ADVERTISEMENT

ವಿಧವಿಧ ಕಾಲ್ಗೆಜ್ಜೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2018, 19:30 IST
Last Updated 9 ಮಾರ್ಚ್ 2018, 19:30 IST
ವಿಧವಿಧ ಕಾಲ್ಗೆಜ್ಜೆ
ವಿಧವಿಧ ಕಾಲ್ಗೆಜ್ಜೆ   

ಬಾಲ್ಯದಲ್ಲಿ ಕಾಲ್ಗೆಜ್ಜೆ ಹಾಕಿ ಜಣ್‌ ಜಣ್‌ ಎಂಬ ನಾದ ಹೊಮ್ಮಿಸಿದರೇ ಅದೇನೋ ಖುಷಿ. ಅದೇ ದೊಡ್ಡವರಾಗುತ್ತಿದ್ದಂತೆ ಕಾಲ್ಗೆಜ್ಜೆಗೆ ಸಾಂಪ್ರದಾಯಿಕ ಹಣೆಪಟ್ಟಿ ಕಟ್ಟಿ ಅದರಿಂದ ದೂರವೇ ಉಳಿಯುತ್ತೇವೆ. ವಿಶೇಷ ಕಾರ್ಯಕ್ರಮ, ಮದುವೆಯ ಹೊರತಾಗಿ ಪೆಟ್ಟಿಗೆಯಿಂದ ಕಾಲ್ಗೆಜ್ಜೆ ತೆಗೆಯುವುದು ಕಡಿಮೆ. ಆದರೀಗ ಎಲ್ಲಾ ಉಡುಪಿಗೂ ಹೊಂದಿಕೆಯಾಗುವಂತೆ ಕಾಲ್ಗೆಜ್ಜೆ ತಮ್ಮ ರೂಪ ಬದಲಾಯಿಸಿಕೊಂಡಿದೆ. ಸಾಂಪ್ರದಾಯಿಕ ಗಡಿಗಳನ್ನು ಮೀರಿರುವ ಕಾಲ್ಗೆಜ್ಜೆ ವೈವಿಧ್ಯತೆ ಪಡೆದಿದೆ.

* ಬೂಟ್‌ಗಳ ಮೇಲೆ ಗೆಜ್ಜೆ: ಹುಡುಗರು ಕೈಗೆ ಹಾಕುವ ಕಡಗ ಹುಡುಗಿಯರ ಕಾಲಿಗೆ ಬಂದಿದೆ. ಬೂಟು ಹಾಕಿಕೊಂಡಾಗ ಅದರ ಮೇಲೆ ಈ ದಪ್ಪದ ಚೈನ್‌ ಇರುವ ಕಾಲ್ಗೆಜ್ಜೆ ಹಾಕಿಕೊಳ್ಳುವುದು ಟ್ರೆಂಡ್‌ ಆಗಿದೆ. ಆಧುನಿಕ ಉಡುಪು ಅದಕ್ಕೆ ಹೊಂದುವ ಕಪ್ಪು ಶೂಗಳಿಗೆ ಇದನ್ನು ಹೊಂದಿಸಿಕೊಳ್ಳಬಹುದು.

* ಬಂಜಾರ ಆಭರಣಗಳು: ಇವುಗಳು ಬಂಜಾರ (ಲಂಬಾಣಿ) ಜನಾಂಗ ಮತ್ತು ಬುಡಕಟ್ಟು ಜನಾಂಗದವರ ಆಭರಣಗಳಿಂದ ಪ್ರೇರಣೆ ಪಡೆದವು. ಇವು ಸಾಮಾನ್ಯವಾಗಿ ಆಕ್ಸಿಡೈಸ್ಡ್ ಸಿಲ್ವರ್‌ನಿಂದಾಗಿರುತ್ತವೆ. ಹಲವಾರು ವಿನ್ಯಾಸಗಳಲ್ಲಿ ಲಭ್ಯವಿದೆ. ಆ್ಯಂಟಿಕ್‌ ನೋಟ ನೀಡುತ್ತದೆ. ಈ ಬಗೆಯ ಆಭರಣಗಳು ಕಲಂಕರಿ ಸ್ಕರ್ಟ್‌ ಮತ್ತು ಕಾಟನ್‌ ದಿರಿಸುಗಳಿಗೆ ಹೊಂದುತ್ತದೆ.

ADVERTISEMENT

* ಪಾದಕ್ಕೂ ಬಂತು ಸರ: ಬೆರಳುಗಳಿಂದ ಪಾದವನ್ನು ಬಳಸುವ ಈ ಕಾಲ್ಗೆಜ್ಜೆ ಎಲ್ಲಾ ಸಂದರ್ಭಕ್ಕೆ ಹೊಂದುವುದಿಲ್ಲ. ಸಾಂಪ್ರದಾಯಿಕ ಉಡುಪಿಗೆ ಚಂದ ಕಾಣುತ್ತದೆ. ಬೀಚ್‌ನಲ್ಲಿ ಫೋಟೊಶೂಟ್ ಮಾಡಿಕೊಳ್ಳುವವರಿಗೆ, ಬೀಚ್‌ ಪಾರ್ಟಿಗೆ ಇದು ಒಳ್ಳೆಯ ಆಯ್ಕೆ. ಇದಕ್ಕೆ ಹೊಂದುವಂತೆ ಕೈ ಬೆರಳಿಗೂ ಸಿಲ್ವರ್‌ ಜ್ಯುವೆಲ್ಲರಿ ಹಾಕಿಕೊಳ್ಳಬಹುದು.  ಇವುಗಳು ವಿವಿಧ ರೀತಿಯ ಹರಳು ಮತ್ತು ಕಪ್ಪೆ ಚಿಪ್ಪುಗಳು, ಸಣ್ಣ ಸಣ್ಣ ಕವಡೆಗಳು, ಶಂಖಗಳಿಂದ ತಯಾರಿಸಲಾಗುತ್ತದೆ.

* ಕಾಲಿಗೆ ಕಾಸಿನ ಸರ: ಕತ್ತಿಗೆ ಕಾಸಿನ ಸರ ಈ ಕಾಲದಲ್ಲಿಯೂ ಟ್ರೆಂಡಿ ಎನಿಸಿಕೊಂಡಿದೆ. ಹಾಗೆಯೇ ಕಾಲಿಗೂ ಕಾಸಿನ ಅಲಂಕಾರ ಶ್ರೀಮಂತ ನೋಟ ನೀಡುತ್ತದೆ. ಇದು ಯುವತಿಯರಿಗೆ ಚೆನ್ನಾಗಿ ಕಾಣುತ್ತದೆ. ಪಾರ್ಟಿಗಳಿಗೂ ಧರಿಸಬಹುದು.

* ಹರಳು, ಮುತ್ತುಗಳ ಅಲಂಕಾರ: ಮುತ್ತು, ಹರಳಿನ ಒಂದು ಎಳೆಯು ಉಂಗುಷ್ಟದಿಂದ (ಹೆಬ್ಬೆರಳಿನಿಂದ) ಪಾದದವರೆಗೂ ಬಂದಿರುತ್ತದೆ. ಇದು ಕ್ಯಾಷುವಲ್‌ ಉಡುಪಿಗೆ ಹೊಂದಿಕೊಳ್ಳುತ್ತದೆ. ಮುತ್ತಿನ ಅಲಂಕಾರವಿರುವ ಉಡುಪು ಮತ್ತು ಬಿಳಿಬಣ್ಣದ ಉಡುಪಿಗೆ ಚೆನ್ನಾಗಿ ಒಪ್ಪುತ್ತದೆ.

* ಪದರದ ಮೆರುಗು: ಎಳೆಎಳೆಯಾಗಿ ಇಳಿಬಿಟ್ಟ ವಿನ್ಯಾಸದ ಫ್ರಿಂಜ್‌ ಆಭರಣ ವಿನ್ಯಾಸ ಬಹುದಿನದ ಟ್ರೆಂಡ್‌. ಇದೇ ಮಾದರಿಯಲ್ಲಿರುವ ಈ ಕಾಲ್ಗೆಜ್ಜೆ ಕಾಲಿನ ಸೊಬಗನ್ನು ಹೆಚ್ಚಿಸುತ್ತದೆ. ಬೆಳ್ಳಿ ಮತ್ತು ಬಂಗಾರದ ಬಣ್ಣಗಳಲ್ಲಿ ಇವುಗಳು ಲಭ್ಯವಿವೆ. ಇದಕ್ಕೆ ಚಿಕ್ಕ ಪ್ರಾಣಿಗಳ ಮಾದರಿಯನ್ನು ಜೋಡಿಸಲಾಗುತ್ತದೆ. ಅಲಂಕಾರಕ್ಕೆ ಹರಳುಗಳನ್ನು ಬಳಸುವುದರಿಂದ ಇದು ಮತ್ತಷ್ಟು ಆಕರ್ಷಕ ರೂಪ ಪಡೆಯುತ್ತಿವೆ.

* ಚೋಕರ್‌ ಸೊಬಗು: ಕೈ ಹಾಗೂ ಕುತ್ತಿಗೆಯನ್ನು ಅಲಂಕರಿಸುವ ಚೋಕರ್‌ಗಳು ಕಾಲಿನ ಅಂದವನ್ನೂ ಹೆಚ್ಚಿಸುತ್ತಿವೆ. ಮೊದಲ ನೋಟಕ್ಕೆ ಪಕ್ಕಾ ಟ್ಯಾಟೂವಿನಂತೆಯೇ ಕಾಣುತ್ತವೆ. ಇವುಗಳಲ್ಲಿ ಹಲವು ಬಗೆಗಳಿವೆ. ಯಾವುದೇ ಬಗೆಯ ದಿರಿಸಿಗೂ ಮ್ಯಾಚ್‌ ಆಗುತ್ತವೆ ಎಂಬುದು ಇದರ ಪ್ಲಸ್‌ಪಾಯಿಂಟ್‌. ಹೆಚ್ಚಾಗಿ ಕಪ್ಪು ಬಣ್ಣದಲ್ಲಿ ಲಭ್ಯವಿದ್ದ ಇವುಗಳಿಗೆ ಇತ್ತೀಚೆಗೆ ವಿಭಿನ್ನ ಬಣ್ಣಗಳ ಮೆರುಗೂ ಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.