ADVERTISEMENT

40 ವರ್ಷಗಳಿಂದ ಕೈ ಎತ್ತಿರುವ ಸ್ವಾಮಿ!

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2016, 19:30 IST
Last Updated 16 ಆಗಸ್ಟ್ 2016, 19:30 IST
40 ವರ್ಷಗಳಿಂದ  ಕೈ ಎತ್ತಿರುವ ಸ್ವಾಮಿ!
40 ವರ್ಷಗಳಿಂದ ಕೈ ಎತ್ತಿರುವ ಸ್ವಾಮಿ!   

1970ರವರೆಗೆ ದೆಹಲಿಯ ಮಹಾಂತ್‌ ಅಮರಭಾರತಿ ಎನ್ನುವವರ ಸಂಸಾರ ಚೆನ್ನಾಗಿಯೇ ನಡೆಯುತ್ತಿತ್ತು. ಕೈಯಲ್ಲಿ ಉತ್ತಮ ಕೆಲಸವೂ ಇತ್ತು. ಮನೆ, ಮಡದಿ ಮತ್ತು ಮೂವರು ಮಕ್ಕಳೊಂದಿಗೆ ನೆಮ್ಮದಿಯಾಗಿ ಇದ್ದರು. ಅದೇನಾಯಿತೋ ಗೊತ್ತಿಲ್ಲ. 1970ರ ಅಂತ್ಯದಲ್ಲಿ ಇವರಿಗೆ ಶಿವನ ಮೇಲೆ ಭಕ್ತಿ ಹೆಚ್ಚಿತು.

ಮನೆ–ಮಠ ಎಲ್ಲವನ್ನೂ ತ್ಯಜಿಸಿ ಹೊರಟೇ ಬಿಟ್ಟರು! ಮೂರು ವರ್ಷ ಶಿವನಿಗಾಗಿ ಹುಡುಕಾಟ ನಡೆಸಿದರು. ತಪಸ್ಸು ಆಚರಿಸಿದರು. ಶಿವ ಒಲಿಯಲೇ ಇಲ್ಲ. 1973ರಲ್ಲಿ ಅದೊಂದು ಅಶರೀರವಾಣಿ ಇವರಿಗೆ ಕೇಳಿಸಿತಂತೆ. ಬಲಗೈಯನ್ನು ಮೇಲಕ್ಕೆತ್ತಿ ನಿಂತರೆ ಶಿವ ಒಲಿಯುವ ಎಂದು. ಇನ್ನೇನು ತಡ. ಬಲಗೈಯನ್ನು ಎತ್ತಿ ನಿಂತೇ ಬಿಟ್ಟರು.

ಗಂಟೆಗಳು ಉರುಳಿ, ವಾರವಾಗಿ, ವರ್ಷವಾಗಿ, ದಶಕವಾದರೂ ಕೈ ಎತ್ತಿಕೊಂಡೇ ಇದ್ದರು. ಶಿವ ಒಲಿದನೋ, ಬಿಟ್ಟನೋ ಗೊತ್ತಿಲ್ಲ. ಒಟ್ಟಿನಲ್ಲಿ ಕೈ ಎತ್ತಿ ಈಗ ಬರೋಬ್ಬರಿ 40ವರ್ಷ ಆಗಿದೆ. ಅಲ್ಲಿಂದ ಇಲ್ಲಿಯವರೆಗೂ ಕೈ ಇಳಿಸಿಯೇ ಇಲ್ಲ. ಆಶ್ಚರ್ಯ ಎಂದರೆ ಕೈ ಇಳಿಸಲೂ ಆಗುತ್ತಿಲ್ಲವಂತೆ. ಅಲ್ಲಿಯೇ ತಟಸ್ಥವಾಗಿ ನಿಂತುಬಿಟ್ಟಿದೆ.

ಉಗುರುಗಳು ಮಾತ್ರ ಅಸಹ್ಯ ಎನಿಸುವಷ್ಟು ಉದ್ದ ಬೆಳೆದು ನಿಂತಿದೆ. ಕುಳಿತರೂ, ತಿರುಗಾಟ ನಡೆಸಿದರೂ, ಏನೇ ಕೆಲಸ ಮಾಡಿದರೂ ಕೈ ಮಾತ್ರ ಎತ್ತಿಕೊಂಡೇ ಇರುತ್ತಾರೆ.

ಮಹಾಂತ್‌ ಅಮರಭಾರತಿ, ಈಗ ಸಾಧು ಅಮರ ಭಾರತಿ ಆಗಿದ್ದಾರೆ. ಶಿವನ ಭಕ್ತರು ಇವರನ್ನು ನೋಡಲು ತಂಡೋಪತಂಡವಾಗಿ ಬರುತ್ತಿದ್ದಾರೆ. ‘ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು’ ಎಂದು ಕುವೆಂಪು ಹೇಳಿದರೆ, ಹೀಗೆ ಬಲಗೈ ಎತ್ತಿ ನಿಂತರೆ ಲೋಕ ಕಲ್ಯಾಣವಾಗುತ್ತದೆ, ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ ಎಂದಿದ್ದಾರೆ ಈ ಸ್ವಾಮೀಜಿ. 25 ವರ್ಷಗಳ ಹಿಂದೆ ಹರಿದ್ವಾರದಿಂದ ನಡೆದ ಕುಂಭಮೇಳಕ್ಕೆ ಇವರು ಹೋಗಿದ್ದರು.

ಇವರಿಂದ ಪ್ರಭಾವಿತರಾದ ಇನ್ನು ಹಲವು ಸ್ವಾಮಿಗಳು ಹೀಗೆ ಕೈಯನ್ನು ಎತ್ತಿ ನಿಂತುಕೊಂಡು ತಪಸ್ಸನ್ನು ಆಚರಿಸಲು ಶುರು ಮಾಡಿದ್ದಾರಂತೆ. ಹೀಗೆ ‘ಲೋಕಕಲ್ಯಾಣ’ಕ್ಕೆ ಕೈ ಎತ್ತಿ ನಿಲ್ಲುವ ಸ್ವಾಮೀಜಿಗಳ ದೊಡ್ಡ ಪರಂಪರೆಗೆ ಅಮರಭಾರತಿ ನಾಂದಿ ಹಾಡಿದ್ದಾರೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.