ADVERTISEMENT

ಆಟೊ ಟೆಕ್

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2012, 19:30 IST
Last Updated 15 ಆಗಸ್ಟ್ 2012, 19:30 IST

ಆಟೊರಿಕ್ಷಾ ಚಾಲನೆಗೆ ಅನುಕೂಲವಾಗುವಂತೆ ಅನೇಕ ತಂತ್ರಜ್ಞಾನಗಳು ಅಭಿವೃದ್ಧಿ ಹೊಂದಿರುವಂತೆಯೇ, ಆಟೊರಿಕ್ಷಾ ಪ್ರಯಾಣಿಕರಿಗೂ ಅನುಕೂಲವಾಗುವಂತಹ ಅನೇಕ ಸೌಲಭ್ಯಗಳನ್ನು ಅಭಿವದ್ಧಿ ಪಡಿಸಲಾಗಿದೆ. ಪ್ರಯಾಣಿಕ ತಾನೆಷ್ಟು ದೂರ ಪ್ರಯಾಣಿಸಬೇಕು, ಪ್ರಯಾಣದ ಗುರಿ ಏನು ಎಂದು ತಿಳಿದಿದ್ದರೆ ಮಾತ್ರ ಸಾಲದು. ಅವನ್ನು ಚಾಲಕನಿಗೆ ತಿಳಿಸುವ ಹಾಗೂ ತಾನು ನಿಖರವಾಗಿ ಇಂತಿಷ್ಟೇ ದೂರ ಪ್ರಯಾಣಿಸಿದ್ದೇನೆ ಎಂದು ಖಚಿತ ಪಡಿಸಿಕೊಳ್ಳುವುದೂ ಅಷ್ಟೇ ಮುಖ್ಯ. ಅದಕ್ಕಾಗಿ ಪ್ರಯಾಣಿಕನಿಗಿರುವ ಮುಖ್ಯ ಸೌಲಭ್ಯ ಮೀಟರ್.

ರಿಕ್ಷಾ ಮೀಟರ್ ಹಿಂದಿನಂತೆ ಕೇವಲ ಪ್ರಯಾಣಿಸಿದ ದೂರವನ್ನು ಕಿಲೋ ಮೀಟರ್ ಲೆಕ್ಕದಲ್ಲಷ್ಟೇ ತೋರಿಸದೆ, ತೆಗೆದುಕೊಂಡ ಸಮಯವನ್ನೂ ಈಗ ತೋರಿಸುತ್ತದೆ. ರಿಕ್ಷಾ ನಿಂತರೆ ಕಾಯುವ ಸಮಯವನ್ನೂ ತೋರುತ್ತದೆ. ತಂತ್ರಜ್ಞಾನ ದಿನೇ ದಿನೇ ಬೆಳೆಯುತ್ತಲೇ ಇದೆ.

ರಿಕ್ಷಾ ವರ್ಮ್
ತಂತ್ರಜ್ಞಾನ ಎಷ್ಟೇ ಬೆಳೆದರೂ ರಿಕ್ಷಾ ಮೀಟರ್ ಹಿಂದಿನ ಜೀವ   ರಿಕ್ಷಾ ಮೀಟರ್ ವರ್ಮ್ ಮಾತ್ರ ಬದಲಾಗೇ ಇಲ್ಲ. ವರ್ಮ್ ಎಂದರೆ ಇದೊಂದು ಚೌಕಾಕಾರದ ಒಂದು ತಂತಿ. ಇದು ರಿಕ್ಷಾದ ಎದುರು ಚಕ್ರ ಅಥವಾ ಎಂಜಿನ್‌ನಿಂದ ಮೀಟರ್‌ಗೆ ನೇರವಾಗಿ ಸಂಪರ್ಕ ಹೊಂದಿರುತ್ತದೆ. ಚಕ್ರ ತಿರುಗಿದಂತೆ ಈ ತಂತಿಯೂ ತಿರುಗಿ, ಮೀಟರ್‌ನಲ್ಲಿನ ಕಿಲೋಮೀಟರ್ ಅಂಕಿಗಳನ್ನು ಬದಲಿಸುತ್ತದೆ. ಈಗ ಮೀಟರ್ ಡಿಜಿಟಲ್‌ಕರಣಗೊಂಡಿರುವ ಕಾರಣ, ಅಂಕಿಗಳು ಸಹ ಡಿಜಿಟಲ್ ಸ್ವರೂಪ ಹೊಂದಿವೆ. ಮೀಟರ್‌ನಲ್ಲೆೀ ಒಂದು ಸ್ಮರಣ ಕೋಶ ಸಹ ಇದ್ದು, ಇದು ರಿಕ್ಷಾ ಚಾಲನೆಗೊಂಡ ಸಮಯವನ್ನೂ ತೋರುತ್ತದೆ.

ರಿವರ್ಸ್ ಗಿಯರ್
ಆಟೊ ಮೂರು ಚಕ್ರದ ವಾಹನವೇ ಆದರೂ, ಇದಕ್ಕೆ ರಿವರ್ಸ್ ಗಿಯರ್ ಇದೆ. ಸಾಮಾನ್ಯವಾಗಿ ಆಟೋರಿಕ್ಷಾಗೆ ನಾಲ್ಕು ಗಿಯರ್‌ಗಳು ಇರುತ್ತವೆ. ಇವುಗಳ ಸಂಪೂರ್ಣ ನಿಯಂತ್ರಣ ಹ್ಯಾಂಡಲ್‌ಬಾರ್‌ನಲ್ಲೇ. ಆದರೆ ಇತ್ತೀಚಿನ ದೊಡ್ಡ ಎಂಜಿನ್ ಸಾಮರ್ಥ್ಯದ ಗೂಡ್ಸ್ ಆಟೊಗಳಲ್ಲಿ ಕಾಲಿನಲ್ಲಿ ಕ್ಲಚ್ ಇರುತ್ತದೆ. ಆದರೆ ಆಟೊಗಳಿಗೆ ರಿವರ್ಸ್ ಗಿಯರ್ ಇರುವುದು ಮಾತ್ರ ವರದಾನವೇ ಸರಿ. ಏಕೆಂದರೆ ಹಿಂದೆ ಎರಡು ಚಕ್ರಗಳಿರುವ ಕಾರಣ, ದೂಡಿ ಹಿಂದಕ್ಕೆ ತಳ್ಳುವುದು ಅಸಾಧ್ಯ. ಪ್ರಯಾಣಿಕ ರಿಕ್ಷಾಗಳಿಗೆ ಇತ್ತೀಚಿನವರೆಗೂ ರಿವರ್ಸ್ ಗಿಯರ್ ನೀಡುತ್ತಲೇ ಇರಲಿಲ್ಲ. ಈಗಲೂ ರಿಕ್ಷಾ ನಿಂತಾಗ ದೂಡೇ ಹಿಂದಕ್ಕೆ ತಳ್ಳುವ ಅಭ್ಯಾಸ ಇದೆ. ಆದರೆ ಎಂಜಿನ್ ಸಾಮರ್ಥ್ಯ ಹೆಚ್ಚಿದಂತೆ ತೂಕ ಹೆಚ್ಚುವ ಕಾರಣ, ರಿವರ್ಸ್ ಗಿಯರ್ ಅನಿವಾರ್ಯವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.