ADVERTISEMENT

ಲಿಟಲ್‌ ಬಾಯ್‌

​ಪ್ರಜಾವಾಣಿ ವಾರ್ತೆ
Published 5 ಜುಲೈ 2017, 19:30 IST
Last Updated 5 ಜುಲೈ 2017, 19:30 IST
ಲಿಟಲ್‌ ಬಾಯ್‌
ಲಿಟಲ್‌ ಬಾಯ್‌   

ಅವನಿಗೆ ಅಪ್ಪ ಬರೀ ಪೋಷಕನಲ್ಲ, ಸ್ನೇಹಿತ. ರೋಚಕ ಕಥೆಗಳ ಮೂಲಕ ಮನರಂಜಿಸುವ ಆಪ್ತ. ‘ಒಮ್ಮೆ ನೀನು ಮಾಡಬಲ್ಲೆ ಎಂದು ಬಲವಾಗಿ ನಂಬಿದರೆ ಆಗದೇ ಇರುವುದು ಯಾವುದೂ ಇಲ್ಲ’ ಎನ್ನುವ ಅವನ ಮಾತು ಆ ಪುಟಾಣಿಯ ಮನದಲ್ಲಿ ರಿಂಗಣಿಸುತ್ತಲೇ ಇರುತ್ತದೆ.

ಅಮೆರಿಕದ ಕ್ಯಾಲಿಫೋರ್ನಿಯಾದ ಪುಟ್ಟ ಪಟ್ಟಣದಲ್ಲಿ ಅವರ ವಾಸ. ಅಪ್ಪ, ಅಮ್ಮ, ಅಣ್ಣ ಮತ್ತು ಎಲ್ಲರ ಅಕ್ಕರೆಯಲ್ಲಿ ಮೀಯುವ ಎಂಟು ವರ್ಷದ ಪೆಪ್ಪರ್‌. ಅದು ಎರಡನೇ ಮಹಾಯುದ್ಧದ ಸಮಯ. ಹಿರಿಯಣ್ಣನಿಗೆ ಸೈನ್ಯ ಸೇರಿಕೊಳ್ಳಬೇಕೆಂಬ ಆಸೆ. ಆದರೆ ಅವನು ಸೈನ್ಯ ಸೇರಿಕೊಳ್ಳುವಲ್ಲಿ ವಿಫಲನಾಗುತ್ತಾನೆ. ಅವನ ಬದಲಿಗೆ ಅಪ್ಪನೇ ಯುದ್ಧಕ್ಕೆ ಹೋಗಬೇಕಾಗುತ್ತದೆ.

ಪುಟಾಣಿ ಪೆಪ್ಪರ್‌ಗೆ ಯಾವಾಗಲೂ ಯುದ್ಧಕ್ಕೆ ಹೋದ ಅಪ್ಪನದೇ ಚಿಂತೆ. ಈ ನಡುವೆ ಯುದ್ಧದಲ್ಲಿ ತಂದೆ ಕಳೆದುಹೋಗಿದ್ದಾನೆ ಎಂಬ ಸುದ್ದಿ ಬರುತ್ತದೆ. ಮುಗ್ಧ ಮನಸ್ಸಿನ ಮಗು ಪೆಪ್ಪರ್‌ ಒಮ್ಮೆ ಚರ್ಚಿನ ಪಾದ್ರಿಯ ಬಾಯಲ್ಲಿ ಬೈಬಲ್‌ನಲ್ಲಿನ ಒಂದು ವಾಕ್ಯ ಕೇಳಿಸಿಕೊಳ್ಳುತ್ತಾನೆ. ‘ನಿನ್ನಲ್ಲಿ ಸಾಸಿವೆ ಕಾಳಷ್ಟಾದರೂ ನಂಬಿಕೆ ಇದ್ದರೆ ಸಾಕು, ಬೆಟ್ಟವನ್ನೇ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸುವಂತೆ ಮಾಡಬಹುದು’ ಈ ಮಾತನ್ನು ಕೇಳಿದ ಬಾಲಕ ಈ ಸಣ್ಣ ನಂಬಿಕೆಯ ಮೂಲಕವೇ ಯುದ್ಧದಲ್ಲಿ ಕಳೆದುಹೋಗಿರುವ ತನ್ನ ತಂದೆಯನ್ನು ಮರಳಿ ತರಲು ಸಾಧ್ಯವೇ ಎಂದು ಹಂಬಲಿಸುತ್ತಾನೆ.

ADVERTISEMENT

ಹೀಗೆ ಒಂದು ಮಗುವಿನ ಮುಗ್ಧತೆಯ ಸುತ್ತಲೂ ಹೆಣೆದ ಹಿರಿಯರ ಜಗತ್ತಿನ ಸಿನಿಮಾ ‘ಲಿಟಲ್‌ ಬಾಯ್‌’. ಅಲೆಜೆಂಡ್ರೋ ಮೊಂಟೇವಾರ್ಡ್‌ ನಿರ್ದೇಶನದ ಅಮೆರಿಕ ದೇಶದ ಈ ಸಿನಿಮಾ ಬಿಡುಗಡೆಯಾಗಿದ್ದು 2015ರಲ್ಲಿ. ಮಗುತನದ ಮುಗ್ಧತೆಯೇ ಈ ಚಿತ್ರದ ಕೇಂದ್ರವಾದರೂ ಹಿರಿಯರ ಜಗತ್ತಿನ ಹಲವು ಸುಳಿಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಯಜಮಾನನಿಲ್ಲದ ಕುಟುಂಬ ಛಿದ್ರವಾಗದಂತೆ ಕಾಯಲು ಹೆಣಗುವ ತಾಯಿ, ಗಡಿಯಲ್ಲಿ ನಡೆಯುವ ಯುದ್ಧದ ಮಾನಸಿಕ ಪರಿಣಾಮಗಳು. ಯುದ್ಧದ ಕ್ರೌರ್ಯ, ಹತಾಶೆ ಎಲ್ಲವನ್ನೂ ಬಹುಸೂಕ್ಷ್ಮವಾಗಿ ಹೆಣೆದ ಕಾರಣಕ್ಕೆ ಈ ಸಿನಿಮಾ ಇಷ್ಟವಾಗುತ್ತದೆ. ಮತ್ತು ಈ ಎಲ್ಲವೂ ಮಗುವಿನ ಕಣ್ಣಿನಲ್ಲಿಯೇ ತೆರೆದುಕೊಳ್ಳುತ್ತಾ ಹೋಗುವುದು ಭಾವುಕವಾಗಿಯೂ ನಮ್ಮನ್ನು ಕಾಡುವಂತಿದೆ.

ಅಮೆರಿಕದಲ್ಲಿನ ಜಪಾನೀ ವ್ಯಕ್ತಿ ಎದುರಿಸುವ ಸಂಕಷ್ಟಗಳು, ದೇಶದ ಬಗೆಗಿನ ಪೂರ್ವಗ್ರಹಗಳನ್ನು ವ್ಯಕ್ತಿಯ ಮೇಲೆ ಹೇರಿದಾಗ ಆಗುವ ಅನಾಹುತಗಳನ್ನು ತೋರಿಸುತ್ತಲೇ ಅದನ್ನು ಮೀರುವ ನಿಷ್ಕಲ್ಮಷತೆಯ ದಾರಿಯನ್ನು ಎಂಟು ವರ್ಷದ ಮಗುವಿನ ಮೂಲಕ ಹೇಳಿಸಿದ್ದಾರೆ.

ಲಿಟಲ್‌ ಬಾಯ್‌ ಪಾತ್ರದಲ್ಲಿ ಜೆಕೋಬ್‌ ಸಾಲ್ವಟಿ ವಯಸ್ಸಿಗೆ ಮೀರಿದ ಪ್ರಬುದ್ಧ ಅಭಿನಯ ಬೆರಗು ಹುಟ್ಟಿಸುವಂತಿದೆ.

ಇತ್ತೀಚೆಗೆ ಬಿಡುಗಡೆಯಾದ ಸಲ್ಮಾನ್‌ ಖಾನ್‌ ಅಭಿನಯದ ‘ಟ್ಯೂಬ್‌ಲೈಟ್‌’ ಸಿನಿಮಾವೂ ಲಿಟಲ್‌ ಬಾಯ್‌ ಚಿತ್ರದ ಹಿಂದಿ ಅವತರಣಿಕೆ. ಈ ಚಿತ್ರವನ್ನು ಯೂಟ್ಯೂಬ್‌ನಲ್ಲಿ ನೋಡಲು goo.gl/ujFmfc ಕೊಂಡಿ ಬಳಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.