ADVERTISEMENT

ಶಿಕ್ಷಕರು ಬುದ್ಧಿ ಕಲಿಸಿದರು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 19:30 IST
Last Updated 8 ಮಾರ್ಚ್ 2018, 19:30 IST
ಶಿಕ್ಷಕರು ಬುದ್ಧಿ ಕಲಿಸಿದರು
ಶಿಕ್ಷಕರು ಬುದ್ಧಿ ಕಲಿಸಿದರು   

ಅದು 1965ರಲ್ಲಿ ನಡೆದ ಘಟನೆ. ಆಗ ನಾನು ವಿಜಯಪುರದ ಪಿಡಿಜೆ ಪ್ರೌಢಶಾಲೆಯಲ್ಲಿ ಐದನೇ ತರಗತಿ ಓದುತ್ತಿದ್ದೆ. ಆಂಗ್ಲ ವಿಷಯ ಅದೇ ವರ್ಷ ಆರಂಭವಾಗಿತ್ತು. ನನಗೆ ಇಂಗ್ಲಿಷ್‌ ಎಂದರೆ ಅಷ್ಟಕಷ್ಟೆ. ಪರೀಕ್ಷೆ ಇನ್ನೇನು ಹತ್ತಿರ ಬಂದಾಗ ಭಯವಾಗಲು ಆರಂಭವಾಯಿತು. ನಕಲು ಮಾಡಲು ಚೀಟಿ ತೆಗೆದುಕೊಂಡು ಶಾಲೆಗೆ ಹೋದೆ. ತುಸುಗಾಬರಿ, ಆತಂಕದಿಂದ ಆ ಚೀಟಿಯನ್ನು ನೋಡುತ್ತಾ ಬರೆಯತೊಡಗಿದೆ. ಅದು ನನ್ನ ಪ್ರಥಮ ಪ್ರಯತ್ನ. ನನ್ನ ದುರಾದೃಷ್ಟಕ್ಕೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದೆ. ತರಗತಿಯಿಂದ ಹೊರಗೆ ಹಾಕಿದರು.

ಎರಡ್ಮೂರು ದಿನಗಳ ನಂತರ ಮೊಕಾಸಿ ಎಂಬ ಶಿಕ್ಷಕರು ನನ್ನನ್ನು ಸ್ಟಾಫ್‌ರೂಂಗೆ ಕರೆದು ‘ಹೀಗೇಕೆ ಮಾಡಿದೆ?’ ಎಂದು ಕೇಳಿದರು. ಆಗ ನಾನು ‘ನನಗೆ ಇಂಗ್ಲಿಷ್‌ ಬರುವುದಿಲ್ಲ’ ಎಂದು ಅಳು ಮೋರೆಯಿಂದ ಹೇಳಿದೆ. ಅದಕ್ಕವರು ಕೋಪದಿಂದಲೇ ‘ಬರೋದಿಲ್ಲಂದ್ರೇ ಮನೆಯಲ್ಲಿ ಚೆನ್ನಾಗಿ ಓದ್ಕೋಬೇಕು’ ಎಂದರು. ‘ಓದ್ತೀನಿ ಸಾರ್, ಆದರೆ ಅದು ನನಗೆ ಅರ್ಥಾನೇ ಆಗುವುದಿಲ್ಲ’ ಎಂದೆ ಬೇಸರದಿಂದ. ನನ್ನ ಮಾತಿಗೆ ಅವರು ಅರೆಕ್ಷಣ ಮೌನವಾದರು.

ಮುಖ ಮೇಲೆತ್ತಿ ಏನೋ ಯೋಚಿಸಿ ನನ್ನ ಕಡೆ ನೋಡಿ ‘ಆಯ್ತು ಚಂದ್ರಕಾಂತ ನಾಳೆಯಿಂದ ನೀನು ಶಾಲೆಗೆ ಅರ್ಧಗಂಟೆ ಬೇಗ ಬಾ. ನಿನಗೆ ಇಂಗ್ಲಿಷ್ ಹೇಳಿ ಕೊಡ್ತೀನಿ. ಆದರೆ ನೀನು ಹೀಗೆಲ್ಲ ಕಾಪಿ ಹೊಡೆದು ಬರೆಯಬಾರದು. ಇದು ಒಳ್ಳೆಯ ಅಭ್ಯಾಸವಲ್ಲ’ ಎಂದರು. ಅಂದಿನಿಂದ ನಾನು ಕಾಪಿ ಹೊಡೆಯುವುದನ್ನು ಬಿಟ್ಟುಬಿಟ್ಟೆ. ಕಷ್ಟಪಟ್ಟು ಓದುವುದನ್ನು ಕಲಿತು, ಶಿಕ್ಷಕನಾದೆ. ಕಾಪಿ ಹೊಡೆಯದೆ ಚೆನ್ನಾಗಿ ಓದಿ ಮುಂದೆ ಬರುವಂತೆ ಮಕ್ಕಳಿಗೆ ತಿಳಿಸುತ್ತೇನೆ.
– ಚಂದ್ರಕಾಂತ ಮ. ತಾಳಿಕೋಟಿ, ಬ್ಯಾಂಕ್ ಕಾಲೊನಿ, ಬಾದಾಮಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.