ADVERTISEMENT

ಹರಿವು

ಪಿಕ್ಚರ್‌ ನೋಡಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2018, 19:30 IST
Last Updated 31 ಜನವರಿ 2018, 19:30 IST
ಹರಿವು
ಹರಿವು   

‘ಈ ರೂಲ್ಸು, ಲಾ, ಭಯ ಇವೆಲ್ಲ ಸಂವಿಧಾನ ಬದಲಾಗುವ ತನಕ ಮಾತ್ರ. ಈ ಮನುಷ್ಯತ್ವ ಎನ್ನುವುದು...?’ ‘ಹರಿವು’ ಚಿತ್ರದ ಪಾತ್ರವೊಂದು ಹೇಳುವ ಈ ಸಾಲುಗಳು ಇಡೀ ಕಥನ ನಮ್ಮ ಮನಸ್ಸಿನಲ್ಲಿ ಎಬ್ಬಿಸುವ ಕಂಪನಗಳಿಗೆ ಕೊಟ್ಟ ಅಕ್ಷರರೂಪವೂ ಹೌದು. ಇದನ್ನು ಪ್ರಶ್ನೆಯನ್ನಾಗಿಯೂ, ಉತ್ತರವನ್ನಾಗಿಯೂ ಓದಿಕೊಳ್ಳುವುದು ಸಾಧ್ಯವಿದೆ. ಈ ಸಾಧ್ಯತೆಯಲ್ಲಿಯೇ ‘ಹರಿವು’ ಚಿತ್ರದ ಆತ್ಮವಿದೆ.

2014ನೇ ಸಾಲಿನ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಬಾಚಿಕೊಂಡ ಮಂನ್ಸೋರೆ (ಮಂಜುನಾಥ ಸೋಮಕೇಶವ ರೆಡ್ಡಿ) ನಿರ್ದೇಶನದ ಈ ಸಿನಿಮಾ ಸಾವಿನ ಸಮ್ಮುಖದಲ್ಲಿ ಕೂತು ಮಾನವೀಯತೆಯ ವ್ಯಾಖ್ಯಾನಗಳನ್ನು ಶೋಧಿಸುತ್ತದೆ.

ಹೊಸಪೇಟೆಯ ಸಮೀಪದ ವೆಂಕಾಪುರ ಎಂಬ ಹಳ್ಳಿಯಿಂದ ಕಾಯಿಲೆಯಿಂದ ಬಳಲುತ್ತಿರುವ ಮಗನನ್ನು ಗುಣಮುಖ ಮಾಡುವ ಆಸೆಯಿಂದ ಬಡ ರೈತನೊಬ್ಬ ಬೆಂಗಳೂರಿಗೆ ಬಂದಿದ್ದಾನೆ. ಆದರೆ ಮಗನನ್ನು ಉಳಿಸಿಕೊಳ್ಳುವುದು ಅತ್ತಲಿರಲಿ, ಅವನ ಹೆಣವನ್ನು ಗೌರವಯುತವಾಗಿ ಮರಳಿ ಊರಿಗೆ ಕರೆದೊಯ್ಯುವುದೂ ದುಸ್ತರವಾಗುತ್ತದೆ. ಮಗನ ಹೆಣವನ್ನು ಒಂದು ಟ್ರಂಕ್‌ನಲ್ಲಿ ಹಾಕಿಕೊಂಡು ತಲೆಯ ಮೇಲೆ ಹೊತ್ತು ಹೊರಡುತ್ತಾನೆ.  ಈ ಎಳೆಗೆ ಪರ್ಯಾಯವಾಗಿ ಆಸ್ಪತ್ರೆಯಲ್ಲಿರುವ ತಂದೆಯನ್ನು ತೊರೆದು ಕರ್ತವ್ಯನಿಮಿತ್ತ ವಿಜಯಪುರಕ್ಕೆ ಹೋಗುತ್ತಿರುವ ಪತ್ರಕರ್ತನ ಬದುಕಿದೆ. ಅವರಿಬ್ಬರೂ ಒಟ್ಟೊಟ್ಟಿಗೇ ಪ್ರಯಾಣಿಸುತ್ತಾರೆ. ಈ ಪ್ರಯಾಣದಲ್ಲಿ ಅವರವರ ಬದುಕಿನ ಕಳೆದುಹೋದ ನೆನಪಿನ ಸುರುಳಿಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ.

ADVERTISEMENT

ಮನುಷ್ಯತ್ವವನ್ನು ಕಳೆದುಕೊಂಡ ಭ್ರಷ್ಟ ವ್ಯವಸ್ಥೆ ಬಡಪಾಯಿಗಳ ರಕ್ತವನ್ನು ಹೇಗೆಲ್ಲ ಹೀರಿಕೊಂಡು ಕೊಬ್ಬುತ್ತದೆ ಎನ್ನುವುದನ್ನು ತುಂಬ ಸಂಯಮದಿಂದ ನಿರೂಪಿಸುತ್ತಾ ಹೋಗುತ್ತಾರೆ ನಿರ್ದೇಶಕರು. ಇದು ಡಾ. ಆಶಾ ಬೆನಕಪ್ಪ ಅವರು ‘ಪ್ರಜಾವಾಣಿ’ಯ ಅಂಕಣದಲ್ಲಿ ಬರೆದ ನೈಜ ಘಟನೆಯೊಂದನ್ನು ಆಧರಿಸಿ ರೂಪಿಸಿದ ಸಿನಿಮಾ.

ಈ ಚಿತ್ರದಲ್ಲಿ ಎರಡು ಜೀವಗಳು ಸಾವಿನ ದವಡೆಯಲ್ಲಿ ಸಿಲುಕಿರುತ್ತವೆ. ಒಂದು ಪತ್ರಕರ್ತನ ತಂದೆ. ಇನ್ನೊಂದು ಬಡರೈತನ ಮಗ. ಆ ಎರಡೂ ಸಾವುಗಳು ಮಾಡುವ ಪರಿಣಾಮ ಬೇರೆಯದೇ... ಹಾಗಾದರೆ ಸಾವಿಗೆ ಅರ್ಥಕೊಡುವುದು ಕಾಲವೇ? ಮನುಷ್ಯ ಅದಕ್ಕೆ ಕೊಡಬೇಕಾದ ಘನತೆಯನ್ನೂ ಕೊಡಲಾರದಷ್ಟು ಕ್ರೂರಿಯೇ? ಇಂಥ ಹಲವು ಪ್ರಶ್ನೆಗಳನ್ನು ಹುಟ್ಟಿಸಿ ಹೃದಯವನ್ನು ಆರ್ದ್ರಗೊಳಿಸುತ್ತದೆ.

ಹೆತ್ತಮಗನ ಹೆಣವನ್ನು ಟ್ರಂಕಿನಲ್ಲಿ ತುಂಬಿ ಕದ್ದುಮುಚ್ಚಿ ಸಾಗಿಸಬೇಕಾದ ಅಸಹಾಯಕ ತಂದೆಯ ಪಾತ್ರದಲ್ಲಿ ಸಂಚಾರಿ ವಿಜಯ್‌ ನಟನೆ ಮನಕಲುಕುತ್ತದೆ. ವೃತ್ತಿ ಮತ್ತು  ಚರಣ್‌ರಾಜ್‌ ಸಂಯೋಜನೆಯ ಒಂದು ಹಾಡು ಬಹುಕಾಲ ಕಾಡುವ ಹಾಗಿದೆ.

</p><p>ಇತ್ತೀಚೆಗಷ್ಟೇ ಈ ಚಿತ್ರವನ್ನು ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡಲಾಗಿದೆ. https://youtu.be/f4D3aOsAgvo ಕೊಂಡಿ ಬಳಸಿ ಈ ಸಿನಿಮಾ ನೋಡಬಹುದು. </p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.