ADVERTISEMENT

32ಸಾವಿರ ಟೊಮೆಟೊ ಕೊಟ್ಟ ಮರ!

​ಪ್ರಜಾವಾಣಿ ವಾರ್ತೆ
Published 26 ಜುಲೈ 2016, 19:30 IST
Last Updated 26 ಜುಲೈ 2016, 19:30 IST
32ಸಾವಿರ ಟೊಮೆಟೊ ಕೊಟ್ಟ ಮರ!
32ಸಾವಿರ ಟೊಮೆಟೊ ಕೊಟ್ಟ ಮರ!   

ಟೊಮೆಟೊ ಬಿಡುವುದು ಗಿಡದಲ್ಲಿ,  ಮರ  ಹೇಗೆ ಟೊಮೆಟೊ ಕೊಡುತ್ತದೆ ಎಂಬ ಪ್ರಶ್ನೆ ಸಹಜವಾಗೇ ಮೂಡುತ್ತದೆ. ಆದರೆ ಇದಕ್ಕೆ ಉತ್ತರ ಎಂಬಂತೆ ಫ್ಲೋರಿಡಾದಲ್ಲಿ ಟೊಮೆಟೊ ಗಿಡವೊಂದು ಮರದಂತೆ ಬೆಳೆದಿದೆ. ಇದರ ಹೆಸರು ‘ಆಕ್ಟೊಪಸ್‌ ಟೊಮೆಟೊ ಟ್ರೀ’. ತಾಂತ್ರಿಕವಾಗಿ ಇದು ಮರವಲ್ಲ. ಹೈಬ್ರಿಡ್ ಟೊಮೆಟೊ ತಳಿಯಿಂದ ಹುಟ್ಟಿಕೊಂಡ ಬಳ್ಳಿ. ಒಂದು ಪುಟ್ಟ ಟೊಮೆಟೊ ಬಳ್ಳಿಯಿಂದ ಈಗ ದೊಡ್ಡ ಹಂದರವಾಗಿ, 40-50 ಚದರ ಮೀಟರ್‌ವರೆಗೂ ಹಬ್ಬಿಕೊಂಡಿದೆ.

ಈ ಟೊಮೆಟೊ ಗಿಡ ಈಗ ಸುದ್ದಿ ಮಾಡುತ್ತಿರುವುದು ಬೇರೆಯದೇ ವಿಷಯಕ್ಕೆ. ಈ ಬಾರಿ ಇದು ಗಿನ್ನಿಸ್‌ ದಾಖಲೆ ಸೇರಿದೆ. ಫ್ಲೋರಿಡಾದ ವಾಲ್ಟ್‌ ಡಿಸ್ನೆ ವರ್ಡ್‌ ರೆಸಾರ್ಟ್‌ ಗ್ರೀನ್‌ ಹೌಸ್‌ನಲ್ಲಿ ಇದನ್ನು ಬೆಳೆಸಲಾಗಿದೆ.

ಎಪ್‌ಕಾಟ್‌ನ ಕೃಷಿವಿಜ್ಞಾನದ ನಿರ್ವಾಹಕ ಯಾಂಗ್ ಹಾಂಗ್ ಈ ಟೊಮೆಟೊವನ್ನು ಚೀನಾದಲ್ಲಿ ಕಂಡಿದ್ದರು. ಅದರ ಬೀಜವನ್ನು ತಂದು ಫ್ಲೋರಿಡಾದ ವಾಲ್ಟ್‌ ಡಿಸ್ನೆ ವರ್ಡ್‌ ರೆಸಾರ್ಟ್‌ ಗ್ರೀನ್‌ ಹೌಸ್‌ನಲ್ಲಿ ನೆಟ್ಟರು. ಇದೀಗ ಒಂದೇ ಕೊಯ್ಲಿಗೆ 32ಸಾವಿರ ಟೊಮೆಟೊಗಳ ಇಳುವರಿ ನೀಡಿದೆ. ಜೊತೆಗೆ ವಿಶ್ವದಲ್ಲೇ ಅತಿ ದೊಡ್ಡ ಟೊಮೆಟೊ ಗಿಡ ಎಂದು ಗಿನ್ನಿಸ್ ದಾಖಲೆ ಸೇರಿದೆ. ಇದರ ಒಟ್ಟಾರೆ ತೂಕ 522 ಕೆ.ಜಿ.

ಎಲ್ಲ ಟೊಮೆಟೊಗಳಂತೆ  ಇದು ಗುಂಡಗಿರುವುದಿಲ್ಲ, ಗಾಲ್ಫ್‌ ಬಾಲ್ ಆಕಾರದಲ್ಲಿರುತ್ತವೆ. ಇದರ ವೈಜ್ಞಾನಿಕ ಹೆಸರು ಸೈಫೊಮಾಂಡ್ರಾ ಬೆಟಾಸಿಯಾ ಸೆಂಡಟ್‌. ಇದಕ್ಕೆ ಟ್ರೀ ಟೊಮೆಟೊ, ಟೊಮೆಟೊ ಎಕ್ಸ್‌ಟ್ರಾಂಜೆರೊ, ಟೊಮೆಟೊ ಗ್ರಾನಡಿಲ್ಲ, ಟೊಮೇಟ್ ಪಿಕ್ಸ್ ಹೀಗೆ ಭಿನ್ನ ಹೆಸರುಗಳಿವೆ. ನ್ಯೂಝಿಲೆಂಡ್‌ನಲ್ಲಿ ಇದನ್ನು ಟ್ಯಾಮರಿಲ್ಲೋ ಎನ್ನುತ್ತಾರೆ.

ಇದು ಸಾಮಾನ್ಯ ಟೊಮೆಟೊ ಗಿಡದಂತಲ್ಲ. ಇದರ ಕಾಂಡ ಬಳ್ಳಿ, ಅರ್ಧ ಮರದಂತಿರುತ್ತದೆ. ಅತಿ ವೇಗವಾಗಿ ಬೆಳೆಯುವ ಸಾಮರ್ಥ್ಯ ಹೊಂದಿದ್ದು,  ಸುಮಾರು 3 ರಿಂದ 5.5 ಮೀಟರ್‌ವರೆಗೂ ಬೆಳೆಯಬಲ್ಲದು. ಇದರ ಬಣ್ಣದಲ್ಲೂ ಸಾಕಷ್ಟು ವ್ಯತ್ಯಾಸಗಳಿವೆ.

ರಕ್ತಕೆಂಪು, ಹಳದಿ, ಕೇಸರಿಬಣ್ಣ, ಗಾಢನೇರಳೆ, ಕೆಂಪು ಮತ್ತು ಹಳದಿಯ ಮಿಶ್ರಣದ ಟೊಮೆಟೊಗಳನ್ನು ಬಿಡುತ್ತದೆ. ಇದರ ಸಿಪ್ಪೆ ಒರಟು. ಸಿಪ್ಪೆ ಬಿಡಿಸದೆ ತಿನ್ನುವಂತಿಲ್ಲ. ಮೊದಲ ಏಳೆಂಟು ತಿಂಗಳಿನಲ್ಲಿ ಏನೂ ಇಳುವರಿ ಕೊಡುವುದಿಲ್ಲ.  ನಂತರ ಅಂದಾಜು 14ಸಾವಿರ ಹಣ್ಣುಗಳನ್ನು ಕೊಡಬಲ್ಲದು. ಈ ಬಾರಿ 32ಸಾವಿರ ಹಣ್ಣುಗಳನ್ನು ನೀಡಿ ದಾಖಲೆ ಮಾಡಿರುವುದು ವಿಶೇಷ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.