ADVERTISEMENT

ಸುಡು ಬಿಸಿಲಿಗೆ ‘ತಂಪು’ ಖಾದಿ

ಮಂಜುಶ್ರೀ ಎಂ.ಕಡಕೋಳ
Published 10 ಏಪ್ರಿಲ್ 2018, 19:30 IST
Last Updated 10 ಏಪ್ರಿಲ್ 2018, 19:30 IST
ಸುಡು ಬಿಸಿಲಿಗೆ ‘ತಂಪು’ ಖಾದಿ
ಸುಡು ಬಿಸಿಲಿಗೆ ‘ತಂಪು’ ಖಾದಿ   

ಅಬ್ಬಾ ಬೆಳಿಗ್ಗೆ ಎಂಟೂವರೆಗೆ ಸೂರ್ಯನ ಬಿರುಬಿಸಿಲಿಗೆ ಸೆಖೆಸೆಖೆ. ಬೆಳಿಗ್ಗೆ ಬೇಗ ಎದ್ದು ರೆಡಿಯಾಗಿ ಕಚೇರಿಗೆ ಹೋಗುವಷ್ಟರಲ್ಲಿ ಮೈಯೆಲ್ಲಾ ನೀರುನೀರು. ಅದರಲ್ಲಿ ಈ ಡ್ರೆಸ್ ಅರ್ಧ ಕಿರಿಕಿರಿ. ಈ ಬಿಸಿಲಿಗೆ ಎಂಥ ಬಟ್ಟೆ ಹಾಕಿಕೊಳ್ಳೋದು ಅಂತ ಯೋಚಿಸ್ತಾ ಇದ್ದೀರಾ?

ಹಾಗಿದ್ದರೆ ಮರುಮಾತಿಲ್ಲದೆ ಖಾದಿ ಉಡುಪುಗಳ ಮೊರೆ ಹೋಗಿ ಎನ್ನುತ್ತಾರೆ ವಸ್ತ್ರವಿನ್ಯಾಸಕರು.

ಹೌದು. ಸುಡುಸುಡು ಬಿಸಿಲಿಗೆ ಖಾದಿಗಿಂತ ತಂಪನೆಯ ಉಡುಪು ಮತ್ತೊಂದಿಲ್ಲ. ನೋಡಲು ಸರಳವಾಗಿದ್ದರೂ ಖಾದಿ ಉಡುಪು ಧರಿಸಿದಾಗ ಮನಸಿಗೆ ಅಪ್ಯಾಯವೆನಿಸುತ್ತದೆ. ಖಾದಿ ಉಡುಪುಗಳು ಸರಳತೆಯಷ್ಟೇ ಅಲ್ಲ ಗೌರವದ ನೋಟವನ್ನೂ ನೀಡುತ್ತದೆ. ರಾಸಾಯನಿಕ ಮುಕ್ತವಾಗಿರುವ ಸಾವಯವ ಬಣ್ಣಗಳಿಂದ ತಯಾರಾಗಿರುವ ಈ ಬಟ್ಟೆಗಳು ಚರ್ಮಕ್ಕೂ ಹಿತಕಾರಿ.

ADVERTISEMENT

ಫ್ಯಾಷನ್ ಲೋಕದಲ್ಲಿ ಇತ್ತೀಚೆಗೆ ಮುಖ್ಯ ಸ್ಥಾನ ಪಡೆಯುತ್ತಿರುವ ಖಾದಿಗೆ ಬೇಸಿಗೆಯಲ್ಲಿ ಎಲ್ಲಿಲ್ಲದ ಬೇಡಿಕೆ. ರೇಷ್ಮೆ ಸಿರಿವಂತರ ಬಟ್ಟೆ ಎಂದು ಹೆಸರು ಗಳಿಸಿದರೆ, ಖಾದಿ ಬಡವರಿಂದ ಹಿಡಿದು ಸಿರಿವಂತರ ತನಕ ಕೊಳ್ಳಬಹುದಾದ ಬಟ್ಟೆ. ಸ್ವಾತಂತ್ರ್ಯ ಪೂರ್ವದಿಂದಲೂ ಟ್ರೆಂಡಿ ಮತ್ತು ಜನಪ್ರಿಯವಾಗಿರುವ ಖಾದಿ ಇಂದಿಗೂ ತನ್ನ ಖದರ್ ಉಳಿಸಿಕೊಂಡಿರುವುದು ಆ ಬಟ್ಟೆಗಳ ಗುಣಮಟ್ಟಕ್ಕೆ ಸಾಕ್ಷಿ.

ಈ ಹಿಂದೆ ಖಾದಿ ಎಂದಾಕ್ಷಣ ಬರೀ ಪುರುಷರು ಮಾತ್ರ ಧರಿಸಬಹುದಾದ ಜುಬ್ಬಾ–ಪೈಜಾಮ ಅನ್ನುವ ಭಾವವಿತ್ತು. ಆದರೆ, ಈಗ ಖಾದಿಯಲ್ಲಿ ಯುವತಿಯರಿಗೂ ಬಗೆಬಗೆ ಆಯ್ಕೆಗಳಿವೆ. ಆಕರ್ಷಕ ಚೂಡಿದಾರ್‌ಗಳು, ದುಪಟ್ಟಾಗಳು ದೊರೆಯುತ್ತವೆ. ಪುಟ್ಟ ಮಕ್ಕಳಿಗೆ ಜುಬ್ಬಾ, ಲಂಗ–ಜಾಕೀಟು, ಚಂದನೆಯ ಫ್ರಾಕ್ ಕೂಡಾ ಈಗ ಖಾದಿ ಬಟ್ಟೆಯಲ್ಲಿ ದೊರೆಯುತ್ತಿರುವುದು ವಿಶೇಷ.

ಸ್ವಾಭಿಮಾನ ಮತ್ತು ದೇಸಿಯತೆಯ ಪ್ರತೀಕವಾಗಿರುವ ಖಾದಿ ಫ್ಯಾಷನ್ ಲೋಕಕ್ಕೆ ಕಾಲಿಟ್ಟ ಬಳಿಕ ಮೂಲ ಸ್ವರೂಪದಲ್ಲಿ ತುಸು ಮಾರ್ಪಾಡಾಗಿದೆ. ಕಾಟನ್ ಖಾದಿ, ಸಿಲ್ಕ್ ಖಾದಿ ಹೀಗೆ ಇತರೆ ಬಟ್ಟೆಗಳ ಜತೆ ಮಿಶ್ರಣ ಹೊಂದಿರುವ ಖಾದಿ ಈಗ ಮಾರುಕಟ್ಟೆಯಲ್ಲಿ ಲಭ್ಯ.

ಸೀರೆ, ಶರ್ಟ್‌, ಜುಬ್ಬಾ, ಪೈಜಾಮ, ವೇಸ್‌ಕೋಟ್‌, ಆಕರ್ಷಕ ಖಾದಿ ಪರ್ಸ್, ಬ್ಯಾಗ್, ಖಾದಿ ದುಪಟ್ಟಾ, ಟಾಪ್... ಹೀಗೆ ಎಲ್ಲಾ ವಯೋಮಾನದವರಿಗೂ ಬೇಕಾದ ಟ್ರೆಂಡಿ ಫ್ಯಾಷನಬಲ್ ಉಡುಪುಗಳ ವಿನ್ಯಾಸ ಖಾದಿ ಬಟ್ಟೆಯಲ್ಲೀಗ ದೊರೆಯುತ್ತವೆ. ಸಣ್ಣ ಸಣ್ಣ ಕಸೂತಿ ಮತ್ತು ಕಲಾಂಕರಿ ಪ್ರಿಂಟ್ ಜತೆಗೂಡಿ ಬರುತ್ತಿರುವ ಚೂಡಿದಾರ್‌ಗಳು ಕಾಲೇಜು ಯುವತಿಯರಿಂದ ಹಿಡಿದು ಗೃಹಿಣಿಯರ ತನಕ ಮನ ಕದಿಯುವಂತಿವೆ.

ಕಾಟನ್ ಮಿಶ್ರಿತ ಖಾದಿ ಸೀರೆ ಉಟ್ಟ ಹೆಣ್ಣಿನ ಅಂದ ಮತ್ತಷ್ಟು ಹೆಚ್ಚಾಗುತ್ತದೆ. ಖಾದಿ ಸೀರೆಗೆ ದೇಸಿ ಸೊಬಗಿನ ಮಣ್ಣಿನ ಆಭರಣ ಇಲ್ಲವೇ ಆಕ್ಸಿಡೈಸ್ಟ್‌ ಸಿಲ್ವರ್ ಆಭರಣಗಳನ್ನು ಧರಿಸಿದರೆ ಮತ್ತಷ್ಟು ಮೆರುಗು ಬರುತ್ತದೆ. ಅಪ್ಪಟ ಖಾದಿಸೀರೆ, ಕಾಟನ್ ಮಿಶ್ರಿತ ಖಾದಿ ಸೀರೆ, ರೇಷ್ಮೆ ಮಿಶ್ರಿತ ಖಾದಿ ಹೀಗೆ ಖಾದಿ ಸೀರೆಯಲ್ಲೂ ಹಲವು ವೈವಿಧ್ಯಗಳುಂಟು.

ಗಾಢ ಬಣ್ಣದ ಚೂಡಿದಾರ್‌ಗಳಿಗೆ ಹಾಲಿನ ಕೆನೆಬಣ್ಣದ ಖಾದಿ ದುಪಟ್ಟಾ ಅತ್ಯುತ್ತಮ ಕಾಂಬಿನೇಷನ್. ಜೀನ್ಸ್ ಪ್ಯಾಂಟಿಗೆ ಸ್ಲೀವ್‌ಲೆಸ್ ಖಾದಿ ಟಾಪ್ ಕೂಡಾ ಈಗಿನ ಟ್ರೆಂಡ್ ಆಗಿದೆ. ಖಾದಿ ಉಡುಪುಗಳ ಜತೆಗೆ ಹೊಂದುವಂಥ ಖಾದಿ ಪರ್ಸ್, ವ್ಯಾನಿಟಿ ಬ್ಯಾಗ್ ಉತ್ತಮ ಕಾಂಬಿನೇಷನ್ ಆಗಬಲ್ಲವು. ಬೇಸಿಗೆ ಕಾಲದಲ್ಲಿ ಪುಟ್ಟ ಮಕ್ಕಳಿಗೆ ಖಾದಿ ಉಡುಪುಗಳಿಗಿಂತ ಮತ್ತೊಂದ ಆರಾಮದಾಯಕ ಉಡುಪಿಲ್ಲ. ಹಸುಗೂಸಿಗೆ ತೋಳಿಲ್ಲದ ಟಾಪ್ ಆರಾಮದಾಯಕವೆನಿಸಿದರೆ, ಶುಭ ಸಮಾರಂಭಗಳಲ್ಲಿ ಮಕ್ಕಳಿಗೆ ಖಾದಿ ಜುಬ್ಬಾ ಆಕರ್ಷಕವಾಗಿ ಕಾಣುತ್ತದೆ. ಬಿಸಿಲಿಗೆ ಖಾದಿ ತಂಪಾಗಿರುವುದರಿಂದ ಮಕ್ಕಳಿಗೂ ಇದರಿಂದ ಕಿರಿಕಿರಿ ಅನಿಸದು. ದೊಡ್ಡವರಾದಿಯಾಗಿ ಪುಟ್ಟ ಮಕ್ಕಳ ತನಕ ಬೇಸಿಗೆಯಲ್ಲಿ ಖಾದಿಗಿಂತ ಮತ್ತೊಂದು ಆರಾಮದಾಯಕ ಉಡುಪು ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.