ADVERTISEMENT

ಅಪ್ಪ, ನಾನು ಮತ್ತು ಕಾರು

ಸುಮಲತಾ ಎನ್, ಪದ್ಮನಾಭ ಭಟ್ಟ
Published 8 ನವೆಂಬರ್ 2017, 19:30 IST
Last Updated 8 ನವೆಂಬರ್ 2017, 19:30 IST
ಅಪ್ಪ, ನಾನು ಮತ್ತು ಕಾರು
ಅಪ್ಪ, ನಾನು ಮತ್ತು ಕಾರು   

ನಾನು ಮೊದಲನೇ ಬಾರಿ ಸ್ಟೀರಿಂಗ್ ಹಿಡಿದಿದ್ದು 13ನೇ ವಯಸ್ಸಿನಲ್ಲಿ. ನನಗೆ ಹಾಗೂ ಅಕ್ಕನಿಗೆ ಎಲ್ಲವನ್ನೂ ಕಲಿಸಬೇಕು ಅಂತ ನನ್ನ ಅಪ್ಪನಿಗೆ ಆಸೆ. ನಾವು ಸ್ವತಂತ್ರವಾಗಿ ಬೆಳೆಯಬೇಕು ಎಂದು ಬಯಸುತ್ತಿದ್ದರು. ಅದಕ್ಕೇ ಡ್ರೈವಿಂಗ್ ಹೇಳಿಕೊಡಲು ಮುಂದಾಗಿದ್ದರು.

ಒಂದು ದಿನ ಡ್ರೈವಿಂಗ್ ಕಲಿಯಲು ನಿರ್ಧರಿಸಿ ಕಾರು ಹತ್ತೇಬಿಟ್ಟೆ. ಅದು ಫಿಯೆಟ್ ಯೂನೊ ಕಾರು. ­ಡೀಸೆಲ್ ಗಾಡಿ. ಪವರ್ ಸ್ಟೀರಿಂಗ್ ಕೂಡ ಇರಲಿಲ್ಲ. ಸ್ಟೀರಿಂಗ್ ಸ್ವಲ್ಪ ಹಾರ್ಡ್. ಆದರೂ ಕಲಿಯೋಕೆ ಅದ್ಯಾವುದೂ ಅಡ್ಡಿ ಅನ್ನಿಸಲಿಲ್ಲ. ಕಲಿಯುವ ಉತ್ಸಾಹವಿತ್ತು. ಮೊದಲನೆ ಬಾರಿ ಕಾರು ಹತ್ತಿದಾಗ ಅಪ್ಪ, ಇದು ಅಕ್ಸೆಲರೇಟರ್, ಬ್ರೇಕ್, ಕ್ಲಚ್, ಗಿಯರ್ ಎಂದು ಎಲ್ಲದರ ಪರಿಚಯ ಮಾಡಿಕೊಟ್ಟರು.

ನಂತರ ಶುರುವಾದದ್ದು ಪೀಕಲಾಟ. ಮೊದಲು ಬರೀ ಫಸ್ಟ್ ಗೇರ್‌ನಲ್ಲಿ ಓಡಿಸು ಎಂದು ಹೇಳಿದರು. ಕ್ಲಚ್ ಒತ್ತಿ ಫಸ್ಟ್‌ ಗೇರ್‌ಗೆ ಶಿಫ್ಟ್ ಮಾಡಿ, ಅಕ್ಸೆಲರೇಟರ್ ಒತ್ತಿದೆ ನೋಡಿ, ಜರ್ಕ್ ಆಗಿ ಕಾರು ನಿಂತು ಹೋಯಿತು. ಒಮ್ಮೆಲೇ ಥಟ್ಟಂತ ಬೆಚ್ಚಿ ಕೂತೆ. ನನಗೆ ಕ್ಲಚ್, ಅಕ್ಸೆಲರೇಟರ್ ಚಲನೆ ಇನ್ನೂ ಗೊತ್ತಾಗುತ್ತಿರಲಿಲ್ಲ. ಸರಿ, ಮತ್ತೊಂದು ಬಾರಿ ಮಾಡಿದೆ. ಆಗಲೂ ಹಾಗೇ ಆಯ್ತು. ಮತ್ತೂ ಒಮ್ಮೆ ಮಾಡಿದೆ, ಆಗಲೂ ಹಾಗೇ ಆಗಬೇಕಾ? ಅಲ್ಲೀವರೆಗೂ ಕೋಪ ತಡೆದುಕೊಂಡಿದ್ದ ಅಪ್ಪ ಒಮ್ಮೆಲೇ ರೇಗಲು ಶುರು ಮಾಡಿದರು.

ADVERTISEMENT

ರೇಗಿದ್ದೇ ತಡ, ‘ನಾನು ಮತ್ತೆಂದೂ ಕಾರು ಹತ್ತಲ್ಲ, ನಿಮ್ಮಿಂದಂತೂ ಡ್ರೈವಿಂಗ್ ಕಲಿಯೋದೇ ಇಲ್ಲ’ ಎಂದು ಏಕಾಏಕಿ ಎದ್ದು ನಡೆದಿದ್ದೆ. ಅಪ್ಪ ಮತ್ತೆ ರಾತ್ರಿ ಬಂದು ನನಗೆ ಸಮಾಧಾನ ಮಾಡಿದರು.

ಮಾರನೇ ದಿನ ಮತ್ತೆ ಕಾರು ಹತ್ತಿದೆ. ಆಗ ಸುಧಾರಣೆ ಆದೆ ಎಂದಲ್ಲ. ಮತ್ತದೇ ಕಥೆ. ಆದರೆ ಮೂರು ವಾರ ಮುಗಿಯುವ ಹೊತ್ತಿಗೆ ತಕ್ಕ ಮಟ್ಟಿಗೆ ಡ್ರೈವಿಂಗ್ ಹಿಡಿತಕ್ಕೆ ಸಿಕ್ಕಿತ್ತು. ನಿಧಾನಕ್ಕೆ ನನಗೆ ಚಾಲನೆ ಒಲಿದಿತ್ತು. ಅಪ್ಪನೇ ನನ್ನ ಡ್ರೈವಿಂಗ್‌ಗೆ ಪ್ರೇರಣೆ.

ಅಪ್ಪ ತುಂಬಾ ಚೆನ್ನಾಗಿ ಡ್ರೈವ್ ಮಾಡುತ್ತಿದ್ದರು. ಆದರೆ ಕಲಿಸಿ ಕೊಡಲು ಬರುತ್ತಿರಲಿಲ್ಲ. ಕಾರು ಕಲಿಯುವಾಗ ಅವರಿಂದ ತಿಂದ ಬೈಗುಳಕ್ಕೆ ಲೆಕ್ಕವೇ ಇಲ್ಲ.

ಮುಂಜಾನೆ ಸಮಯ ಖಾಲಿ ರೋಡಿನಲ್ಲಿ ಆರಾಮಾಗಿ ಓಡಿಸಲು ಕಲಿತೆ. ಆದರೆ ಹೊರಗೆ ಎಲ್ಲೂ ಓಡಿಸಿರಲಿಲ್ಲ. ಲೈಸೆನ್ಸ್ ಇರಲಿಲ್ಲ. ಅವಶ್ಯಕತೆಯೂ ಇರಲಿಲ್ಲ. ಅಪ್ಪ ಇಲ್ಲದ ಸಮಯ, ಅನಿವಾರ್ಯ ಪರಿಸ್ಥಿತಿ ಬಂದರೆ, ನಾವೇ ಕಾರು ಕಲಿತಿದ್ದರೆ ಒಳ್ಳೆಯದು ಎಂಬ ಉದ್ದೇಶಕ್ಕೆ ಅಪ್ಪ ನಮಗೆ ಹೇಳಿಕೊಟ್ಟಿದ್ದರು.

ಅದೂ ಒಂದು ದಿನ ಉಪಯೋಗಕ್ಕೆ ಬಂತು. ಒಮ್ಮೆ ಆಡಿಷನ್‌ಗೆ ಹೋಗಬೇಕಿತ್ತು. ಯಾವಾಗಲೂ ಅಪ್ಪ ಇದ್ದಾಗ, ಸ್ನೇಹಿತರು ಜೊತೆಯಿದ್ದರೆ ಅವರೊಂದಿಗೆ ಕಾರು ಓಡಿಸಿದ ರೂಢಿ. ಆದರೆ ಅವತ್ತು ಯಾರೂ ಇರಲಿಲ್ಲ. ಬೇಗ ಹೋಗಲೇಬೇಕಿತ್ತು. ಅಮ್ಮನನ್ನು ಕೇಳಿದೆ. ಅಮ್ಮನೂ ಬೇಡ ಅನ್ನಲಿಲ್ಲ. ಒಬ್ಬಳೇ ಹೋಗುವುದೆಂದು ತೀರ್ಮಾನಿಸಿ ಕಾರು ಹತ್ತಿದೆ ಅಷ್ಟೆ.

ಸ್ಟಾರ್ಟ್ ಮಾಡಿ ಮುಂದೆ ಬಿಡುವಷ್ಟರಲ್ಲಿ ಕೈಗಳಲ್ಲಿ ನಡುಕ. ಪಕ್ಕದಲ್ಲಿ ಯಾರಾದರೂ ಇದ್ದರೆ ಇರುವ ಧೈರ್ಯ ಒಬ್ಬಳೇ ಓಡಿಸುವಾಗ ಮಾಯ ಆಗಿತ್ತು. ಮುಂದೆ ಹೋಗುತ್ತಾ ಹೋಗುತ್ತಾ, ಅಯ್ಯೋ ಇಷ್ಟು ಕೆಟ್ಟದಾಗಿ ಓಡಿಸಲು ಕಲಿತಿದ್ದೆನಾ ಎಂದು ನನಗೇ ಅನ್ನಿಸುತ್ತಿತ್ತು. ಎಲ್ಲೂ ನೋಡಲು ಆಗುತ್ತಿಲ್ಲ. ಎದೆಯಲ್ಲಿ ಢವಢವ. ಹೇಗೋ ಬಚಾವಾದರೆ ಸಾಕು ಎಂದು ಭಯದಿಂದಲೇ ಓಡಿಸಿದೆ. ಕಾರು ನಿಲ್ಲಿಸಿದಾಗಲೂ ಕೈಗಳು ನಡುಗುತ್ತಲೇ ಇದ್ದವು.

ಅಂತೂ ಇಂತೂ ಅಂದುಕೊಂಡ ಜಾಗಕ್ಕೆ ಬಂದೆ, ಹೇಗೋ ಪಾರ್ಕ್ ಮಾಡಿದೆ. ಆಡಿಷನ್ ಕೂಡ ಮುಗಿಯಿತು. ಮುಗಿದರೂ ಹೊರಗೆ ಕೂತೇ ಇದ್ದೆ. ಅವರು ಬಂದು ‘ಏಕೆ ಮನೆಗೆ ಹೋಗುತ್ತಿಲ್ಲ’ ಎಂದು ಕೇಳಿದರು. ಮುಜುಗರ ಎನ್ನಿಸಿದರೂ, ‘ನನಗೆ ಕಾರು ಓಡಿಸೋಕೆ ಭಯ ಆಗ್ತಿದೆ, ಸ್ವಲ್ಪ ಹೊತ್ತುಬಿಟ್ಟು ಹೋಗ್ತೀನಿ. ಏನೂ ಅಂದುಕೊಳ್ಳಬೇಡಿ’ ಎಂದೆ. ಅವರಿಗೂ ನಗು ಬಂದಿತ್ತು. ಹೀಗಿತ್ತು ನನ್ನ ಮೊದಲ ಡ್ರೈವ್ ಕಥೆ.

ಆ ಅನುಭವ ಜಾದೂ ಅನ್ನಿಸುತ್ತದೆ. ಲೋಕವನ್ನೆಲ್ಲಾ ಹಿಂದಿಕ್ಕುತ್ತಾ ಮುಂದೆ ಮುಂದೆ ನಾವೇ ಚಲಿಸುತ್ತಾ ಹೋಗುವ ಮಜಾ.

ನನಗೆ ಕಾರು ಕ್ರೇಝ್ ತುಂಬಾ ಇದೆ. ಸದ್ಯಕ್ಕೆ ಅಪ್ಪನ ಹೋಂಡಾ ಬಿಆರ್‌ವಿ ಇದೆ. ಮಿನಿ ಕೂಪರ್ ತೆಗೆದುಕೊಳ್ಳಬೇಕು ಎಂದು ತುಂಬಾ ಆಸೆ ಇದೆ. ಪುಟ್ಟ ಕಾರು ಅದು. ಆ ಕಾರು ಇಲ್ಲಿ ಅಷ್ಟು ಹೊಂದುವುದಿಲ್ಲ ಎನ್ನುತ್ತಾರೆ ಸ್ನೇಹಿತರು. ಆದರೂ ಆ ಕಾರೆಂದರೆ ನನಗೆ ಬಹಳ ಇಷ್ಟ.

ಕಾರು ಓಡಿಸೋಕೆ ನನಗೆ ತುಂಬಾ ಇಷ್ಟ. ಆದರೆ ನಗರದಲ್ಲಿ ಓಡಿಸೋದು ಬಹಳ ಒತ್ತಡ ಅನ್ನಿಸುತ್ತಿದೆ. ಈ ಟ್ರಾಫಿಕ್ ಸಮಸ್ಯೆ ಅಷ್ಟು ರೇಜಿಗೆಯಾಗಿದೆ. ನೇರವಾಗಿ ಓಡಿಸುತ್ತಿದ್ದರೂ ಎಲ್ಲಿಂದಲೋ ಬಂದು ಗುದ್ದುವುದು ಗೊತ್ತೇ ಆಗೋದಿಲ್ಲ. ಎಲ್ಲರಿಗೂ ಅವಸರ. ರೋಡ್‌ ಮೇಲೆ ಗಾಡಿಗಳ ಸರ್ಕಸ್ಸು.

ಒಮ್ಮೊಮ್ಮೆ ಓವರ್ ಟೇಕ್ ಮಾಡ್ತೀನಿ. ಆದರೆ ನಿಯಮಗಳನ್ನು ಪಕ್ಕಾ ಪಾಲಿಸುತ್ತೇನೆ. ಯಾವತ್ತೂ ತಪ್ಪಿಸಲ್ಲ. ಸ್ವಲ್ಪ ಜಾಸ್ತೀನೇ ಅನುಸರಿಸುತ್ತೇನೆ. ಎಲ್ಲರೂ ಕೇಳ್ತಾರೆ ‘ಯಾಕೆ ರೂಲ್ಸ್ ಅನ್ನು ಇಷ್ಟೊಂದು ಫಾಲೊ ಮಾಡ್ತೀಯ, ಇದು ಅಮೆರಿಕ ಅಲ್ಲ, ಭಾರತ ಅಂತ. ಆದರೆ ಆ ದೃಷ್ಟಿಕೋನವನ್ನೇ ಬದಲಾಯಿಸಬೇಕಿದೆ.
ಈಗಂತೂ ಡ್ರೈವ್ ಮಾಡುವುದು ಸಲೀಸು ಎನ್ನಿಸಿದೆ. ಮಿನಿ ಕೂಪರ್ ಆಸೆ ಕಣ್ಣು ತುಂಬಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.