದ್ದಾರೆ. ಈ ಚಿತ್ರದ್ದು ತಲೆಮಾರುಗಳನ್ನು ದಾಟಿ ಬರುವ ಪ್ರೇಮಕಥೆಯ ಹೂರಣ.
ಕಥೆಯನ್ನು ನಿರೂಪಿಸುವ ಇರ್ಫಾನ್ ಖಾನ್ ದನಿಯಲ್ಲಿ ‘ಏಕ್ ಥಾ ರಾಜಾ, ಏಕ್ ಥಿ ರಾಣಿ, ದೋನೋ ಮರ್ ಗಯ್, ಕಥಂ ಕಹಾನಿ...’ ಸಾಲು ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸುವಂತಿದೆ. ರಾಜರ ಕಾಲದ ದೃಶ್ಯಗಳು ತೆಲುಗಿನ ಮಗಧೀರ ಚಿತ್ರವನ್ನು ನೆನಪಿಸುತ್ತವೆ.
ಸುಶಾಂತ್‌ನ ಕೇಶ ವಿನ್ಯಾಸ ಮತ್ತು ಸಾಹಸ ಸನ್ನಿವೇಶಗಳು ಗಮನಸೆಳೆಯುತ್ತವೆ. ದಿನೇಶ್ ವಿಜಯನ್ ಚಿತ್ರ ನಿರ್ದೇಶಿಸಿದ್ದಾರೆ. ಜೂನ್ 9ಕ್ಕೆ ಚಿತ್ರ ತೆರೆಕಾಣಲಿದೆ.
ಲಿಂಕ್: bit.ly/2psMve0
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.