ADVERTISEMENT

ಸಂಗಾತಿ ಇನ್ನೂ ಸಿಕ್ಕಿಲ್ಲ

ವಿಶಾಖ ಎನ್.
Published 7 ಮೇ 2018, 19:30 IST
Last Updated 7 ಮೇ 2018, 19:30 IST
ರಣಬೀರ್ ಕಪೂರ್
ರಣಬೀರ್ ಕಪೂರ್   

‘ನನ್ನ ವೃತ್ತಿಬದುಕು ಶುರುವಾದಾಗ ನಾನು ಅಂದುಕೊಂಡಿದ್ದೆ, ಇಪ್ಪತ್ತೆಂಟನೇ ವಯಸ್ಸಿಗೆ ಮದುವೆಯಾಗಬೇಕು. ಮೂವತ್ತರ ಹೊತ್ತಿಗೆ ಮಕ್ಕಳ ತಂದೆ ಅನ್ನಿಸಿಕೊಳ್ಳಬೇಕು ಎಂದು. ಹಾಗೆ ಆಗಲಿಲ್ಲ. ಈಗಲೂ ಕನಸನ್ನು ಬಿಟ್ಟಿಲ್ಲ. ಸಮಾನಮನಸ್ಕ ಸಂಗಾತಿಗಾಗಿ ಹುಡುಕುತ್ತಲೇ ಇದ್ದೇನೆ…’

ಚಿನ್ನದ ಚಮಚವನ್ನು ಬಾಯಲ್ಲೇ ಇಟ್ಟುಕೊಂಡು ಹುಟ್ಟಿದ ರಣಬೀರ್ ಕಪೂರ್ ಮೂವತ್ತೈದು ತುಂಬಿದ ಮೇಲೆ ಹೀಗೆ ಹೇಳಿಕೊಂಡಿದ್ದರು. ದಶಕದ ಹಿಂದೆ ‘ಸಾವರಿಯಾ’ ಹಿಂದಿ ಸಿನಿಮಾ ಮೂಲಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ನಟಿಸುವ ಅವಕಾಶ ಸಿಕ್ಕಾಗ ರಣಬೀರ್ ಉಬ್ಬಿಹೋಗಿದ್ದರು. ವೃತ್ತಿ ಬದುಕು ಇನ್ನು ಗಟ್ಟಿಯಾದಂತೆಯೇ ಎನ್ನುವ ಬಲವಾದ ವಿಶ್ವಾಸ.

ಹೆಣ್ಣುಮಕ್ಕಳು ಅಭಿಮಾನಿಗಳಾದ ಮೇಲಂತೂ ಮನ ಮರ್ಕಟ. ರಣಬೀರ್ ಖುಷಿಯಿಂದ ಕುಣಿದರು. ದೀಪಿಕಾ ಪಡುಕೋಣೆ ಜೊತೆಗಿನ ಪ್ರೇಮ ಸಲ್ಲಾಪದ ಗುಲ್ಲೆದ್ದಾಗಲೂ ಅವರ ಪ್ರತಿಕ್ರಿಯೆ ತಣ್ಣಗೇ ಇತ್ತು. ಅವರಿಬ್ಬರ ಸಂಬಂಧ ಮುರಿದುಬಿತ್ತು ಎಂಬ ಸುದ್ದಿಗೂ ಅವರು ಸೂಸಿದ್ದು ಮಂದಹಾಸವನ್ನಷ್ಟೆ. ಆಮೇಲೆ ಕತ್ರಿನಾ ಕೈಫ್ ಹಾಗೂ ಅವರ ನಡುವಿನ ಕೆಮಿಸ್ಟ್ರಿ ಕುರಿತು ಸುದ್ದಿಗಳ ಪುಗ್ಗೆಗಳು ಹಾರಿದವು.

ADVERTISEMENT

ಒಂದು ಕಡೆ ಸಿನಿಮಾಗಳ ಪ್ರಯೋಗ. ‘ರಾಕ್ ಸ್ಟಾರ್’ ತರಹದ ಅವಕಾಶ. ಸೇಲ್ಸ್ ಮನ್ ಪಾತ್ರದ ಹೊಸ ರೂಹು. ಅನುರಾಗ್ ಬಸು ನಿರ್ದೇಶನದಲ್ಲಿ ಮೂಕನ ಪಾತ್ರ. ಅವರದ್ದೇ ಗೀತನಾಟಕದಂಥ ಇನ್ನೊಂದು ಪ್ರಯೋಗ ‘ಜಗ್ಗಾ ಜಾಸೂಸ್’. ಆಧುನಿಕ ಮನಸ್ಸುಗಳ ರೂಪಕಗಳ ಊಟೆಯಂತಿದ್ದ ‘ತಮಾಷಾ’. ಇವೆಲ್ಲವುಗಳ ನಿಕಷಕ್ಕೆ ಒಡ್ಡಿಕೊಂಡೇ ವೈವಿಧ್ಯಮಯ ಸಿನಿಮಾಗಳಿಗೆ ಎದೆಗೊಟ್ಟ ನಟನ ಬದುಕಿನಲ್ಲಿ ಸಂಗಾತಿ ಮಾತ್ರ ನಿಕ್ಕಿಯಾಗಲೇ ಇಲ್ಲ.

‘ಸಂಬಂಧ ನನ್ನದು. ನನಗಷ್ಟೇ ಹತ್ತಿರವಾದದ್ದು. ಅದರಲ್ಲಿ ಬೇರೆಯವರು ಮೂಗು ತೂರಿಸಿದರು. ಮಾಧ್ಯಮಗಳು ತೋಚಿದ್ದನ್ನು ಬರೆದವು. ಅವುಗಳಲ್ಲಿ ಬಹುಪಾಲು ಸುಳ್ಳೇ ಇರುತ್ತಿತ್ತು. ಮೊದಲಿಗೆ ನನ್ನೊಳಗೆ ಏನೋ ತಳಮಳ. ಆಮೇಲಾಮೇಲೆ ಅದೂ ಅಭ್ಯಾಸವಾಯಿತು.

ಯಾವುದನ್ನು ಉಪೇಕ್ಷಿಸಬೇಕು, ಯಾವುದರ ಕಡೆಗೆ ಲಕ್ಷ್ಯ ಕೊಡಬೇಕು ಎನ್ನುವುದು ಸ್ಪಷ್ಟವಾಯಿತು. ಆದರೆ, ಸುದ್ದಿ ಸರಣಿಗಳು ನನ್ನ ಸಂಬಂಧಗಳನ್ನು ಪಂಕ್ಚರ್ ಮಾಡಿವೆ. ಅದರ ಕಹಿಯುಂಡೆ. ನಗು ನನ್ನ ಹೃದಯ ಅರಳಿಸಿದಂತೆ ಅಳು ಮುದುಡಿಸಿದ ದಿನಗಳಿಗೆ ಲೆಕ್ಕವಿಲ್ಲ’-ಹೀಗೆ ತಮ್ಮ ಆತ್ಮಕಥೆಯ ಪುಟಗಳನ್ನು ಚದುರಿದಂತೆ ಹರಡುತ್ತಾರೆ ರಣಬೀರ್.

ರಣವೀರ್ ಸಿಂಗ್ ಬೆಳವಣಿಗೆ, ಶಾಹಿದ್ ಕಪೂರ್‌ಗೆ ಒಲಿದು ಬಂದ ಅವಕಾಶಗಳು ಒಂದು ಕಾಲಘಟ್ಟದಲ್ಲಿ ರಣಬೀರ್ ಹಿನ್ನಡೆಗೆ ಕಾರಣವಾದ ಅಂಶಗಳೇ ಹೌದು. ಆದರೆ, ಇದನ್ನು ಈ ನಟ ಆರೋಗ್ಯಕರ ಸ್ಪರ್ಧೆ ಎಂದು ವ್ಯಾಖ್ಯಾನಿಸಿದರು. ಸಿನಿಮಾಗಳು ಗೆದ್ದಾಗ, ದುಡ್ಡು ಮಾಡಿದಾಗ ಶಹಬ್ಬಾಸ್ ಎಂದರು. ಆಗ ಆಕಾಶಕ್ಕೆ ಮೂರೇ ಗೇಣು. ಮುಂದಿನ ಸೂಪರ್ ಸ್ಟಾರ್ ಎಂಬ ಗುಣವಿಶೇಷಣ ಸಿಕ್ಕಾಗ ನನಗೆ ತಲೆಯೇ ನಿಲ್ಲಲಿಲ್ಲ. ಆ ದಿನ ದೀರ್ಘಾವಧಿ ಪಾರ್ಟಿ ಮಾಡಿದ್ದೆ. ಸಿನಿಮಾಗಳು ಸೋತಮೇಲೆ ಭೂಮಿಗೆ ಇಳಿದೆ. ಅಭಿನಯದ ವೃತ್ತಿಬದುಕು ಅನಿಶ್ಚಿತ. ಗಾಳಿ ತುಂಬಿಕೊಂಡು ದೊಡ್ಡದಾಗುವ ಬಲೂನಿಗೆ ಸಣ್ಣ ಸೂಜಿ ಚುಚ್ಚಿದರೆ ಏನಾಗುವುದೋ ಸೋಲೂ ಹಾಗೆಯೇ.

ಸಂತಸದ ಗಾಳಿಯನ್ನೆಲ್ಲಾ ಒಂದೇ ಏಟಿಗೆ ಹೊರಹಾಕಿಬಿಡುತ್ತದೆ- ಇದು ಅವರ ಆತ್ಮವಿಮರ್ಶೆ. ವಿಮರ್ಶಕರ ನೆಚ್ಚಿನ ನಟ ಎಂದು ಈಗಲೂ ಹೆಸರಾಗಿರುವ ರಣಬೀರ್ ಸದ್ಯಕ್ಕೆ ರಾಜ್‌ಕುಮಾರ್‌ ಹೀರಾನಿ ನಿರ್ದೇಶನದ ‘ಸಂಜು’ ಸಿನಿಮಾದ ಗುಂಗಿನಲ್ಲಿದ್ದಾರೆ.

ಸಂಜಯ್ ದತ್ ಬದುಕಿನ ಕಥಾನಕವುಳ್ಳ ಇದರಲ್ಲಿ ಆರು ವಿವಿಧ ಗೆಟಪ್‌ಗಳಿರುವ ಪಾತ್ರಕ್ಕೆ ಜೀವತುಂಬಿರುವವರು ರಣಬೀರ್. ಸಂಜಯ್ ದತ್ ಆಂಗಿಕ ಚಲನೆಯನ್ನು ಅನುಕರಿಸಿರುವ ರೀತಿಯನ್ನು ಟ್ರೇಲರ್ ನಲ್ಲಿ ನೋಡಿಯೇ ಜನ ಮೆಚ್ಚಿದ್ದಾರೆ. ಇಳಿದಿರುವ ಯಶಸ್ಸಿನ ಗ್ರಾಫ್ ಈ ಸಿನಿಮಾ ಮೂಲಕ ಮೇಲೇರೀತು ಎಂಬ ವಿಶ್ವಾಸ ರಣಬೀರ್ ಕಪೂರ್ ಅಪ್ಪ ರಿಷಿ ಕಪೂರ್ ಅವರಿಗೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.