ಮೈಸೂರಿನಿಂದ ಬೆಂಗಳೂರಿಗೆ ಬಂದಿರುವ ಸಮೀಕ್ಷಾಗೆ ರೂಪದರ್ಶಿ ಹಾಗೂ ನಟಿಯಾಗಿ ಹೆಸರು ಮಾಡಬೇಕು, ಮುಂದೊಂದು ದಿನ ಪ್ರಸಿದ್ಧ ನಟಿ ಕಂ ಮಾಡೆಲ್ ಆಗಬೇಕೆಂಬ ಗುರಿ ಹೊಂದಿದ್ದಾರೆ. ಇದುವರೆಗೂ ಅನೇಕ ಮುದ್ರಣ ಜಾಹೀರಾತುಗಳಲ್ಲಿ ಮಾಡೆಲ್ ಆಗಿರುವ ಇವರು ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಆ ಸಿನಿಮಾಗಳು ಹೇಳಿಕೊಳ್ಳುವಂಥ ಯಶಸ್ಸನ್ನು ಗಳಿಸಲಿಲ್ಲ. ಆದರೂ ಸಮೀಕ್ಷಾಗೆ ಅವಕಾಶದ ಬಾಗಿಲು ತೆರೆಯುತ್ತಿದೆ. ತಮ್ಮ ಸಿನಿಮಾ ಹಾಗೂ ಮಾಡೆಲಿಂಗ್ ಪ್ರೀತಿಯನ್ನು ಸಮೀಕ್ಷಾ ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.
*ಓದಿದ್ದು ಬಿ.ಕಾಂ ಮಾಡೆಲಿಂಗ್ ಆಯ್ಕೆ ಮಾಡಿಕೊಂಡಿದ್ದು ಏಕೆ?
ಅರಮನೆ ನಗರಿ ಮೈಸೂರಿನಲ್ಲಿ ಹುಟ್ಟಿ, ಅಲ್ಲಿಯೇ ಬೆಳೆದದ್ದು. 10ನೇ ತರಗತಿಯಲ್ಲಿರುವಾಗಲೇ ಮಾಡೆಲಿಂಗ್‌ಗೆ ಪದಾರ್ಪಣೆ ಮಾಡಿದೆ. ವಿಎನ್‌ಆರ್ ಗೋಲ್ಡ್ ಮುದ್ರಣ ಜಾಹೀರಾತಿನಲ್ಲಿ ಕಾಣಿಸಿಕೊಂಡೆ. ಅಲ್ಲದೇ ಕಾಲೇಜು ದಿನಗಳಲ್ಲೂ ರ್‌್ಯಾಂಪ್ ವಾಕ್‌ಗಳಲ್ಲಿ ಪಾಲ್ಗೊಳ್ಳುತ್ತಿದ್ದರಿಂದ ಮಾಡೆಲಿಂಗ್‌ನಲ್ಲಿ ಹೆಸರು ಮಾಡಬೇಕೆಂಬ ಬಯಕೆ ಹೆಚ್ಚಾಯಿತು. ಜೊತೆಗೆ ಸಿನಿಮಾ ನಟಿಯಾಗುವ ಆಸೆಯೂ ಇತ್ತು.
*ನಿಮ್ಮ ಪ್ರಕಾರ ಫ್ಯಾಷನ್ ಅಂದ್ರೆ?
ನಾವು ಉಡುಪನ್ನು ಯಾವ ರೀತಿ ಕ್ಯಾರಿ ಮಾಡುತ್ತೇವೋ ಅದೇ ಫ್ಯಾಷನ್. ಮುದ್ರಣ ಜಾಹೀರಾತಿಗೆ ಫೋಟೊಜೆನಿಕ್ ಫೇಸ್ ಮುಖ್ಯ, ರ್‌್ಯಾಂಪ್ ಷೋಗಾದರೆ ನಡೆಯುವ ಶೈಲಿ, ದೇಹಭಾಷೆ ಮುಖ್ಯವಾಗುತ್ತದೆ.
*ನೀವು ಪಾಲ್ಗೊಂಡ ಷೋಗಳು?
ಮೊದಲ ಬಾರಿ ಪ್ರವೀಣ್ ನಾಯಕ್ ಅವರ ಬಳಿ ಫೋಟೊಶೂಟ್ ಮಾಡಿಸಿದೆ. ಆಗ ಮುದ್ರಣ ಜಾಹೀರಾತಿನಲ್ಲಿ ಅವಕಾಶ ಸಿಕ್ಕಿತು. ದೀಪಂ ಸಿಲ್ಕ್ಸ್, ಟೀವಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದೇನೆ. 2006ರಲ್ಲಿ ಮಿಸ್ ಮೈಸೂರು, 2008ರಲ್ಲಿ ಮಿಸ್ ಕರ್ನಾಟಕ ಕಿರೀಟವನ್ನು ಮುಡಿಗೇರಿಸಿಕೊಂಡೆ. ಮಿಸ್ ಸೌತ್ ಇಂಡಿಯಾ ಏರೋಮ್ಯಾಕ್ಸ್ ಸ್ಪರ್ಧೆಗೆ ಭಾಗವಹಿಸಿದ್ದೇನೆ.
* ಮೊದಲ ರ್‌್ಯಾಂಪ್ ವಾಕ್ ಅನುಭವ ಹೇಗಿತ್ತು?
ಕೃಷ್ಣಯ್ಯ ಚೆಟ್ಟಿ ಜುವೆಲ್ಸ್ ಷೋಗೆ ಮೊದಲ ರ್‌್ಯಾಂಪ್ ವಾಕ್ ಮಾಡಿದ್ದು, ಅದರಲ್ಲೂ ಷೋ ಸ್ಟಾಪರ್ ಆಗಿದ್ದೆ. ಆ್ಯಂಟಿಕ್ ಆಭರಣಗಳನ್ನು ಧರಿಸಿ, ರಾಣಿಯಂತೆ ಕಾಣಿಸಿಕೊಂಡಿದ್ದು ಬಹಳ ಖುಷಿ ನೀಡಿತ್ತು. ಕಾಲೇಜು ದಿನಗಳಲ್ಲೇ ರ್‌್್ಯಾಂಪ್ ವಾಕ್ ಮಾಡಿದ್ದರಿಂದ ಸ್ಟೇಜ್ ಫಿಯರ್ ಇರಲಿಲ್ಲ, ಕ್ಯಾಮೆರಾ ಮುಂದೆ ಬರಲು ಧೈರ್ಯವೂ ಹೆಚ್ಚಿತ್ತು.
*ಸಿನಿಮಾಗಳ ಬಗ್ಗೆ ಹೇಳಿ?
ದಿಗಂತ್ ಜೊತೆಯಾಗಿ ‘ಎಸ್‌ಎಂಎಸ್6260’, ‘ಮನಸ್ಸಿನ ಪುಟದಲ್ಲಿ’ ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ‘ಮನಸ್ಸಿನ ಪುಟದಲ್ಲಿ’ ಚಿತ್ರದಲ್ಲಿ ನಕ್ಸಲೈಟ್ ಆಗುವ ಹೆಣ್ಣು ತಂದೆ, ತಾಯಿಯಿಂದ ದೂರವಾದ ನಂತರ ಹೇಗೆ ಬದುಕುತ್ತಾಳೆ ಎಂಬುದು ಕಥೆ. ಸದ್ಯ ತಮಿಳು, ಕನ್ನಡ ಸಿನಿಮಾಗಳಿಗೆ ಸಹಿ ಮಾಡಿದ್ದೇನೆ.
*ಬಿಡುವಿನ ವೇಳೆ ಹೇಗೆ ಕಳೆಯುತ್ತೀರಾ?
ವರ್ಕೌಟ್ ಮಾಡುತ್ತೇನೆ, ಏರೋಬಿಕ್ಸ್, ಯೋಗ ಅಭ್ಯಾಸ, ಭರತನಾಟ್ಯ ಹಾಗೂ ಪಾಶ್ಚಾತ್ಯ ನೃತ್ಯವನ್ನು ಕಲಿಯುತ್ತಿದ್ದೇನೆ.
*ಯಾವ ಔಟ್‌ಫಿಟ್‌ನಲ್ಲಿ ಕಂಫರ್ಟ್ ಆಗಿ ಫೀಲ್ ಮಾಡ್ತೀರಾ?
ನನಗೆ ಎಲ್ಲಾ ಔಟ್‌ಫಿಟ್‌ಗಳು ಹೊಂದಿಕೊಳ್ಳುತ್ತವೆ, ಅದರಲ್ಲೂ ಸೀರೆ ಹೆಚ್ಚು ಇಷ್ಟವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.