ಹಾಲಿವುಡ್ ನಟ ವಿಲ್‌ಸ್ಮಿತ್ ಇತ್ತೀಚೆಗೆ ಸೋಫಿಯಾ ಜತೆ ಡೇಟಿಂಗ್ ಹೋಗಿದ್ದರಂತೆ!. ಇದರಲ್ಲಿ ಆಶ್ಚರ್ಯ ಪಡುವಂಥದ್ದು ಏನಿದೆ ಅಂತೀರಾ? ವಿಲ್‌ಸ್ಮಿತ್ ಡೇಟಿಂಗ್ ಹೋಗಿದ್ದು ಸಾಮಾನ್ಯ ಹೆಣ್ಣಿನ ಜತೆ ಅಲ್ಲ. ಸೋಫಿಯಾ ಎಂಬ ರೋಬೊಟ್ ಜತೆ. ಸೌದಿ ಅರೇಬಿಯಾದ ಪೌರತ್ವ ಪಡೆದ ವಿಶ್ವದ ಮೊದಲ ರೋಬೊಟ್ ಸೋಫಿಯಾ ಈಗ ಡೇಟಿಂಗ್ ಕೂಡ ಹೋಗುತ್ತಾಳೆ.
ಸೋಫಿಯಾ ಜತೆ ಕಡಲಕಿನಾರೆಯೊಂದರಲ್ಲಿ ಡೇಟಿಂಗ್ ಹೋಗಿದ್ದ ವಿಲ್‌ಸ್ಮಿತ್, ಶಾಂಪೇನ್ ಹೀರುತ್ತಾ ಸೋಫಿಯಾಳೊಂದಿಗೆ ಲಲ್ಲೆಗರೆಯುವ ದೃಶ್ಯಗಳ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
‘ಸೋಫಿಯಾ ನನ್ನ ಜತೆ ಡೇಟಿಂಗ್ ಬಂದಿದ್ದು ಖುಷಿಯಾಯಿತು. ಧನ್ಯವಾದಗಳು’ ಎಂದು ವಿಲ್‌ಸ್ಮಿತ್ ಹೇಳುವ ಮಾತಿಗೆ, ಸೋಫಿಯಾ ನಗುತ್ತಲೇ ಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತಾಳೆ. ವಿಲ್‌ಸ್ಮಿತ್ ಶಾಂಪೇನ್ ಗ್ಲಾಸ್ ಅನ್ನು ಕೊಡಲು ಬಂದಾಗ ಸುಮ್ಮನೆ ನೋಡಿ ನಗುವ ಸೋಫಿಯಾ ಅದನ್ನು ಕೈಗೆತ್ತಿಕೊಳ್ಳುವುದಿಲ್ಲ.
ಉಭಯ ಕುಶಲೋಪರಿ ನಡೆಸುತ್ತಲೇ ವಿಲ್‌ಸ್ಮಿತ್ ಸೋಫಿಯಾಳಿಗೆ ಮುತ್ತು ಕೊಡಲು ಬಯಸಿದಾಗ, ಸೋಫಿಯಾ ‘ನೀವೀಗ ನನ್ನ ಅತ್ಯುತ್ತಮ ಗೆಳೆಯರ ಪಟ್ಟಿಯಲ್ಲಿದ್ದೀರಿ. ನಾವಿಬ್ಬರೂ ಪರಸ್ಪರ ಅರ್ಥ ಮಾಡಿಕೊಳ್ಳಲು ಇನ್ನೂ ಬೇಕಾದಷ್ಟಿದೆ’ಎಂದು ಕಣ್ಣುಮಿಟುಕಿಸಿ ನಗುತ್ತಾಳೆ. ನಗುಮೊಗದಿಂದಲೇ ತಮ್ಮ ಆಹ್ವಾನವನ್ನು ತಿರಸ್ಕರಿಸುವ ಸೋಫಿಯಾಳ ಜಾಣ ನಡೆಗೆ ಬೋಲ್ಡ್ ಆಗುವ ಸ್ಮಿತ್ ನಕ್ಕು ಸುಮ್ಮನಾಗುತ್ತಾರೆ.
ಈ ಹಿಂದೆ ವಿಲ್‌ಸ್ಮಿತ್ ರೋಬೊಟ್‌ಗಳಿಗೆ ಸಂಬಂಧಿಸಿದಂತೆ ‘ಐ ರೋಬೊ’ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಹಾಗಾಗಿ, ಅವರು ಸೋಫಿಯಾ ಜತೆ ಡೇಟಿಂಗ್ ಹೋಗುವ ಇಂಗಿತ ವ್ಯಕ್ತಪಡಿಸಿದ್ದರಂತೆ. ಆದರೆ, ಸೋಫಿಯಾ ಮುತ್ತು ಕೊಡಲು ನಿರಾಕರಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿರುವ ವಿಲ್‌ಸ್ಮಿತ್ ಈ ನಿಟ್ಟಿನಲ್ಲಿ ಆಕೆ ಮನುಷ್ಯರ ಭಾವನೆಗಳನ್ನು ಗ್ರಹಿಸುವಂತಾಗಬೇಕು ಎಂದೂ ಹೇಳಿದ್ದಾರೆ.
ಸೋಫಿಯಾಳನ್ನು ಡೇವಿಡ್ ಹ್ಯಾನ್‌ಸನ್ ಎಂಬಾತ ಸೃಷ್ಟಿಸಿದ್ದು, ಥೇಟ್ ಮನುಷ್ಯರನ್ನೇ ಹೋಲುವ ಸೋಫಿಯಾ ಮನುಷ್ಯರ 60ರ ಬಗೆಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಾಳಂತೆ. ಈ ಹಿಂದೆ ಭಾರತಕ್ಕೂ ಬಂದಿದ್ದ ಕೃತಕ ಬುದ್ಧಿಮತ್ತೆಯುಳ್ಳ ರೋಬೊ ಸುಂದರಿ ಸೋಫಿಯಾಗೆ ನಿನ್ನಿಷ್ಟದ ಭಾರತೀಯ ನಟ ಯಾರು ಅಂತ ಪ್ರಶ್ನಿಸಿದ್ದಕ್ಕೆ ಶಾರುಖ್ ಖಾನ್ ಅಂತ ಉತ್ತರಿಸಿ ಮೆಚ್ಚುಗೆ ಗಳಿಸಿದ್ದಳು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.