ADVERTISEMENT

ಶ್ರೀದೇವಿ ಒಪ್ಪುವ ಸಿನಿಮಾ ಕೊಟ್ಟ ಗೌರಿ

ವಿಶಾಖ ಎನ್.
Published 11 ಮಾರ್ಚ್ 2018, 19:30 IST
Last Updated 11 ಮಾರ್ಚ್ 2018, 19:30 IST
ಶ್ರೀದೇವಿ ಒಪ್ಪುವ ಸಿನಿಮಾ ಕೊಟ್ಟ ಗೌರಿ
ಶ್ರೀದೇವಿ ಒಪ್ಪುವ ಸಿನಿಮಾ ಕೊಟ್ಟ ಗೌರಿ   

ಗೌರಿ ಶಿಂಧೆ ಸ್ಕ್ರಿಪ್ಟ್ ಬರೆಯಲು ತಿಂಗಳುಗಳನ್ನೇ ತೆಗೆದುಕೊಂಡಿದ್ದರು. ಜಾಹೀರಾತು ಚಿತ್ರಗಳನ್ನು ಮಾಡುತ್ತಿದ್ದ ಅವರಿಗೆ ಚಲನಚಿತ್ರ ನಿರ್ದೇಶಿಸುವ ಬಯಕೆ ಸಹಜವಾಗಿಯೇ ಇತ್ತಾದರೂ ಆತ್ಮಬಲದ ಬಗೆಗೆ ಮೊದಲು ನಂಬಿಕೆ ಇರಲಿಲ್ಲ.

ಅವರ ಪತಿ ಬಾಲ್ಕಿ ಅದಾಗಲೇ 'ಪಾ' ಹಾಗೂ 'ಚೀನಿ ಕಮ್' ಚಿತ್ರಗಳಿಗೆ ಆಕ್ಷನ್-ಕಟ್ ಹೇಳಿದ್ದವರು. ಇಬ್ಬರ ಆಸಕ್ತಿ ಒಂದೇ ಆದರೂ ಭಿನ್ನಾಭಿಪ್ರಾಯಗಳಿಗೆ ಕೊರತೆಯೇನೂ ಇರಲಿಲ್ಲ. ಗೌರಿ ತನ್ನ ಮೊದಲ ಸಿನಿಮಾದ ಪಾತ್ರ ಗಟ್ಟಿ ಹೆಣ್ಣುಮಗಳದ್ದೇ ಆಗಿರಬೇಕು ಎಂದು ಯಾವತ್ತೋ ನಿರ್ಧರಿಸಿದ್ದರು. ಅದಕ್ಕೆ ಅಗತ್ಯವಿದ್ದ ಎಳೆಯನ್ನು ಕೊಟ್ಟವರು ಅವರ ಅಮ್ಮ. ಗೌರಿ ಅಮ್ಮ ಉಪ್ಪಿನಕಾಯಿಯ ಸಣ್ಣ ವ್ಯಾಪಾರ ನಡೆಸುತ್ತಿದ್ದರು. ವ್ಯಾವಹಾರಿಕ ಕಷ್ಟಗಳನ್ನು ಅವರ ಮಗಳ ಜತೆ ಹಂಚಿಕೊಂಡಾಗ, ಇನ್ನಷ್ಟು ಹೆಣ್ಣುಮಕ್ಕಳು ಇಂಗ್ಲಿಷ್‌ನಲ್ಲಿ ಮಾತನಾಡಲು ಪಡುವ ಪಡಿಪಾಟಲಿನ ಚರ್ಚೆ ಬಂತು. ಮೇಲ್ಮಧ್ಯಮ ವರ್ಗದ, ಪಾತಿವ್ರತ್ಯ ಒಪ್ಪಿಕೊಂಡ ಹೆಣ್ಣುಮಕ್ಕಳ ಕಷ್ಟ ಕಾರ್ಪಣ್ಯಗಳಲ್ಲಿ ಇಂಗ್ಲಿಷ್‌ನ ಪಾತ್ರ ಮುಖ್ಯವಾಗುತ್ತಿರುವುದು ಮೊದಲ ಚರ್ಚೆಯಲ್ಲಿ ಅರಿವಿಗೆ ಬಂತು.

ಗೌರಿ ಅಷ್ಟಕ್ಕೇ ನಿಲ್ಲದೆ ಹೋಂವರ್ಕ್ ಮಾಡಿಕೊಳ್ಳತೊಡಗಿದರು. ಈ ಪ್ರಕ್ರಿಯೆಯಲ್ಲಿ ಕೆಲವು ಪತಿವ್ರತೆಯರಿಂದ ಬೈಯ್ಗುಳಗಳನ್ನೂ ಕೇಳಬೇಕಾಯಿತು. ತೀರಾ ಸಂಕೀರ್ಣ ಸಿನಿಮಾ ಮಾಡುವುದಕ್ಕಿಂತ ತನ್ನ ಅಮ್ಮನಂಥ ಹೆಣ್ಣಿನ ಕಥೆಯನ್ನೇ ಬರೆಯುವುದು ಲೇಸು ಎಂದು ಗೌರಿ ಭಾವಿಸಿದರು.

ADVERTISEMENT

ಸ್ಕ್ರಿಪ್ಟ್ ಸಿದ್ಧಪಡಿಸಿದ ಮೇಲೆ ಅದರ ಕೆಲವು ಕರಡುಗಳನ್ನು ತಿದ್ದಿದರು. ಅವರ ಪತಿಯಿಂದಲೂ ಸಲಹೆಗಳು ಬಂದವು. ಅವುಗಳಲ್ಲಿ ಗೌರಿ ಕೆಲವನ್ನು ತಿರಸ್ಕರಿಸಿದ್ದರು.  ಶ್ರೀದೇವಿಗೆ ಅದನ್ನು ಓದಲು ಕೊಡುವಂತೆ ಹೇಳಿದಾಗ ಮಾತ್ರ ಎರಡನೇ ಯೋಚನೆಯೇ ಬರಲಿಲ್ಲ.

‌ಬಾಲ್ಕಿ ಹಾಗೂ ಬೋನಿ ಕಪೂರ್ ಕುಶಲೋಪರಿ ಮಾತನಾಡುತ್ತಿರುವಾಗ ಗೌರಿ ಬರೆಯುತ್ತಿರುವ ಸ್ಕ್ರಿಪ್ಟ್ ವಿಷಯ ಪ್ರಸ್ತಾಪವಾಯಿತು. ಕಥಾಎಳೆ ಕೇಳಿದ ಬೋನಿ ಕಪೂರ್, ಶ್ರೀದೇವಿಗೆ ಅದನ್ನು ಓದಲು ಕೊಡುವಂತೆ ಬಾಲ್ಕಿಯನ್ನು ಕೇಳಿದರು.

ಸ್ಕ್ರಿಪ್ಟ್ ಇಷ್ಟವಾದದ್ದೇ ಅದರಲ್ಲಿನ ಶಶಿ ಪಾತ್ರದಲ್ಲಿ ತಾನೇ ಅಭಿನಯಿಸುವುದಾಗಿ ಶ್ರೀದೇವಿ ಹೇಳಿದರು. ಗೌರಿ ಇನ್ನೊಂದು ಹಂತದ ಹೋಂವರ್ಕ್‌ಗೆ ಕುಳಿತರು. 15 ವರ್ಷಗಳ ನಂತರ ಶ್ರೀದೇವಿ ಮತ್ತೆ ನಟಿಸಲು ಒಪ್ಪಿದ್ದರಿಂದ ಜವಾಬ್ದಾರಿ ಹೆಚ್ಚಾಯಿತು ಎಂದೇ ಭಾವಿಸಿದರು.  ಸ್ಕ್ರಿಪ್ಟ್ ನಲ್ಲಿದ್ದ ಶಶಿಯ ಪಾತ್ರವನ್ನು ಇನ್ನಷ್ಟು ಗಟ್ಟಿಗೊಳಿಸಿದರು.

ಆ ಪ್ರಕ್ರಿಯೆಯಲ್ಲಿ ಇದ್ದಾಗಲೇ ಗೊತ್ತಾಗಿದ್ದು ಶ್ರೀದೇವಿ ಅದೆಷ್ಟೋ ಸ್ಕ್ರಿಪ್ಟ್‌ಗಳನ್ನು ನಿರಾಕರಿಸಿದ್ದಾರೆ ಎಂದು. ಉಪ್ಪಿನಕಾಯಿ ಮಾರುತ್ತಿದ್ದ ಅಮ್ಮನ ಕಥೆಯನ್ನು ಲಾಡು ಮಾರುವ ಶಶಿಯ ಕಥೆಯಾಗಿ ರೂಪಿಸಿ, ಅವಳು ವಿದೇಶಕ್ಕೆ ಹೋಗಿ ಇಂಗ್ಲಿಷ್ ಕಲಿಯುವ ಆಧುನಿಕ ಕಾಲದ ಸೂಕ್ಷ್ಮವೊಂದರ ಚಿತ್ರಕಥೆ ಕೊನೆಗೂ ಪಕ್ಕಾ ಆಯಿತು. ಕೆಲವು ಚಿತ್ರಕಥೆಗಳನ್ನು ತಿದ್ದಿದ ನಂತರ ಶ್ರೀದೇವಿ ಮನಸ್ಸು ಬದಲಿಸಿದ್ದರು ಎನ್ನುವ ಸಂಗತಿ ಕೇಳಿದ ಮೇಲೆ ಗೌರಿ ಮತ್ತೆ ಆಲೋಚನೆಗೀಡಾದರು. ಆದರೆ, ಶ್ರೀದೇವಿ ತನ್ನ ಡೇಟ್ಸ್ ಕೊಟ್ಟು, ಸಂಪೂರ್ಣವಾಗಿ ನಿರ್ದೇಶಕಿಗೆ ಶರಣಾದರು.

ಮೊದಲ ನಿರ್ದೇಶನದ ಚಿತ್ರಕ್ಕೆ ಶ್ರೀದೇವಿ ನಾಯಕಿಯಾಗಲು ಒಪ್ಪಿದ ಖುಷಿಯನ್ನು ಗೌರಿ ಕೆಲಸವಾಗಿ ಪರಿವರ್ತಿಸಿದರು. ವಿದೇಶದ ಕೊರೆಯುವ ಚಳಿಯಲ್ಲಿ ಸೀರೆ ಉಟ್ಟು ಶಾಟ್ ಓಕೆ ಆದ ತಕ್ಷಣ ನಡುಗುತ್ತಿದ್ದ ಶ್ರೀದೇವಿ ಅಭಿನಯಪ್ರೀತಿಯನ್ನು ಗೌರಿ ಅದೆಷ್ಟೋ ಸಲ ಕೊಂಡಾಡಿದರು.

ಸಿನಿಮಾ ಚಿತ್ರೀಕರಣ ಮುಗಿದ ಮೇಲೆ ಅದರ ಹಲವು ಪ್ರೀಮಿಯರ್ ಷೋಗಳು ನಡೆದವು. ಟೊರಾಂಟೊ ಚಿತ್ರೋತ್ಸವದಲ್ಲಿ ಅದು ಪ್ರದರ್ಶನಗೊಂಡಾಗ ಶ್ರೀದೇವಿ ತಮ್ಮ ಕುಟುಂಬ ಸಮೇತ ಅಲ್ಲಿದ್ದರು.  ಎಲ್ಲರೂ ಎದ್ದುನಿಂತು ಚಪ್ಪಾಳೆ ತಟ್ಟಿದಾಗ ಖುಷಿ ಪಟ್ಟವರು ಶ್ರೀದೇವಿ ಅಷ್ಟೇ ಅಲ್ಲ; ಗೌರಿ ಕೂಡ.

ಅದಾದ ಮೇಲೆ ಗೌರಿ ಸಿನಿಮಾ ಕನಸಿಗೆ ರೆಕ್ಕೆ ಪುಕ್ಕ ಹಚ್ಚಿದವರು ಶಾರುಖ್ ಖಾನ್; 'ಡಿಯರ್ ಜಿಂದಗಿ' ಮೂಲಕ. ತನ್ನ ಪತಿ ಬಾಲ್ಕಿ ಅವರಿಗಿಂತ ಭಿನ್ನವಾಗಿ ಯೋಚಿಸುವ ಗೌರಿ, ಬಾಲಿವುಡ್ ನ ಮೊದಲ ಸೂಪರ್ ಸ್ಟಾರ್ ನಾಯಕಿ ಒಪ್ಪುವಂಥ ಕಥೆ ಮಾಡಿದ್ದು, ಹದಿನೈದು ವರ್ಷಗಳ ನಂತರ ದಿಗ್ಗಜ ನಟಿಯನ್ನು ಕ್ಯಾಮೆರಾ ಎದುರು ನಿಲ್ಲಿಸಿದ್ದನ್ನು ನೆನೆಯಲು ಇದು ಸಂದರ್ಭ. ಯಾಕೆಂದರೆ, ಶ್ರೀದೇವಿ ಈಗ ನೆನಪಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.