ADVERTISEMENT

ಗೆಳೆಯನ ಮಾತಿನಂತೆ ನಡೆದು

ವಿಶಾಖ ಎನ್.
Published 26 ಜನವರಿ 2018, 19:30 IST
Last Updated 26 ಜನವರಿ 2018, 19:30 IST
ಹರೂನ್ ರಾಬರ್ಟ್
ಹರೂನ್ ರಾಬರ್ಟ್   

ಹರೂನ್ ರಾಬರ್ಟ್ ಎಂದರೆ ಬಹುತೇಕರಿಗೆ ಗೊತ್ತಾಗಲಿಕ್ಕಿಲ್ಲ. ಅದೇ ರಾಬ್ ಎಂದು ಕೇಳಿ ನೋಡಿ, ಹೊಸ ಜಮಾನದ ಮಕ್ಕಳೆಲ್ಲ ಕಣ್ಣರಳಿಸುತ್ತಾರೆ. 'ಡೂ ಇಟ್ ಯುವರ್ ಸೆಲ್ಫ್, ಎಂ.ಎ.ಡಿ' ಎಂಬ ಪೋಗೊ ವಾಹಿನಿಯ ಜನಪ್ರಿಯ ಕಾರ್ಯಕ್ರಮದ ರೂವಾರಿ ಈ ರಾಬ್. ಅವರು ವಾಹಿನಿಗೆಂದೇ ಈ ಕಾರ್ಯಕ್ರಮ ಮಾಡುವುದನ್ನು ನಿಲ್ಲಿಸಿ ನಾಲ್ಕು ವರ್ಷಗಳಾಗುತ್ತಾ ಬಂತು. ಆದರೂ ಈಗಲೂ ಹಳೆಯ ಕಂತುಗಳನ್ನೇ ಮರುಪ್ರಸಾರ ಮಾಡಿ, ಪೋಗೊ ವಾಹಿನಿ ಮಕ್ಕಳನ್ನು ಹಿಡಿದಿಟ್ಟುಕೊಳ್ಳುತ್ತಿದೆ.

ರಾಬ್ ಹತ್ತರಲ್ಲಿ ಒಬ್ಬರಂತಲ್ಲ. ಒಂದನೇ ತರಗತಿ ಓದುವ ಹೊತ್ತಿಗಾಗಲೇ ಕಲೆಯಲ್ಲಿ ಇನ್ನಿಲ್ಲದ ಆಸಕ್ತಿ. ಶಾಲೆಯಲ್ಲಿ ಕೇಳುತ್ತಿದ್ದ ಪಾಠಗಳಿಗೆ ಕಲಾಕೃತಿಯ ಚೌಕಟ್ಟು ಕೊಡುವುದರಲ್ಲಿ ನಿಸ್ಸೀಮ.

ಅದಕ್ಕೆ ಕೆಲವು ಉದಾಹರಣೆಗಳು ಹೀಗಿವೆ: ಸಮಾಜ ವಿಷಯದ ಪಾಠದಲ್ಲಿ ಯುದ್ಧದ ಪ್ರಸಂಗಗಳು ಬರುತ್ತಿದ್ದವಲ್ಲ; ಪಾಠ ಕೇಳಿದ ಮರುದಿನವೇ ಬಾಲಕ ರಾಬ್ ಅವುಗಳ ಚಿತ್ರ ಬಿಡಿಸಿ ತರುತ್ತಿದ್ದ. ವಿಜ್ಞಾನದಲ್ಲಿ ಚಿತ್ರ ಬಿಡಿಸುವ ಮಕ್ಕಳೆಲ್ಲ ಈ ಹುಡುಗನ ಕಡೆಗೇ ನೋಡುತ್ತಿದ್ದುದೂ ಅದೇ ಕಾರಣಕ್ಕೆ.

ADVERTISEMENT

ಜೀವವಿಜ್ಞಾನಕ್ಕೆ ಸಂಬಂಧಿಸಿದ ಚಿತ್ರ ಬಿಡಿಸಿಕೊಂಡು ಬರಲು ಶಿಕ್ಷಕರು ಹೇಳಿದರೆ, ರಾಬ್ ಅದರ ಜೊತೆಗೆ ಸಂಬಂಧಿಸಿದ ವಿಷಯದಲ್ಲಿ ಅಧ್ಯಯನ ಮಾಡಿದ ವಿಜ್ಞಾನಿಗಳ ಚಿತ್ರಗಳನ್ನೂ ಬಿಡಿಸಿಕೊಂಡು ಹೋಗುತ್ತಿದ್ದ.

ಪಾಠ ಹೇಳಿದ ಮೇಕ್ಷ್ಟ್ರು, ಮೇಡಂಗಳಿಗೆ ಹುಡುಗನ ಈ ಪ್ರತಿಭೆ ಬಹಳ ಹಿಡಿಸುತ್ತಿತ್ತು. ಅದಕ್ಕೇ ಪರೀಕ್ಷೆಗಳಲ್ಲಿ ಉದಾರವಾಗಿ ಅಂಕಗಳನ್ನು ನೀಡಿದ ಎಷ್ಟೋ ಉದಾಹರಣೆಗಳಿವೆ.

ರಾಬ್ ಕಲಾಪ್ರೇಮ ಕವಲೊಡೆದು,  ಮೇಷ್ಟ್ರು, ಮೇಡಂಗಳೂ ಚಿತ್ರಗಳಾದರು. ಬೇರೆ ಚಿತ್ರಗಳನ್ನು ಕೊಂಡಾಡುತ್ತಿದ್ದ ಅವರಿಗೆ ತಾವೇ ಚಿತ್ರಗಳಾದದ್ದು ಅಪಥ್ಯವೆನಿಸಿತು. ಎರಡು ಸಲ ತರಗತಿಯಿಂದ ಹೊರಗೆ ನಿಲ್ಲಿಸಿದರು. ಆ ಪ್ರಸಂಗಗಳ ನಂತರ ರಾಬ್ ಮೇಷ್ಟರು,ಮೇಡಂಗಳ ಚಿತ್ರಗಳನ್ನು ಬರೆದರೂ ಅವರಿಗೆ ತೋರಿಸಲು ಹೋಗಲಿಲ್ಲ.

ಪಿಯು ಕಾಲೇಜು ಮುಗಿಯುವ ಹೊತ್ತಿಗೆ ವೈದ್ಯಕೀಯ ಶಿಕ್ಷಣ ಪಡೆಯುವ ಬಯಕೆಯನ್ನು ಅನೇಕರು ರಾಬ್ ತಲೆಯಲ್ಲಿ ಬಿತ್ತಿದ್ದರು. ಬರೀ ಚಿತ್ರ ಬಿಡಿಸುವುದನ್ನು ಕಲಿತರೆ ಹೊಟ್ಟೆ ತುಂಬುವುದಿಲ್ಲ ಎಂದೇ ಅನೇಕರು ಹೇಳುತ್ತಿದ್ದರು. ಆಗ ರಾಬ್ ಆಪ್ತಸ್ನೇಹಿತ ದೆಹಲಿಯ ಕಲಾ ಕಾಲೇಜಿನ ಅರ್ಜಿ ತಂದುಕೊಟ್ಟ.  ಅದನ್ನೇ ಓದುವಂತೆ ಸ್ಫೂರ್ತಿ ತುಂಬಿದ. ಮನೆಯವರು ಒಲ್ಲದ ಮನಸ್ಸಿನಿಂದಲೇ ಅರ್ಜಿಗೆ ಸಹಿ ಹಾಕಿದರು.

ಡೆಲ್ಲಿ ಕಾಲೇಜ್ ಆಫ್ ಆರ್ಟ್‌ನಲ್ಲಿ ಕಲಿತ ಮೇಲೆ ಅಹಮದಾಬಾದ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ಸೇರಿದ ರಾಬ್ ಬದುಕಿಗೆ ಹೊಸ ಅರ್ಥ ಸಿಕ್ಕಿತು.
ಅಲ್ಲಿ ಕಲಿತ ನಂತರ ಮುಂಬೈನ ಸ್ಟುಡಿಯೊ ಒಂದರಲ್ಲಿ ಅನಿಮೇಷನ್ ಕಲಾವಿದನಾಗಿ ಕೆಲಸಕ್ಕೆ ಸೇರಿಕೊಂಡದ್ದು ವೃತ್ತಿಬದುಕಿನ ಮಹತ್ವದ ಅವಕಾಶಕ್ಕೆ ವೇದಿಕೆಯಾಯಿತು.

ಪೋಗೊ ವಾಹಿನಿಯವರು ಮಕ್ಕಳಿಗಾಗಿ ಕಲೆ, ಸಂಗೀತದ ಕಾರ್ಯಕ್ರಮ ರೂಪಿಸಿಕೊಡುವಂತೆ ಕೇಳಿಕೊಂಡರು. ಮನೆಯಲ್ಲಿಯೇ ಸಲೀಸಾಗಿ ಸಿಗುವ ವಸ್ತುಗಳನ್ನು ಬಳಸಿ ಕಲೆ ಮೂಡಿಸುವ ಕಾರ್ಯಕ್ರಮದ ರೂಪುರೇಷೆಯನ್ನು ರಾಬ್ ವಾಹಿನಿಯವರಿಗೆ ವಿವರಿಸಿದರು. ಅವರ ಸಂವಹನ ಕೌಶಲ ನೋಡಿ ನಿರೂಪಣೆಯ ಹೊಣೆಯನ್ನೂ ವಾಹಿನಿ ಅವರಿಗೇ ವಹಿಸಿತು.

ರಾಬ್ ಕಾರ್ಯಕ್ರಮ ತುಂಬ ಜನಪ್ರಿಯವಾಯಿತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರು ಹೆಸರಾದರು. ಎಷ್ಟೋ ಕಾರ್ಯಾಗಾರಗಳನ್ನು ನಡೆಸಿಕೊಡಲು ಬುಲಾವು ಬಂದಿತು.  ಯೂಟ್ಯೂಬ್ ವೇದಿಕೆ ಜನರಿಗೆ ಅದರಲ್ಲೂ ಮಕ್ಕಳಿಗೆ ಇನ್ನೂ ಹತ್ತಿರವಾದ ಮೇಲೆ ಅದರಲ್ಲಿಯೇ ‘ಮ್ಯಾಡ್ ಸ್ಟಫ್ ವಿತ್ ರಾಬ್’ ಎಂಬ ಚಾನೆಲ್ ಅನ್ನು ಪ್ರಾರಂಭಿಸಲು ಸೋನಿ ವಾಹಿನಿ ವ್ಯಾವಹಾರಿಕವಾಗಿ ಸಾಥ್ ನೀಡಿತು.

ಸಣ್ಣ ಪುಟ್ಟ ಮ್ಯಾಜಿಕ್ ಮಾಡುವುದನ್ನೂ ಕಲಿತ ರಾಬ್ ಅದಕ್ಕೂ ಪೋಗೊ ವಾಹಿನಿಯನ್ನು ಸದುಪಯೋ ಗಪಡಿಸಿಕೊಂಡರು. ಮಕ್ಕಳ ಜೊತೆ ಸಂವಹನ ಮಾಡುತ್ತಲೇ ಹೊಸ ಆಲೋಚನೆಗಳನ್ನು ಮೂಡಿಸುತ್ತಾ ಬಂದ ಅವರಿಗೆ ಬಣ್ಣ ಬಣ್ಣದ ಚಾರ್ಟ್‌ಗಳು, ಕಾಗದಗಳು, ಥರ್ಮಾಕೋಲ್ ತುಂಡುಗಳು, ಕ್ಯಾನ್ ಗಟ್ಟಲೆ ಬಣ್ಣಗಳೆಂದರೆ ಬಲು ಇಷ್ಟ.

ಅಜ್ಜ-ಅಜ್ಜಿಯರಿಂದ ಹಿಡಿದು ಪುಟಾಣಿಗಳವರೆಗೆ ಅನೇಕರಿಗೆ ಇಷ್ಟವಾಗಿರುವ ರಾಬ್‌ಗೆ ವರ್ಷಗಳ ಹಿಂದೆ ಕಲೆಯನ್ನೇ ಕಲಿಯುವಂತೆ ಗೆಳೆಯ ತಾಕೀತು ಮಾಡದೇ ಇದ್ದರೆ? ‘ಆಗುವುದೆಲ್ಲ ಒಳ್ಳೆಯದಕ್ಕೇ’ ಎಂದು ರಾಬ್ ಹಸನ್ಮುಖಿಯಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.