ADVERTISEMENT

ಆಸ್ಪತ್ರೆಯಿಂದ ಬೆಳ್ಳಿತೆರೆಯವರೆಗಿನ ಪಯಣ

ವಿಶಾಖ ಎನ್.
Published 12 ಜನವರಿ 2018, 5:31 IST
Last Updated 12 ಜನವರಿ 2018, 5:31 IST
ನಟ ವಿಕ್ರಮ್
ನಟ ವಿಕ್ರಮ್   

1980ರ ದಶಕ. ಮದ್ರಾಸ್ ಐಐಟಿಯಲ್ಲಿ ರಂಗ ಪ್ರಶಸ್ತಿ ಸಮಾರಂಭ ನಡೆಯಿತು. ಲಯೋಲಾ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯ ಓದುತ್ತಿದ್ದ ವಿದ್ಯಾರ್ಥಿ ಕೆನಡಿ ರಂಗಾಭಿನಯಕ್ಕಾಗಿ ಪ್ರಶಸ್ತಿ ಪಡೆದ. ಖುಷಿಯಿಂದ ಮನೆಗೆ ಮರಳುತ್ತಿರುವಾಗ ಟ್ರಕ್ ಬಂದು ಮೋಟರ್ ಬೈಕ್ ಗೆ ಗುದ್ದಿತು. ಹಿಂದೆ ಕೂತಿದ್ದ ಕೆನಡಿಯ ಕಾಲು ಅಪ್ಪಚ್ಚಿಯಾಯಿತು. ಮೂರು ವರ್ಷ ಆಸ್ಪತ್ರೆಯಲ್ಲಿ ಏಗಬೇಕಾದ ಪರಿಸ್ಥಿತಿ. ಕಾಲು ಕತ್ತರಿಸದೇ ಉಳಿಸಲೆಂದು 23 ಶಸ್ತ್ರಚಿಕಿತ್ಸೆಗಳನ್ನು ಮಾಡಬೇಕಾಯಿತು. ವೈದ್ಯರು ನಡೆಯುವಷ್ಟು ಕಾಲು ಬಲಗೊಳ್ಳುವುದೇ ಅನುಮಾನ ಎಂದಿದ್ದರು. ಪದವಿ ಪಠ್ಯದ ಭಾಗವಾದ ಪ್ರಬಂಧ ಬರೆದದ್ದೂ ಆಸ್ಪತ್ರೆಯಲ್ಲೇ. ಅದಕ್ಕಾಗಿ ಕಾಲೇಜಿನ ಪ್ರಾಂಶುಪಾಲರು ಅನುಮತಿ ಕೊಟ್ಟಿದ್ದರು.

ಕ್ರಚರ್ ಹಿಡಿದು ನಡೆಯುತ್ತಿದ್ದ ಕೆನಡಿಗೆ ಪ್ರೇಮಾಂಕುರವಾದದ್ದೂ ಆಸ್ಪತ್ರೆಯಲ್ಲೇ. ಅಲ್ಲಿ ಲೈನ್ ಹೊಡೆದ ಶೈಲಜಾ ಬಾಲಕೃಷ್ಣನ್ ಎಂಬ ಹುಡುಗಿಯನ್ನೇ ಅವರು ಗುರುವಾಯೂರಿನ ದೇವಸ್ಥಾನದಲ್ಲಿ ಸರಳ ವಿವಾಹವಾದದ್ದು ವಿಶೇಷ. ಇದೇ ಕೆನಡಿಯೇ ನಟ ವಿಕ್ರಮ್ ಎಂದರೆ ಕೆಲವರಿಗೆ ಅಚ್ಚರಿಯಾದೀತು.

ಅಪ್ಪನ ಹೆಸರಿನಿಂದ 'vi', ತಮ್ಮ ಹೆಸರಿನಿಂದ 'k', ಅಮ್ಮನ ಹೆಸರಿನಿಂದ 'ra' ಹಾಗೂ ತಮ್ಮ ಇಂಗ್ಲಿಷ್ ರಾಶಿಯಿಂದ 'm' ತೆಗೆದುಕೊಂಡು, ಎಲ್ಲವನ್ನೂ ಸೇರಿಸಿ 'ವಿಕ್ರಮ್' ಎಂದು ಮರುನಾಮಕರಣ ಮಾಡಿಕೊಂಡರು.

ADVERTISEMENT

ಅಪ್ಪ ಜಾನ್ ವಿಕ್ಟರ್ ಕೂಡ ವಿನೋದ್ ರಾಜ್ ಎಂಬ ಹೆಸರಿನಿಂದ ಗುರುತಾಗಿದ್ದರು. ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಪೋಷಕ ನಟರಷ್ಟೇ ಆಗಿ ಉಳಿದ ಅವರು ಯೌವನದಲ್ಲಿ ದೊಡ್ಡ ಹೀರೊ ಆಗುವ ಕನಸು ಕಂಡಿದ್ದರು. ಅದನ್ನು ಈಡೇರಿಸುವ ಸಂಕಲ್ಪ ಮಾಡಿದ್ದು ಅವರ ಮಗ ಕೆನಡಿ ಅಲಿಯಾಸ್ ವಿಕ್ರಮ್.

ಎರ್ಕಾಡ್ ನ ಮಾಂಟ್ ಫೋರ್ಡ್ ಬೋರ್ಡಿಂಗ್ ಶಾಲೆಯಲ್ಲಿ ಕಲಿಯುವಾಗಲೇ ವಿಕ್ರಮ್ ನಟನಾಗುವ ತಾಲೀಮಿಗೆ ಒಡ್ಡಿಕೊಂಡರು. ಕರಾಟೆ, ಕುದುರೆ ಸವಾರಿ, ಈಜು ಕಲಿತದ್ದಷ್ಟೇ ಅಲ್ಲದೆ ಶಾಲಾ ನಾಟಕಗಳಿಗೆ ರಂಗ ಸಜ್ಜುಗೊಳಿಸುವ ಕೆಲಸದಲ್ಲೂ ಕೈಪಳಗಿಸಿಕೊಂಡರು. ಮೋಲಿಯರನ ರೂಪಾಂತರ ನಾಟಕದಲ್ಲಿ ಅಭಿನಯಿಸುವ ಅವಕಾಶ ಮೊದಲು ಸಿಕ್ಕಿತು. ಕೇನ್ ಮ್ಯುಟಿನಿಯ 'ಕೋರ್ಟ್-ಮಾರ್ಷಲ್', ಪೀಟರ್ ಶಫರ್ಸ್ ನ 'ಬ್ಲಾಕ್ ಕಾಮಿಡಿ' ಅವರು ನಟನೆಯ ಸಾಣೆಗೆ ಒಡ್ಡಿಕೊಂಡ ಪ್ರಮುಖ ನಾಟಕಗಳು.

ಸಿನಿಮಾ ಹಿನ್ನೆಲೆ ಇದ್ದೂ ಅವಕಾಶಗಳನ್ನು ಯಾರೂ ಅವರಿಗೆ ಬೆಳ್ಳಿತಟ್ಟೆಯಲ್ಲಿಟ್ಟು ಕೊಡಲಿಲ್ಲ. 'ಎನ್ ಕಾದಲ್ ಕಣ್ಮಣಿ' ಅವರು ನಟಿಸಿದ ಮೊದಲ ತಮಿಳು ಚಿತ್ರ. ಅದು ಕಡಿಮೆ ಬಜೆಟ್ ನಲ್ಲಿ ತಯಾರಾಗಿತ್ತು. 'ತಂತು' ಆಮೇಲೆ ಸಿಕ್ಕ ಸಿನಿಮಾ. ಇವೆರಡೂ ಹಿಟ್ ಆಗಲಿಲ್ಲ. ಸಣ್ಣ ಪುಟ್ಟ ಅವಕಾಶಗಳು ಸಿಕ್ಕವಾದರೂ ಅವು ತೃಪ್ತಿಕೊಡಲಿಲ್ಲ. ಒಂದು ಹಂತದಲ್ಲಿ ಅಬ್ಬಾಸ್ ಹಾಗೂ ಪ್ರಭುದೇವ ತರಹದ ನಟರಿಗೆ ಕಂಠದಾನ ಮಾಡಿದ ವಿಕ್ರಮ್, ಅಪ್ಪನ ಕನಸು ನನಸಾಗಿಸುವುದು ಕಷ್ಟ ಎಂದೇ ಭಾವಿಸಿದ್ದರು.

ಅಂಥ ಕಾಲಘಟ್ಟದಲ್ಲಿ ನಿರ್ದೇಶಕ ಬಾಲ ದಿಗ್ಗನೆದ್ದರು. ವರ್ಷಗಳಿಂದ ಅವರು ಸಿದ್ಧಪಡಿಸಿಕೊಂಡಿದ್ದ ಸ್ಕ್ರಿಪ್ಟ್‌ಗೆ ಕೊನೆಗೂ ನಿರ್ಮಾಪಕರು ಸಿಕ್ಕರು. 'ಸೇತು' ಸಿನಿಮಾ ಸಾಕಾರಗೊಂಡಿತು. ಆ ತಮಿಳು ಚಿತ್ರ ಬಾಲ, ವಿಕ್ರಮ್ ಇಬ್ಬರ ಪಾಲಿನ ಆಮ್ಲಜನಕ. ಅದಕ್ಕಾಗಿ ವಿಕ್ರಮ್ ಆರು ತಿಂಗಳು ಪಥ್ಯಾಹಾರ ಮಾಡಿ, 21 ಕೆ.ಜಿ.ಯಷ್ಟು ದೇಹತೂಕ ಇಳಿಸಿಕೊಂಡರು. ತಲೆ ಬೋಳಿಸಿಕೊಂಡರು.  ಆ ಚಿತ್ರದ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಕೈತಪ್ಪಿತಲ್ಲ ಎಂದೇ ಬಾಲ 'ಪಿತಾಮಗನ್' ಚಿತ್ರದಲ್ಲಿ ಸ್ಮಶಾನ ಕಾಯುವವನ ಪಾತ್ರವನ್ನು ವಿಕ್ರಮ್ ಗೆ ಕೊಟ್ಟದ್ದು. ಅವರ ಹಟದಂತೆಯೇ ವಿಕ್ರಮ್ ಗೆ ರಾಷ್ಟ್ರ ಪ್ರಶಸ್ತಿಯನ್ನು ಆ ಪಾತ್ರ ತಂದುಕೊಟ್ಟಿತು.

'ಸೇತು' ಚಿತ್ರದಲ್ಲಿ ಅಭಿನಯಿಸುವಷ್ಟರಲ್ಲಿ ವಿಕ್ರಮ್ ಅವರಿಗೆ 33 ವರ್ಷ ವಯಸ್ಸಾಗಿತ್ತು. ಆದರೆ, ತಡವಾಗಿ ಈಡೇರಿದ ಅಪ್ಪನ ಕನಸಿನ ಪಯಣವನ್ನು ಅವರು ಈಗಲೂ ಸಮರ್ಥವಾಗಿ ಮುಂದುವರಿಸುತ್ತಿದ್ದಾರೆ. ಪಾತ್ರ ಕೇಳುವ ದೇಹ ರೂಪಿಸಿಕೊಳ್ಳುವ ಅವರು ಅಭಿನಯದಲ್ಲಿ ವಿಕ್ರಮರೇ ಹೌದು. ಅವರ ಹೊಸ ಸಿನಿಮಾ 'ಧ್ರುವನಚ್ಚತ್ರಂ' ಕೆಲವೇ ತಿಂಗಳಲ್ಲಿ ತೆರೆಕಾಣಲಿದೆ. ಅದಕ್ಕೆ ಪೂರ್ವಭಾವಿಯಾಗಿ ಕೆಲವು ಸಣ್ಣ ಪಟ್ಟಣಗಳಲ್ಲಿಯೂ ಅವರ ಹಳೆಯ ಯಶಸ್ವಿ ಚಿತ್ರಗಳು ಮರುಬಿಡುಗಡೆಯಾಗುತ್ತಿವೆ.

ಇಷ್ಟೆಲ್ಲ ಕಷ್ಟಪಟ್ಟು ಮೇಲೆ ಬಂದಿರುವ ವಿಕ್ರಮ್ ಅವರಿಗೀಗ 51 ವರ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.