ADVERTISEMENT

ಆದರ್ಶ ಛಾಯಾಗ್ರಾಹಕ

ಭೀಮಣ್ಣ ಗಜಾಪುರ
Published 22 ನವೆಂಬರ್ 2011, 19:30 IST
Last Updated 22 ನವೆಂಬರ್ 2011, 19:30 IST
ಆದರ್ಶ ಛಾಯಾಗ್ರಾಹಕ
ಆದರ್ಶ ಛಾಯಾಗ್ರಾಹಕ   

ಸಮಾಜಸೇವೆಗೆ ಹಲವು ಮುಖ. ಯಾರೂ ಬೇಕಾದರೂ ಆ ಕೈಂಕರ್ಯದಲ್ಲಿ ತೊಡಗಿಕೊಳ್ಳಬಹುದು. ಆದರೆ ಆ ಮನಸ್ಸು ಬೇಕಷ್ಟೆ. ಅಂತಹ ಯುವ ಸಹೃದಯಿಯೊಬ್ಬರು ಕೂಡ್ಲಿಗಿ ತಾಲ್ಲೂಕಿನ ಉಜ್ಜಿನಿ ಗ್ರಾಮದಲ್ಲಿದ್ದಾರೆ. ಹೆಸರು ಕೆ.ಎಂ ರವಿಕುಮಾರ್. ವೃತ್ತಿ ಛಾಯಾಗ್ರಹಣ.

ಛಾಯಾಗ್ರಾಹಕರಾಗಿ ತಮ್ಮ ಕಡಿಮೆ ದುಡಿಮೆಯಲ್ಲಿಯೇ ಒಂದಿಷ್ಟು ಹಣ ಕೂಡಿಟ್ಟು ತಮ್ಮ ಗ್ರಾಮದ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಬಡತನ ಕುಟುಂಬದ ನೂರಾರು  ಮಕ್ಕಳಿಗೆ ಉಚಿತ ಬಟ್ಟೆ ವಿತರಿಸುವ ಮೂಲಕ ವಿಶಿಷ್ಟ ಮಾನವೀಯತೆ ಮೆರೆದು ಇತರೆ ಯುವಕರಿಗೆ ಮಾದರಿಯಾಗಿದ್ದಾರೆ ರವಿಕುಮಾರ್. ಅದಕ್ಕೆ ವೇದಿಕೆಯಾಗಿದ್ದು ವಿಶ್ವ ಛಾಯಾಗ್ರಾಹಕರ ದಿನಾಚರಣೆ ಕಾರ್ಯಕ್ರಮ.

ಕೂಡ್ಲಿಗಿ ತಾಲೂಕು  ಉಜ್ಜಿನಿ ಗ್ರಾಮದಲ್ಲಿ   ವೀರಭದ್ರೇಶ್ವರ ಡಿಜಿಟಲ್ ಪೋಟೋ ಸ್ಟುಡಿಯೋವನ್ನು ರವಿಕುಮಾರ್ ನಡೆಸುತ್ತಿದ್ದಾರೆ.  23 ವರ್ಷದ ಕೆ.ಎಂ.ರವಿಕುಮಾರ್ ಕಳೆದ ಮೂರು ವರ್ಷಗಳಿಂದ ಬಡ ಮಕ್ಕಳಿಗೆ ಉಚಿತವಾಗಿ ಬಟ್ಟೆ ನೀಡುತ್ತಿದ್ದಾರೆ.

ತಮಗೆ ಬರುವ ಲಾಭದಲ್ಲಿನ ಒಂದಿಷ್ಟು ಪಾಲನ್ನು ಸಮಾಜಸೇವೆಗೆ ಮೀಸಲಿಟ್ಟು ಪ್ರತಿವರ್ಷ 100ಕ್ಕೂ ಹೆಚ್ಚು ಮಕ್ಕಳಿಗೆ ಹತ್ತಿಪ್ಪತ್ತು ಸಾವಿರ ರೂಪಾಯಿಗಳನ್ನು ಖರ್ಚುಮಾಡಿ ಬಡವಿದ್ಯಾರ್ಥಿಗಳಿಗೆ ಉಚಿತವಾಗಿ ಬಟ್ಟೆ ನೀಡುವ ಈ ಯುವಕನ ಕಳಕಳಿ ಮೆಚ್ಚುವಂತದ್ದು.

ಕೆ.ಎಂ.ರವಿಕುಮಾರ್ ಅಗ್ರಹಾರದ ಗ್ರಾಮದವರು. ಮೋಜುಮಸ್ತಿಯಲ್ಲಿ ತೊಡಗಬೇಕಾದ  ಇಪ್ಪತ್ತರ ಹರೆಯದಲ್ಲಿ ಅವರು ಸಮಾಜಸೇವೆ ಮಾಡಲು ಹೊರಟಿರುವುದು ಇಂದಿನ ಯುವಪೀಳಿಗೆಗೆ ಆದರ್ಶವಾಗಿದೆ. 

ಈ ವಯಸ್ಸಿಗೆ ಸಮಾಜಸೇವೆ ಆಲೋಚನೆ ಯಾಕೆ ಬಂತು ಎಂದು  ಕೇಳಿದರೆ, `ನಾನು ಹಣವಿಲ್ಲದ್ದಕ್ಕೆ  ಮಧ್ಯದಲ್ಲಿಯೇ ಐ.ಟಿ.ಐ ಓದೋದನ್ನು ಬಿಟ್ಟು ಪೋಟೋಗ್ರಾಫರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದೆ.
 
ಈ ವೃತ್ತಿಯಲ್ಲಿ ಸ್ವಲ್ಪ ದುಡ್ಡು ದುಡೀತಾ ಇದ್ದೀನಿ. ನನ್ನಂತೆ ಬಡ ವಿದ್ಯಾರ್ಥಿಗಳು ಬಡತನದಿಂದ ಓದು ನಿಲ್ಲಿಸಬಾರದು ಎನ್ನುವುದು ನನ್ನ ಕಾಳಜಿ. ನನಗೆ ಅನ್ನ ನೀಡುವ ಈ ಉಜ್ಜಿನಿ ಗ್ರಾಮದ ಬಡಮಕ್ಕಳಿಗೆ  ಪ್ರತಿವರ್ಷ  ಕೆಲ ಸಾವಿರ ಖರ್ಚು ಮಾಡಿ ಬಟ್ಟೆ ನೀಡುತ್ತಿರುವೆ. ನಾನು ದುಡಿದ ಹಣದಲ್ಲಿ  ಒಂದಿಷ್ಟು ಮೊತ್ತವನ್ನು ಬಡ ಮಕ್ಕಳಿಗೆ ಖರ್ಚು ಮಾಡಿದ್ರೆ ಮಾತ್ರ ನನಗೆ ಸಮಾಧಾನ ಆಗುತ್ತದೆ ಎನ್ನುತ್ತಾರೆ.
                                                                 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.